ಅಮೇಠಿ (ಉತ್ತರ ಪ್ರದೇಶ): ಅಮ್ಮ – ಮಗನ ನಡುವೆ ಎಷ್ಟೊಂದು ವ್ಯತ್ಯಾಸ. ಒಬ್ಬರ ವಿರುದ್ಧ ಒಂದು ಸಣ್ಣ ಅಪಸ್ವರವೂ ಕೇಳುವುದಿಲ್ಲ. ಮತ್ತೊಬ್ಬರ ಮೇಲಿನ ಟೀಕೆ, ಟಿಪ್ಪಣಿಗಳಿಗೆ ಲೆಕ್ಕವಿಲ್ಲ. ಇದು ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಅಮೇಠಿ ಲೋಕಸಭೆ ಕ್ಷೇತ್ರದ ಚಿತ್ರಣ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಇವೆರಡೂ ಕ್ಷೇತ್ರಗಳನ್ನು ಅನುಕ್ರಮವಾಗಿ ಪ್ರತಿನಿಧಿಸುತ್ತಿದ್ದಾರೆ.

ರಾಯ್ಬರೇಲಿ ಮತದಾರರು ಸೋನಿಯಾ ಅವರ ಬಗ್ಗೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾರೆ. 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಒಂದೊಂದಾಗಿ ಪಟ್ಟಿ ಮಾಡುತ್ತಾರೆ. ‘ನಮಗೆ ಅಗತ್ಯವಾದ ಎಲ್ಲ ಸೌಲಭ್ಯಗಳು ಸಿಕ್ಕಿವೆ’ ಎಂದು ಹೇಳುತ್ತಾರೆ. ಆದರೆ, ಇದಕ್ಕೆ ಹೊಂದಿಕೊಂಡಿರುವ ಅಮೇಠಿ ಕ್ಷೇತ್ರದ ಜನರು ರಾಹುಲ್ ಬಗೆಗೆ ಗೊಣಗಾಡುತ್ತಾರೆ. ಅತೃಪ್ತಿ–ಅಸಮಾಧಾನ ಹೊರಹಾಕುತ್ತಾರೆ.

ರಾಹುಲ್, ಅಮೇಠಿಯಿಂದ ಮೊದಲ ಸಲ ಲೋಕಸಭೆಗೆ ಆಯ್ಕೆಯಾಗಿದ್ದು 2004ರಲ್ಲಿ. ಆಗ ಅವರಿಗೆ 34 ವರ್ಷ. ರಾಜೀವ್ ಮತ್ತು ಸೋನಿಯಾ ಅವರ ರಾಜಕೀಯ ಪರಂಪರೆ ಮುಂದುವರಿಸಲು ಬಂದ ರಾಹುಲ್ ಅವರನ್ನು ಮತದಾರರು ಉತ್ಸಾಹದಿಂದ ಸ್ವಾಗತಿಸಿದ್ದರು. 2009ರ ಚುನಾವಣೆಯಲ್ಲೂ ಉತ್ಸಾಹ ಕಡಿಮೆಯಾಗಲಿಲ್ಲ. ರಾಹುಲ್ಗಿದು ಮೂರನೇ ಚುನಾವಣೆ. ಆದರೆ, ಅಮೇಠಿಯಲ್ಲಿ ಈಗ ಮೊದಲಿನ ಪರಿಸ್ಥಿತಿ ಉಳಿದಿಲ್ಲ.

ಅಮೇಠಿ ಮೂಲಸೌಲಭ್ಯಗಳ ಕೊರತೆಯಿಂದ ನಲುಗಿದೆ. ರಸ್ತೆಗಳು ಹದಗೆಟ್ಟಿವೆ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಶಾಲಾ–ಕಾಲೇಜುಗಳಿಲ್ಲ. ಆಸ್ಪತ್ರೆ ಇದ್ದರೂ, ಅಗತ್ಯ ವೈದ್ಯ ಸಿಬ್ಬಂದಿ ಇಲ್ಲ. ಅಮೇಠಿಯ ಜನ ತಮ್ಮ ಕ್ಷೇತ್ರವನ್ನು ರಾಯ್ಬರೇಲಿ ಜತೆ ಹೋಲಿಕೆ ಮಾಡುತ್ತಿದ್ದಾರೆ. ಅಕ್ಕಪಕ್ಕದ ಎರಡು ಕ್ಷೇತ್ರಗಳ ನಡುವೆ ಎಷ್ಟೊಂದು ಅಂತರ ಇದೆ ಎಂದು ತೋರಿಸುತ್ತಿದ್ದಾರೆ.
ಸುದೀಶ್ ಕುಮಾರ್ ಅಗರವಾಲ್, ಅಮೇಠಿಯ ಜೈಸ್ ಪಟ್ಟಣದ ವ್ಯಾಪಾರಿ. ಅವರು ತಮ್ಮ ಅಂಗಡಿ ಮುಂದಿನ ಕಿತ್ತು ಹೋಗಿರುವ ರಸ್ತೆಯನ್ನು ತೋರಿಸುತ್ತಾರೆ.‘ನೋಡಿ ಇದು ತಿಂಗಳ ಹಿಂದೆ ಮಾಡಿದ ರಸ್ತೆ. ಒಂದೇ ತಿಂಗಳಲ್ಲಿ ರಸ್ತೆ ಹಾಳಾದರೆ ನಾವು ಯಾರನ್ನು ದೂರಬೇಕು’ ಎಂದು ಕೇಳುತ್ತಾರೆ.

‘ಗಾಂಧಿ ಕುಟುಂಬದ ಕುಡಿ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ಆದರೂ ಅವರು ಗೆಲ್ಲುತ್ತಾರೆ. ಅಂತರ ಕಡಿಮೆ ಆಗಬಹುದು. ಕಾಂಗ್ರೆಸ್ ಮತಗಳನ್ನು ಬಿಜೆಪಿ ಮತ್ತು ಎಎಪಿ ಕಸಿಯಬಹುದು’ ಎನ್ನುವುದು ಅಗರವಾಲ್ ಅವರ ವಿಶ್ಲೇಷಣೆ. ‘ಅಮೇಠಿಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗದ ಸಮಸ್ಯೆ ಸಿಕ್ಕಾಪಟ್ಟೆ ಇದೆ. ಒಂದು ಒಳ್ಳೆ ಆಸ್ಪತ್ರೆ ಇಲ್ಲ. ಕೈಗಾರಿಕೆಗಳಂತೂ ಮೊದಲೇ ಇಲ್ಲ.

ಇದನ್ನು ರಾಹುಲ್ ಮಾದರಿ ಕ್ಷೇತ್ರವಾಗಿ ಮಾಡಬಹುದಿತ್ತು. ಮನಸ್ಸು ಮಾಡಲಿಲ್ಲ’ ಎಂದು ಮತ್ತೊಬ್ಬ ವ್ಯಾಪಾರಿ ವಿಜಯ ಅಗರವಾಲ್ ವಿಷಾದಿಸಿದರು. ‘ನನ್ನಪ್ಪ ತಿಂಗಳ ಹಿಂದೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ತೀರಿಕೊಂಡರು. ಸಕಾಲದಲ್ಲಿ ಚಿಕಿತ್ಸೆ ಮಾಡಿದ್ದರೆ ಬದುಕುತ್ತಿದ್ದರು. ಅಮೇಠಿ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಕಾನ್ಪುರಕ್ಕೆ ಕರೆದೊಯ್ಯಲಾಯಿತಾದರೂ, ಪ್ರಯೋಜನವಾಗಲಿಲ್ಲ’ ಎಂದು ಸ್ಥಳೀಯ ನಿವಾಸಿ ವಿನೋದ್ ಜೈಸ್ವಾಲ್ ನೋವು ತೋಡಿಕೊಂಡರು.

‘ರಾಹುಲ್ಗೆ ಅಮೇಠಿ ಮತದಾರರ ಜತೆ ನೇರ ಸಂಪರ್ಕವಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಯಾವುದೇ ಕುಂದು– ಕೊರತೆಗಳನ್ನು ದೊರೆಗೆ ಮುಟ್ಟಿಸುವುದಿಲ್ಲ. ಅವರೂ ಕ್ಷೇತ್ರಕ್ಕೆ ಹೆಚ್ಚು ಬರುವುದಿಲ್ಲ. ನಾವು ರಾಜೀವ್ ಅವರ ಮುಖ ನೋಡಿ ರಾಹುಲ್ಗೆ ಬೆಂಬಲ ಕೊಡುತ್ತಿದ್ದೇವೆ’ ಎಂದು ಜೈಸ್ವಾಲ್, ಗಾಂಧಿ ಕುಟುಂಬದ ಮೇಲಿನ ತಮ್ಮ ನಿಷ್ಠೆ ಪ್ರದರ್ಶಿಸಿದರು.

ಅವರ ಪಕ್ಕದಲ್ಲೇ ನಿಂತಿದ್ದ 19 ವರ್ಷದ ಯುವಕ ಎಸ್.ಎನ್. ಜೈಸ್ವಾಲ್, ‘ನಮ್ಮ ಕುಟುಂಬ ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದೆ. ರಾಹುಲ್ ಅವರ ಬಗೆಗೆ ನಮಗೆ ಸಮಾಧಾನವಿಲ್ಲ’ ಎಂದು ತದ್ವಿರುದ್ಧ ನಿಲುವು ವ್ಯಕ್ತಪಡಿಸಿದರು. ‘ದೇಶದ ಯುವಕ, ಯುವತಿಯರು, ರೈತರು, ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳನ್ನು ಭೇಟಿ ಮಾಡುವ ನಾಟಕವನ್ನು ರಾಹುಲ್ ಚೆನ್ನಾಗಿ ಆಡುತ್ತಿದ್ದಾರೆ. ಕ್ಷೇತ್ರದ ಯುವಕರ ಭವಿಷ್ಯದ ಬಗ್ಗೆ ಚಿಂತಿಸಲು ಮರೆತಿದ್ದಾರೆ. ನಮ್ಮಲ್ಲಿ ಉತ್ತಮ ಕಾಲೇಜಿಲ್ಲ. ವಿದ್ಯಾರ್ಥಿಗಳಿಗೆ ಕೋಚಿಂಗ್ ಇಲ್ಲ. ಇರುವ ಒಂದು ಕ್ರೀಡಾಂಗಣ ಮುಚ್ಚಲಾಗಿದೆ’ ಎಂದು ಅಸಮಾಧಾನ ಹೊರ ಹಾಕಿದರು. ಈತನ ಗೆಳೆಯ 18 ವರ್ಷದ ಹಿಮಾಂಶು ನರೇಂದ್ರ ಮೋದಿಗೆ ಬೆಂಬಲ ಘೋಷಿಸಿದರು.

‘ರಾಹುಲ್ ಅವರಿಂದಾಗಿ ಅಮೇಠಿ ಉತ್ತರ ಪ್ರದೇಶದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಅತಿ ಗಣ್ಯರ ಕ್ಷೇತ್ರ ಎನ್ನುವ ಹೆಗ್ಗಳಿಕೆ ಪಡೆದಿದೆ. ಆ ಹೆಗ್ಗಳಿಕೆ ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ದೇಶದಲ್ಲಿ ಪರಿವರ್ತನೆ ಆಗಬೇಕೆಂದು ಜನ ಬಯಸುತ್ತಿರಬಹುದು. ಅಮೇಠಿಯಲ್ಲಿ ಮಾತ್ರ ರಾಹುಲ್ ಅವರನ್ನು ಗೆಲ್ಲಿಸುತ್ತೇವೆ’ ಎಂದು ಶಿವನಾರಾಯಣ್ ಪ್ರತಿಪಾದಿಸಿದರು.

ಇಡೀ ಕ್ಷೇತ್ರದಲ್ಲಿ ರಾಹುಲ್ ಮೇಲೆ ಅಸಮಾಧಾನವಿದ್ದರೂ, ಅವರು ಸೋಲುತ್ತಾರೆಂದು ಯಾರೂ ಹೇಳುವುದಿಲ್ಲ. ಹತ್ತು ವರ್ಷದಿಂದ ಕಾಂಗ್ರೆಸ್ ಉಪಾಧ್ಯಕ್ಷ ತಮ್ಮ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಆದರೂ ಅವರನ್ನು ಬೆಂಬಲಿಸುತ್ತೇವೆ. ಹೊರಗಿನಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹಾಗೂ ಎಎಪಿಯ ಕುಮಾರ್ ಬಿಸ್ವಾಸ್ ಅವರನ್ನು ಗೆಲ್ಲಿಸಿದರೆ ಅವರು ಇಲ್ಲೇ ಉಳಿಯಲಿದ್ದಾರೆ ಎನ್ನುವ ಗ್ಯಾರಂಟಿ ಏನು ಎಂಬ ಪ್ರಶ್ನೆಯನ್ನು ಬಹುತೇಕ ಮತದಾರರು ಕೇಳುತ್ತಾರೆ.

ಸ್ಮೃತಿ ಇರಾನಿ ಮತ್ತು ಕುಮಾರ್ ವಿಶ್ವಾಸ್ ರಾಹುಲ್ ಅವರ ವೈಫಲ್ಯವನ್ನು ಎತ್ತಿ ತೋರುತ್ತಿದ್ದಾರೆ. ರಾಹುಲ್ ಅವರಿಗೆ ಸರಿಯಾದ ಪಾಠ ಕಲಿಸುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅಮೇಠಿಯನ್ನು ಅಣ್ಣನ ವಶದಲ್ಲೇ ಉಳಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅಮೇಠಿ ಜನರೊಂದಿಗೆ ಅವರಿಗೆ ಉತ್ತಮ ಸಂಬಂಧವಿದೆ.

ರಾಹುಲ್ ಅಮೇಠಿಯನ್ನು ಕಡೆಗಣಿಸಿದ್ದಾರೆ. ಅದು ಅತ್ಯಂತ ಹಿಂದುಳಿದಿದೆ ಎಂದು ಇತ್ತೀಚೆಗೆ ಮೇನಕಾ ಗಾಂಧಿ ಟೀಕಿಸಿದ್ದರು. ಅವರ ಮಾತು ಅಕ್ಷರಶಃ ಸತ್ಯ. ಅಮೇಠಿಗೆ ಹೋಲಿಸಿದರೆ ಸೋನಿಯಾ ಅವರ ರಾಯ್ಬರೇಲಿ ನೂರಾರು ಪಟ್ಟು ಅಭಿವೃದ್ಧಿ ಆಗಿದೆ. ಇಷ್ಟಾದರೂ ಅಮೇಠಿ ಜನ ಗಾಂಧಿ ಕುಟುಂಬದ ಕೈಬಿಟ್ಟಲ್ಲ. ರಾಹುಲ್ ಕಳೆದ ಚುನಾವಣೆಯಲ್ಲಿ ಬಿಎಸ್ಪಿಯ ಆಶೀಶ್ ಶುಕ್ಲಾ ಅವರನ್ನು 3.70 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. 2004ರ ಚುನಾವಣೆಯಲ್ಲಿ 2.90ಲಕ್ಷಕ್ಕೂ ಹೆಚ್ಚು ಮತಗಳಿಂದ ಇದೇ ಪಕ್ಷದ ಚಂದ್ರಪ್ರಕಾಶ್ ಮಿಶ್ರಾ ಅವರನ್ನು ಮಣಿಸಿದ್ದರು.

ಈ ಸಲವೂ ರಾಹುಲ್ ಗೆಲ್ಲುವುದು ಖಚಿತವಾಗಿದ್ದರೂ, ಅಂತರ ಕಡಿಮೆ ಆಗಬಹುದೆಂಬ ಸಾಮಾನ್ಯ ಅಭಿಪ್ರಾಯವಿದೆ. ಹಾಗಾದರೆ ಅದು ಯುವರಾಜನಿಗೆ ಎಚ್ಚರಿಕೆ ಗಂಟೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.