ನವದೆಹಲಿ: ‘ನನ್ನ ತಾಯಿ ಈಗಲೂ ಒಂದು ನಕ್ಷತ್ರವಾಗಿ ಆಗಸದಲ್ಲಿ ಹೊಳೆಯುತ್ತಿದ್ದಾರೆ. ಅದು ಯಾವ ನಕ್ಷತ್ರ ಎಂಬುದೂ ನನಗೆ ಗೊತ್ತಿದೆ. ಅವರು ನೋಡುವಂಥ ದೊಡ್ಡ ಸಿನಿಮಾ ಮಾಡಬೇಕು ಎಂಬುದು ನನ್ನ ಮಹದಾಸೆ’ ಎಂದು ಬಾಲಿವುಡ್ ನಟ ಶಾರೂಕ್ ಖಾನ್ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ಲಕಾರ್ನೊ ಮೀಟ್ಸ್ ಎಂಬ ಪಾಡ್ಕಾಸ್ಟ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ‘ದೇವದಾಸ’ ಸಿನಿಮಾ ಮಾಡುವಾಗ, ಕೆಲ ಹಿರಿಯ ನಟರು ಅದನ್ನು ಒಪ್ಪಿಕೊಳ್ಳದಂತೆ ಸಲಹೆ ನೀಡಿದ್ದರು. ಆದರೆ, ಅದೇಕೋ ನನಗೆ ಆ ಚಿತ್ರ ಮಾಡಬೇಕೆಂದೆನಿಸಿತು. ನಾನು ‘ದೇವದಾಸ್’ ಪಾತ್ರ ನಿರ್ವಹಿಸಿದೆ ಎಂದು ತಾಯಿಗೆ ಹೇಳಬೇಕೆಂದೆನಿಸಿತ್ತು. ಆ ಚಿತ್ರವನ್ನು ತಾಯಿ ನೋಡಿದ್ದರೆ, ನಿಜಕ್ಕೂ ಇಷ್ಟಪಟ್ಟು, ಮೆಚ್ಚುತ್ತಿದ್ದರು’ ಎಂದಿದ್ದಾರೆ.

‘ನನ್ನ ಅಮ್ಮ ದಿಲೀಪ್ ಕುಮಾರ್ ಅವರ ದೊಡ್ಡ ಅಭಿಮಾನಿ. 1917ರಲ್ಲಿ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ್ದ ಕಾದಂಬರಿ ಆಧರಿಸಿ 1955ರಲ್ಲಿ ದಿಲೀಪ್ ಕುಮಾರ್ ಅವರು ದೇವದಾಸ್ ಪಾತ್ರದಲ್ಲಿ ಅಭಿನಯಿಸಿದ್ದರು. 2002ರಲ್ಲಿ ಅದೇ ಚಿತ್ರವನ್ನು ಸಂಜಯ ಲೀಲಾ ಬನ್ಸಾಲಿ ಅವರು ನಿರ್ದೇಶಿಸಿದ್ದರು. ಅದರಲ್ಲಿ ನಾನು ದೇವದಾಸ್ ಪಾತ್ರದಲ್ಲಿ ಅಭಿನಯಿಸಿದ್ದೆ. ನಾನು ಅಭಿನಯಿಸಿದ್ದನ್ನೂ ತಾಯಿ ನೋಡಬೇಕಿತ್ತು’ ಎಂಬ ತಮ್ಮ ತೀರದ ಬಯಕೆಯನ್ನು ಹಂಚಿಕೊಂಡಿದ್ದಾರೆ.

ಶಾರುಕ್ ಖಾನ್ ಸಿನಿಮಾ ಜಗತ್ತು ಪ್ರವೇಶಿಸುವ ಮೊದಲೇ ತಮ್ಮ ಪಾಲಕರಾದ ಮೀರ್ ತಾಜ್ ಮೊಹಮ್ಮದ್ ಖಾನ್ ಹಾಗೂ ಲತೀಫ್ ಫಾತಿಮಾ ಅವರನ್ನು ಕಳೆದುಕೊಂಡಿದ್ದರು. ಯೆಸ್ ಬಾಸ್ ಚಿತ್ರದಲ್ಲಿನ ‘ಚಾಂದ್ ತಾರೇ’, ಸ್ವದೇಶ್ ಚಿತ್ರದ ‘ಯೇ ತಾರಾ ವೋ ತಾರಾ’ ಗೀತೆಗಳನ್ನು ಗುನುಗುವಾಗಲೂ ಅದು ನನ್ನ ಪಾಲಕರ ಕುರಿತಾಗಿಯೇ ಎಂದೆನಿಸುತ್ತದೆ ಎಂಬ ಸಂಗತಿಯನ್ನು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ದೇವದಾಸ ಪಾತ್ರಕ್ಕಾಗಿ ಮದ್ಯ ಸೇವಿಸುವುದನ್ನು ಕಲಿತೆ

ನಾನು ಮೊದಲು ಮದ್ಯ ಸೇವಿಸುತ್ತಿರಲಿಲ್ಲ. ಆದರೆ ದೇವದಾಸ್ ಚಿತ್ರದಲ್ಲಿ ಮದ್ಯ ಸೇವಿಸದ ಹೊರತು, ಆ ಪಾತ್ರ ಸಹಜವಾಗಿ ಮೂಡುತ್ತಿರಲಿಲ್ಲ. ಹೀಗಾಗಿ ಕುಡಿಯುವುದನ್ನು ಕಲಿತೆ. ಅದು ನನ್ನ ಜೀವನದ ಒಂದು ನಕಾರಾತ್ಮಕ ಅಂಶ. ಆ ನನ್ನ ಪಾತ್ರವನ್ನು ನೀವು ಇಷ್ಟಪಡಬೇಕು ಎಂದು ನಾನು ಬಯಸುವುದಿಲ್ಲ. ಹಾಗೆಂದ ಮಾತ್ರಕ್ಕೆ, ದ್ವೇಷಿಸಿ ಎಂದೂ ನಾನು ಹೇಳುವುದಿಲ್ಲ. ಕಂಡಕಂಡ ಹುಡುಗಿಯರ ಹಿಂದೆ ಹೋಗುವ ಹಾಗೂ ಮದ್ಯವ್ಯಸನಿಯಾಗಿರುವ ಆತನನ್ನು ಇಷ್ಟಪಡಿ ಎಂದೂ ನಾನು ಹೇಳುವುದಿಲ್ಲ. ಆದರೆ, ಆತನೊಬ್ಬ ವರ್ಣನಾತೀತ ವ್ಯಕ್ತಿ ಎಂಬ ಕಾರಣಕ್ಕೆ ಮೆಚ್ಚಬೇಕು ಎಂಬುದು ನನ್ನ ಅನಿಸಿಕೆ’ ಎಂದು ಶಾರುಕ್ ಹೇಳಿದ್ದಾರೆ.

‘ಹಾಸ್ಯ ಪ್ರಜ್ಞೆಯ ವಿಷಯದಲ್ಲಿ ನನ್ನನ್ನು ನಿಯಂತ್ರಿಸಿ ಎಂದು ನಾನು ನನ್ನ ತಂಡಕ್ಕೆ ಮೊದಲೇ ಹೇಳಿದ್ದೇನೆ. ಜನರನ್ನು ನಾನು ನಗಿಸಬಲ್ಲೆ. ಆದರೆ ಕೆಲವೊಮ್ಮೆ ಅದು ಅನುಚಿತವೂ ಆಗಿರುತ್ತದೆ. ಹೀಗಾಗಿ ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ. ಕೆಲವೊಮ್ಮೆ ಕೆಲವರಿಗೆ ನನ್ನ ಹಾಸ್ಯವೇ ಅರ್ಥವಾಗುವುದಿಲ್ಲ. ಹೀಗಾಗಿ ನನ್ನ ತಂಡಕ್ಕೆ ನಾನು ಮೊದಲೇ ಈ ಸಂಗತಿ ಹೇಳಿರುತ್ತೇನೆ. ನನ್ನ ಹಾಸ್ಯ ಇತರರ ಮನಸ್ಸಿಗೆ ನೋವಾಗುವುದಾದರೆ, ಅಂಥದ್ದರಿಂದ ದೂರವಿರುವುದೇ ಲೇಸು ಎಂದುಕೊಂಡಿದ್ದೇನೆ’ ಎಂದು ನಗುತ್ತಲೇ ಹೇಳಿದರು ಬಾಲಿವುಡ್ ಬಾದ್ಶಾ.

‘ಹಾಸ್ಯ ಎಂಬುದು ಅತ್ಯಂತ ಗಂಭೀರ ವಿಷಯ’ ಎಂದಿರುವ ಶಾರುಕ್ ಖಾನ್ ಅವರು, ಡೂಪ್ಲಿಕೇಟ್, ಬಾದ್ಶಾ, ಚಮತ್ಕಾರ್, ಚೆನ್ನೈ ಎಕ್ಸ್ಪ್ರೆಸ್ ಹಾಗೂ ಹ್ಯಾಪಿ ನ್ಯೂ ಇಯರ್ನಂಥ ಹಾಸ್ಯಭರಿತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಚೆನ್ನೈ ಎಕ್ಸ್ಪ್ರೆಸ್ ನನಗೆ ದೊಡ್ಡ ಅನುಭವ ಕಲಿಸಿದ ಚಿತ್ರ. ಆ ಚಿತ್ರದಲ್ಲಿ ನಾನು ಉತ್ತಮವಾಗಿ ಅಭಿನಯಿಸಿದೆ. ನನ್ನ ಹಾಸ್ಯಗಳಿಗೆ ಜನರೂ ನಕ್ಕರು. ಅದಾದ ನಂತರ ನಾನು ಯಾವುದೇ ಹಾಸ್ಯ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ, ಅಂಥದ್ದೊಂದು ಪಾತ್ರಕ್ಕೆ ಮತ್ತೆ ಕಾಯುತ್ತಿದ್ದೇನೆ’ ಎಂದಿದ್ದಾರೆ.

‘ಇತ್ತೀಚೆಗೆ ಜರ್ಮನಿಯ 10ರಿಂದ 15 ಮಹಿಳೆಯರೊಂದಿಗೆ ಸಂವಾದ ನಡೆಸಿದೆ. ನೀವೇಕೆ ನನ್ನ ಚಿತ್ರಗಳನ್ನು ಇಷ್ಟಪಡುತ್ತೀರಿ ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟೆ. ಅದಕ್ಕೆ ಅವರು ಹೇಳಿದರು, ನಮಗೆ ಕಾಫಿ ಬೇಕೆಂದರೆ ಯಂತ್ರದ ಗುಂಡಿಯನ್ನು ಒತ್ತುತ್ತೇವೆ. ಎಸ್ಕಲೇಟರ್ ಬೇಕೆಂದರೆ, ಅದಕ್ಕೂ ಒಂದು ಗುಂಡಿಯನ್ನು ಒತ್ತುತ್ತೇವೆ. ಹಾಗೆಯೇ, ಅಳಬೇಕೆಂದರೆ ಆ ಬಟನ್ ನೀವೇ ಆಗಿರುತ್ತೀರಿ ಎಂದರು’ ಎಂದು ನೆನಪಿಸಿಕೊಂಡರು.

ಹಾರಾರ್ ಚಿತ್ರದಲ್ಲಿ ನಟಿಸುವಾಸೆ

‘ಇತ್ತೀಚೆಗೆ ನನಗೆ ಹಾರಾರ್ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಮನಸ್ಸಾಗುತ್ತಿದೆ. ಬಹುಶಃ ಯಾರಾದರೂ ಅಂಥದ್ದೊಂದು ಪಾತ್ರವನ್ನು ನೀಡುತ್ತಾರೆ ಎಂದುಕೊಂಡಿದ್ದೇನೆ. ಒಂದೊಮ್ಮೆ ಹಾಗಾಗದಿದ್ದರೆ, ನನ್ನ ಬಳಿ ಪ್ಲಾನ್ ‘ಬಿ’ ಕೂಡಾ ಸಿದ್ಧವಿದೆ. ಅದುವೇ ಹಾಸ್ಯಪ್ರಧಾನ ಚಿತ್ರ’ ಎಂದಿದ್ದಾರೆ ಶಾರುಕ್ ಖಾನ್.

ನಿರ್ದೇಶಕ ಸುಜೋಯ್ ಘೋಷ್ ಅವರ ‘ಕಿಂಗ್’ ಚಿತ್ರದಲ್ಲಿ ಶಾರುಕ್ ಅಭಿನಯಿಸುತ್ತಿದ್ದಾರೆ. 1980ರ ದಶಕದಲ್ಲಿ ದೂರದರ್ಶನದ ಮೂಲಕ ಅಭಿನಯ ಲೋಕಕ್ಕೆ ಪದಾರ್ಪಣೆ ಮಾಡಿದ ಶಾರುಕ್ ಖಾನ್ ಅವರು, ದೇವರು ಹಾಗೂ ಅಭಿಮಾನಿಗಳು ನನ್ನ ಪಾಲಿಗೆ ಸದಾ ಕರುಣಾಶಾಲಿಗಳು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.