ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ‘ಕನ್ನಡ ಸಿನಿ ಧ್ರುವತಾರೆ’ ಶಿವರಾಜ್‌ಕುಮಾರ್‌

Published 5 ಜುಲೈ 2024, 1:32 IST
Last Updated 5 ಜುಲೈ 2024, 1:32 IST
ಅಕ್ಷರ ಗಾತ್ರ

ಶಿವರಾಜ್‌ಕುಮಾರ್‌; ಆ ಹೆಸರಿನಲ್ಲೇ ಒಂದು ಶಕ್ತಿ ಇದೆ. ‘ಎನರ್ಜಿ ಅಂದ್ರೆ ಶಿವಣ್ಣ’ ಅನ್ನೋ ಮಾತು ಚಿತ್ರರಂಗದೊಳಗೆ ಕೇಳಿಬರುವುದು ಸಾಮಾನ್ಯ. ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ವೇದಿಕೆಗೆ ಶಿವರಾಜ್‌ಕುಮಾರ್‌ ಅವರು ಕಾಲಿಟ್ಟಾಗ ಪ್ರೇಕ್ಷಕರಿಗೂ ಅದು ಅನುಭವಕ್ಕೆ ಬಂತು. ‘ಟಗರು ಬಂತು ಟಗರು’ ಅನ್ನೋ ಹಾಡಿಗೆ ಹೆಜ್ಜೆ ಹಾಕುತ್ತಲೇ ವೇದಿಕೆಗೆ ಧುಮುಕಿದ ಶಿವರಾಜ್‌ಕುಮಾರ್‌ ಅವರು ‘ಕನ್ನಡ ಸಿನಿ ಧ್ರುವತಾರೆ’ ಕಿರೀಟವನ್ನು ಮುಡಿಗೇರಿಸಿಕೊಂಡರು.  

ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ಕುಮಾರ್‌ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯಲ್ಲಿ ಈ ಪ್ರಶಸ್ತಿಯನ್ನು ಸೆಂಚುರಿ ಸ್ಟಾರ್‌ಗೆ ನೀಡಲಾಯಿತು. ಕವಿ ದೊಡ್ಡರಂಗೇಗೌಡ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಶಿವರಾಜ್‌ಕುಮಾರ್‌, ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. 

ನಂತರದಲ್ಲಿ ವೇದಿಕೆಯಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದ ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಶಿವರಾಜ್‌ಕುಮಾರ್‌ ಅವರು ಮನರಂಜನೆಯ ರಸದೌತಣ ನೀಡಿದರು. ಅವರ ಉತ್ಸಾಹಕ್ಕೆ ಬೆರಗಾದ ಪ್ರೇಕ್ಷಕರು, ಚಪ್ಪಾಳೆಯ ಮಳೆಗೆರೆದರು. ಪ್ರಶಸ್ತಿ ಪ್ರದಾನಕ್ಕೂ ಮುನ್ನ, ಡಿಜಿಟಲ್ ಪರದೆಯ ಮೇಲೆ ಅವರು ಚಿತ್ರರಂಗದಲ್ಲಿ ಸಾಗಿ ಬಂದ ಬಗೆಯನ್ನು ಮೆಲುಕು ಹಾಕಲಾಯಿತು. ಬಳಿಕ ನಿರೂಪಕಿ ಅನುಶ್ರೀ ಅವರು ವೇದಿಕೆಗೆ ಶಿವಣ್ಣ ಅವರಿಗೆ ಆಹ್ವಾನ ನೀಡುತ್ತಿದ್ದಂತೆ ‘ಟಗರು’ ಚಿತ್ರದ ‘ಟಗರು ಬಂತು ಟಗರು’ ಹಾಡು ಮೊಳಗಿತು. ಮಾತಿಗಿಳಿಯುವ ಮುನ್ನವೇ ಶಿವರಾಜ್‌ಕುಮಾರ್‌ ಹಾಡಿಗೆ ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು. 

‘ನೃತ್ಯಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ. ನಾವು ಎಲ್ಲೆ ಇದ್ದರೂ ರಂಜಿಸಬೇಕು’ ಎನ್ನುವ ಮೂಲಕ ಶಿವರಾಜ್‌ಕುಮಾರ್‌ ನೆರೆದಿದ್ದವರ ಮನ ಗೆದ್ದರು. ಈ ವೇಳೆ ಅವರ ಕೆಲ ಅಪರೂಪದ ಛಾಯಾಚಿತ್ರಗಳನ್ನು ತೋರಿಸಿ, ಅದರ ಬಗ್ಗೆ ವಿವರಣೆಯನ್ನು ಕೇಳಲಾಯಿತು. ಅವುಗಳನ್ನು ಗಮನಿಸಿದ ಶಿವರಾಜ್‌ಕುಮಾರ್‌ ಚಿತ್ರೀಕರಣದ ವೇಳೆಯ ಕೆಲ ಘಟನೆಗಳನ್ನು ನೆನಪಿಸಿಕೊಂಡರು.

‘ನಾಯಕ ನಟನಾಗಿ ನಟಿಸಿದ್ದ ಮೊದಲ ಚಿತ್ರ ‘ಆನಂದ್’ ಹಿಟ್ ಆಗದಿದ್ದಲ್ಲಿ ಚಿತ್ರರಂಗ ಬಿಟ್ಟು ಬೇರೆ ವೃತ್ತಿ ಆಯ್ಕೆ ಮಾಡಿಕೊಳ್ಳುವ ಯೋಚನೆಯೂ ಇತ್ತು’ ಎಂದು ಹೇಳಿದ ಶಿವರಾಜ್‌ಕುಮಾರ್‌, ‘ರಸಾಯನ ವಿಜ್ಞಾನದಲ್ಲಿ ಪದವಿ ಪಡೆದಿದ್ದರಿಂದ ಯಾವುದಾದರೂ ಉದ್ಯೋಗ ಪಡೆದುಕೊಳ್ಳುತ್ತಿದೆ. ಕಲಿತ ವಿದ್ಯೆ ವ್ಯರ್ಥ ಆಗಬಾರದು’ ಎಂದರು. 

‘ಪ್ರಜಾವಾಣಿ’ಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಶಿವಣ್ಣ, ‘ಈ ಪತ್ರಿಕೆಯಲ್ಲಿ ಬರವಣಿಗೆ ಭಿನ್ನವಾಗಿ ಇರುತ್ತದೆ. ನೇರವಾಗಿ ಬರೆಯಲಾಗುತ್ತದೆ’ ಎಂದು ಹೇಳಿದರು. ‘ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು. ನಾನು ಯಾವತ್ತೂ ರಾಜ್‌ಕುಮಾರ್ ಅವರ ಹೆಸರು ಹೇಳಿಕೊಂಡು ಚಿತ್ರರಂಗದಲ್ಲಿ ಮೇಲೆ ಬಂದಿಲ್ಲ. ರಾಜ್‌ಕುಮಾರ್ ಮಗ ಅಂತ ಎಷ್ಟು ವರ್ಷ ಜನ ಸಿನಿಮಾ ನೋಡುತ್ತಾರೆ? ನಮ್ಮದು ಅಂತ ಒಂದು ಸ್ಟೈಲ್ ಇರುಬೇಕು, ಅದು ಜನರ ಮನಸ್ಸಿನಲ್ಲಿ ಅಚ್ಚಾಗಬೇಕು’ ಎಂದರು. 

‘ಪ್ರಾರಂಭಿಕ ಚಿತ್ರಗಳಲ್ಲಿ ನಾನು ಡೈಲಾಗ್‌ಗಳನ್ನು ಸ್ವಲ್ಪ ವೇಗವಾಗಿ ಹೇಳುತ್ತೇನೆ ಎಂದು ಕೆಲವರು ಹೇಳುತ್ತಿದ್ದರು. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಎಲ್ಲವನ್ನೂ ಕಲಿತೆ. ಇದರಿಂದ ಚಿತ್ರರಂಗದಲ್ಲಿ ಇಷ್ಟು ವರ್ಷಗಳು ರಂಜಿಸಲು ಸಾಧ್ಯವಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ವೇಳೆ ತಮ್ಮ ಜತೆಗೆ ಕೆಲಸ ಮಾಡಿದ ನಿರ್ದೇಶಕರು, ನಿರ್ಮಾಪಕರು ಹಾಗೂ ನಟಿಯರ ಹೆಸರುಗಳನ್ನು ಹೇಳಿದರು.

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ‘ಟಗರು’ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್‌ಕುಮಾರ್‌. 
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ‘ಟಗರು’ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್‌ಕುಮಾರ್‌. 

‘ಜನರ ನಿರೀಕ್ಷೆಯನ್ನು ನಾವು ಪೂರೈಸಲು ಶ್ರಮಿಸಬೇಕು. ಕಲೆಗೆ ಭಾಷೆಯ ತಡೆಗೋಡೆಯಿರಬಾರದು. ಕಲಾವಿದ ಆದವನು ಜನರನ್ನು ರಂಜಿಸುವ ಕಡೆಗೆ ಗಮನ ಹರಿಸಬೇಕು’ ಎಂದು ಮಾತಿಗೆ ವಿರಾಮವಿತ್ತರು. 

ಸಾಲು ಸಾಲು ಚಿತ್ರಗಳು: 1986ರಲ್ಲಿ ‘ಆನಂದ್‌’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟ ಶಿವರಾಜ್‌ಕುಮಾರ್‌, ಸದ್ಯ ಚಂದನವನದಲ್ಲಿ 38 ವರ್ಷ ಪೂರೈಸಿ ಮುನ್ನಡೆಯುತ್ತಿದ್ದಾರೆ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿರುವ ಶಿವರಾಜ್‌ಕುಮಾರ್‌ ಅವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ನೋಡಿದರೆ ಅವರ ವಯಸ್ಸು ಮರೆಯಾಗುತ್ತದೆ. ಸದ್ಯ ಗೀತಾ ಪಿಕ್ಚರ್ಸ್‌ ಲಾಂಛನದಡಿ ನಿರ್ಮಾಣವಾಗುತ್ತಿರುವ ‘ಭೈರತಿ ರಣಗಲ್‌’, ಅರ್ಜುನ್‌ ಜನ್ಯ ನಿರ್ದೇಶನದ ‘45’, ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ತೊಡಗಿಸಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್‌ ಎಂ.ರಾವ್‌ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ನಟಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT