ವಾರಾಣಸಿ (ಉತ್ತರ ಪ್ರದೇಶ): ವಾರಾಣಸಿಯ ನರನಾಡಿಗಳಲ್ಲಿ ರಾಜಕಾರಣ ತುಂಬಿ ಹರಿಯುತ್ತಿದೆ. ‘ಕಾಶಿ ವಿಶ್ವನಾಥನ ಸನ್ನಿಧಿ’ಯಲ್ಲಿ ಭಕ್ತಿಗಿಂತ ರಾಜಕಾರಣವೇ ಜೋರಾಗಿದೆ. ಪ್ರತಿ ಬೀದಿ, ಗಲ್ಲಿಗಳಲ್ಲಿ ಚಹಾ-ಪಾನ್ ಅಂಗಡಿಗಳಲ್ಲಿ ಸೋಲು– ಗೆಲುವಿನದೇ ಚರ್ಚೆ. ‘ಮುಜೆ ಚಾಹಿಯೆ ಪೂರ್ಣ ಸ್ವರಾಜ್’ (ನನಗೆ ಪೂರ್ಣ ಸ್ವರಾಜ ಬೇಕು) ಎನ್ನುವ ಘೋಷಣೆಗಳನ್ನು ಹೊತ್ತ ಬಿಳಿಯ ಎಎಪಿ ಟೋಪಿಗಳ ಜತೆ ಪೈಪೋಟಿಗಿಳಿದಂತೆ ‘ಮೋದಿ ಫಾರ್ ಪಿಎಂ’ ಎಂಬ ಕೇಸರಿ ಬಣ್ಣದ ಟೋಪಿಗಳು ವಾರಾಣಸಿಯನ್ನು ಆವರಿಸಿಕೊಂಡಿವೆ. ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗಳನ್ನು ಹೊತ್ತ ಸಮಾಜವಾದಿ ಪಕ್ಷದ ಟೋಪಿಗಳೂ ರೇಸಿನಲ್ಲಿದ್ದೇವೆ ಎಂದು ಸಾರಿ ಹೇಳುತ್ತಿವೆ.

ಒಂದು ವಾರದಿಂದ ವಾರಾಣಸಿಯಲ್ಲಿ ಪ್ರಚಾರ ತಾರಕಕ್ಕೇರಿದೆ. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಗುರುವಾರ ‘ರೋಡ್ ಷೋ’ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಶುಕ್ರವಾರ ಶಕ್ತಿ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ಬಲ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ವಾರಾಣಸಿ ಎರಡನೇ ಕ್ಷೇತ್ರ. ಗುಜರಾತಿನ ‘ವಡೋದರಾ’ದಿಂದಲೂ ಅವರು ಕಣಕ್ಕಿಳಿದಿದ್ದಾರೆ. ಕೇಜ್ರಿವಾಲ್ ಮಾತ್ರ ಇದೊಂದೇ ಕ್ಷೇತ್ರದಿಂದ ‘ಅಖಾಡ’ಕ್ಕಿಳಿದಿದ್ದಾರೆ. ಸ್ಥಳೀಯ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಅಜಯ್ ರಾಯ್ ಸದ್ದುಗದ್ದವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ, ಎಎಪಿ ಪ್ರಚಾರದ ಭರಾಟೆಯಲ್ಲಿ ಕಾಂಗ್ರೆಸ್ ಮಸುಕಾದಂತೆ ಕಾಣುತ್ತಿದೆ. ಕಾಂಗ್ರೆಸ್ ಯುವರಾಜ ರಾಹುಲ್ ತಮ್ಮ ಪಕ್ಷದ ಅಭ್ಯರ್ಥಿಗೆ ಶಕ್ತಿ ತುಂಬಬಹುದು ಎಂದು ವಾರಾಣಸಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಸಮಾಜವಾದಿ ಪಕ್ಷದ ರಾಮೇಶ್ವರ್ ಚೌರಾಸಿಯಾ ಮತ್ತು ಬಹುಜನ ಸಮಾಜ ಪಕ್ಷದ ವಿಜಯ್ ಜೈ-ಸ್ವಾಲ್ ಕಣದಲ್ಲಿದ್ದರೂ ಜನ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.

ಮೋದಿ ರೋಡ್ ಷೋ ಬೆಂಬಲಿಗರಿಂದ ಕಿಕ್ಕಿರಿದಿತ್ತು. ರಸ್ತೆಗಳಲ್ಲಿ ಜನ ತುಂಬಿ ತುಳುಕಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು) ಮುಂಭಾಗದಿಂದ ಆರಂಭವಾದ ರಸ್ತೆ ಯಾತ್ರೆ ಬಿಜೆಪಿ ಕಚೇರಿ ಬಳಿ ಅಂತ್ಯಗೊಂಡಿತು. ಸುಮಾರು ಐದು ಕೀ.ಮೀ ದೂರದ ರಸ್ತೆ ಕ್ರಮಿಸಲು ವಾಹನದಲ್ಲಿ 10ನಿಮಿಷ ಸಾಕು. ಆದರೆ, ಮೋದಿ ಅವರು ತೆಗೆದುಕೊಂಡಿದ್ದು ಬರೋಬರಿ ನಾಲ್ಕು ಗಂಟೆ.

ಅರವಿಂದ್ ಕೇಜ್ರಿವಾಲ್ ಕೂಡಾ ಶಕ್ತಿ ಪ್ರದರ್ಶನದಲ್ಲಿ ಹಿಂದೆ ಬೀಳಲಿಲ್ಲ. ಭಾರಿ ಸಂಖ್ಯೆಯ ಬೆಂಬಲಿಗರು ಅವರನ್ನು ಸುತ್ತುವರಿದಿದ್ದರು. ಅದೇ ಬಿಎಚ್ಯು ಬಳಿಯಿಂದ ಶುರುವಾದ ಎಎಪಿ ನಾಯಕರ ಯಾತ್ರೆ ನಗರದ ಪ್ರಮುಖ ವೃತ್ತವಾದ ‘ಲೌಹ್ರಾ ಬೀರ್’ ಬಳಿ ಕೊನೆಗೊಂಡಿತು. ಕಾರ್ಯಕರ್ತರ ಉತ್ಸಾಹ, ಹುಮ್ಮಸ್ಸು ಯುದ್ಧಕ್ಕೆ ಹೊರಟ ಯೋಧರಂತಿತ್ತು.

ಎಎಪಿ ಬೆಂಬಲಿಗರು ‘ದೇಶ್ ಕಾ ನೇತಾ ಕೈಸಾ ಹೋ, ಕೇಜ್ರಿವಾಲ್ ಜೈಸಾ ಹೋ’ (ದೇಶದ ನಾಯಕ ಹೇಗಿರಬೇಕು? ಕೇಜ್ರಿವಾಲ್ ರೀತಿ ಇರಬೇಕು) ಎಂಬ ಘೋಷಣೆ ಕೂಗುತ್ತಿದ್ದರು. ಹಾಡಿದರು, ಕುಣಿದರು, ಸಿಕ್ಕ ಸಿಕ್ಕ ವಾಹನಗಳ ಮೇಲೇರಿ ಕೇಜ್ರಿವಾಲ್ ಜತೆ ನಡೆದರು. ಕೆಲವರು ಪ್ರತಿಯೊಂದು ಅಂಗಡಿ, ಮನೆಗಳಿಗೂ ಹೋಗಿ ಕರಪತ್ರ ಹಂಚುತ್ತಿದ್ದರು. ಯುವತಿಯರ ಉತ್ಸಾಹವೂ ಕಡಿಮೆ ಇರಲಿಲ್ಲ. ‘ಪ್ಲೀಸ್ ಸಮರ್ಥನ್ ದೀಜಿಯೇ’ (ದಯವಿಟ್ಟು ಬೆಂಬಲ ಕೊಡಿ) ಎಂದು ವಿನಯದಿಂದ ಕೇಳುತ್ತಿದ್ದರು.

ಎಎಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಎಂದಿನಂತೆ ಮೋದಿ ಅವರನ್ನು ಹಿಗ್ಗಾಮುಗ್ಗಾ ಜಾಲಾಡಿದರು. ‘ನಿಮಗೆ ಶುದ್ಧ ರಾಜಕಾರಣ ಬೇಕೋ ಅಥವಾ ಭ್ರಷ್ಟ ರಾಜಕಾರಣ ಬೇಕೋ? ಆಯ್ಕೆ ನಿಮ್ಮ ಮುಂದಿದೆ. ಮೋದಿ ಹೆಲಿಕಾಪ್ಟರ್ನಲ್ಲಿ ಬಂದು ಹೋಗುತ್ತಾರೆ. ಗೆದ್ದು ಹೋದ ಮೇಲೆ ನಿಮ್ಮನ್ನು ತಿರುಗಿಯೂ ನೋಡುವುದಿಲ್ಲ. ನಾನು ನಿಮ್ಮ ನಡುವೆಯೇ ಇದ್ದೇನೆ. ಗೆದ್ದರೂ ಇಲ್ಲೇ ಇರುತ್ತೇನೆ’ ಎಂದು ಭರವಸೆ ನೀಡಿದರು.

ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಪರ ಪ್ರಚಾರ ಮಾಡಲು ಹೊರ ಊರುಗಳಿಂದ ಬೆಂಬಲಿಗರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ಎಎಪಿ ಪರ ಪ್ರಚಾರಕ್ಕೆ ದೆಹಲಿ ಎಂಜಿನಿಯರ್ ರಮಾ ತಿವಾರಿ ಬಂದಿದ್ದರು. ಎರಡು ದಿನಗಳಿಂದ ಅವರು ವಾರಾಣಸಿಯಲ್ಲಿ ಉಳಿದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಪ್ರಕಾಶ್ ಬಾಬು ಮತ್ತಿತರರ ಜತೆಗೂಡಿ ಕೇಜ್ರಿವಾಲ್ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಜ್ರಿವಾಲ್ ಅಖಾಡಕ್ಕೆ ಇಳಿದ ಮೇಲೆ ಅವರು ಎರಡನೇ ಸಲ ಇಲ್ಲಿಗೆ ಬಂದಿದ್ದಾರೆ. ನಾವು ಕೈಯಿಂದ ಹಣ ಖರ್ಚು ಮಾಡಿಕೊಂಡು ಪ್ರಚಾರ ಮಾಡುತ್ತಿದ್ದೇವೆ’ ಎಂದರು.

ಪ್ರಕಾಶ್ ಬಾಬು ಮೊದಲು ಬಿಜೆಪಿಯಲ್ಲಿ ಇದ್ದರಂತೆ. ಆ ಪಕ್ಷದ ತತ್ವ– ಸಿದ್ಧಾಂತಗಳಿಂದ ಬೇಸತ್ತು ಎಎಪಿ ಸೇರಿದ್ದಾರೆ. ‘ಚುನಾವಣೆ ಮುಗಿಯುವವರೆಗೂ ಇಲ್ಲಿರುತ್ತೇವೆ’ ಎಂದು ಖಚಿತಪಡಿಸಿದರು.

ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಿಮಾಚಲ ಪ್ರದೇಶದ ಇಶಾಂತರಾವ್ ಅವರು ಕೇಜ್ರಿವಾಲ್ ಪಕ್ಷದ ನೀತಿ, ಸಿದ್ಧಾಂತಕ್ಕೆ ಮನಸೋತು ಪ್ರಚಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದರು. ಮೋದಿ ಪರವಾಗಿ ಮತ ಯಾಚಿಸಲು ದೆಹಲಿಯ ಉದ್ಯಮಿ ಮಾನ್ಸಿಂಗ್ ಚೌಹಾಣ್ ಬಂದಿದ್ದರು. ‘ಮಹಾಭಾರತ’ದ ಧಾರಾವಾಹಿಯಲ್ಲಿ ’ಯುಧಿಷ್ಟರ’ನ ಪಾತ್ರ ನಿರ್ವಹಿಸಿರುವ ಗಣೇಶ್ ಚೌಹಾಣ್ ಅವರ ಜತೆಗಿದ್ದರು.

ಕೇಜ್ರಿವಾಲ್ ಅವರ ರೋಡ್ ಷೋ ನೋಡಿದ 84 ವರ್ಷದ ಪದ್ಮ ಅಗರವಾಲ್, ‘ನನ್ನ ಜೀವನದಲ್ಲಿ ಇಂತಹದೊಂದು ಚುನಾವಣೆ ಕಂಡಿಲ್ಲ’ ಎಂದು ಉದ್ಗರಿಸಿದರು. ಈ ಹಿರಿಯ ಜೀವ ಬಿಎಚ್ಯು ಬಳಿ ಇರುವ ‘ಬನಾರಸ್ ಬುಕ್ ಕಾರ್ಪೋರೇಷನ್’ ಮಾಲೀಕರು. ಈ ಮಳಿಗೆ ಐದು ದಶಕದಿಂದ ಇದೆಯಂತೆ. ಜವಾಹರಲಾಲ್ ನೆಹರೂ ಹಿಂದೊಮ್ಮೆ ನಡೆದುಕೊಂಡು ಇದೇ ರಸ್ತೆಯಲ್ಲಿ ಪ್ರಚಾರ ಮಾಡಿರುವುದನ್ನು ನೋಡಿದ್ದಾರಂತೆ. ‘ನೋಡಿ ಜೀವನದಲ್ಲಿ ಎಷ್ಟೊಂದು ವೈರುಧ್ಯಗಳನ್ನು ನೋಡುತ್ತಿದ್ದೇನೆ’ ಎಂದು ವಿಷಾದದ ದನಿಯಲ್ಲಿ ಹೇಳಿದರು.

‘2009ರ ಲೋಕಸಭೆ ಚುನಾವಣೆಯಲ್ಲಿ ಮುರಳಿ ಮನೋಹರ ಜೋಶಿ ಸ್ಪರ್ಧೆ ಮಾಡಿದ್ದರು. ಆಗಲೂ ಈ ರೀತಿಯ ಪೈಪೋಟಿ ವಾತಾವರಣ ಇರಲಿಲ್ಲ. ನಾವು ಹಿಂದೆ ಕಮಲಾಪತಿ ತ್ರಿಪಾಠಿ ಅವರಂಥ ಹಿರಿಯ ರಾಜಕಾರಣಿಗಳನ್ನು ಕಂಡಿದ್ದೇವೆ. ವಾರಾಣಸಿಗೆ ಎಷ್ಟೊಂದು ಕೆಲಸ ಮಾಡಿ ಹೋಗಿದ್ದಾರೆ. ಅವರ ಚುನಾವಣೆಗಳು ಗಮನಕ್ಕೆ ಬರದಂತೆ ಮುಗಿದು ಹೋಗುತ್ತಿದ್ದವು. ಈ ಚುನಾವಣೆ ನೋಡಿ’ ಎಂದು ‘ಜಾಡು’ಗಳನ್ನು ಹಿಡಿದು ಹಾಡಿ, ಕುಣಿಯುತ್ತಿದ್ದ ಗುಂಪನ್ನು ತೋರಿಸಿದರು.

ತಾಯಿ ಪಕ್ಕದಲ್ಲಿದ್ದ ಅವರ ಮಗ, ‘ಗುರುವಾರ ಮೋದಿ ಅವರ ರೋಡ್ ಷೋ ಶಾಂತವಾಗಿತ್ತು. ಕೇಜ್ರಿವಾಲ್ ಯಾತ್ರೆ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ’ ಎಂದು ಕಳವಳಪಟ್ಟರು.

ನಿಜಕ್ಕೂ ಈ ಚುನಾವಣೆ ವಾರಾಣಸಿ ಜನರ ಎದೆ ಬಡಿತ ಹೆಚ್ಚಿಸಿದೆ. ಚಹಾ, ಪಾನ್ ಅಂಗಡಿಗಳು, ರೈಲು ಹಾಗೂ ಬಸ್ಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಎಲ್ಲ ಪಕ್ಷಗಳ ಬೆಂಬಲಿಗರು ಒಂದೆಡೆ ಸೇರುತ್ತಾರೆ. ವಾದ– ವಿವಾದಕ್ಕೆ ಇಳಿಯುತ್ತಾರೆ. ಇನ್ನೇನು ಹೊಡೆದಾಟ ಶುರುವಾಗಿಬಿಡಬಹುದೇನೋ ಎನ್ನುವ ಮಟ್ಟಕ್ಕೆ ವಾಗ್ವಾದ ಬೆಳೆಯುತ್ತದೆ. ಸುತ್ತಲಿದ್ದವರ ಮುಖಗಳಲ್ಲೂ ಆತಂಕ ಮಡುಗಟ್ಟುತ್ತದೆ. ಎಲ್ಲ ಜಾತಿ, ಧರ್ಮಗಳ ಜನರೂ ಅಲ್ಲಿರುತ್ತಾರೆ. ಕೊನೆಗೆ ಎಲ್ಲರೂ ನಗುನಗುತ್ತಾ ಪರಸ್ಪರ ಕೈಕುಲುಕಿ, ತಮ್ಮ ತಮ್ಮ ದಾರಿಗಳನ್ನು ಹಿಡಿಯುತ್ತಾರೆ.

‘ಬನಾರಸ್ ಮಣ್ಣಿನ ಗುಣವೇ ಹಾಗೆ. ಎಲ್ಲರೂ ಎಲ್ಲ ವಿಷಯಗಳ ಮೇಲೆ ಚರ್ಚೆ ಮಾಡುತ್ತಾರೆ. ಚರ್ಚೆ ಮಿತಿ ಮೀರುತ್ತದೆ. ಆದರೆ, ಯಾರೂ ಹೊಡೆದಾಡುವುದಿಲ್ಲ. ಅದೇ ಇಲ್ಲಿನ ಸಂಸ್ಕೃತಿ’ ಎಂದು ಗಂಗಾ ಘಾಟಿನ ಹೋಟೆಲೊಂದರ ಮಾಲೀಕ ಅಶುತೋಷ್ ಪಾಂಡೆ ಹೇಳುತ್ತಾರೆ. ವಾರಾಣಸಿ ರಾಜಕೀಯ ಸನ್ನಿವೇಶ ಗಮನಿಸಿದರೆ ಅವರ ಮಾತು ನಿಜವೆನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.