‘ನಮ್ಮ ನಡುವಿನ ಕಥೆಗಳು ಬೇಕು’
‘ಆವೇಶಂ ಚಿತ್ರ ನೋಡಿದರೆ ಬೆಂಗಳೂರಿಗರ ಕಥೆಯಲ್ಲ. ಬೆಂಗಳೂರಿಗೆ ಬಂದು ಸಿಕ್ಕಿಹಾಕಿಕೊಳ್ಳುವ ಮಲಯಾಳಿ ಹುಡುಗರ ಕಥೆ. ಹೀಗಾಗಿ ಅಲ್ಲಿಯವರಿಗೆ ಕನೆಕ್ಟ್ ಆಯ್ತು. ‘ಬೆಂಗಳೂರು ಡೇಸ್’ ಸಿನಿಮಾದಲ್ಲಿ ಬೆಂಗಳೂರಿನಲ್ಲಿ ಮಲಯಾಳಿಗರು ಹೆಚ್ಚಿರುವ ಭಾಗವನ್ನು ರಿಸರ್ಚ್ ಮಾಡಿ, ಅಲ್ಲಿಯೇ ಚಿತ್ರೀಕರಣ ನಡೆಸಿದ್ದರು. ಇದು ಅವರಿಗೆ ಅವರ ಜನರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ‘ಅಮೆರಿಕ, ಅಮೆರಿಕ’ ಸಿನಿಮಾ ಏಕೆ ನಮಗೆಲ್ಲ ಕನೆಕ್ಟ್ ಆಯ್ತು? ಅದು ಅಮೆರಿಕದ ಕಥೆಯಲ್ಲ, ಅಲ್ಲಿರುವ ನಮ್ಮವರ ಕಥೆ. ನಾವು ನಮ್ಮ ಸುತ್ತಲಿರುವ ಕಥೆಗಳನ್ನು ಹೆಕ್ಕುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮ ನಡುವಿನ ಕಥೆಗಳಿಗೆ ಇಲ್ಲಿಯೂ ಜನ ಸ್ಪಂದಿಸುತ್ತಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಡೇರ್ ಡೆವಿಲ್ ಮುಸ್ತಾಫ’, ‘ಕ್ಷೇತ್ರಪತಿ’ಯಂತಹ ಸಿನಿಮಾಗಳು ಇದಕ್ಕೆ ಉದಾಹರಣೆ. ಇಲ್ಲಿ ನಾವೇ ಪ್ರೇಕ್ಷಕರನ್ನು ಮಾಸ್, ಕ್ಲಾಸ್, ಎ,ಬಿ,ಸಿ ಕೆಟಗರಿಯ ಆಡಿಯನ್ಸ್ ಎಂದೆಲ್ಲ ವಿಂಗಡಿಸಿಕೊಂಡು ನಿರ್ಲಕ್ಷಿಸುತ್ತಿದ್ದೇವೆ. ಇಲ್ಲಿ ಉತ್ತಮವಾದ ಸಿನಿಮಾಗಳು ಬರುತ್ತಿಲ್ಲ. ಹೀಗಾಗಿ ಜನ ಬೇರೆ ಭಾಷೆಯ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಬೇರೆ ಭಾಷೆಯ ಹೀರೊಗಳ ಸಿನಿಮಾಗಳನ್ನು ಅನುಕರಿಸಬಾರದು. ಮೊದಲು ನಮ್ಮ ಸುತ್ತಲಿನ ಕಥೆಗಳು ಚಿತ್ರವಾಗಬೇಕು. ನಮ್ಮ ನೆಲದ ಕಥೆಗಳು ಗೆದ್ದಾಗ ಅಂಥ ಕಥೆಗಳಿಗೆ ಹಣ ಹಾಕುವ ನಿರ್ಮಾಪಕರು ಹೆಚ್ಚುತ್ತಾರೆ. ಇಲ್ಲವಾದರೆ ಮೂರು ಫೈಟು, ನಾಲ್ಕು ಹಾಡಿನ ಚಿತ್ರಗಳನ್ನು ಕೇಳುವ ನಿರ್ಮಾಪಕರೇ ಹೆಚ್ಚಿರುತ್ತಾರೆ’ ಎಂದು ನಿರ್ದೇಶಕ ಹೇಮಂತ್ ರಾವ್ ಅಭಿಪ್ರಾಯಪಡುತ್ತಾರೆ.