ಚಿತ್ರ: ಬೀಸ್ಟ್ (ತಮಿಳು)

ನಿರ್ಮಾಣ: ಸನ್ ಪಿಕ್ಚರ್ಸ್

ನಿರ್ದೇಶನ: ನೆಲ್ಸನ್

ತಾರಾಗಣ: ವಿಜಯ್, ಪೂಜಾ ಹೆಗ್ಡೆ, ಸೆಲ್ವ ರಾಘವನ್, ಶಾಜಿ ಚೆನ್, ಯೋಗಿ ಬಾಬು, ಅಂಕುರ್ ಅಜಿತ್ ವೈಕಲ್, ಲಿಲಿಪುಟ್ ಫರೂಕಿ, ವಿಟಿವಿ ಗಣೇಶ್.

ಕೆಲವು ಟೆಂಪ್ಲೇಟ್ಗಳೇ ಹಾಗೆ, ಎಲ್ಲೆಲ್ಲೋ ನೋಡಿಬಿಟ್ಟಿರುತ್ತೇವಲ್ಲ. ಹೀಗಾಗಿ ಮಂಕೋಮಂಕು ಎನಿಸಿಬಿಡುತ್ತದೆ, ‘ನಿಷ್ಕರ್ಷ’ ಕನ್ನಡ ಸಿನಿಮಾ ನೋಡಿ, ‘ಡೈ ಹಾರ್ಡ್’ನ ಮೈನವಿರೇಳಿಸಿದ ಕಥನವನ್ನು ನೆನಪಿಸಿಕೊಂಡಿದ್ದೆವು. ಇವೆರಡಷ್ಟೇ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಾದ ‘ಮನಿ ಹೀಸ್ಟ್’ ವೆಬ್ ಸರಣಿ, ಕಮಲ ಹಾಸನ್ ಮಹತ್ವಾಕಾಂಕ್ಷೆಯಿಂದ ವರ್ಷಗಟ್ಟಲೆ ತಯಾರಿಸಿದ ‘ವಿಶ್ವರೂಪಂ’ ಚಿತ್ರ ಎರಡನ್ನೂ ‘ಬೀಸ್ಟ್’ ನೆನಪಿಸುತ್ತದೆ, ಆ ನೆನಪುಗಳಲ್ಲಿದ್ದ ಹೆಚ್ಚು ಗಟ್ಟಿ ಕಾಳುಗಳನ್ನು ಇಲ್ಲಿನ ಜೊಳ್ಳು ಬರಹದ ತುಲನೆಗೆ ಇಡಲೂ ಮನಸ್ಸು ಒಪ್ಪುವುದಿಲ್ಲ.

‘ಡಾಕ್ಟರ್’ ತಮಿಳು ಚಿತ್ರದ ಮೂಲಕ ಕೋವಿಡ್ ಕಾಲದಲ್ಲಿ ಡಾರ್ಕ್ ಕಾಮಿಡಿಯ ಕಚಗುಳಿ ಇಟ್ಟಿದ್ದ ನಿರ್ದೇಶಕ ನೆಲ್ಸನ್ ‘ಬೀಸ್ಟ್’ನಲ್ಲಿ ಕಥನಕ್ಕೆ ರಕ್ತ–ಮಾಂಸ ತುಂಬಲು ಹೆಣಗಾಡಿದ್ದಾರೆ. ವಿಜಯ್ ಅವರಿಗೆ ಇರುವ ಇಮೇಜನ್ನು ತೀಡಬೇಕಾದ ಜರೂರು ಒಂದು ಕಡೆ. ಕಥನವನ್ನು ಅತಿ ಗಂಭೀರವಾಗದಂತೆ ಅಲ್ಲಲ್ಲಿ ಕಚಗುಳಿ ಇಡುತ್ತಾ ಹೋಗಬೇಕಾದ ಸ್ವಮಾರ್ಗ ಇನ್ನೊಂದು ಕಡೆ. ಇವೆರಡನ್ನೂ ಒಂದು ಬಿಂದುವಿಗೆ ಸಶಕ್ತವಾಗಿ ತಂದು ನಿಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಸ್ಟಾರ್ ನಟರ ಪ್ರಭಾವಳಿಯ ಭಾರ ಹೊರುವುದು ಕಷ್ಟವೆನ್ನುವುದನ್ನು ಇದಕ್ಕೇ ಇರಬೇಕು.

ಮೊದಲ ದೃಶ್ಯದಿಂದಲೇ ವಿಜಯ್ ಅವರನ್ನು ತಮ್ಮ ಇಮೇಜಿನಿಂದ ತುಸು ಆಚೆಗೆ ಕರೆದುಕೊಂಡು ಬಂದಂತೆ ‘ಬೀಸ್ಟ್’ ತೆರೆದುಕೊಳ್ಳುತ್ತದೆ. ಆಮೇಲಾಮೇಲೆ ಆ ಇಮೇಜಿನ ಹಂಗಿಗೇ ನಿರ್ದೇಶಕರ ಮೆದುಳು ಬೀಳುತ್ತಾ ಹೋಗಿರುವುದಕ್ಕೆ ಚಿತ್ರದಲ್ಲಿ ಉದಾಹರಣೆಗಳ ಮೆರವಣಿಗೆಯೇ ಇದೆ.

ಭಯೋತ್ಪಾದಕರೇ ಪ್ರತಿನಾಯಕರು. ನಾಯಕ ‘ರಾ’ ಏಜೆಂಟ್ ಆಗಿದ್ದವನು. ವ್ಯವಸ್ಥೆಯ ಸಣ್ಣ ಲೋಪದಿಂದ ಅವನ ಮನಸ್ಸು ಕಲ್ಲವಿಲಗೊಂಡಿದ್ದು, ಈಗ ಕೆಲಸದಿಂದ ಬಿಡುಗಡೆ ಪಡೆದಿದ್ದಾನೆ. ಇಂತಹ ಸ್ಥಿತಿಯ ಅವನು ತನಗೆ ಪ್ರೇಮಾಂಕುರ ಆಗುತ್ತಿರುವ ಲಲನೆಯ ಜತೆಗೆ ಮಾಲ್ ಒಂದರಲ್ಲಿ ಒತ್ತೆಯಾಳುಗಳಲ್ಲಿ ಒಬ್ಬನಾಗುತ್ತಾನೆ. ಅಲ್ಲಿದ್ದುಕೊಂಡೇ ಮತ್ತೆ ಸರ್ಕಾರದಿಂದ ಕಗ್ಗಂಟು ಬಿಡಿಸುವ ಸವಾಲನ್ನು ಅವನು ಹೇಗೆ ನಿಭಾಯಿಸುತ್ತಾನೆ ಎನ್ನುವುದು ‘ಬೀಸ್ಟ್’ನ ಕಥಾಹಂದರ.

ಇಂತಹ ಹೈಜಾಕ್ ಡ್ರಾಮಾದಲ್ಲಿ ಪ್ರತಿನಾಯಕರು ಪ್ರಬಲರಾಗಿ ಇರಬೇಕಾಗುತ್ತದೆ. ಆಗಲೇ ಶಕ್ತಿಮಾನ್ ನಾಯಕನ ಇಮೇಜಿಗೆ ಅರ್ಥ. ಈ ಸಿನಿಮಾದಲ್ಲಿ ಪ್ರತಿನಾಯಕರೆಲ್ಲ ತರಗೆಲೆಗಳ ತರಹ. ಯಾರಿಗೂ ಖದರಿಲ್ಲ. ಅವರ ಎದುರು ನಾಯಕ ಮಾಡುವ ‘ಕುರಿಯೋಗ್ರಾಫ್ಡ್’ ಸಾಹಸಗಳೆಲ್ಲ ಬಾಲಿಶ ಎನಿಸಿಬಿಡುತ್ತವೆ.

ವಿಜಯ್ ಇಡೀ ಚಿತ್ರದಲ್ಲಿ ತಮ್ಮ ಚುರುಕುತನದಿಂದ ಆವರಿಸಿಕೊಂಡಿದ್ದಾರೆ. ಅವರ ಸಣ್ಣಪುಟ್ಟ ಟೈಮಿಂಗ್ ಕೂಡ ಚಿತ್ರವಂತಿಕೆಯನ್ನು ಉಳಿಸಿಕೊಳ್ಳಲು ಕಾರಣವಾಗಿದೆ. ಮಸುಕಾದ ಅಸ್ತಿತ್ವ ಇರುವ ಪಾತ್ರದಲ್ಲಿ ಪೂಜಾ ಹೆಗ್ಡೆ ತಡಕಾಡಿದ್ದಾರೆ. ನೃತ್ಯ ಲಾಲಿತ್ಯದಲ್ಲೂ ವಿಜಯ್ಗೆ ಅವರು ಸರಿಸಾಟಿಯಲ್ಲ. ‘ಹಲಮತಿ ಹಬೀಬೊ’ ಹಾಡೊಂದರಲ್ಲೇ ನೃತ್ಯದ ಜೀವಂತಿಕೆಯನ್ನು ತೋರುವ ವಿಜಯ್ಗೆ ಅಂಥ ಇನ್ನೊಂದು ಮನರಂಜನಾ ಅವಕಾಶ ಸಿನಿಮಾದಲ್ಲಿ ಇಲ್ಲ. ಥ್ರಿಲ್ಲರ್ ಆಗಿಸುವ ಹಟಕ್ಕೆ ಬಿದ್ದ ನಿರ್ದೇಶಕರು ಕಾಮಿಡಿ ಮಾಡುವ ವಿಫಲ ಯತ್ನವನ್ನೂ ಅಲ್ಲಲ್ಲಿ ಮಾಡುತ್ತಾರೆ. ಸೆಲ್ವ ರಾಘವನ್ ಅಭಿನಯ ಚಿತ್ರದ ಸಕಾರಾತ್ಮಕ ಅಂಶಗಳಲ್ಲಿ ಒಂದು.

ಕಿರಿದಾದ ಸ್ಥಳಗಳಲ್ಲಿ ದೃಶ್ಯದ ಪರಿಣಾಮ ವರ್ಧಿಸುವಂತೆ ಮಾಡಿರುವ ಸಿನಿಮಾಟೊಗ್ರಫಿ ಮನೋಜ್ ಪರಮಹಂಸ ಅವರದ್ದು. ಅನಿರುದ್ಧ್ ಹಿನ್ನೆಲೆ ಸಂಗೀತ ಚಿತ್ರದ ಓಘಕ್ಕೆ ತಕ್ಕುದಾಗಿದೆ.

ಸಹಜವಾಗಿ ಡಾರ್ಕ್ ಕಾಮಿಡಿಯ ಮಾಧ್ಯಮದಿಂದ ಛಾಪು ಮೂಡಿಸಿರುವ ನಿರ್ದೇಶಕ ನೆಲ್ಸನ್ ತಮ್ಮ ಮೆದುಳಿಗೆ ಹೆಚ್ಚು ಕೆಲಸಕೊಡಲು ಹೋಗಿ, ಹೃದಯದ ಕೆಲಸಕ್ಕೆ ಲಕ್ಷ್ಯ ಕೊಟ್ಟಿಲ್ಲ. ಹೀಗಾಗಿ ‘ಬೀಸ್ಟ್’ ಶೀರ್ಷಿಕೆಯಷ್ಟು ದೈತ್ಯವಾಗಿ ಪ್ರಕಟಗೊಂಡಿಲ್ಲ.

ಇವನ್ನೂ ಓದಿ...

Twitter Review: ವಿಜಯ್ ನಟನೆಯ ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್

ಕತ್ರಿನಾ ಗರ್ಭಿಣಿ ಎಂದ ಅಭಿಮಾನಿಗಳು: ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಫೋಟೊ ವೈರಲ್

ಅಮ್ಮನಾಗುವ ಖುಷಿಯಲ್ಲಿ ನಟಿ ಸೋನಮ್ ಕಪೂರ್: ಬೇಬಿ ಬಂಪ್ ಫೋಟೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.