ಕಾರವಾರ: ಬಿಜೆಪಿಯ ಭದ್ರಕೋಟೆ ಎನಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆ.

ಎರಡೂ ಪಕ್ಷಗಳ ಅಭ್ಯರ್ಥಿಗಳಿಗಿಂತ ‘ನರೇಂದ್ರ ಮೋದಿ ವರ್ಸಸ್ ಗ್ಯಾರಂಟಿ ಯೋಜನೆ’ ನಡುವಿನ ಸ್ಪರ್ಧೆ ಎಂಬಂತೆ ಬಿಂಬಿತಗೊಂಡಿದೆ. 28 ವರ್ಷಗಳ ಬಳಿಕ ಬಿಜೆಪಿ ತನ್ನ ಅಭ್ಯರ್ಥಿ ಬದಲಿಸಿದ್ದು, ಆರು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ನಿಂದ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಇಲ್ಲಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಆರು ಮತ್ತು ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭೆ ಕ್ಷೇತ್ರಗಳನ್ನು ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ಒಳಗೊಂಡಿದೆ. ಖಾನಾಪುರ ತಾಲ್ಲೂಕಿನ ಅಭ್ಯರ್ಥಿಗೆ ಮೊದಲ ಬಾರಿ ಸ್ಪರ್ಧೆಗೆ ಅವಕಾಶ ಸಿಕ್ಕಂತಾಗಿದೆ.

1952 ರಿಂದ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್ 1996ರಲ್ಲಿ ಸೋಲೊಪ್ಪಿತ್ತು. 1999ರಲ್ಲಿ ಪುನಃ ಗೆಲುವು ಸಾಧಿಸಿದರೂ 2004ರಿಂದ ಕ್ಷೇತ್ರವು ಬಿಜೆಪಿಯ ವಶದಲ್ಲಿತ್ತು.

ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ಟ್ರಂಪ್ ಕಾರ್ಡ್ ಬಳಸಿ, ಗೆಲ್ಲುತ್ತಿದ್ದ ಬಿಜೆಪಿಯ ರಣತಂತ್ರವನ್ನು ಈ ಬಾರಿ ಕಾಂಗ್ರೆಸ್ ಹೈಜಾಕ್ ಮಾಡಿದೆ. ಪಕ್ಷದ ಅಭ್ಯರ್ಥಿ ಡಾ.ಅಂಜಲಿ ಪ್ರಚಾರ ಸಭೆಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ.

ಹಿಂದುತ್ವ ಪ್ರತಿಪಾದನೆಯ ‘ಐಕಾನ್’ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದ್ದು, ಅವರ ಬೆಂಬಲಿಗರ ಮುನಿಸಿಗೆ ಕಾರಣವಾಗಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಇಬ್ಬಣಗಳು ಸೃಷ್ಟಿಯಾಗಿವೆ. ಈ ಬಾರಿ ಪ್ರಚಾರ ಕಣದಲ್ಲಿ ಹಿಂದುತ್ವದ ವಿಚಾರಗಳನ್ನು ಬಿಜೆಪಿ ಅಭ್ಯರ್ಥಿ ಕಾಗೇರಿ ಅಷ್ಟಾಗಿ ಪ್ರಸ್ತಾಪಿಸುತ್ತಿಲ್ಲ. ಅದರ ಬದಲು ಮೋದಿ ನಾಮಬಲ ಬಳಕೆಗೆ ಆದ್ಯತೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಪ್ರಧಾನಿ ಮೋದಿ ಸ್ವತಃ ಕಾಗೇರಿ ಪರ ಪ್ರಚಾರಕ್ಕೆ (ಏ.28ಕ್ಕೆ) ಶಿರಸಿಗೆ ಬರಲಿದ್ದಾರೆ. ಮೋದಿ ಮೂಲಕ ಮತದಾರರ ಮನ ಗೆಲ್ಲಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಕ್ಷೇತ್ರಕ್ಕೆ ಬರುವವರಿದ್ದಾರೆ. ಮೇ 3 ಮತ್ತು 4 ರಂದು ಅವರ ಪ್ರವಾಸ ನಿಗದಿಯಾಗಿದೆ. ಮುಖ್ಯಮಂತ್ರಿ ಭೇಟಿಯಿಂದ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಬಹುದು ಎಂಬ ಲೆಕ್ಕವನ್ನು ಕಾಂಗ್ರೆಸ್ ಹಾಕಿಕೊಂಡಿದೆ.

ಚುನಾವಣೆ ಸಮೀಪಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಆರೋಪ, ಪ್ರತ್ಯಾರೋಪವೂ ಬಿರುಸಾಗಿ ಸಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಸಂಪತ್ತಿನ ಸಮಾನ ಹಂಚಿಕೆ ವಿಚಾರ ಮುಂದಿಟ್ಟು ಬಿಜೆಪಿ ವಾಗ್ದಾಳಿ ನಡೆಸುತ್ತಿದ್ದರೆ, ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಪ್ರತಿ ದಾಳಿಯಲ್ಲಿ ತೊಡಗಿಕೊಂಡಿದೆ.

ಇವೆಲ್ಲ ಏನೇ ಇದ್ದರೂ, ಅಭ್ಯರ್ಥಿಗಿಂತ ಮತದಾರರು ಮೋದಿ ಹೆಸರಿನಲ್ಲಿ ಮತ ನೀಡುತ್ತಾರೆ ಎಂಬ ವಿಶ್ವಾಸ ಬಿಜೆಪಿಯದ್ದು. ರಾಜ್ಯದ ಗ್ಯಾರಂಟಿ ಯೋಜನೆಯ ಮಹತ್ವ ಜನರಿಗೆ ಮನವರಿಕೆಯಾಗಿದೆ ಎಂಬ ನಂಬಿಕೆ ಕಾಂಗ್ರೆಸ್ನವರದ್ದು.

ಪ್ರಚಾರದಲ್ಲಿ ಎರಡೂ ಪಕ್ಷಗಳು ಸಮಬಲ ಕಾಯ್ದುಕೊಂಡಿದ್ದು, ಮತದಾರರು ಯಾರಿಗೆ ಒಲವು ತೋರುವರು ಎಂಬುದೇ ಕುತೂಹಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.