ಪ್ರಚಾರ ಕಾರ್ಯ ಹೇಗೆ ನಡೆದಿದೆ?
–ಎಂಟು ವಿಧಾನಸಭೆ ಕ್ಷೇತ್ರ ಪೈಕಿ ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಆ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿರುವೆ. ಉತ್ತಮ ಸ್ಪಂದನೆ ಸಿಕ್ಕಿದೆ.
ಮತಯಾಚನೆಗೆ ಬಿಜೆಪಿಯವರು ‘ಮೋದಿ’, ಕಾಂಗ್ರೆಸ್‌ನವರು ‘ಗ್ಯಾರಂಟಿ’ ಎನ್ನುತ್ತಾರೆ. ನೀವು ಯಾವ ವಿಷಯದ ಆಧಾರದ ಮೇಲೆ ಮತ ಯಾಚಿಸುತ್ತೀರಿ?
–ಬಿಜೆಪಿಯ ಸರ್ವಾಧಿಕಾರಿ ಧೋರಣೆ, ಕಾಂಗ್ರೆಸ್‌ನ ಕುಟುಂಬ ರಾಜಕಾರಣದಿಂದ ಜನರಿಗೆ ಅದರಲ್ಲೂ ಮರಾಠಿ ಭಾಷಿಕರಿಗೆ ಬೇಸರವಾಗಿದೆ. ಇವರಿಬ್ಬರ ತಿಕ್ಕಾಟದಿಂದ ನನಗೆ ಅನುಕೂಲ. ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ, ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸುವ ವಿಷಯವನ್ನು ಮುಂದಿಟ್ಟುಕೊಂಡು ಮತ ಕೇಳುವೆ.
ಚುನಾವಣೆಯಲ್ಲಿ ಗಡಿ ವಿವಾದ ಪ್ರಸ್ತಾಪವೇಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರಾಠಿ ಭಾಷಿಕರಿಗೂ ಎಲ್ಲ ಸೌಲಭ್ಯ ಕಲ್ಪಿಸಿದೆ ಅಲ್ಲವೇ?
–ಕರ್ನಾಟಕ ಸರ್ಕಾರವು ಮರಾಠಿ ಭಾಷಿಕರ ಮೇಲೆ ಅನ್ಯಾಯ ಮಾಡುತ್ತಿದೆ. ಕೇಂದ್ರವು ನಮ್ಮನ್ನು ಕಡೆಗಣಿಸಿದೆ. ಇದೇ ಕಾರಣಕ್ಕೆ, ಬೆಳಗಾವಿ ಸೇರಿ ರಾಜ್ಯದ ಗಡಿಭಾಗದ 865 ಗ್ರಾಮಗಳ ಮರಾಠಿ ಭಾಷಿಕರಿಗಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರ ವಿಮೆ ಯೋಜನೆ ನೀಡಿದೆ. ಸರ್ಕಾರಿ ಕಚೇರಿಗಳಲ್ಲಿ ಮರಾಠಿಯಲ್ಲಿ ದಾಖಲೆ ಕೊಡುತ್ತಿಲ್ಲ. ಇದರ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕಿದೆ.
ಮರಾಠಿಯೇತರರು ನಿಮಗೆ ಮತ ಹಾಕುತ್ತಾರಾ?
–ಖಂಡಿತ ಮತ ಹಾಕುತ್ತಾರೆ. ರಾಷ್ಟ್ರೀಯ ಪಕ್ಷಗಳ ಗೊಡವೆಯೇ ಬೇಡ ಎಂಬ ಮನೋಭಾವ ಹಲವರಲ್ಲಿದೆ. ಅವರೆಲ್ಲರೂ ನನಗೆ ಮತ ಚಲಾಯಿಸುವರು. ನಾವಿಕ, ಶಿಂಪಿ, ಸುತಾರ, ಲೋಹಾರ್ ಸಮುದಾಯದ ಮತಗಳೂ ದಕ್ಕಲಿವೆ.
ಪ್ರಚಾರಕ್ಕೆ ಮಹಾರಾಷ್ಟ್ರದಿಂದ ಯಾರು ಬರುತ್ತಾರೆ?
–ಸ್ಪರ್ಧೆಗೆ ಮಹಾರಾಷ್ಟ್ರದ ನಾಯಕರು ಬೆಂಬಲ ಸೂಚಿಸಿದ್ದಾರೆ. ಶಿವಸೇನೆ ನಾಯಕ ಸಂಜಯ ರಾವುತ್, ಶೇತ್ಕರಿ ಸಂಘಟನೆ ಮುಖಂಡ ಸದಾನಂದ ಖೋತ ಮೊದಲಾದವರು ಪ್ರಚಾರಕ್ಕಾಗಿ ಬೆಳಗಾವಿಗೆ ಬರುವರು.
ಕ್ಷೇತ್ರದಲ್ಲಿ ಆಗಬೇಕಾದ ಮುಖ್ಯ ಕೆಲಸಗಳೇನು?
–ಕುಡಿಯುವ ನೀರಿನ ಬವಣೆ ಹೆಚ್ಚಿದೆ. ಇದರ ಪರಿಹಾರಕ್ಕೆ ಒತ್ತು ನೀಡುವೆ. ರೈತರ ಸಂಕಷ್ಟಕ್ಕೆ ಮಿಡಿಯುವೆ. ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತು ನೀಡುವೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.