ಕರ್ನಾಟಕ ಜೀವವೈವಿಧ್ಯದ ತಾಣ. ವಿದೇಶಿ ಮತ್ತು ಉತ್ತರ ಭಾರತೀಯ ಹಕ್ಕಿಗಳಿಗೆ ಅಚ್ಚುಮೆಚ್ಚಿನ ತಂಗುದಾಣವೂ ಹೌದು. ಕರ್ನಾಟಕದಲ್ಲಿ ಗುರುತಿಸಲಾಗಿರುವ 530ಕ್ಕೂ ಹೆಚ್ಚಿನ ಪಕ್ಷಿ ಪ್ರಬೇಧಗಳಲ್ಲಿ ಸುಮಾರು 80ರಷ್ಟು ಪ್ರಬೇಧಗಳು ವಲಸೆ ಬರುತ್ತವೆ. ಹೆಚ್ಚು ಹಕ್ಕಿಗಳು ವಲಸೆ ಬಂದರೆ ಅದು ಆ ಸ್ಥಳದ ಅರೋಗ್ಯಕರ ವಾತಾವರಣದ ಜೈವಿಕ ಸೂಚಕ.

ಯೂರೋಪ್, ಮಂಗೋಲಿಯಾ, ಸೈಬೀರಿಯಾ, ರಷ್ಯಾ, ಪಾಕಿಸ್ತಾನ, ಅಫ್ಗಾನಿಸ್ತಾನ, ಆಸ್ಟ್ರೇಲಿಯಾ ಮುಂತಾದ ಪ್ರದೇಶಗಳಿಂದ ಕರ್ನಾಟಕಕ್ಕೆ ಬರುವ ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚು. ಇವೆಲ್ಲಾ ಚಳಿಗಾಲದ ವಲಸೆಗಾರರು. ಆದರೆ ಈ ವರ್ಷ ಚಳಿಗಾಲದಲ್ಲಿ ಕರ್ನಾಟಕಕ್ಕೆ ಬಂದ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣಗಳನ್ನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಕರ್ನಾಟಕದಲ್ಲಿ ದಾಖಲಾಗಿರುವ ವಲಸೆ ಹಕ್ಕಿಗಳೆಂದರೆ ಮಂಗೋಲಿಯಾದ ಪಟ್ಟೆ ಹೆಬ್ಬಾತು, ಯೂರೋಪಿನ ಉಲಿಯಕ್ಕಿಗಳು, ಕಂದು ಬಾತು, ನಾಮದ ಬಾತು, ಬಿಳಿಹುಬ್ಬಿನ ಬಾತು, ಚಲುಕ ಬಾತು, ವಿವಿಧ ಗೊರವಗಳು, ರಷ್ಯಾದ ಉಲ್ಲಂಕಿಗಳು, ಸೈಬೀರಿಯಾದ ಕಲ್ಲುಚಟಕ ಹಕ್ಕಿ, ಉತ್ತರ ಭಾರತದ ನವರಂಗ, ವಿವಿಧ ನೊಣಹಿಡುಕಗಳು, ಹೆಜ್ಜಾರ್ಲೆ ಮುಂತಾದವುಗಳು.

ಕರ್ನಾಟಕಕ್ಕೆ ಬರುವ ಬಹಳಷ್ಟು ವಲಸೆ ಹಕ್ಕಿಗಳ ತವರು ಭೂಮಿಯ ಉತ್ತರ ಗೋಳದಲ್ಲಿರುವ ಧ್ರುವ ಪ್ರದೇಶವಾಗಿರುತ್ತದೆ. ಅಲ್ಲಿರುವ ಭೌಗೋಳಿಕ ವಾತಾವರಣ ಅವುಗಳ ಸಂತಾನಾಭಿವೃದ್ಧಿಗೆ ಅನುಕೂಲಕರ. ಹಾಗೆಯೇ ಚಳಿಗಾಲದಲ್ಲಿ ವಿರಮಿಸುವ/ಆಹಾರ ದೊರಕುವ ಪ್ರದೇಶವೆಂದರೆ ಭಾರತವೂ ಸೇರಿದಂತೆ ಸಮಭಾಜಕ ವೃತ್ತದ ಪ್ರದೇಶಗಳು. ಸೂಕ್ತ ಪರಿಸರವನ್ನು ಆಧರಿಸಿ ಸ್ಥಳೀಯ ಹಕ್ಕಿಗಳಲ್ಲೂ ವಲಸೆ ಪ್ರವೃತ್ತಿಯನ್ನು ಕಾಣಬಹುದು. ಕರ್ನಾಟಕಕ್ಕೆ ವಲಸೆ ಬರುವ ಹೆಚ್ಚಿನ ಹಕ್ಕಿಗಳು ಇಲ್ಲಿ ವಂಶಾಭಿವೃದ್ಧಿ ಮಾಡುವುದಿಲ್ಲ.

ಕರ್ನಾಟಕದ ಕಡಲ ತೀರಗಳಲ್ಲಿ ಅಪರೂಪಕ್ಕೆ ಕಂಡುಬರುವ ಪಟ್ಟೆ ಬಾಲದ ಗದ್ದೆ ಗೊರವ ಹಕ್ಕಿಯ ಐದು ತಿಂಗಳ ಮರಿಯೊಂದು ಕಳೆದ ವರ್ಷ ಅಮೆರಿಕದ ಅಲಾಸ್ಕ ಪ್ರಾಂತ್ಯದಿಂದ ಹೊರಟು ಸತತವಾಗಿ ಸಮುದ್ರದ ಮೇಲೆ ಹಾರುತ್ತಾ, ಎಲ್ಲಿಯೂ ವಿರಮಿಸದೆ 265 ಗಂಟೆಗಳ ಮಹಾಯಾನ ಮಾಡಿ, 13,560 ಕಿ.ಮೀಗಳ ದೂರದ ಆಸ್ಟ್ರೇಲಿಯಾದ ತಾಸ್ಮೇನಿಯಾ ಕಡಲ ತೀರವನ್ನು ತಲುಪಿ ಹೊಸ ದಾಖಲೆಯನ್ನೇ ನಿರ್ಮಿಸಿತು. ಇದನ್ನು ವಿಜ್ಞಾನಿಗಳು ಉಪಗ್ರಹ ಆಧಾರಿತ ರೇಡಿಯೋ ಟ್ರಾನ್ಸ್ಮೀಟರ್ ಬಳಸಿ ದಾಖಲಿಸಿದ್ದರು. ಇದರ ಸಂಬಂಧಿ ಕಪ್ಪುಬಾಲದ ಗೊರವಗಳು ಪ್ರತಿವರ್ಷ ಚಳಿಗಾಲದಲ್ಲಿ ಯೂರೋಪಿನಿಂದ ಸಹಸ್ರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಧಾವಿಸುತ್ತವೆ. ಇಲ್ಲಿನ ಕೆರೆ, ಹಿನ್ನೀರು ಪ್ರದೇಶಗಳಲ್ಲಿ ಒಟ್ಟುಗೂಡಿ ಏಪ್ರಿಲ್ವರೆಗೆ ತಂಗುತ್ತವೆ. ಜನವರಿ 2022ರಲ್ಲಿ ದಾವಣಗೆರೆಯ ಕೆರೆಯೊಂದರಲ್ಲಿ ಇವುಗಳ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚಿದ್ದು, 2023ರಲ್ಲಿ ಕೇವಲ ಐದುನೂರಷ್ಟು ಮಾತ್ರ ಇದ್ದದ್ದು ದಾಖಲಾಗಿದೆ.

ವಲಸೆ ಅಧ್ಯಯನದ ಬಗೆ: ವಲಸೆ ಹಕ್ಕಿಗಳ ಸೋಜಿಗದ ಜೀವನಕ್ರಮವನ್ನು ಅಧ್ಯಯನ ಮಾಡಲು ವಿಶ್ವದಾದ್ಯಂತ ವಿಜ್ಞಾನಿಗಳು ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ವಿಶ್ವದ ಪ್ರತಿಷ್ಠಿತ ವೈಜ್ಞಾನಿಕ ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಗಳು ವಲಸೆ ಅಧ್ಯಯನಕ್ಕೆ ಉನ್ನತಮಟ್ಟದ ಸಂಶೋಧನಾ ಉಪಕರಣಗಳನ್ನು ಅಭಿವೃದ್ಧಿ ಪಡಿಸಿವೆ. ಈ ಮೊದಲು ಹಕ್ಕಿಗಳ ಕಾಲಿಗೆ ಸಂಕೇತಾಕ್ಷರವಿರುವ ಉಂಗುರ ತೊಡಿಸಲಾಗುತ್ತಿತ್ತು. ಇದನ್ನು ‘ರಿಂಗಿಂಗ್’ ಎನ್ನುವರು. ದೊಡ್ಡ ಹಕ್ಕಿಗಳಲ್ಲಿ ಕುತ್ತಿಗೆಗೆ ಹಾಕುವ ಪಟ್ಟಿ ತಯಾರಾಯಿತು. ಇತ್ತೀಚಿನ ವರ್ಷಗಳಲ್ಲಿ ವಲಸೆ ಅಧ್ಯಯನದ ದಿಕ್ಕನ್ನೇ ಬದಲಿಸುವ ಎಲೆಕ್ಟ್ರಾನಿಕ್ ಉಪಕರಣಗಳು ಅಭಿವೃದ್ಧಿಗೊಂಡಿವೆ. ಅದರಲ್ಲಿ ಪ್ರಮುಖವಾದದ್ದು ಉಪಗ್ರಹ-ಆಧಾರಿತ ರೇಡಿಯೊ ಟೆಲಿಮೆಟ್ರಿ. ಹಕ್ಕಿಗಳ ಗಾತ್ರ, ಆಕಾರ, ಜೀವನ ಶೈಲಿ, ಹಾರುವ ರೀತಿ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿವಿಧ ರೀತಿಯ ಉಪಕರಣಗಳು ತಯಾರಾಗಿವೆ.

ಹಕ್ಕಿಗಳ ಕಾಲಿನಲ್ಲಿ ಅಳವಡಿಸುವ ಕಾಲುಂಗುರದಂತಹ ಮೈಕ್ರೊಚಿಪ್ನಿಂದ ಹಿಡಿದು, ಕುತ್ತಿಗೆಯಲ್ಲಿ ಅಳವಡಿಸುವ ಪಟ್ಟಿ ಮತ್ತು ಬೆನ್ನಮೇಲೆ ಅಳವಡಿಸುವ ಬೆಂಕಿಪೊಟ್ಟಣ ಗಾತ್ರದ ವಿಡಿಯೊ ಕ್ಯಾಮೆರಾ ಒಳಗೊಂಡ ಉಪಕರಣಗಳು ಅಭಿವೃದ್ಧಿಗೊಂಡಿವೆ. ಉಪಗ್ರಹಗಳ ಮೂಲಕ ಹಕ್ಕಿಯ ಚಲನವಲನಗಳ ಮಾಹಿತಿ ಪ್ರತಿಕ್ಷಣ ಸಿಗುವಂತಹ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಅಧುನಿಕ ಕಂಪ್ಯೂಟರ್ಗಳನ್ನು ಬಳಸಿ ಹಕ್ಕಿಯ ವಲಸೆಯನ್ನು ಅಭ್ಯಸಿಸಲಾಗುತ್ತಿದೆ. ಉದಾಹರಣೆಗೆ ಹಂಗೇರಿಯ ಹಕ್ಕಿಗಳ ಗುರುತು ಪಟ್ಟಿ ಕಾರ್ಯಕ್ರಮದಲ್ಲಿ 60 ಲಕ್ಷಕ್ಕೂ ಹೆಚ್ಚು ಇರುವ ಮಾಹಿತಿಯನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗಿದೆ. ಭಾರತದಲ್ಲಿಯೂ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯು ಹಕ್ಕಿಗಳಿಗೆ ಗುರುತು ಪಟ್ಟಿ ತೊಡಿಸುವ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಆದರೆ ಭಾರತದಲ್ಲಿ ಉಪಗ್ರಹ ಆಧಾರಿತ ರೇಡಿಯೋ ಟೆಲಿಮೆಟ್ರಿ ವಿಧಾನವನ್ನು ಉಪಯೋಗಿಸಿ ನಡೆಸುವ ಅಧ್ಯಯನ ಅತಿ ವಿರಳ.

ಮಂಗೋಲಿಯಾ ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣಾ ಕೇಂದ್ರದ ಡಾ.ಬ್ಯಾಟ್ ಬೆಯರ್ ಅವರ ತಂಡ ಪಟ್ಟೆ ಹೆಬ್ಬಾತುಗಳ ವಲಸೆ ಅಧ್ಯಯನಕ್ಕಾಗಿ ನಿರ್ದಿಷ್ಟ ಸಂಖ್ಯೆಯ ಕೊರಳಿನ ಪಟ್ಟಿಯನ್ನು ನೂರು ಹಕ್ಕಿಗಳಿಗೆ ತೊಡಿಸಿ ಅಲ್ಲಿನ ಬಾಯನ್ ಸರೋವರದಲ್ಲಿ ಹಾರಿಬಿಟ್ಟರು. ಈ ಹಕ್ಕಿಗಳು ಭಾರತದಲ್ಲಿ ಯಾವ ಪ್ರದೇಶಕ್ಕೆ ವಲಸೆ ಹೋಗುತ್ತವೆ ಎಂಬುದನ್ನು ಕಂಡುಹಿಡಿಯುವುದು ಈ ಅಧ್ಯಯನದ ಉದ್ದೇಶವಾಗಿತ್ತು. 2015ರ ನವೆಂಬರ್ ತಿಂಗಳಲ್ಲಿ ಒಂದು ಹಸಿರು ಕೊರಳಪಟ್ಟಿಯಿದ ‘ಎಕ್ಸ್90’ ಸಂಖ್ಯೆಯ ಹಕ್ಕಿ ತನ್ನ ಜೊತೆಗಾರರೊಂದಿಗೆ ದಾವಣಗೆರೆಯ ಕುಂದುವಾಡ ಕೆರೆಯಲ್ಲಿ ಕಂಡುಬಂತು. ಈ ಹಕ್ಕಿಯ ಚಿತ್ರವನ್ನು ತೆಗೆದು ಡಾ.ಬ್ಯಾಟ್ ಬೆಯರ್ ಅವರಿಗೆ ಕಳುಹಿಸಿದಾಗ ಈ ಹಕ್ಕಿಗಳು ಮಂಗೋಲಿಯಾದಿಂದ ದಾವಣಗೆರೆಗೆ ಬಂದಿರುವುದಕ್ಕೆ ದೃಢೀಕರಣ ಸಿಕ್ಕಿತು. ಈ ಹಕ್ಕಿಯು ತನ್ನ ಜೊತೆಗಾರರೊಂದಿಗೆ 4,900 ಕಿ.ಮೀಗಳನ್ನು ಕ್ರಮಿಸಿ ಹಿಮಾಲಯ ಪ್ರರ್ವತ ಶ್ರೇಣಿಯನ್ನು ದಾಟಿ ಕರ್ನಾಟಕಕ್ಕೆ ಬಂದಿರುವುದು ಸೋಜಿಗದ ವಿಷಯ. ಇದೇ ಹಕ್ಕಿಗಳು ಗದಗದ ಮಾಗಡಿ ಕೆರೆಗೆ ಪ್ರತಿವರ್ಷ ಸಹಸ್ರ ಸಂಖ್ಯೆಯಲ್ಲಿ ಬರುವುದು ಸಹ ದಾಖಲಾಗಿದೆ .ರೇಡಿಯೋ ಟ್ರಾನ್ಸ್ಮೀಟರ್ ಸಹಾಯದಿಂದ ಇವು ಹಿಮಾಲಯ ಪರ್ವತವನ್ನು ದಾಟುತ್ತಿರುವುದನ್ನು ಇವುಗಳ ಬೆನ್ನಮೇಲೆ ಅಳವಡಿಸಿದ ಜಿಪಿಎಸ್ ಇರುವ ಕ್ಯಾಮೆರಾದಿಂದ ದಾಖಲಿಸಲಾಗಿದೆ.

ಹಗರಿಬೊಮ್ಮನ ಹಳ್ಳಿಯ ತುಂಗಭದ್ರಾ ನದಿಯ ಹಿನ್ನೀರಿನ ಪ್ರದೇಶದಲ್ಲಿ ಪ್ರತಿವರ್ಷ ರಾಜಹಂಸಗಳು ಸಹಸ್ರ ಸಂಖ್ಯೆಯಲ್ಲಿ ಬರುತ್ತಿದ್ದವು. ಕಳೆದ ವರ್ಷದ ಅತಿವೃಷ್ಟಿ ಮತ್ತು ವಿಸ್ತರಿಸಲಾದ ಮಳೆಗಾಲದ ಅವಧಿಯಿಂದ ಹಿನ್ನೀರಿನ ಪ್ರದೇಶವೆಲ್ಲಾ ಜಲಾವೃತವಾಗಿ ರಾಜಹಂಸಗಳಿಗೆ ಅಗತ್ಯವಾದ ಕೆಸರು ಲಭ್ಯವಿಲ್ಲದೇ ಹೋದದ್ದರಿಂದ ಅಥವಾ ಅಲ್ಲಿ ಸ್ಥಳೀಯ ತೊಂದರೆಗಳಿಂದ ಈ ವರ್ಷ ಇಲ್ಲಿ ರಾಜಹಂಸಗಳು ದಾಖಲಾಗಿಲ್ಲ. ಆದರೆ, ಏಪ್ರಿಲ್ ಮೊದಲ ವಾರದಲ್ಲಿ ಬಾಗಲಕೋಟೆಯ ಆಲಮಟ್ಟಿ ಹಿನ್ನೀರಿನ ಪ್ರದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರಾಜಹಂಸಗಳು ಬೀಡುಬಿಟ್ಟಿವೆ.

ಕಳೆದೆರಡು ವರ್ಷಗಳಿಂದ ದಾವಣಗೆರೆಯಲ್ಲಿ ಕಾಣದಾಗಿದ್ದ ವಲಸೆಗಾರ ಗುಲಾಬಿ ಕಬ್ಬಕ್ಕಿಗಳು ಈ ವರ್ಷ ನೂರಾರು ಸಂಖ್ಯೆಯಲ್ಲಿ ದಾಖಲಾದವು. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅವ್ಯಾಹತ ಮಳೆಯಾಗಿದ್ದರಿಂದ ಅಲ್ಲಿರುವ ಹಳದಿ ಕಾಲಿನ ಹಸಿರು ಪಾರಿವಾಳಗಳು ದಾವಣಗೆರೆಯನ್ನು ತಮ್ಮ ಹೊಸ ತಂಗುದಾಣವನ್ನಾಗಿ ಮಾಡಿಕೊಂಡಿವೆ.

ದಿಕ್ಕು–ಸ್ಥಳವನ್ನು ಹಕ್ಕಿಗಳು ಗುರುತಿಸುವುದು ಹೀಗೆ..: ಹಕ್ಕಿಗಳು ನಕ್ಷತ್ರಗಳು ಕಾಣುವ ದಿಕ್ಕು ಮತ್ತು ಸಮಯವನ್ನು ಅಂದಾಜಿಸಿ ಆಕಾಶ ನಕ್ಷೆಯನ್ನು ತಯಾರಿಸುತ್ತವೆ. ಗುರುತಿಸಬಹುದಾದ ಗಡಿ ಚಿಹ್ನೆಗಳನ್ನು ನೋಡಿಕೊಂಡಿರುತ್ತವೆ. ಉದಾಹರಣೆಗೆ: ಕೆರೆ, ನದಿ, ಗುಡ್ಡ, ಬೆಟ್ಟ, ಸಮುದ್ರ ಮುಂತಾದವುಗಳು. ತಮ್ಮ ಕಣ್ಣಿನ ಅಥವಾ ಮೂಗಿನ ಬುಡದಲ್ಲಿ ವಿಶೇಷವಾದ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅಂಶವಿರುವ ಪ್ರೊಟೀನ್ ಅನ್ನು ದಿಕ್ಸೂಚಿಯಂತೆ ಬಳಸಿ ಭೂಮಿಯ ಆಯಸ್ಕಾಂತ ಶಕ್ತಿಯನ್ನು ಗುರುತಿಸಿ ತಾವು ಕ್ರಮಿಸುವ ದಿಕ್ಕನ್ನು ನಿರ್ಧರಿಸುತ್ತವೆ. ಮನುಷ್ಯನ ನೆನಪಿನ ಶಕ್ತಿಗೆ ಸವಾಲೆಸೆಯುವಂತಹ ನೆನಪಿನ ಶಕ್ತಿ ಹಕ್ಕಿಗಳಿಗಿವೆ ಎಂದು ವಲಸೆ ಅಧ್ಯಯನದಿಂದ ತಿಳಿದುಬಂದಿದೆ. ತಂದೆ-ತಾಯಿಯು ಅನುಸರಿಸಿ ಬರುವ ಮರಿಗಳು ಮುಂದಿನ ಋತುಗಳಲ್ಲಿ ಸ್ವತಂತ್ರವಾಗಿ ವಲಸೆ ಬಂದು ತಮ್ಮ ಗಮ್ಯವನ್ನು ತಲುಪುತ್ತವೆ.
ಹವಾಮಾನ ವೈಪರೀತ್ಯ, ಭೂ ತಾಪಮಾನ ಏರಿಕೆ, ಮನುಷ್ಯರನ್ನೊಳಗೊಂಡಂತೆ ಬೇಟೆಗಾರ ಪ್ರಾಣಿಗಳು, ಆವಾಸ ಸ್ಥಾನಗಳ ಕೊರತೆ, ಆಹಾರದ ಕೊರತೆ, ಕೃಷಿಭೂಮಿ ಮತ್ತು ಕಾಡನ್ನು ನಾಶ ಮಾಡಿದ ನಗರೀಕರಣ, ಕೈಗಾರಿಕೀಕರಣ, ವಲಸೆ ಸಮಯದಲ್ಲಿ ಕೆರೆಗಳಲ್ಲಿ ಮೀನುಗಾರಿಕೆಯಿಂದ ಆಗುವ ತೊಂದರೆ ಮುಂತಾದವುಗಳು ತೊಂದರೆಗಳನ್ನು ಒಡ್ಡುತ್ತವೆ.

ಕರ್ನಾಟಕದ ವಲಸೆ ಹಕ್ಕಿಗಳ ತಾಣಗಳು: ರಂಗನತಿಟ್ಟು, ಗುಡವಿ, ಅಂಕಸಮುದ್ರ ಪಕ್ಷಿ ಧಾಮಗಳು, ಹಗರಿಬೊಮ್ಮನ ಹಳ್ಳಿಯ ತುಂಗಭದ್ರಾ, ಕಬನಿ, ಅಲಮಟ್ಟಿ ಹಿನ್ನೀರು ಪ್ರದೇಶಗಳು, ಮಂಗಳೂರು, ಉಡುಪಿ, ಮಲ್ಪೆ, ಕಾರವಾರ ಸಮುದ್ರ ತೀರಗಳು ಅಲ್ಲದೆ ಮೈಸೂರು, ದಾವಣಗೆರೆ, ತುಮಕೂರು, ಬೆಂಗಳೂರಿನ ಕೆರೆಗಳಲ್ಲಿ ವಲಸೆ ಹಕ್ಕಿಗಳು ಹೆಚ್ಚಾಗಿ ಕಂಡುಬರುತ್ತವೆ.
ಶೈಶವಾವಸ್ಥೆಯಲ್ಲಿ ಅಧ್ಯಯನ: ಕರ್ನಾಟಕದಲ್ಲಿ ಸದ್ಯಕ್ಕೆ ಹವ್ಯಾಸಿ ಪಕ್ಷಿ ವೀಕ್ಷಕರು ಮತ್ತು ಕೆಲವೇ ಉತ್ಸಾಹಿ ಅರಣ್ಯಾಧಿಕಾರಿಗಳು ಪಕ್ಷಿಗಳ ದಾಖಲೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಪಕ್ಷಿಧಾಮಗಳಲ್ಲಿ ಮಾತ್ರ ಸ್ವಯಂಸೇವಕರ ಸಹಾಯದಿಂದ ಹಕ್ಕಿ ಗಣತಿ ನಡೆಯುತ್ತದೆ. ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಾಗ ಮಾತ್ರ ಅರಣ್ಯ ಇಲಾಖೆ ವಿದೇಶಿ ವಲಸೆ ಹಕ್ಕಿಗಳ ಮಾಹಿತಿಯನ್ನು ನನ್ನಂತಹ ಪಕ್ಷಿ ವೀಕ್ಷಕರಿಂದ ಪಡೆದುಕೊಳ್ಳುತ್ತದೆ. ಪ್ರತಿ ಜಿಲ್ಲೆಯಲ್ಲಿ ಪ್ರತಿ ತಿಂಗಳೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿ ಪಕ್ಷಿಗಳ ವೈವಿಧ್ಯವನ್ನು ವ್ಯವಸ್ಥಿತ ರೀತಿಯಲ್ಲಿ ದಾಖಲಿಸುವ ಅಗತ್ಯವಿದೆ.

ಭಾರತದಲ್ಲಿ ವಲಸೆ ಹಕ್ಕಿಗಳ ವೈಜ್ಞಾನಿಕ ಅಧ್ಯಯನ ಇನ್ನೂ ಶೈಶವಾವಸ್ಥೆಯಲ್ಲಿದೆ. ನೂರೆಂಟು ಕಾನೂನಾತ್ಮಕ ತೊಡಕುಗಳು ಇವೆ. ಕರ್ನಾಟಕದಲ್ಲಂತೂ ವಲಸೆ ಹಕ್ಕಿಗಳ ಗುರುತಿಸುವಿಕೆ ಮತ್ತು ದಾಖಲೀಕರಣ ಸೀಮಿತ ಮಟ್ಟದ್ದಾಗಿದೆ. ಮೈಸೂರ್ ನೇಚರ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಮೈಸೂರಿಗೆ ಬರುವ ವಲಸೆ ಹಕ್ಕಿಗಳ ಗಣತಿಯನ್ನು ವ್ಯವಸ್ಠಿತ ರೀತಿಯಲ್ಲಿ ನಡೆಸಿ ಅಭೂತಪೂರ್ವ ಮಾಹಿತಿಯನ್ನು ಸಂಗ್ರಹಿಸಿರುವುದು ಶ್ಲಾಘನೀಯ.

ಕರ್ನಾಟಕ ವಲಸೆ ಹಕ್ಕಿಗಳ ನೆಚ್ಚಿನತಾಣವಾಗಿ ಮುಂದುವರಿಯುವಂತೆ ಮಾಡುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ.
ಚಿತ್ರಗಳು: ಲೇಖಕರವು, ಲೇಖಕರು ಸೂಕ್ಷ್ಮಜೀವಿ ವಿಜ್ಞಾನದ ಪ್ರಾಧ್ಯಾಪಕ ಹಾಗೂ ಪಕ್ಷಿವೀಕ್ಷಕಯಾಕೀ ವಲಸೆ?
ಬಾಹ್ಯ ಮತ್ತು ಆಂತರಿಕ ಅಂಶಗಳು ಹಕ್ಕಿಗಳಲ್ಲಿ ವಲಸೆಗೆ ಉತ್ತೇಜನ ನೀಡುತ್ತವೆ. ಅವುಗಳಲ್ಲಿ ಪ್ರಮುಖವಾದದ್ದು ಎಂದರೆ ದಿನದ ಹಗಲಿನ ಅವಧಿ. ಉತ್ತರಧ್ರುವ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸೂರ್ಯ ಕಾಣಿಸುವುದೇ ಅಪರೂಪ. ತಾಪಮಾನ ಶೂನ್ಯದಿಂದ ಕೆಳಗಿಳಿದಿರುತ್ತದೆ. ಆಂತರಿಕ ಅಂಶಗಳಲ್ಲಿ ಪ್ರಮುಖವಾದದ್ದು ಸಂತಾನಾಭಿವೃದ್ಧಿಗೆ ಅಗತ್ಯವಾದ ರಸದೂತ (ಹಾರ್ಮೋನ್)ಗಳ ಪ್ರಮಾಣ ಮತ್ತು ವಂಶಾಭಿವೃದ್ಧಿಯ ಅಂಗಗಳ ಬೆಳವಣಿಗೆಯ ಸ್ಥಿತಿ. ಕುತೂಹಲಕಾರಿ ಅಂಶವೆಂದರೆ ಬಂಜೆ ಹಕ್ಕಿಗಳಲ್ಲಿ ವಲಸೆ ಕಂಡುಬರುವುದಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.