ಪುನೀತ್ ರಾಜ್‍ಕುಮಾರ್ ಅವರ ಅನಿರೀಕ್ಷಿತ ಸಾವು ಸೃಷ್ಟಿಸಿದ ಭಾವಸ್ಪಂದನ ಕನ್ನಡನಾಡು ಕಂಡ ಅಪೂರ್ವ ವಿದ್ಯಮಾನ. ಡಾ.ರಾಜ್ ಅವರ ದೊಡ್ಡ ಕುಟುಂಬದ ಸದಸ್ಯರ ದುಃಖದಲ್ಲಿ ಇಡೀ ನಾಡು ಮಾತ್ರವಲ್ಲ, ದೇಶದ ನಾನಾ ಮೂಲೆಗಳಲ್ಲಿದ್ದ ಜನಸಮುದಾಯ ಕೂಡ ಭಾಗಿಯಾಯಿತು. ಇದೊಂದು ಅನ್ಯಾಯದ ಸಾವೆಂದು ಮಮ್ಮುಲ ಮರುಗಿತು. ಎಲ್ಲರ ಮನೆ ಮತ್ತು ಮನದಲ್ಲಿ ಸೂತಕದ ಛಾಯೆ ಆವರಿಸಿಕೊಂಡ ಇಂಥ ದುರಂತಕ್ಕೆ ನಮ್ಮ ನಾಡು ಹಿಂದೆಂದೂ ಈ ಪ್ರಮಾಣದಲ್ಲಿ ಸಾಕ್ಷಿಯಾಗಿರಲಿಲ್ಲ. ಇದಕ್ಕೆ ವ್ಯಾಪಕ ವಾಗಿರುವ ಈಗಿನ ಮಾಹಿತಿ ಜಾಲ ಮತ್ತು ಸಾಮಾಜಿಕ ಮಾಧ್ಯಮ ಮಾತ್ರ ಕಾರಣವಲ್ಲ. ಪುನೀತ್ ಅವರ ಸಾವು ನಿಜಕ್ಕೂ ಜನತೆಯನ್ನು ದುಃಖದ ಕಡಲಿನಲ್ಲಿ ಮುಳುಗಿಸಿದ ಬಹುದೊಡ್ಡ ದುರಂತ.

ಅಕ್ಟೋಬರ್ 29ರಂದು ಪುನೀತ್ ಅವರು ಆಸ್ಪತ್ರೆಗೆ ಸೇರಿದ ಸುದ್ದಿ ಬಂದ ಕೂಡಲೇ ಅವರು ಗುಣಮುಖರಾಗಲು ಇಡೀ ನಾಡು ಹರಕೆ ಹೊತ್ತಿತು. ಮರಣ ಖಚಿತವಾದಂತೆ ದಿಗ್ಭ್ರಾಂತಿ ಆವರಿಸಿತು. ಮನೆಯಲ್ಲಿ ಮಕ್ಕಳು ‘ಅಪ್ಪು ಅಪ್ಪು’ ಎಂದು ಬಿಕ್ಕಿದರೆ, ಹೆಣ್ಣುಮಕ್ಕಳು ತಮ್ಮ ಕುಟುಂಬದ ಪ್ರೀತಿಪಾತ್ರ ಸಹೋದರನನ್ನು ಕಳೆದುಕೊಂಡಂತೆ ಕಣ್ಣೀರಾದರು. ವಯಸ್ಸಾದವರು, ‘ಕಣ್ಣ ಮುಂದೆ ಬೆಳೆದ ಹುಡುಗ’ನ ಸಾವಿನ ಸುದ್ದಿ ಕೇಳಿ ಅನಾಥರಾದಂತೆ ಭಾವಿಸಿದರು. ರಾಜ್ ಕುಟುಂಬದ ದುಃಖ ನಾಡಿನ ದುಃಖವಾಯಿತು. ಅವರ ಪಾರ್ಥಿವ ಶರೀರದ ದರ್ಶನಕ್ಕೆ ನಾಡಿನ ಮೂಲೆಮೂಲೆಯಿಂದ ಜನಸಾಗರ ಹರಿದುಬಂತು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಮಳೆಗಾಳಿಯನ್ನು ಲೆಕ್ಕಿಸದೆ ಪ್ರವಾಹದೋಪಾದಿಯಲ್ಲಿ ಬಂದ ಜನರ ಅಭಿಮಾನದ ಸಂಯಮ ವರ್ತನೆಯನ್ನು ಮತ್ತು ಮರಣಿಸಿದ ತಮ್ಮ ಪ್ರೀತಿಯ ಕಲಾವಿದನಿಗೆ ತೋರಿದ ಗೌರವಭಾವನೆಯನ್ನು ಅವರ ವೃತ್ತಿ ಬದುಕಿನಲ್ಲಿ ಹಿಂದೆಂದೂ ಕಂಡಿರಲಿಲ್ಲ. ಅನ್ಯ ಚಿತ್ರರಂಗದ ಪ್ರಖ್ಯಾತ ನಟರು, ತಂತ್ರಜ್ಞರು ಪುನೀತ್ ಅವರನ್ನು ನೆನೆದ ಪರಿ ಅವರ ಜನಪ್ರಿಯತೆಯ ಹರಹನ್ನು ತೆರೆದು ತೋರಿಸಿತು. ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ- ‘ನಾನು ಪುನೀತ್ ಅವರ ಅಭಿಮಾನಿಯೂ ಅಲ್ಲ. ಅವರ ಹೆಚ್ಚಿನ ಚಿತ್ರಗಳನ್ನೂ ನೋಡಿಲ್ಲ. ಆದರೂ ಅವರ ಸಾವು ನನ್ನ ಹೃದಯವನ್ನು ಹಿಂಡಿದೆ’ ಎಂಬ ಮಾತು ಅಭಿಮಾನಿಗಳಲ್ಲದವರ ಮನದಾಳದ ದುಃಖಕ್ಕೂ ಸಾಕ್ಷಿಯಾಗಿತ್ತು.

ಪುನೀತ್ ಅವರ ಅಕಾಲ ಮರಣಕ್ಕೆ ಜನ ತೋರಿದ ಪ್ರತಿಕ್ರಿಯೆ ಸುಲಭ ವ್ಯಾಖ್ಯೆಗೆ ಮತ್ತು ಸರಳ ಗ್ರಹಿಕೆಗೆ ಸಿಗುವಂಥದ್ದಲ್ಲ. ಅವರು ಗಳಿಸಿದ ಜನಪ್ರಿಯತೆ, ಜನಮಾನಸವನ್ನು ಆವರಿಸಿಕೊಂಡ ರೀತಿಯನ್ನು ನಮ್ಮ ಸಾಮಾನ್ಯ ವಿಶ್ಲೇಷಣಾ ಹತಾರುಗಳಿಂದ ವಿವರಿಸಲು ಸಾಧ್ಯವಾಗದು. ನಿಜ, ಡಾ.ರಾಜ್ ಅವರ ಜನಪ್ರಿಯತೆಯ ಮುಂದೆ ಯಾರೂ ಸಮಾನರಲ್ಲ. ಅವರ ಐವತ್ತು ವರ್ಷಗಳ ಸುದೀರ್ಘ ವೃತ್ತಿ ಬದುಕು ಕನ್ನಡ ಚಿತ್ರರಂಗದ ಚರಿತ್ರೆಯ ಭಾಗವಾಗಿತ್ತು. ಉದ್ಯಮದ ಒಳಬಲವಾಗಿತ್ತು. ಅವರು ಕನ್ನಡ ಜನರ ಕಲ್ಪನೆಯ ಸಾಂಸ್ಕೃತಿಕ ನಾಯಕನ ಮೂರ್ತರೂಪವಾಗಿದ್ದರು. ಅವರ ಕಲೆ, ಕನ್ನಡಾಭಿಮಾನ ಮತ್ತು ತೆರೆಯಿಂದಾಚೆಗಿನ ನಡವಳಿಕೆ, ವಿನಯ ಮತ್ತು ಘನತೆ ಕನ್ನಡದ ಸಾಂಸ್ಕೃತಿಕ ವಿದ್ಯಮಾನವೇ ಆಗಿತ್ತು. ಇಂಥ ಬೃಹತ್ ಮರದ ನೆರಳಲ್ಲಿ ಬೆಳೆದ ಪುನೀತ್ ತನ್ನದೇ ವ್ಯಕ್ತಿತ್ವವನ್ನು ಆ ನೆರಳಿನಿಂದಾಚೆಗೆ ರೂಪಿಸಿಕೊಂಡು ಜನಮಾನಸದಲ್ಲಿ ನೆಲೆಯಾದದ್ದು ಮಾತ್ರ ತರ್ಕಕ್ಕೆ ಸಿಗದ ಸಂಗತಿ.

ಪುನೀತ್ ಅವರನ್ನು ರಾಜ್ ಕುಟುಂಬ ಮಾತ್ರವಲ್ಲ, ಇಡೀ ಕರ್ನಾಟಕ ‘ಅಪ್ಪು’ವಾಗಿ ಸ್ವೀಕರಿಸಿತ್ತು. ಡಾ. ರಾಜ್ ತಮ್ಮ ಮಕ್ಕಳನ್ನು ಅವರ ಬೆಳವಣಿಗೆಯ ಹಂತದಲ್ಲಿ ಎಂದೂ ಚಿತ್ರಗಳಲ್ಲಿ ಅಥವಾ ಸಾರ್ವಜನಿಕವಾಗಿ ಮುನ್ನೆಲೆಗೆ ತಂದವರಲ್ಲ. ಶಿವಣ್ಣ ಮತ್ತು ಪೂರ್ಣಿಮಾ ಒಂದೆರಡು ಚಿತ್ರಗಳಲ್ಲಿ ಬಾಲಕಲಾವಿದರಾಗಿ ಕಾಣಿಸಿಕೊಂಡದ್ದು ಬಿಟ್ಟರೆ ಅವರ ಮಕ್ಕಳು ಮುಂದೆ ಚಿತ್ರರಂಗಕ್ಕೆ ಆಗಮಿಸುವ ಸೂಚನೆಗಳು ಇರಲಿಲ್ಲ. ಅವರೆಲ್ಲ ದೊಡ್ಡ ವಿದ್ಯಾವಂತರಾಗಬೇಕೆಂಬ ಕನಸನ್ನು ರಾಜ್ ಅವರ ಕುಟುಂಬ ಕಂಡಿತ್ತು. ಆದರೆ, ಅಪ್ಪು ವಿಷಯದಲ್ಲಿ ಅದು ಅಪವಾದವಾಗಿತ್ತು. ಚಿತ್ರಗಳಲ್ಲಿ ಮತ್ತು ಸಾರ್ವಜನಿಕವಾಗಿಯೂ ಅವರು ರಾಜ್ ಜೊತೆ ಹೆಚ್ಚು ಕಾಣಿಸಿಕೊಂಡರು. ಅವರ ಸಿನಿಮಾ ಪಯಣ ಸಹ ‘ನಮ್ಮ ಕಣ್ಣ ಮುಂದೆ ಬೆಳೆದ ಹುಡುಗ’ನ ಇಮೇಜಿಗೆ ಅನುಗುಣವಾಗಿ ಸಾಗಿಬಂತು.

‘ಪ್ರೇಮದ ಕಾಣಿಕೆ’ (1976) ಚಿತ್ರದಲ್ಲಿ ಅಪ್ಪು ಮೊದಲು ಕಾಣಿಸಿಕೊಂಡಾಗ ಆರು ತಿಂಗಳ ಕೈಗೂಸು. ಮಾರನೇ ವರ್ಷ ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ತಪ್ಪು ಹೆಜ್ಜೆ ಹಾಕುತ್ತಾ ನಡೆದು ಅಪ್ಪನ ಕೊರಳು ತಬ್ಬುವ ಬಾಲಕ ಹನುಮಂತುವಿನ ಪಾತ್ರ. ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ (1978) ಬಾಕ್ಸಿಂಗ್ ಗವಸು ತೊಟ್ಟ ರಾಜ್ ಪಾತ್ರದ ಬಾಲಕ.

‘ವಸಂತಗೀತ’ದಲ್ಲಿ (1980) ಕುಣಿತ, ಹೊಡೆದಾಟಗಳಲ್ಲಿ ಮಿಂಚಿದ ನಾಲ್ಕು ವರ್ಷದ ಬಾಲಕನ ಆಯಸ್ಕಾಂತೀಯ ಕಣ್ಣುಗಳು ಮೋಡಿಹಾಕಿದ್ದವು. ಭೂಮಿಗೆ ಬಂದ ಭಗವಂತ (1981) ಚಿತ್ರದಲ್ಲಿ ದರ್ಶನವೀಯುವ ಕೃಷ್ಣನಾಗಿ ಅವತರಿಸಿದಾಗ ಜನತೆ ತಮ್ಮ ಮನೆಯ ಬಾಲಕನೊಬ್ಬನಿಗೆ ಕೃಷ್ಣನ ವೇಷ ತೊಡಿಸಿ ಸಂತಸಪಟ್ಟಂತೆ ಸ್ವೀಕರಿಸಿತು.

ಪುನೀತ್ ಅವರ ಗಂಭೀರ ಅಭಿನಯ ಆರಂಭವಾದದ್ದು ಭಾಗ್ಯವಂತ (1981) ಚಿತ್ರದಿಂದ. ಬಿ.ಎಸ್. ರಂಗಾ ಅವರು ಹಿಂದೆ ಇತರ ಭಾಷೆಗಳಲ್ಲಿ ತೆಗೆದಿದ್ದ ಕತೆಯನ್ನು ಪುನೀತ್‍ಗಾಗಿಯೇ ಮರುರೂಪಿಸಿದರು. ತಬ್ಬಲಿ ಬಾಲಕನ ಸಂಕಟ ಮತ್ತು ಸಾಹಸಗಳನ್ನು ಪುನೀತ್ ಸಹಜವೆಂಬಂತೆ ನಿರ್ವಹಿಸಿದರು. ಜೊತೆಗೆ ಹಾಡುವ ಸಾಮರ್ಥ್ಯವೂ ಹೊರಬಂತು. ‘ಹೊಸಬೆಳಕು’ (1982) ಚಿತ್ರದಲ್ಲಿ ಮಹತ್ವದ ಪಾತ್ರವಿರದಿದ್ದರೂ ಅದೇ ವರ್ಷ ಬಿಡುಗಡೆಯಾದ ‘ಚಲಿಸುವ ಮೋಡಗಳು’ ಚಿತ್ರದ ತುಂಟಹುಡುಗನಾಗಿ, ‘ಕಾಣದಂತೆ ಮಾಯವಾದನು’ ಎಂದು ಹಾಡುತ್ತಾ ಪ್ರೇಕ್ಷಕರ ಎದೆಗೆ ಲಗ್ಗೆ ಹಾಕಿದ್ದರು. ‘ಭಕ್ತ ಪ್ರಹ್ಲಾದ’ (1983) ತಂದೆ ಮಗನ ಜುಗಲ್‍ಬಂದಿಯಾದರೆ, ‘ಎರಡು ನಕ್ಷತ್ರಗಳು’ (1983), ‘ಯಾರಿವನು’ (1984) ಚಿತ್ರಗಳು ಅಪ್ಪುವಿನ ಬಿಂಬವನ್ನು ಮತ್ತಷ್ಟು ಗಟ್ಟಿಗೊಳಿಸಿದವು.

‘ಬೆಟ್ಟದ ಹೂವು’ (1985) ಪುನೀತ್ ಅಭಿನಯದ ಮೈಲುಗಲ್ಲು. ಆ ಚಿತ್ರದ ‘ರಾಮು’ ಪಾತ್ರದ ನಿರ್ವಹಣೆ ಪುನೀತ್‍ಗೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ಮಲೆನಾಡಿನ ಕೊಂಪೆಯಲ್ಲಿ ಕಲಿಯುವ ಹಸಿವಿನ ಹುಡುಗ ತನ್ನ ಕಲಿಕೆಯ ಹಂಬಲವನ್ನು ಸಂಸಾರದ ಒಳಿತಿಗಾಗಿ ತ್ಯಾಗ ಮಾಡುವ, ತನ್ನ ಸಂಕಟಗಳನ್ನು ನುಂಗಿ ಬದುಕಿಗೆ ಹೆಗಲು ಕೊಡುವ ಉದಾತ್ತ ಪಾತ್ರದಲ್ಲಿ ಪುನೀತ್ ತಮ್ಮೆಲ್ಲ ಪ್ರತಿಭೆಯನ್ನು ಬಸಿದು ಪಾತ್ರಪೋಷಣೆ ಮಾಡಿದ್ದರು. ಚಿತ್ರದ ಕೊನೆಯ ದೃಶ್ಯದಲ್ಲಿ ರಾಮುವಿನ ಕಣ್ಣಾಲಿಗಳಲ್ಲಿ ತುಳುಕುವ ಕಣ್ಣೀರಿನ ಜೊತೆಗೆ ಪ್ರೇಕ್ಷಕನ ಹೃದಯ ಭಾರವಾಗುವಂಥ ಭಾವೋತ್ಕರ್ಷವನ್ನು ಪುನೀತ್ ಅಭಿನಯ ಸೃಷ್ಟಿಸಿತ್ತು. ತಾನೊಬ್ಬ ಅಪ್ಪಟ ಕಲಾವಿದನೆಂಬುದನ್ನು ಈ ಚಿತ್ರದಲ್ಲಿ ರುಜುವಾತು ಮಾಡಿದ್ದರು.

ಅನಂತರ ಬಂದ ‘ಶಿವಮೆಚ್ಚಿದ ಕಣ್ಣಪ್ಪ’ ಮತ್ತು ‘ಪರಶುರಾಮ್’ (1989) ಚಿತ್ರಗಳಲ್ಲಿ ನಟಿಸುವ ವೇಳೆಗೆ ಪುನೀತ್‍ಗೆ ಹದಿಮೂರು ವರ್ಷ. ಈ ಅವಧಿಯಲ್ಲಿ ಪುನೀತ್ ನಟಿಸಿದ ಹದಿನಾಲ್ಕು ಚಿತ್ರಗಳಲ್ಲಿ ಆರು ತಿಂಗಳ ಕೈಗೂಸಿನಿಂದ ಹಿಡಿದು ಮೀಸೆ ಮೊಳೆವ ಹುಡುಗನವರೆಗೆ ಬಾಲ್ಯದ ವಿವಿಧ ಹಂತಗಳು ಮತ್ತು ಬೇರೆ ಬೇರೆ ಸ್ತರದ ಪಾತ್ರಗಳಲ್ಲಿ ಕಾಣಿಸಿಕೊಂಡು ‘ನಮ್ಮ ಕಣ್ಣ ಮುಂದೆ ಬೆಳೆದ ಹುಡುಗ’ನ ಚಿತ್ರವನ್ನು ಪ್ರೇಕ್ಷಕರ ಭಾವಭಿತ್ತಿಯಲ್ಲಿ ಗಾಢವಾಗಿ ಮೂಡಿಸಿದ್ದರು. ಪುನೀತ್ ಅವರ ಜನಪ್ರಿಯತೆ ಇಲ್ಲಿಂದಲೇ ಆರಂಭವಾಯ್ತೆಂದು ಕಾಣುತ್ತದೆ.

ಹದಿಮೂರು ವರ್ಷಗಳ ಕಾಲ ನಿರಂತರವಾಗಿ ನಟಿಸಿದ ಪುನೀತ್ ಮತ್ತೆ ಹದಿಮುರು ವರ್ಷಗಳ ಕಾಲ ತೆರೆಯಿಂದ ಮರೆಯಾದರು. ಇಪ್ಪತ್ತೊಂದನೇ ಶತಮಾನದ ವೇಳೆಗೆ ಕನ್ನಡ ಚಿತ್ರಂಗದಲ್ಲಿ ಅಭೂತಪೂರ್ವ ಬದಲಾವಣೆಗಳಾಗಿದ್ದವು. ಆ ವೇಳೆಗೆ ಹಳೆ ತಲೆಮಾರಿನ ರಾಜ್, ವಿಷ್ಣು, ಅನಂತನಾಗ್, ಅಂಬರೀಶ್ ಅವರ ಜೊತೆಯಲ್ಲಿಯೇ ಹೊಸ ತಲೆಮಾರಿನ ರವಿಚಂದ್ರನ್, ಶಿವಣ್ಣ, ರಾಘಣ್ಣ, ರಮೇಶ್, ದೇವರಾಜ್, ಶ್ರೀಧರ್, ಉಪೇಂದ್ರ, ಜಗ್ಗೇಶ್... ಹೀಗೆ ಕಲಾವಿದರ ದಂಡು ಆವರಿಸಿಕೊಂಡಿದ್ದ ಕಾಲ. ಭೂಗತ ಜಗತ್ತಿನ ನಂಟಿನ ರಕ್ತದೋಕುಳಿಯ ಚಿತ್ರಗಳು, ಹಿಂಸೆ ಮತ್ತು ಪ್ರೀತಿಗೆ ವ್ಯತ್ಯಾಸವಿಲ್ಲದಂಥ ಸನ್ನಿವೇಶಗಳು, ವ್ಯವಸ್ಥೆಯನ್ನು ಸರಿಪಡಿಸಲು ನಿಂತ ಪೊಲೀಸರು, ಕುದಿವ ಯುವಕರು, ಸೇಡಿನ ರಾಣಿಯರು... ಹೀಗೆ ಹಲವು ಧಾರೆಗಳಲ್ಲಿ ಹರಿಯುತ್ತಿದ್ದ ಚಿತ್ರರಂಗ. ಇಂಥ ಸನ್ನಿವೇಶದಲ್ಲಿ ಪುನೀತ್ ಆಗಮಿಸಿ ಛಾಪು ಒತ್ತುವುದು ಕಠಿಣ ಸವಾಲಾಗಿತ್ತು. ಅಲ್ಲದೆ ಎಲ್ಲೊ ಕಮಲಹಾಸನ್, ನೀತೂ ಸಿಂಗ್, ಶ್ರೀದೇವಿ, ಶೋಭಾ ಇಂಥವರನ್ನು ಹೊರತುಪಡಿಸಿದರೆ, ಬಾಲಕಲಾವಿದರಾಗಿ ಪ್ರಸಿದ್ಧಿಯಾದವರು ನಾಯಕ ನಾಯಕಿಯರಾಗಿ ಯಶಸ್ಸು ಗಳಿಸದ ನಂಬಿಕೆಯೂ ಇತ್ತು.

ಜೆನ್ ತತ್ವದ ಪ್ರಕಾರ ಹೊಸದನ್ನು ಪಡೆಯಬೇಕೆಂದರೆ ಕಲಿತ ಹಳೆಯದನ್ನೆಲ್ಲ ಮರೆಯಬೇಕಂತೆ. ಪುನೀತ್ ತಮ್ಮ ಹಳೆಯ ಕಾಲವನ್ನು ಸಂಪೂರ್ಣ ಮರೆತು ಹೊಸ ತಯಾರಿಯೊಂದಿಗೆ ಮರಳಿಬಂದರು. ಸಮಕಾಲೀನ ಮಾದರಿ ಯುವಕನ ಪಾತ್ರದಲ್ಲಿ ಅವರು ‘ಅಭಿ’ (2002) ಚಿತ್ರದಲ್ಲಿ ಅವತರಿಸಿದರು. ಸುಪುಷ್ಟವಾದ ಆರೋಗ್ಯವಂತ ಯುವಕನಾಗಿ ಪ್ರೀತಿ, ಸಾಹಸಕ್ಕೆ ಸಿದ್ಧನಾದ, ಕೌಟುಂಬಿಕ ಮೌಲ್ಯಗಳಿಗೂ ಬದ್ಧನಾದ ಪಾತ್ರದಲ್ಲಿ ಅವರು ಯುವಮನಸ್ಸುಗಳನ್ನು ಗೆದ್ದರು. ಆವರೆಗೂ ಕನ್ನಡದಲ್ಲಿ ಪ್ರಚಲಿತವಿದ್ದ ನೃತ್ಯ ಮತ್ತು ಹೊಡೆದಾಟದ ಸನ್ನಿವೇಶಗಳಿಗೆ ತಮ್ಮ ಪ್ರತಿಭೆಯಿಂದ ಬೇರೊಂದು ಆಯಾಮ ದೊರಕಿಸಿದರು. ಅವರ ಹೊಡೆದಾಟಗಳು ಹಿಂಸೆಯನ್ನು ವೈಭವೀಕರಿಸಿ ಪಾಶವೀ ಬಯಕೆಯನ್ನು ತಣಿಸುವ ದೃಶ್ಯಗಳಲ್ಲ. ಸ್ಟಂಟ್‍ಮ್ಯಾನ್ ಬದಲು ಕೋರಿಯೋಗ್ರಾಫರ್ ಒಬ್ಬ ಸಾಹಸ ದೃಶ್ಯಗಳನ್ನು ಸಂಯೋಜಿಸಿದಂತೆ ಹೊಡೆದಾಟಗಳಿಗೆ ನೃತ್ಯದ ಲಾಲಿತ್ಯವಿತ್ತು. ರಕ್ತದೋಕುಳಿಯ ನಡುವೆ ಪ್ರೀತಿಯು ಗೆಲ್ಲುವ, ಸೇಡು ಮತ್ಸರಗಳ ಲೋಕವನ್ನು ಬಿಟ್ಟು ಕೌಟುಂಬಿಕ ಜಗತ್ತನ್ನು ತೋರಿಸುವ ಚಿತ್ರಗಳಲ್ಲಿ ಅವರು ನಟಿಸುತ್ತಾ ಬಂದರು. ರಾಜ್ ಅವರ ಜೊತೆ ಹೊರಟು ಹೋದಂತಿದ್ದ ಫ್ಯಾಮಿಲಿ ಸಬ್ಜೆಕ್ಟ್ಸ್ ಮತ್ತೆ ಪುನೀತ್ ಚಿತ್ರಗಳಲ್ಲಿ ಮರುಹುಟ್ಟು ಪಡೆದವು. ರಾಜ್ ಚಿತ್ರಗಳ ಆದರ್ಶದ ಪಾತ್ರಗಳ ಛಾಯೆಯ ಹೊಸ ಯುವ ಮಾದರಿಯೊಂದನ್ನು ಪರಿಚಯಿಸಿ ರಾಜ್ ಆದರ್ಶ ಪರಂಪರೆಯ ಕೊಂಡಿಯಾದರು.

‘ಅಭಿ’ಯಿಂದ ‘ಯುವರತ್ನ’ದವರೆಗೆ ನಟಿಸಿದ 29 ಚಿತ್ರಗಳಲ್ಲಿ ಪುನೀತ್ ಪಾತ್ರಗಳು ಈ ಆದರ್ಶವನ್ನು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತವೆ. ತಮ್ಮ ಚಿತ್ರಗಳಲ್ಲಿ ಜನ್ಮದಾತರನ್ನು ಆರಾಧಿಸುವ ವಾತ್ಸಲ್ಯಮಯಿ ಮಗನಾಗಿ, ಅಕ್ಕರೆಯ ಸೋದರನಾಗಿ, ಯುವತಿಯರಿಗೆ ಇಷ್ಟವಾಗುವ ತುಂಟತನದ ಆದರೆ ಸಂಭಾವಿತ ಮತ್ತು ಘನತೆಯ ಯುವಕನಾಗಿ, ನೆರವಿಗೆ ಧಾವಿಸುವ ಗೆಳೆಯನಾಗಿ, ಜನಸಮುದಾಯ ಮೆಚ್ಚುವ ತ್ಯಾಗ, ಸಾಹಸ ನಿಷ್ಠೆಯ ಯುವಕನಾಗಿ... ಹೀಗೆ ಕಾಲ-ದೇಶ ಬದ್ಧವಲ್ಲದ ಸಾರ್ವತ್ರಿಕ ಮೌಲ್ಯಗಳ ಪ್ರತಿರೂಪದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಸಮೂಹವನ್ನು ಆಕರ್ಷಿಸಿದರು. ರಾಜ್ ಆಶಿಸುತ್ತಿದ್ದ ‘ಕುಟುಂಬ ಕೂತು ನೋಡಬೇಕಾದ’ ಸಿನಿಮಾಗಳು ಮತ್ತೆ ಮುನ್ನೆಲೆಗೆ ಬಂದದ್ದು ಪುನೀತ್ ಚಿತ್ರಗಳಿಂದಲೇ.

ಪುನೀತ್ ಯಶಸ್ಸಿಗೆ ಅವರ ಚಿತ್ರಗಳಲ್ಲಿ ಪರಂಪರೆಯ ಮೌಲ್ಯಗಳ ಜೊತೆಗೆ ಆಧುನಿಕ ಸೋಪಜ್ಞತೆ ಸಂಗಮಿಸಿದ್ದು ಸಹ ಒಂದು ಕಾರಣವಿರಬಹುದು. ಅದು ಅವರ ಉಡುಪು ಕೇಶಾಲಂಕಾರದಿಂದ ಹಿಡಿದು, ಸಭ್ಯ ಮಾತು, ಯುವಪ್ರಭೆಯ ಲವಲವಿಕೆಯ ನಿರೂಪಣೆಯಲ್ಲೂ ಕಾಣಿಸಿಕೊಂಡು ಯುವಜನತೆ ಪಾಲಿಗೆ ಅನುಕರಣೀಯರಾದರು. ಕಿರುತೆರೆಯಲ್ಲಿ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಮತ್ತು ಫ್ಯಾಮಿಲಿ ಪವರ್ ಸರಣಿಗಳು ಅವರ ಜನಪ್ರಿಯತೆಯ ವಿಸ್ತರಣೆಗೆ ನೆರವಾದವು. ಅದರಲ್ಲಿ ಭಾಗವಹಿಸಿದ ಕರ್ನಾಟಕದ ನಾನಾ ಮೂಲೆಯಿಂದ ಬಂದ ಯುವಜನತೆ ಮತ್ತು ಕುಟುಂಬದ ಸದಸ್ಯರೊಡನೆ ಅವರು ನಡೆದುಕೊಂಡದ್ದು, ನರ್ತಿಸಿದ್ದು, ತಮಾಷೆ ಮಾಡಿದ್ದು- ಎಲ್ಲವೂ ಅವರು ಕೈಗೆಟುಕುವ ತಾರೆ ಎನಿಸುವ ಸಂದೇಶ ರವಾನೆಯಾಯಿತು.

ಅವರ ಕ್ರಿಯಾಶೀಲತೆಯು ನಟನೆ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಹಂಚಿಹೋಗಿತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ತನ್ಮಯತೆಯಿಂದ ತೊಡಗಿಸಿಕೊಂಡದ್ದು ಅವರ ವ್ಯಕ್ತಿತ್ವಕ್ಕೆ ಹೊಳಪು ನೀಡಿದ ಸಂಗತಿ. ತಮ್ಮ ತಂದೆಯ ಬಗ್ಗೆ ರೂಪಿಸಿದ ಅಪೂರ್ವ ಚಿತ್ರಕಥಾಕೋಶವು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಜಗತ್ತಿನ ಚಿತ್ರಗಳ ಪರಿಚಯವಿದ್ದ ಪುನೀತ್ ಕನ್ನಡದಲ್ಲಿ ಪ್ರಯೋಗಗಳಿಗೆ ಕನಸಿದ್ದರು. ತಮ್ಮ ಪಿ.ಆರ್ ಕೆ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ‘ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯದಂತೆ’ ನೂರಾರು ಜನರಿಗೆ ಶಿಕ್ಷಣ, ಹಲವಾರು ಸಮಾಜಸೇವಾ ಸಂಸ್ಥೆಗಳಿಗೆ ನೆರವು ಮುಂತಾದವುಗಳಿಂದ ಕೊಡುಗೈ ದಾನಿಯಾಗಿದ್ದರು. ಈ ಊರ ಮುಂದಿನ ಹಾಲುಹಳ್ಳದ ಇರವು ಜಗತ್ತಿಗೆ ತಿಳಿದದ್ದು ಅವರ ಸಾವಿನ ನಂತರವೇ!

ಅಪಾರ ಕನಸುಗಳನ್ನು ಹೊತ್ತು ಸಾಗುತ್ತಿದ್ದ ಪುನೀತ್ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಮಾಸದ ನಗು, ಸರಳತೆ ಮತ್ತು ಎಲ್ಲ ಜನರೊಡನೆ ಬೆರೆಯುವ ಗುಣದಿಂದಾಗಿ ಜನಮಾನಸಕ್ಕೆ ಹತ್ತಿರವಾಗಿದ್ದರು. ಜಾತಿ, ಧರ್ಮ, ನಾಡುಗಳ ಗಡಿಯ ಬೇಲಿಯನ್ನು ದಾಟಿದ ವಿಸ್ತಾರವಾದ ಸ್ನೇಹವಲಯವಿದ್ದ ಇಂಥ ಸಜ್ಜನ ಮಿಂಚಿ ಮಾಯವಾಗುವ ಮಂದಹಾಸವೆಂದು ಯಾರೂ ಊಹಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.