ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾ ವಾಣಿ | ಪ್ರಮುಖ ದಿನಾಚರಣೆ

Published 24 ಜುಲೈ 2024, 23:30 IST
Last Updated 24 ಜುಲೈ 2024, 23:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.

 
1.ಜೈವಿಕ ವೈವಿಧ್ಯ ದಿನ (IDB) 2024 - ಮೇ 22

ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ (IDB) 2024 ಅನ್ನು ಮೇ 22, 2024 ರಂದು "Be part of the planʼ (ಯೋಜನೆಯ ಭಾಗವಾಗಿರಿ) ಎಂಬ ಥೀಮ್ ನ ಅಡಿಯಲ್ಲಿ ಆಚರಿಸಲಾಯಿತು. ಈ ಥೀಮ್ ಜೀವವೈವಿಧ್ಯ ಯೋಜನೆ ಎಂದೂ ಕರೆಯಲ್ಪಡುವ ಕುನ್ಮಿಂಗ್-ಮಾಂಟ್ರಿಯಲ್ ಗ್ಲೋಬಲ್ ಬಯೋಡೈವರ್ಸಿಟಿ ಫ್ರೇಮ್‌ವರ್ಕ್‌ನ ಅನುಷ್ಠಾನವನ್ನು ಬೆಂಬಲಿಸುವ ಮೂಲಕ ಜೀವವೈವಿಧ್ಯದ ನಷ್ಟವನ್ನು ನಿಲ್ಲಿಸಲು ಮತ್ತು ಹಿಮ್ಮೆಟ್ಟಿಸಲು ಎಲ್ಲಾ ಭಾಗೀಗಾರರಿಗೆ ಒಂದು ಮಹತ್ವದ ಕರೆಯಾಗಿತ್ತು.

ಹವಾಮಾನ ಸಂರಕ್ಷಣೆಯ ವಿಚಾರದಲ್ಲಿ ಪ್ಯಾರಿಸ್‌ ಒಪ್ಪಂದ ಹೇಗೆ ಮಹತ್ವದ್ದೋ ಜೀವವೈವಿಧ್ಯ ಸಂರಕ್ಷಣೆಗೆ ಕುನ್ಮಿಂಗ್‌ ಮಾಂಟ್ರಿಯಲ್ ಒಪ್ಪಂದವಾಗಿದೆ.

* ಜೀವವೈವಿಧ್ಯ ಯೋಜನೆಯು ಎಲ್ಲಾ ಕಡೆಯ ಪಾಲುದಾರರ ನಡುವೆ ಸಹಕಾರ ಮತ್ತು ಪಾಲುದಾರಿಕೆಗೆ ಅವಕಾಶಗಳನ್ನು ನೀಡುತ್ತದೆ. ಈ ದಿನದಂದು ಸರ್ಕಾರಗಳು, ಸ್ಥಳೀಯ ಜನರು ಮತ್ತು ಸ್ಥಳೀಯ ಸಮುದಾಯಗಳು, ಸರ್ಕಾರೇತರ ಸಂಸ್ಥೆಗಳು, ಶಾಸಕರು, ಮತ್ತು ನಾಗರಿಕರು ಸೇರಿ ಕುನ್ಮಿಂಗ್-ಮಾಂಟ್ರಿಯಲ್ ಗ್ಲೋಬಲ್ ಬಯೋಡೈವರ್ಸಿಟಿ ಫ್ರೇಮ್‌ವರ್ಕ್‌ನ ಅನುಷ್ಠಾನವನ್ನು ಹೇಗೆಲ್ಲಾ ಬೆಂಬಲಿಸಬಹುದು ಎಂಬ ವಿಧಾನಗಳನ್ನು ಪ್ರಚುರಪಡಿಸಲು ಪ್ರೋತ್ಸಾಹಿಸಲಾಯಿತು.

* IDB 2024 ಅಕ್ಟೋಬರ್ 21 ರಿಂದ ನವೆಂಬರ್ 1, 2024 ರವರೆಗೆ ಕೊಲಂಬಿಯಾದಲ್ಲಿ ನಡೆಯಲಿರುವ ಜೈವಿಕ ವೈವಿಧ್ಯತೆಯ ಸಮಾವೇಶದ (COP 16) ಕಾನ್ಫರೆನ್ಸ್‌ ಆಫ್‌ ಪಾರ್ಟೀಸ್‌ ಹದಿನಾರನೇ ಸಭೆಗೆ ಎಲ್ಲಾ ವಿಧದಲ್ಲೂ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

2.ವಿಶ್ವ ಪರಿಸರ ದಿನ - ಜೂನ್ 5

ಪರಿಸರ ಸಂರಕ್ಷಣೆಯ ತತ್ವಗಳ ವ್ಯಾಪಕ ಜಾಗೃತಿಗಾಗಿ ಮೀಸಲಾದ  ವಿಶ್ವ ಪರಿಸರ ದಿನವನ್ನು ಜೂನ್ 5, 2024 ರಂದು ಆಚರಿಸಲಾಗುತ್ತದೆ.

* ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ನೇತೃತ್ವದ ಈ ಆಚರಣೆಯನ್ನು 1973ರಿಂದ ವಾರ್ಷಿಕವಾಗಿ ಆಚರಿಸಲಾಗುತ್ತಿದೆ. ಇದು ಪರಿಸರ ಸಂರಕ್ಷಣೆಯ ಪ್ರಚಾರದ ಅತಿದೊಡ್ಡ ಜಾಗತಿಕ ವೇದಿಕೆಯಾಗಿ ಬೆಳೆದಿದೆ.

* 2024 ರಲ್ಲಿ, ಸೌದಿ ಅರೇಬಿಯಾವು ವಿಶ್ವ ಪರಿಸರ ದಿನವನ್ನು ಆಯೋಜಿಸಿದ್ದು ಈ ವರ್ಷದ ಥೀಮ್ ʼಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ’ದ  ಮೇಲೆ ಸಮಾವೇಶವನ್ನು ಕೇಂದ್ರೀಕರಿಸಿತ್ತು.

ಭೂ ಪುನಃಸ್ಥಾಪನೆಯು ಯುಎನ್ ಡಿಕೇಡ್ ಆನ್ ಎಕೋಸಿಸ್ಟಮ್ ರಿಸ್ಟೋರೇಶನ್ (2021-2030) ನ ಪ್ರಮುಖ ತತ್ವವಾಗಿದೆ. ಇದು ವಿಶ್ವಾದ್ಯಂತ ಪರಿಸರ ವ್ಯವಸ್ಥೆಗಳ ರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಒಂದು ಮಹತ್ವದ ಕರೆಯಾಗಿದ್ದು, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಒಂದು ನಿರ್ಣಾಯಕ ಅಂಶವಾಗಿದೆ.

3.ವಿಶ್ವ ಭೂಮಿ ದಿನ - ಏಪ್ರಿಲ್ 22

ಪ್ರತಿ ವರ್ಷ ಏಪ್ರಿಲ್ 22 ರಂದು ಬರುವ ವಿಶ್ವ ಭೂ ದಿನವನ್ನು ಈ ವರ್ಷವೂ ಆಚರಿಸಲಾಯಿತು.

* 2024 ರ ವಿಶ್ವ ಭೂ ದಿನದ ಥೀಮ್ ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್ ಆಗಿದೆ. ಇದು ಪ್ಲಾಸ್ಟಿಕ್ ಮಾಲಿನ್ಯದ ತೀವ್ರ ಸಮಸ್ಯೆ ಮತ್ತು ಪ್ರಕೃತಿಯ ಮೇಲೆ ಅದರ ಹಾನಿಕಾರಕ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ.

* 2024 ರ ಭೂಮಿಯ ದಿನಕ್ಕಾಗಿ, EARTHDAY.ORG ಈ ಭೂಮಿಯ ಆರೋಗ್ಯಕ್ಕಾಗಿ ಪ್ಲಾಸ್ಟಿಕ್ ಅನ್ನು ಕೊನೆಗೊಳಿಸಬೇಕು ಮತ್ತು ಈ ನಿಟ್ಟಿನಲ್ಲಿ 2040 ರ ವೇಳೆಗೆ ಎಲ್ಲಾ ಪ್ಲಾಸ್ಟಿಕ್‌ಗಳ ಉತ್ಪಾದನೆಯಲ್ಲಿ 60 ಪ್ರತಿಶತದಷ್ಟು ಕಡಿತ ಮಾಡಬೇಕೆಂದು ಕರೆ ನೀಡಿತು.

(2023 ರ ವಿಶ್ವ ಪರಿಸರ ದಿನದ ಥೀಮ್‌ ಬೀಟ್‌ ಪ್ಲಾಸ್ಟಿಕ್‌ ಪೊಲ್ಯೂಷನ್‌ ಎಂದಾಗಿತ್ತು ಎನ್ನುವುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿ ಇಡಬೇಕು.)


4.ವಿಶ್ವ ತಂಬಾಕು ರಹಿತ ದಿನ (WNTD) - ಮೇ 31

* ಮೇ 31 ರಂದು ವಿಶ್ವ ತಂಬಾಕು ರಹಿತ ದಿನ (WNTD) ಎಂದು ಗುರುತಿಸಲಾಗಿದೆ. ಈ ವರ್ಷ ಮತ್ತೊಮ್ಮೆ ಪ್ರಪಂಚದಾದ್ಯಂತದ WHO ಮತ್ತು ಸಾರ್ವಜನಿಕ ಆರೋಗ್ಯ ಚಾಂಪಿಯನ್‌ಗಳು ಯುವಕರ ಮೇಲೆ ತಂಬಾಕು ಉದ್ಯಮದ ಹಾನಿಕಾರಕ ಪ್ರಭಾವಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಚಟುವಟಿಕೆಗಳನ್ನು ನಡೆಸಿದರು.

* WNTD 2024 ರ ವಿಷಯವು ಹಾನಿಕಾರಕ ತಂಬಾಕು ಉತ್ಪನ್ನಗಳಿಂದ ಯುವಕರನ್ನು ದೂರವಿರಿಸಬೇಕೆಂಬ ಅಂಶದ ಮೇಲೆ ಕೇಂದ್ರೀಕರಿಸಿದೆ.

* ಈ ಉಪಕ್ರಮವು ಜಾಗತಿಕವಾಗಿ ಯುವಜನರು, ನೀತಿ ನಿರೂಪಕರು ಮತ್ತು ತಂಬಾಕು ನಿಯಂತ್ರಣ ಆಸಕ್ತರಿಗೆ ಈ ಸಮಸ್ಯೆಯನ್ನು ಚರ್ಚಿಸಲು ವೇದಿಕೆಯನ್ನು ಒದಗಿಸಿತಲ್ಲದೇ, ಈ ನಿಟ್ಟಿನಲ್ಲಿ ಯುವಜನರನ್ನು ರಕ್ಷಿಸುವ ನೀತಿಗಳನ್ನು ಅಳವಡಿಸಿಕೊಳ್ಳಲು ಸರ್ಕಾರಗಳನ್ನು ಒತ್ತಾಯಿಸುತ್ತದೆ.

* ತಂಬಾಕು ನಿಯಂತ್ರಣ ಪ್ರಯತ್ನಗಳಿಂದಾಗಿ ಸಿಗರೇಟ್ ಸೇವನೆಯು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆಯಾದರೂ, ಇನ್ನೂ ಜಾಗೃತಿ ಮೂಡಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ.

* 2022 ರ ಮಾಹಿತಿಯ ಪ್ರಕಾರ, ವಿಶ್ವಾದ್ಯಂತ, 13-15 ವರ್ಷ ವಯಸ್ಸಿನ ಕನಿಷ್ಠ 37 ಮಿಲಿಯನ್ ಯುವಜನರು ತಂಬಾಕನ್ನು ಬಳಸುತ್ತಾರೆ. WHO ಪ್ರಕಾರ ಯುರೋಪಿಯನ್ ಪ್ರದೇಶದಲ್ಲಿ, 13-15 ವರ್ಷ ವಯಸ್ಸಿನ 11.5% ಹುಡುಗರು ಮತ್ತು 10.1% ಹುಡುಗಿಯರು ತಂಬಾಕು ಬಳಕೆದಾರರಾಗಿದ್ದಾರೆ (ಸುಮಾರು 4 ಮಿಲಿಯನ್ ಜನರು).


5.ವಿಶ್ವ ವಲಸೆ ಹಕ್ಕಿ ದಿನ - ಮೇ 11 ಮತ್ತು ಅಕ್ಟೋಬರ್ 12

ಮೇ 11 ರಂದು, ವಿಶ್ವ ವಲಸೆ ಹಕ್ಕಿಗಳ ದಿನದ ಅಭಿಯಾನವು ವಲಸೆ ಹಕ್ಕಿಗಳಿಗೆ ಕೀಟಗಳ ಪ್ರಾಮುಖ್ಯತೆಯ ಮೇಲೆ ಕೇಂದ್ರೀಕರಿಸಿದ್ದು, 2024 ರ ಕೀಟಗಳ ದಿನದ ಥೀಮ್‌ ಕೀಟಗಳನ್ನು ರಕ್ಷಿಸಿ ಹಕ್ಕಿಗಳನ್ನು ರಕ್ಷಿಸಿ ಎಂದಾಗಿತ್ತು. ಈ‌ ನಿಟ್ಟಿನಲ್ಲಿ ಕೀಟಗಳ ಸಂಖ್ಯೆ ಕಡಿಮೆಯಾಗುವುದಕ್ಕೆ ಸಂಬಂಧಿಸಿದ ಕಾಳಜಿಯನ್ನು ಎತ್ತಿ ತೋರಿಸಿತು.

ಪಕ್ಷಿಗಳು ವರ್ಷದಲ್ಲಿ ಎರಡು ಬಾರಿ ಉತ್ತರಧ್ರುವ ಮತ್ತು ದಕ್ಷಿಣ ಧ್ರುವಗಳ ನಡುವೆ ವಲಸೆಪ್ರಯಾಣವನ್ನು ಹೊಂದಿರುವ ಕಾರಣ ಮೇಲಿನ ಎರಡೂ ದಿನಗಳಲ್ಲಿ ವಲಸೆ ಹಕ್ಕಿಗಳ ದಿನವನ್ನು ಆಚರಿಸಲಾಗುತ್ತದೆ.

* ಕೀಟಗಳು ಅನೇಕ ವಲಸೆ ಪಕ್ಷಿ ಪ್ರಭೇದಗಳಿಗೆ ಶಕ್ತಿಯ ಅಗತ್ಯ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಸಂತಾನೋತ್ಪತ್ತಿಯ ಋತುಗಳಲ್ಲಿ ಮಾತ್ರವಲ್ಲದೆ ಅವುಗಳ ದೂರ ಪ್ರಯಾಣದ ಸಮಯದಲ್ಲಿ, ಪಕ್ಷಿ ವಲಸೆಯ ಸಮಯ, ಅವಧಿ ಮತ್ತು ಒಟ್ಟಾರೆ ಯಶಸ್ಸಿನ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ.

* ಸಂತಾನೋತ್ಪತ್ತಿ ಸ್ಥಳಗಳಲ್ಲಿ ಮತ್ತು ಪಕ್ಷಿಗಳ ವಲಸೆ ಮಾರ್ಗಗಳಲ್ಲಿ ಕೀಟಗಳ ಜನಸಂಖ್ಯೆಯ ನಷ್ಟ ಮತ್ತು ಅಡಚಣೆಯು ಪಕ್ಷಿಗಳ ಉಳಿವು ಮತ್ತು ಯೋಗಕ್ಷೇಮಕ್ಕೆ ಬೆದರಿಕೆಯನ್ನುಂಟುಮಾಡುತ್ತದೆ.

ಇದು ತೀವ್ರವಾದ ಕೃಷಿನಷ್ಟ , ನಗರಾಭಿವೃದ್ಧಿ ಮತ್ತು ಬೆಳಕಿನ ಮಾಲಿನ್ಯದಂತಹ ಸಂಬಂಧಿತ ಪರಿಣಾಮಗಳಿಗೆ ಕಾರಣವಾಗಿದೆ.

* ಬೆಳೆಗಳನ್ನು ರಕ್ಷಿಸುವ ಉದ್ದೇಶದಿಂದ ಬಳಸುವ ಕೀಟನಾಶಕಗಳು ಮತ್ತು ಸಸ್ಯನಾಶಕಗಳಿಂದಾಗಿ ಪಕ್ಷಿಗಳು ಆಹಾರಕ್ಕಾಗಿ ಅವಲಂಬಿಸಿರುವ ಕೀಟಗಳು ನಾಶವಾಗುತ್ತವೆ. ಶಕ್ತಿ ಮತ್ತು ಪ್ರೋಟೀನ್-ಭರಿತ ಕೀಟಗಳ ಕೊರತೆಯು ಪಕ್ಷಿಗಳ ವಲಸೆ ಮತ್ತು ಸಂತಾನೋತ್ಪತ್ತಿಗೆ ಅಡ್ಡಿಯಾಗಬಹುದು. ಮತ್ತು ಇದು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ.

ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಪಕ್ಷಿ ಸಂತತಿಗಳಲ್ಲಿ ಮರಣ ಪ್ರಮಾಣವನ್ನು ಹೆಚ್ಚಿಸುತ್ತದೆ.

* ಪರಾಗಸ್ಪರ್ಶ ಮತ್ತು ಕೀಟ ನಿಯಂತ್ರಣದಲ್ಲಿ ಪಕ್ಷಿಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಮತ್ತು ಕೀಟಗಳ ಕೊರತೆಯು ಈ ಪರಿಸರ ವ್ಯವಸ್ಥೆಯ ಸುಗಮ ಕಾರ್ಯಗಳಿಗೆ ಅಡ್ಡಿಪಡಿಸುತ್ತವೆ.

(ಪಕ್ಷಿಗಳಂತಹಾ ನೈಸರ್ಗಿಕ ಪರಭಕ್ಷಕಗಳಿಲ್ಲದ ಕೆಲವು ಕೀಟಗಳ ಅಧಿಕ ಸಂಖ್ಯೆಯು ಸಸ್ಯಗಳ ಆರೋಗ್ಯ ಮತ್ತು ಕೃಷಿಗೆ ಹಾನಿಯನ್ನುಂಟುಮಾಡುತ್ತದೆ.)

* 2024 ರಲ್ಲಿ ವಿಶ್ವ ವಲಸೆ ಹಕ್ಕಿ ದಿನದ ಅಭಿಯಾನವು ಈ ನಿಟ್ಟಿನಲ್ಲಿ ಪೂರ್ವಭಾವಿ ಸಂರಕ್ಷಣಾ ಕ್ರಮಗಳ ಅಗತ್ಯವನ್ನು ಒತ್ತಿಹೇಳಿತು. ಕೀಟನಾಶಕಗಳು ಮತ್ತು ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸಾಧ್ಯವಾದರೆ ಕೃಷಿಯನ್ನು ಸಾವಯವ ಕೃಷಿಗೆ ಬದಲಾಯಿಸುವುದು ಇದರಲ್ಲಿ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT