ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದ: ನಡ್ಡಾ
ನವದೆಹಲಿ: ‘ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಮಾಡಿರುವುದರಿಂದ ಹಣಕಾಸು ವಿಚಾರವಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ನ ಹೇಳಿಕೆ ಹಾಸ್ಯಾಸ್ಪದ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಹೇಳಿದ್ದಾರೆ. ತನ್ನ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿರುವ ನಡ್ಡಾ ‘ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ಮಾಡಿರುವ ಹಗರಣಗಳಿಂದ ಸಂಗ್ರಹಿಸಿರುವ ಹಣವನ್ನು ಈ ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳಲಿ’ ಎಂದು ತಿರುಗೇಟು ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನಡ್ಡಾ ‘ತಾನು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್ ಅಸಂಬದ್ಧವಾಗಿ ದೂಷಣೆ ಮಾಡುತ್ತಿದೆ. ವಾಸ್ತವದಲ್ಲಿ ಆ ಪಕ್ಷ ನೈತಿಕವಾಗಿ ಬೌದ್ಧಿಕವಾಗಿ ದಿವಾಳಿಯಾಗಿದೆಯೇ ಹೊರತು ಆರ್ಥಿಕವಾಗಿ ಅಲ್ಲ’ ಎಂದಿದ್ದಾರೆ. ‘ಈ ಬಾರಿ ಜನರು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಲಿದ್ದಾರೆ. ಈ ಹೀನಾಯ ಸೋಲಿನ ಭಯದಿಂದ ಪಕ್ಷದ ಉನ್ನತ ನಾಯಕರು ಸುದ್ದಿಗೋಷ್ಠಿ ನಡೆಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹರಿಹಾಯ್ದಿದ್ದಾರೆ’ ಎಂದೂ ಹೇಳಿದ್ದಾರೆ. ‘ಕಾಂಗ್ರೆಸ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ತನ್ನ ಸಂಕಷ್ಟಗಳಿಗೆ ಕೇಂದ್ರೀಯ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ. ಐಟಿಎಟಿ ಅಥವಾ ದೆಹಲಿ ಹೈಕೋರ್ಟ್ ಆಗಲಿ ಬಾಕಿ ತೆರಿಗೆಯನ್ನು ಪಾವತಿಸುವ ಮೂಲಕ ನಿಯಮಗಳನ್ನು ಪಾಲಿಸುವಂತೆ ಕಾಂಗ್ರೆಸ್‌ಗೆ ಸೂಚಿಸಿದೆ. ಆದರೆ ಪಕ್ಷ ಆ ಕೆಲಸ ಮಾಡುತ್ತಿಲ್ಲ’ ಎಂದು ನಡ್ಡಾ ಟೀಕಿಸಿದ್ದಾರೆ.