ವಾರಾಣಸಿ (ಉತ್ತರ ಪ್ರದೇಶ): ‘ಗಂಗೆ’ ತೀರದಲ್ಲಿರುವ ‘ಕಾಶಿ’ ಸೋಮವಾರ ಐತಿಹಾಸಿಕ ‘ರಾಜಕೀಯ ಸಮರ’ಕ್ಕೆ ಸಾಕ್ಷಿಯಾಗಲಿದೆ. ದೇಶದ ಅತಿ ದೊಡ್ಡ ಚುನಾವಣೆ ಎಂದೇ ಬಣ್ಣಿಸಲಾಗಿರುವ ‘ದೇವ ನಗರಿ’ಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಅಗ್ನಿ ಪರೀಕ್ಷೆ’ಗೆ ಇಳಿದಿದ್ದಾರೆ. ‘ಎಎಪಿ’ಯ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಶಾಸಕ ಅಜಯ್ ರಾಯ್ ಗುಜರಾತ್ ಮುಖ್ಯಮಂತ್ರಿಗೆ ಸವಾಲೆಸೆದಿದ್ದಾರೆ. ಆದರೆ, ಕಾಶಿಯಲ್ಲಿ, ವಿಶ್ವನಾಥನ ‘ಅನುಗ್ರಹ’ ಯಾರ ಮೇಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಸದಾ ಭಕ್ತಿಯ ಪರಾಕಾಷ್ಠೆಯಲ್ಲಿ ತೇಲಾಡುವ ವಾರಾಣಸಿಯಲ್ಲಿ ಹದಿನೈದು ದಿನಗಳಿಂದ ರಾಜಕೀಯ ಮೇಲಾಟ ನಡೆದಿದೆ. ಹಿಂದೂಗಳಿಗೆ ಪವಿತ್ರ ಸ್ಥಳವಾಗಿರುವ ಈ ನಗರಕ್ಕೆ ಭಕ್ತರಿಗಿಂತಲೂ ಹೆಚ್ಚು ರಾಜಕೀಯ ಪಕ್ಷಗಳ ಕಾರ್ಯಕರ್ತರು ಬಂದು ಹೋಗಿದ್ದಾರೆ. ಚುನಾವಣಾ ರಾಜಕೀಯದ ಇತಿಹಾಸದಲ್ಲೇ ಇಂತಹದೊಂದು ರೋಚಕವಾದ ‘ರಾಜಕೀಯ ಸಮರ’ವನ್ನು ವಾರಾಣಸಿ ಕಂಡಿಲ್ಲ.

ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುವ ಕಾಶಿ, ಎಷ್ಟು ಅಭಿವೃದ್ಧಿ ಕಾಣಬೇಕಿತ್ತೋ ಅಷ್ಟು ಕಂಡಿಲ್ಲ. ‘ಫುಟ್ಪಾತ್’ ಇಲ್ಲದ ಕಿರಿದಾದಂಥ ರಸ್ತೆಗಳು. ಆ ರಸ್ತೆಗಳನ್ನೂ ಅತಿಕ್ರಮಿಸಿದ ಕಟ್ಟಡಗಳು. ಜನ– ವಾಹನ ಎರಡೂ ಕಿಷ್ಕಿಂದವಾದ ರಸ್ತೆಗಳನ್ನೇ ಹಂಚಿಕೊಳ್ಳಬೇಕು. ಇಲ್ಲಿನ ಅವ್ಯವಸ್ಥೆ ಒಂದೋ, ಎರಡೋ ಹತ್ತಾರು... ನೀರು– ವಿದ್ಯುತ್, ಗಂಗಾ ಮಾಲಿನ್ಯದಂಥ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ವಾರಾಣಸಿ ಒದ್ದಾಡುತ್ತಿದೆ. ಜನ ಇಲ್ಲಿ ಹೇಗೆ ಬದುಕುತ್ತಿದ್ದಾರೆಂದು ಅಚ್ಚರಿ ಆಗುತ್ತದೆ. ಸಮಸ್ಯೆಗಳಿಗೆ ಪರಿಹಾರವೇನೆಂದು ಆಲೋಚಿಸಿದರೆ ಆತಂಕವಾಗುತ್ತದೆ.

ವಾರಾಣಸಿ ನಗರಪಾಲಿಕೆಯಲ್ಲಿ ಬಹಳ ವರ್ಷದಿಂದ ಬಿಜೆಪಿ ಆಡಳಿತವಿದೆ. ಆ ಪಕ್ಷದ ಮೇಯರ್ ಇದ್ದಾರೆ. 1991ರಿಂದ ಒಮ್ಮೆ ಹೊರತುಪಡಿಸಿ ಉಳಿದೆಲ್ಲ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. 2004ರಲ್ಲಿ ವಾರಾಣಸಿ ಕಾಂಗ್ರೆಸ್ಗೆ ಒಲಿದಿತ್ತು. ಪಾಲಿಕೆ ಆಡಳಿತ ಮತ್ತು ಲೋಕಸಭೆಗೆ ಗೆದ್ದು ಹೋದವರು ಏನೇನೂ ಕೆಲಸ ಮಾಡಿಲ್ಲವೆಂಬ ಅಸಮಾಧಾನವಿದೆ. 1991ರಿಂದ 99ರವರೆಗೆ ಬಿಜೆಪಿಯ ಶಂಕರಪ್ರಸಾದ್ ಜೈಸ್ವಾಲ್ ಲೋಕಸಭೆಯಲ್ಲಿ ಈ ಕ್ಷೇತ್ರ ಪ್ರತಿನಿಧಿಸಿದ್ದರು. 2004ರಲ್ಲಿ ಕಾಂಗ್ರೆಸ್ನ ರಾಜೇಶ್ ಮಿಶ್ರ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಮುರಳಿ ಮನೋಹರ ಜೋಶಿ ಪುನಃ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ಕಸಿದುಕೊಂಡರು. ಜೋಶಿ ಅವರನ್ನು ಬದಿಗೊತ್ತಿ ಮೋದಿ ಈಗ ‘ಅಖಾಡ’ಕ್ಕಿಳಿದಿದ್ದಾರೆ.

ಮತದಾರರ ಆಶಾಭಾವನೆ: ಕಾಶಿ ಜನ ಬಿಜೆಪಿ ಮೇಲೆ ಬೇಸರಗೊಂಡಿದ್ದರೂ, ‘ಗುಜರಾತ್ ಅಭಿವೃದ್ಧಿ ಹರಿಕಾರ’ ಎಂದು ಬಿಂಬಿಸಿಕೊಂಡಿರುವ ನರೇಂದ್ರ ಮೋದಿ ಅವರತ್ತ ಆಶಾಭಾವದಿಂದ ನೋಡುತ್ತಿದ್ದಾರೆ. ಆಕಾಶದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮೋದಿ ಪ್ರಧಾನಿ ಆದರೆ ವಾರಾಣಸಿ ಚಿತ್ರಣವೇ ಬದಲಾಗಬಹುದೆಂಬ ಆಶಾಭಾವನೆ ಹೊಂದಿದ್ದಾರೆ. ಮತದಾರರಿಗೆ ಮೋದಿ ಬೇಕಾದಷ್ಟು ಭರವಸೆ ನೀಡಿದ್ದಾರೆ. ಆಧ್ಯಾತ್ಮಿಕ ಮತ್ತು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಪಕ್ಷಕ್ಕೆ ಶಕ್ತಿ ತುಂಬುವುದೇ ಮೋದಿ ಸ್ಪರ್ಧೆ ಉದ್ದೇಶ: ಗುಜರಾತಿನ ವಡೋದರಾದಿಂದ ಲೋಕಸಭೆಗೆ ಸ್ಪರ್ಧಿಸಿರುವ ಮೋದಿ ವಾರಾಣಸಿಗೆ ಬಂದಿರುವುದು ಸೋಲಿನ ಭಯದಿಂದಲ್ಲ. ವಡೋದರಾದಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆ. ಉತ್ತರ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಕಳಪೆ ಪ್ರದರ್ಶನ ನೀಡಿರುವ ಪಕ್ಷಕ್ಕೆ ಶಕ್ತಿ ತುಂಬಲು ಬಂದಿದ್ದಾರೆ. ಅವರು ವಾರಾಣಸಿಯಲ್ಲಿ ಸ್ಪರ್ಧಿಸಿರುವುದರಿಂದ ಅವಧ್, ಉತ್ತರಾಂಚಲದಲ್ಲಿ ಲಾಭವಾಗಲಿದೆ. ಬಿಹಾರದ ಕೆಲವು ಕ್ಷೇತ್ರಗಳಲ್ಲೂ ಅನುಕೂಲವಾಗಲಿದೆ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸುತ್ತಿದ್ದಾರೆ.
ವಾರಾಣಸಿಯಲ್ಲಿ ಮೋದಿ ಪರ ಹವಾ ಎಬ್ಬಿಸಲು ಬಿಜೆಪಿ ಪ್ರಯತ್ನಿಸಿದೆ. ಅವರು ನಾಮಪತ್ರ ಸಲ್ಲಿಸಿದ ದಿನ ಮತ್ತು ಗುರುವಾರದ ‘ರೋಡ್ ಷೋ’ ಸಂದರ್ಭದಲ್ಲಿ ಬಲ ಪ್ರದರ್ಶಿಸಿದೆ. ಅರವಿಂದ್ ಕೇಜ್ರಿವಾಲ್, ರಾಹುಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಶಕ್ತಿ ಪ್ರದರ್ಶನದಲ್ಲಿ ಹಿಂದೆ ಬಿದ್ದಿಲ್ಲ.

ಬಿಜೆಪಿ ಲೆಕ್ಕಾಚಾರ: ಮೋದಿ ಅವರಿಗೆ ಗೆಲುವು ಕಷ್ಟವಾಗಬಾರದು ಎನ್ನುವ ಉದ್ದೇಶದಿಂದಲೇ ಕುರ್ಮಿಗಳು ಸ್ಥಾಪಿಸಿರುವ ಜಾತಿ ಪಕ್ಷ ‘ಅಪ್ನಾ ದಳ’ದ ಜತೆ ಬಿಜೆಪಿ ಹೊಂದಾಣಿಕೆ ಮಾಡಿ-ಕೊಂಡಿದೆ. ಎರಡು ಲೋಕಸಭೆ ಸ್ಥಾನಗಳನ್ನು ದಳಕ್ಕೆ ಬಿಟ್ಟುಕೊಟ್ಟಿದೆ. ಇದರಿಂದ 2 ಲಕ್ಷದಷ್ಟಿರುವ ಕುರ್ಮಿ (ಪಟೇಲರ) ಮತಗಳು ಮೋದಿ ಅವರಿಗೆ ಬೀಳಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಗಿದೆ.

ಮೂರು ಲಕ್ಷಕ್ಕೂ ಹೆಚ್ಚು ಮುಸ್ಲಿಮರು, ಮೂರು ಲಕ್ಷ ಬ್ರಾಹ್ಮಣರು, ಮೂರು ಲಕ್ಷ ಜೈಸ್ವಾಲ್, 1.50 ಲಕ್ಷ ಭೂಮಿಹಾರ್ ಸೇರಿದಂತೆ ಕ್ಷೇತ್ರದಲ್ಲಿ ಸುಮಾರು ಹದಿನಾರು ಲಕ್ಷ ಮತದಾರರಿದ್ದಾರೆ. ವಾರಾಣಸಿ ಉತ್ತರ, ವಾರಾಣಸಿ ದಕ್ಷಿಣ, ಕಂಟೊನ್ಮೆಂಟ್, ರೋಹನಿಯ ಮತ್ತು ಸೇವಾಪುರಿ ವಿಧಾನಸಭೆ ಕ್ಷೇತ್ರಗಳನ್ನು ವಾರಾಣಸಿ ಒಳಗೊಂಡಿದೆ. ಮೊದಲ ಮೂರು ಕ್ಷೇತ್ರಗಳು ಬಿಜೆಪಿ, ರೋಹನಿಯ ‘ಅಪ್ನಾದಳ’ದ ಅನುಪ್ರಿಯ ಪಟೇಲ್ ಅವರ ವಶದಲ್ಲಿದೆ. ವಾರಾಣಸಿಯಲ್ಲಿ ಬಹುಸಂಖ್ಯೆಯಲ್ಲಿರುವ ಮುಸ್ಲಿಮರು ಯಾರ ಬೆನ್ನಿಗೆ ನಿಲ್ಲುವರೊ, ಅವರು ಮೋದಿ ಅವರಿಗೆ ಪೈಪೋಟಿ ಕೊಡುತ್ತಾರೆ. ಸದ್ಯಕ್ಕೆ ಅಲ್ಪಸಂಖ್ಯಾತರು ಮೋದಿ ಸೋಲಿಸುವ ಸಾಮರ್ಥ ಯಾರಿಗಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಎಪಿ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ಮನವೊಲಿಸಲು ಎಲ್ಲ ಕಸರತ್ತುಗಳನ್ನು ಮಾಡಿವೆ.

ಪಿಂಡ್ರಾ ಶಾಸಕ ಅಜಯ್ ರಾಯ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ‘ಖ್ವಾಮಿ ಏಕತಾ ದಳ’ದಿಂದ ಸ್ಪರ್ಧೆ ಮಾಡಿದ್ದ ಮುಖ್ತಾರ್ ಅನ್ಸಾರಿ ಹಿಂದೆ ಸರಿದಿದ್ದಾರೆ. ಅವರು ಪರೋಕ್ಷವಾಗಿ ರಾಯ್ ಅವರನ್ನು ಬೆಂಬಲಿಸಿದ್ದಾರೆ. ರಾಯ್ ಅವರನ್ನು ಅನ್ಸಾರಿ ಬೆಂಬಲಿಸಿರುವುದರಿಂದ ಮುಸ್ಲಿಮರ ಮತಗಳು ಅವರಿಗೆ ಬೀಳಬಹುದೆಂದು ಕಾಂಗ್ರೆಸ್ ಭಾವಿಸಿದೆ. ‘ಮೋದಿ, ಕೇಜ್ರಿವಾಲ್ ಹೊರಗಿನವವರು. ನಾನು ಮಾತ್ರ ಸ್ಥಳೀಯ. ಸ್ಥಳೀಯರಿಗೆ ಬೆಂಬಲ ಕೊಡಿ’ ಎಂದು ರಾಯ್ ಮನವಿ ಮಾಡುತ್ತಿದ್ದಾರೆ.

ಮೋದಿ ಗೆಲುವು ಸುಲಭವಲ್ಲ: ಮೋದಿ ಪರ ಹೆಚ್ಚು ಜನ ಮಾತನಾಡುತ್ತಿದ್ದರೂ, ಗೆಲುವು ಸುಲಭ ಎನ್ನುವ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮುರಳಿ ಮನೋಹರ ಜೋಶಿ ಆಯ್ಕೆ ಆಗಿದ್ದು 17,211 ಸಾವಿರ ಮತಗಳ ಅಂತರದಲ್ಲಿ. ಜೋಶಿ ಅವರಿಗೆ ಬಂದಿದ್ದು 2,03122 ಮತಗಳು. ಎರಡನೇ ಸ್ಥಾನದಲ್ಲಿದ್ದ ಬಿಎಸ್ಪಿಯ ಮುಖ್ತಾರ್ ಅನ್ಸಾರಿ ಅವರಿಗೆ ಬಿದ್ದಿದ್ದು 1,85,911 ಮತಗಳು. ಆಗ ಸಮಾಜವಾದಿ ಪಕ್ಷದ ಅಜಯ್ ರಾಯ್ಗೆ 1.2 ಲಕ್ಷ, ಕಾಂಗ್ರೆಸ್ ರಾಜೇಶ್ ಮಿಶ್ರ ಅವರಿಗೆ 66 ಸಾವಿರ ಮತ್ತು ‘ಅಪ್ನಾ ದಳ’ದ ವಿಜಯಪ್ರಕಾಶ್ ಜೈಸ್ವಾಲ್ಗೆ 65 ಸಾವಿರ ಮತಗಳು ಬಂದಿದ್ದವು.

ಬಿಜೆಪಿಯಲ್ಲಿ ಆತಂಕ: ಆಗಿನ ಪರಿಸ್ಥಿತಿ ಬೇರೆ. ಈಗಿನ ಪರಿಸ್ಥಿತಿ ಬೇರೆ. ಆಗ ಮೋದಿ ಅವರಿರಲಿಲ್ಲ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಕೇಜ್ರಿವಾಲ್ ವಾರಾಣಸಿಗೆ ಬಂದಿರಲಿಲ್ಲ. ಈಗ ಇಬ್ಬರೂ ಪ್ರಬಲ ನಾಯಕರು ಕಣದಲ್ಲಿದ್ದಾರೆ. ಎಎಪಿ ನಾಯಕರು ಹಾಗೂ ಕಾರ್ಯಕರ್ತರು ಮನೆಮನೆಗೂ ಹೋಗಿ ತಮ್ಮ ನಾಯಕನ ಪರವಾಗಿ ದೂಳೆಬ್ಬಿಸಿದ್ದಾರೆ. ಕೇಜ್ರಿವಾಲ್ ಪ್ರಚಾರದಿಂದ ಬಿಜೆಪಿ ನಾಯಕರು ಬೆಚ್ಚಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಎಎಪಿ 200ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ನಡೆಸಿದೆ. ಬಿಜೆಪಿ 150 ಸಭೆಗಳನ್ನು ಮಾಡಿದೆ.

ಗ್ರಾಮೀಣ ಭಾಗಗಳಲ್ಲಿ ಕೇಜ್ರಿವಾಲ್ ಜನಪ್ರಿಯವಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ನಡೆಸಿರುವ ಹೋರಾಟ, ಗುಜರಾತಿನಲ್ಲಿ ರೈತರ ಜಮೀನು ಕಿತ್ತು ಮೋದಿ ಉದ್ಯಮಿಗಳಿಗೆ ಕೊಡುತ್ತಿದ್ದಾರೆಂದು ಆಗಿರುವ ಪ್ರಚಾರ, ಗ್ರಾಮೀಣರು ಕೇಜ್ರಿವಾಲ್ ಅವರ ಬಗ್ಗೆ ಚಿಂತಿಸುವಂತೆ ಮಾಡಿದೆ. ಕೇಜ್ರಿವಾಲ್ ಜನಪ್ರಿಯತೆ ಕುಗ್ಗಿಸಲು ಬಿಜೆಪಿ, ‘ಇದು ದೆಹಲಿ ಚುನಾವಣೆ ಅಲ್ಲ, ದೇಶದ ಚುನಾವಣೆ’ ಎಂಬ ಘೋಷಣೆಗಳನ್ನು ಅಲ್ಲಲ್ಲಿ ಹಾಕಿದೆ.

‘ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನವನ್ನು ಕೇವಲ 49 ದಿನದಲ್ಲಿ ತ್ಯಜಿಸಿದರು. ಇನ್ನು ಅವರು ದೇಶಕ್ಕೆ ನಾಯಕತ್ವ ಕೊಡುವರೇ?’ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಈ ಪ್ರಚಾರ ಜನರ ತಲೆಯೊಳಕ್ಕೂ ಹೊಕ್ಕಂತಿದೆ. ಮೋದಿ ಗೆದ್ದರೆ ಪ್ರಧಾನಿ ಆಗುತ್ತಾರೆ. ಕೇಜ್ರಿವಾಲ್ ಲೋಕಸಭೆ ಸದಸ್ಯರಾಗುತ್ತಾರೆಂದು ಹೇಳಲಾಗುತ್ತಿದೆ. ‘ಬಿಜೆಪಿಯ ಇಂಥ ಅಪಪ್ರಚಾರಕ್ಕೆ ವಾರಾಣಸಿ ಜನ ಬೆಲೆ ಕೊಡುವುದಿಲ್ಲ’ ಎಂದು ದೆಹಲಿಯಿಂದ ಎಎಪಿ ಪರ ಪ್ರಚಾರಕ್ಕೆ ಬಂದಿದ್ದ ಇಶಾಂತ್ ರಾವ್ ಹೇಳುತ್ತಾರೆ. 24 ವರ್ಷದ ಇಶಾಂತ್ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

‘ಅನೇಕ ಭಾಷೆ, ಸಂಸ್ಕೃತಿ, ಜಾತಿ ಮತ್ತು ಧರ್ಮಗಳನ್ನು ಒಳಗೊಂಡಿರುವ ದೇಶಕ್ಕೆ ಮೋದಿ ಅವರಂಥ ಉಗ್ರ ಬಲಪಂಥೀಯ (ಫ್ಯಾಸಿಸ್ಟ್) ಮನೋಭಾವದ ನಾಯಕ ಸರಿಹೊಂದುವುದಿಲ್ಲ’ ಎಂದು ಇಶಾಂತ್ ವ್ಯಾಖ್ಯಾನಿಸುತ್ತಾರೆ. ಅನೇಕರು ಅವರ ಮಾತನ್ನು ಒಪ್ಪುತ್ತಾರೆ. ಮೋದಿ ಅವರನ್ನು ಬೆಂಬಲಿಸುವ ಕುರಿತು ವಾರಾಣಸಿ ಚಹಾ ಅಂಗಡಿಗಳಲ್ಲೇ ವಿಭಿನ್ನ ಅಭಿಪ್ರಾಯವಿದೆ. ಮುನ್ನಾ ಟೀ ಸ್ಟಾಲ್ ಮಾಲೀಕ ಮುನ್ನಾ, ‘ಮೋದಿ ಚಹಾ ಮಾರುತ್ತಿದ್ದರು ಎಂದಾಕ್ಷಣ ಅವರನ್ನು ಬೆಂಬಲಿಸಬೇಕೇ? ಅವರು ಪ್ರಧಾನಿಯಾದರೆ ಚಹಾ ಮಾರುವವರ ಬದುಕು ಬದಲಾಗುವುದೇ?’ ಎಂದು ಕೇಳಿದರು.

‘ನಯ್ ಸಡಕ್’ನ ‘ಅಮರನಾಥ್ ಟೀ ಸ್ಟಾಲ್’ ಮಾಲೀಕ ಅಮರನಾಥ್, ಕಾಂಗ್ರೆಸ್ಗೆ ತಮ್ಮ ಬೆಂಬಲವೆಂದರು. ‘ಲೌಹ್ರಾ ಬೀರ್’ನಲ್ಲಿರುವ ವಿಕಾಶ್ ಟೀ ಸ್ಟಾಲ್ ಮಾಲೀಕರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಈ ಪ್ರದೇಶದ ಮತ್ತೊಂದು ಚಹಾ ಅಂಗಡಿ ಮಾಲೀಕ ಬಚನ್ ಪ್ರಸಾದ್ ಗೌಡ್ ಅವರಿಗೆ ಮೋದಿ ಪ್ರಧಾನಿಯಾದರೆ ಬೆಲೆ ಏರಿಕೆ ನಿಯಂತ್ರಿಸುತ್ತಾರೆ ಎನ್ನುವ ವಿಶ್ವಾಸ.

‘ವಾರಾಣಸಿಯಲ್ಲಿ ಅಭಿವೃದ್ಧಿಯೇ ಚುನಾವಣೆ ಪ್ರಮುಖ ವಿಷಯ’ ಎಂದು ರಾಜೇಶ್ ತ್ರಿಪಾಠಿ, ಕೈಲಾಸ್ನಾಥ ಯಾದವ್, ಕಿರಣ್ ದಾದಾ ಹೇಳಿದರು. ವಾರಾಣಾಸಿಯಲ್ಲಿ ಬಿಜೆಪಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಅವರು ಆರೋಪಿಸಿದರು. ಮೋದಿ ವಾರಾಣಸಿ ಚಿತ್ರಣವನ್ನು ಬದಲಾವಣೆ ಮಾಡಬಹುದು ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು.

ವಾರಾಣಸಿ ಯಾರಿಗೆ ಒಲಿಯಬಹುದು ಎಂದು ಕೇಳಿದರೆ, ಬಹುತೇಕರು ಮೋದಿ ಗೆದ್ದೇ ಗೆಲ್ಲುತ್ತಾರೆ. ಅವರಿಗೆ ಕೇಜ್ರಿವಾಲ್ ಮತ್ತು ಅಜಯ್ ರಾಯ್ ಪ್ರಬಲವಾದ ಪೈಪೋಟಿ ನೀಡುತ್ತಾರೆಂದು ಭವಿಷ್ಯ ನುಡಿಯುತ್ತಾರೆ. ಆದರೆ, ಮುಂಗೇಶ್ ಅನ್ಸಾರಿ ‘ವಾರಾಣಾಸಿ ರಾಜಕಾರಣವೇ ವಿಭಿನ್ನ. ಚುನಾವಣೆಯಲ್ಲಿ ಇಂಥವರೇ ಗೆಲ್ಲುತ್ತಾರೆ ಎಂದು ಅಂದಾಜು ಮಾಡುವುದು ಕಷ್ಟ ಎಂದು ವಿಶ್ಲೇಷಿಸುತ್ತಾರೆ. .

ಸಮಾಜವಾದಿ ಪಕ್ಷದ ಕೈಲಾಸ್ ಚೌರಾಸಿಯಾ ಮತ್ತು ಬಹುಜನ ಸಮಾಜ ಪಕ್ಷದ ವಿಜಯ ಕುಮಾರ್ ಜೈಸ್ವಾಲ್ ಕಣದಲ್ಲಿದ್ದರೂ ಮೋದಿ, ಕೇಜ್ರಿವಾಲ್ ಅವರಂತೆ ಅಬ್ಬರ ಕಾಣುವುದಿಲ್ಲ. ವಾರಾಣಸಿಯಲ್ಲಿ ಯಾರು ಹೆಚ್ಚು ಶಕ್ತಿವಂತರು ಎನ್ನುವ ಸತ್ಯ ಬೆಳಕಿಗೆ ಬರಲು ಮೇ 16ರವರೆಗೆ ಕಾಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.