‘ಎಂಜಿನಿಯರಿಂಗ್ ಓದಪ್ಪ’–ಅಮ್ಮ, ಅಪ್ಪನ ಬಯಕೆ. ‘ನಾನು ಹಾಸ್ಯ ಬರೆಯುವೆ’–ಮಗನ ಒತ್ತಾಸೆ. ‘ಅದನ್ನೂ ಮಾಡುವೆಯಂತೆ, ನಾವು ಹೇಳಿದ್ದನ್ನು ಮೊದಲು ಮಾಡು’–ಟಿಪಿಕಲ್ ಅಪ್ಪ–ಅಮ್ಮ. ರಾಜ್ ಶಾಂಡಿಲ್ಯ ಎಂಜಿನಿಯರಿಂಗ್ ಓದಿದರು. ವಾರಾಂತ್ಯದಲ್ಲಿ ಭೋಪಾಲ್ನಿಂದ ಮುಂಬೈಗೆ ಹೋಗುತ್ತಿದ್ದರು. ಅಂಧೇರಿಯಿಂದ ಗೋರೆಗಾಂವ್ ಫಿಲ್ಮ್ ಸಿಟಿಗೆ 12 ಕಿ.ಮೀ.ಗಿಂತ ಹೆಚ್ಚು ದಾರಿ ಸವೆಸಬೇಕು. ನಡೆದೇ ಸಾಗುತ್ತಿದ್ದ ಶಾಂಡಿಲ್ಯ ತನ್ನೊಳಗಿನ ಬರಹಗಾರನಿಗೆ ಜೀವ ಕೊಡಬೇಕು ಎಂದೇ ಹಪಹಪಿಸುತ್ತಿದ್ದುದು.

ಒಂದು ಕಡೆ ಎಂಜಿನಿಯರಿಂಗ್ ಓದು. ಇನ್ನೊಂದು ಕಡೆ ನಗೆಬರಹ. ಎರಡನ್ನೂ ತೂಗಿಸಿಕೊಂಡೇ ಬಂದ ರಾಜ್ ಒಂದು ದಿನ ತನ್ನ ಕೆಲಸಕ್ಕೆ ಕಿಮ್ಮತ್ತು ಪಡೆದೇಬಿಟ್ಟರು. ಹಾಗೆ ಆಗುವ ಹೊತ್ತಿಗೆ ಎರಡೂವರೆ ವರ್ಷಗಳು ಸವೆದುಹೋಗಿದ್ದವು. ಅವರು ನವೆದೂ ಇದ್ದರೆನ್ನಿ.

‘ಅಪ್ಪ, ನನಗೆ ಇಪ್ಪತ್ತಮೂರು ಸಾವಿರ ರೂಪಾಯಿಗಳ ಚೆಕ್ ಕೊಟ್ಟಿದ್ದಾರೆ’ ಎಂದು ಮುಂಬೈನಿಂದ ಫೋನ್ ಮಾಡಿ ರಾಜ್ ಹೇಳಿದಾಗ, ತಂದೆ ನಗೆಯಾಡಿದರು. ‘ತಮಾಷೆ ಮಾಡಬೇಡ, ಬೇಗ ಮನೆಗೆ ಬಾ’ ಎಂದು ಫೋನಿಟ್ಟರು. ಹತ್ತಿರದ ಅಂಗಡಿಗೆ ರಾಜ್ ಶಾಂಡಿಲ್ಯ ತನ್ನ ಚೆಕ್ ಅನ್ನು ಫ್ಯಾಕ್ಸ್ ಮಾಡಿದರು. ಅದನ್ನು ನೋಡಿದ್ದೇ ಅಪ್ಪ–ಅಮ್ಮನಿಗೆ ಖುಷಿಯೋ ಖುಷಿ. ‘ಕಾಮಿಡಿ ಬರೆದರೆ ಇಷ್ಟು ಹಣ ಅದ್ಯಾರು ಕೊಡುತ್ತಾರಪ್ಪ’ ಎಂದು ಅವರು ಪ್ರಶ್ನೆಯನ್ನೂ ಬೆರೆಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು.

2007ರಿಂದ 2014ರ ವರೆಗೆ ರಾಜ್ ಶಾಂಡಿಲ್ಯ ‘ಕಾಮಿಡಿ ಸರ್ಕಸ್’ ಹಿಂದಿ ಕಾರ್ಯಕ್ರಮಕ್ಕೆ ಸ್ಟ್ರಿಪ್ಟ್ಗಳನ್ನು ಬರೆದರು. ಕೃಷ್ಣ ಅಭಿಷೇಕ್ ಹಾಗೂ ಸುದೇಶ್ ಲೆಹರಿ ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳ ಸೃಷ್ಟಿಕರ್ತ ಇವರೆನ್ನುವುದು ಎಷ್ಟೋ ವೀಕ್ಷಕರಿಗೆ ಗೊತ್ತೇ ಇರಲಿಲ್ಲ. ಏಳೆಂಟು ವರ್ಷ ಹಾಸ್ಯ ಬರವಣಿಗೆಯಲ್ಲಿ ಕೈ ಪಳಗಿಸಿಕೊಂಡ ಮೇಲೆ ‘ವೆಲ್ಕಂ ಬ್ಯಾಕ್’ ಸಿನಿಮಾಗೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಿತು.

ಕಪಿಲ್ ಶರ್ಮ ಹಾಸ್ಯದ ಷೋಗೆ ಸ್ಕ್ರಿಪ್ಟ್ಗಳನ್ನು ರೂಪಿಸಿಕೊಡುವ ಇನ್ನೊಂದು ದೊಡ್ಡ ಅವಕಾಶ ಇವರದ್ದಾಯಿತು. 2013ರ ಹೊತ್ತಿಗೆ 625 ಹಾಸ್ಯದ ಎಪಿಸೋಡ್ಗಳನ್ನು ಬರೆದ ಕಾರಣಕ್ಕೆ ಲಿಮ್ಕಾ ದಾಖಲೆ ಪುಸ್ತಕಕ್ಕೆ ರಾಜ್ ಶಾಂಡಿಲ್ಯ ಹೆಸರು ಸೇರ್ಪಡೆಯಾಯಿತು. ಕಪಿಲ್ ಶರ್ಮ ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ 200 ಸ್ಕ್ರಿಪ್ಟ್ಗಳನ್ನು ರಚಿಸಿಕೊಟ್ಟಿರುವ ಅಗ್ಗಳಿಕೆ ಇವರದ್ದು.

ರಾಜ್ ಹಾಸ್ಯ ಬರಹಗಾರರ ಒಂದು ತಂಡವನ್ನೇ ಈಗ ಮುನ್ನಡೆಸಲಾರಂಭಿಸಿದ್ದಾರೆ. ಅದು ‘ಕಾಮಿಡಿ ವಿತ್ ಕಪಿಲ್’ ಕಾರ್ಯಕ್ರಮದ ಜನಪ್ರಿಯತೆಯಿಂದ ಸಾಧ್ಯವಾದದ್ದು. ಮೊದಲು ರಾಜ್ ತಂಡದ ಎಲ್ಲರಿಗೂ ವಸ್ತುವಿಷಯ ಹೇಳುತ್ತಿದ್ದರು. ಉಳಿದವರೆಲ್ಲ ಬರೆದು ತಂದ ಸರಕನ್ನು ಇವರು ಚಕಚಕನೆ ತಿದ್ದಿ, ತೀಡುವುದು ಆಗ ಮಾಡುತ್ತಿದ್ದ ಕೆಲಸ. ತಮ್ಮ ತಂಡದಲ್ಲೇ ಒಬ್ಬರು ಬರೆದದ್ದನ್ನು ಘಂಟಾಘೋಷವಾಗಿ ಓದುತ್ತಿದ್ದರು. ಎಲ್ಲರೂ ನಕ್ಕಿದರಷ್ಟೇ ಅದು ಪರಿಣಾಮಕಾರಿಯಾಗಿದೆ ಎಂದು ತೀರ್ಮಾನಕ್ಕೆ ಬರುತ್ತಿದ್ದುದು.

ಹೀಗೆ ಹಾಸ್ಯ ರಸಾಯನವನ್ನು ದಶಕಕ್ಕೂ ಹೆಚ್ಚು ಕಾಲ ಉಣಬಡಿಸುತ್ತಾ ಬಂದಿರುವ ರಾಜ್ ಶಾಂಡಿಲ್ಯ ಈಗ ಸ್ವತಂತ್ರ ಸಿನಿಮಾ ನಿರ್ದೇಶಕ. ಆಯುಷ್ಮಾನ್ ಖುರಾನಾ ನಾಯಕನಾಗಿ ನಟಿಸಿರುವ ‘ಡ್ರೀಮ್ ಗರ್ಲ್’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ ₹ 30 ಕೋಟಿ ನಿರ್ಮಾಣ ವೆಚ್ಚದ ಈ ಸಿನಿಮಾ ಮೊದಲ ನಾಲ್ಕು ದಿನಗಳಲ್ಲೇ ದುಪ್ಪಟ್ಟಿಗೂ ಹೆಚ್ಚು ವಹಿವಾಟು ನಡೆಸಿರುವುದು ರಾಜ್ ಶಾಂಡಿಲ್ಯ ಉತ್ಸಾಹದಕ್ಕೆ ಇಂಧನದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.