ನಿರುತ್ಸಾಹಗೊಳಿಸುವ, ಎದೆಗುಂದಿಸುವ ವಿಷಯಗಳನ್ನು ಪ್ರಸ್ತಾಪಿಸುತ್ತಾ ಬರವಣಿಗೆಯನ್ನು ಆರಂಭಿಸುವುದು ನಮಗೆ ಸ್ವಲ್ಪವೂ ಇಷ್ಟವಿಲ್ಲದ ಕೆಲಸ. ಆಶ್ವಾಸನೆಗಳಿಲ್ಲದೆ, ಭರವಸೆ ಮೂಡಿಸದ ಚಿಂತನೆಗಳಿಂದ ನಾವು ಸಾಧಿಸುವುದಾದರೂ ಏನನ್ನು?

ಹೀಗೆ ಯೋಚಿಸುತ್ತಾ ಭೂಮಂಡಲದಲ್ಲಿ ಜರುಗುತ್ತಿರುವ ವಿದ್ಯಮಾನಗಳನ್ನು, ಪ್ರಕಟಗೊಳ್ಳುತ್ತಿರುವ ಸಂಶೋಧನಾ ಪ್ರಬಂಧಗಳನ್ನು, ವರದಿಗಳನ್ನು ಓದುವಾಗ ಮೇಲಿನ ನಮ್ಮ ನಿಲುವಿನಲ್ಲಿ ಗೊಂದಲ ಮೂಡುತ್ತದೆ. ವಿಷಾದದ ಛಾಯೆ ಆವರಿಸುತ್ತದೆ.

ಈ ಹಿನ್ನೆಲೆಯಲ್ಲಿ ಪರಿಸರ ದಿನಾಚರಣೆ ಸಂಭ್ರಮಿಸಿ ಆಚರಿಸುವ ದಿನವಾಗಲು ಸಾಧ್ಯವೇ? ನಮ್ಮ ಪ್ರಕಾರ ಇದು ವಿಷಾದದ ಪಶ್ಚಾತ್ತಾಪದ ದಿನವಾಗಬಹುದು. ಇತಿಹಾಸದುದ್ದಕ್ಕೂ ನಾವು ಭೂಮಿಯಲ್ಲಿ ನಿರಂತರವಾಗಿ ಎಸಗಿದ, ಎಸಗುತ್ತಿರುವ ಅಪಚಾರಗಳನ್ನು ಅವಲೋಕಿಸಿ ಆತ್ಮವಿಮರ್ಶೆ ಮಾಡಿಕೊಳ್ಳುವ ದಿನವಿದು. ನಮ್ಮ ಪ್ರಜ್ಞೆಯ ಅಂತರಾಳಕೆ ಇಳಿದು ಕಠಿಣ ಪ್ರಶ್ನೆಗಳನ್ನು ಎದುರಿಸುವ ದಿನವಿದು.

ಇದಕ್ಕಾಗಿ ನಾವು ಚರಿತ್ರೆಯ ಆರಂಭದ ದಿನಗಳಿಗೆ ಹೋಗಬೇಕಿಲ್ಲ. ಕೈಗಾರಿಕಾ ಕ್ರಾಂತಿಯ ನಂತರದ ಅವಧಿಯ ಬದಲಾವಣೆಗಳನ್ನು ಗಮನಿಸಿದರೆ ಸಾಕು. ಅಂದಿನಿಂದ ಇಲ್ಲಿಯವರೆಗೆ ಭೂಮಿಯಲ್ಲಿ ವಿನಾಶಗೊಂಡ ನೂರಾರು ಜೀವಿಗಳಿಗೆ ಮನುಷ್ಯ ನೇರವಾಗಿ ಕಾರಣಕರ್ತನಾಗಿದ್ದಾನೆ.

ಈಗ ಉತ್ತರ ಅಮೆರಿಕದಿಂದ ಮತ್ತೊಂದು ಆತಂಕದ ವರದಿ ಬಂದಿದೆ. ಅದು ‘ರೆಡ್ ನಾಟ್’(Calidris cantus) ಎಂಬ ಪುಟ್ಟ ಹಕ್ಕಿಯ ಕುರಿತಾಗಿ.

ನಿಮಗೆ ರೆಡ್ ನಾಟ್ ಹಕ್ಕಿಗಳ ಬಗ್ಗೆ ತಿಳಿದಿರಬಹುದು. ಸುದೀರ್ಘ ವಲಸೆಗೆ ಇವು ಪ್ರಸಿದ್ಧಿ. ಈ ಹಕ್ಕಿಗಳು ದಕ್ಷಿಣ ಅಮೆರಿಕಾದ ಕೆಳ ತುದಿಯಿಂದ ಹೊರಟು ಉತ್ತರ ಧ್ರುವಕ್ಕೆ ತೆರಳುತ್ತವೆ. ಅಲ್ಲಿಯ ಹಿಮ ಪರ್ವತಗಳಲ್ಲಿ ಗೂಡುಕಟ್ಟಿ, ಮರಿ ಮಾಡಿಕೊಂಡು ಮತ್ತೆ ತವರಿಗೆ ವಾಪಸಾಗುತ್ತವೆ. ಈ ಮಹಾಪ್ರಯಾಣದಲ್ಲಿ ಅವು ಕ್ರಮಿಸುವ ದೂರ ಸುಮಾರು ಇಪ್ಪತ್ತೆಂಟು ಸಾವಿರ ಕಿಲೊಮೀಟರ್‌ಗಳು.

ರೆಡ್ ನಾಟ್ ಹಕ್ಕಿಗಳ ಈ ಅಮೋಘ ಪ್ರಯಾಣವೇ ಒಂದು ಸಾಹಸಗಾಥೆ. ರಾತ್ರಿ ಹಗಲನ್ನೆದೆ ಬೀಸುವ ಗಾಳಿಯನ್ನು, ಸುರಿಯುವ ಮಳೆಯನ್ನು, ಕೊರೆಯುವ ಚಳಿಯನ್ನು ಭೇದಿಸುತ್ತಾ ನಿರಂತರವಾಗಿ ಹಾರುತ್ತಲೇ ಇರುತ್ತವೆ. ನೀರು, ಆಹಾರ, ನಿದ್ರೆ ಕೂಡ ಇಲ್ಲದೆ ಏಳೆಂಟು ದಿನಗಳ ಹಾರಾಟವೆಂದರೆ ಇದು ಮನುಷ್ಯನ ಊಹೆಗೆ ನಿಲುಕದ ಮಹಾಪಯಣ. ಅದಕ್ಕಾಗಿ ಅವು ವ್ಯಯಿಸಬೇಕಿರುವ ಶಕ್ತಿ ಅಪಾರ. ಹಾಗಾಗಿ ಈ ದೀರ್ಘ ಪ್ರಯಾಣ ಅರ್ಧ ದಾರಿ ಕ್ರಮಿಸುವ ಹೊತ್ತಿಗೆ ಹಕ್ಕಿಗಳು ದೈಹಿಕವಾಗಿ ಕುಗ್ಗಿ ಅವುಗಳ ಹಾರಾಟದ ಶಕ್ತಿಯೇ ಇಂಗಿ ಹೋಗಿರುತ್ತದೆ. ಇಂತಹ ಸವಾಲುಗಳನ್ನು ನಿಭಾಯಿಸಲು ಹಕ್ಕಿಗಳಲ್ಲಿ ಹಲವಾರು ಯೋಜನೆಗಳು ಹುಟ್ಟರಿವಿನಿಂದ ರೂಪಿತಗೊಂಡಿರುತ್ತವೆ.

ಕೆನಡಾದ ಹಿಮಪರ್ವತಗಳನ್ನು ತಲುಪುವ ಹಾದಿಯಲ್ಲಿ ರೆಡ್ ನಾಟ್ ಹಕ್ಕಿಗಳು ಅಮೆರಿಕದ ದಲವಾರೆ ಪ್ರಾಂತ್ಯದ ಕೊಲ್ಲಿಯ ತೀರದಲ್ಲಿ ಇಳಿಯತ್ತವೆ. ಈ ಪ್ರಯಾಣದ ಮಧ್ಯದಲ್ಲಿ ನಿತ್ರಾಣಗೊಂಡ ಹಕ್ಕಿಗಳು ಒಮ್ಮೆ ಭೂಮಿಗೆ ಇಳಿದವೆಂದರೆ ಮತ್ತೆ ರೆಕ್ಕೆಗಳನ್ನು ಬಿಚ್ಚಿ ಹಾರುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ಗಂಭೀರ ಸನ್ನಿವೇಶದಲ್ಲಿ ಸಾಗರದ ಮರಳ ದಂಡೆಯಲ್ಲಿ ಅವುಗಳಿಗೆ ಆಹಾರ ಸಿದ್ಧವಾಗಿರುತ್ತದೆ. ಏನಿದು ಪವಾಡ?

ರೆಡ್ ನಾಟ್ ಹಕ್ಕಿಗಳು ಆಗಮಿಸುವ ಹೊತ್ತಿಗೆ ಕಾಕತಾಳೀಯವೆಂಬಂತೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಾರ್ಸ್ ಶೂ(Limulidae) ಏಡಿಗಳು ದಲವಾರೆ ಸಾಗರ ತೀರದಲ್ಲಿ ನೆರೆದು, ಕೋಟಿ ಕೋಟಿ ಮೊಟ್ಟೆಗಳನ್ನಿಟ್ಟು ಮತ್ತೆ ಸಾಗರದಲ್ಲಿ ಅಂತರ್ಧಾನಗೊಳ್ಳುತ್ತವೆ. ಹೇರಳ ಪೌಷ್ಟಿಕಾಂಶವಿರುವ ಈ ಮೊಟ್ಟೆಗಳನ್ನು ಕಬಳಿಸುವ ಹಕ್ಕಿಗಳು ಶರವೇಗದಲ್ಲಿ ಕರಗಿದ ಮಾಂಸ ಖಂಡಗಳನ್ನು ಮತ್ತೆ ತುಂಬಿಕೊಂಡು ಪ್ರಯಾಣ ಮುಂದುವರಿಸುತ್ತವೆ. ಏಡಿಗಳ ಈ ಮೇಳ ಜರುಗುವುದು ವರ್ಷದಲ್ಲಿ ಎರಡು ವಾರಗಳು ಮಾತ್ರ.

ಸಾವಿರಾರು ಕಿಲೊಮೀಟರ್ ದೂರದಲ್ಲಿ ಜರುಗಲಿರುವ ಈ ಮಹಾಮೇಳದ ಸುದ್ದಿಯನ್ನು ರೆಡ್ ನಾಟ್‌ಗಳು ಗ್ರಹಿಸುವುದಾದರೂ ಹೇಗೆ? ಪ್ರಯಾಣ ಆರಂಭಿಸುವ ಖಚಿತ ಸಮಯವನ್ನು ನಿಗದಿಪಡಿಸಿಕೊಳ್ಳುವುದಾದರು ಹೇಗೆ?

ಇದು ನಿಗೂಢವೆನಿಸಿದರೂ ರೆಡ್ ನಾಟ್ ಹಕ್ಕಿಗಳ ಈ ತೀರ್ಮಾನದ ಹಿಂದೆ ದೊಡ್ಡ ಲೆಕ್ಕಾಚಾರವಿರುತ್ತದೆ. ಅದು ಆಕಸ್ಮಿಕ ಅಥವಾ ಅಂದಾಜಿನ ನಿರ್ಧಾವಾಗಿರುವುದಿಲ್ಲ. ಅವುಗಳಲ್ಲಿ ಜೈವಿಕವಾಗಿ ಅಂತರ್ಗತವಾಗಿರುವ ಅನುವಂಶಿಕ ಜ್ಞಾನ ಅದಾಗಿದೆ. ಆ ಜ್ಞಾನವೇ ಅವುಗಳ ಕಾರ್ಯ ಸೂಚಿಯನ್ನು ಕರಾರುವಕ್ಕಾಗಿ ನಿರ್ದೇಶಿಸುತ್ತದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ರೆಡ್ ನಾಟ್ ಹಕ್ಕಿಗಳು ದಲವಾರೆ ಕೊಲ್ಲಿಗೆ ಆಗಮಿಸುವ ಹೊತ್ತಿಗೆ ಹಾರ್ಸ್ ಶೂ ಏಡಿಗಳ ಸುಳಿವೇ ಇರುವುದಿಲ್ಲ. ಕ್ಯಾಲೆಂಡರ್‌ಗಳಲ್ಲಿ ಗೊತ್ತುಪಡಿಸಿದಂತೆ ವರ್ಷದ ನಿರ್ದಿಷ್ಟ ಸಮಯದಲ್ಲಿ ಪ್ರತ್ಯಕ್ಷಗೊಳ್ಳುತ್ತಿದ್ದ ಏಡಿಗಳ ಕಾರ್ಯಕ್ರಮದಲ್ಲಿ ಏರುಪೇರಾಗಿದೆ. ಜಾಗತಿಕ ಹವಾಮಾನದ ಬದಲಾವಣೆಯಿಂದಾಗಿ ಅವುಗಳ ಬದುಕಿನ ಗಡಿಯಾರ ಗಲಿಬಿಲಿಗೊಂಡಿದೆ. ವಾತಾವರಣದ ನಿರ್ದಿಷ್ಟ ಉಷ್ಣಾಂಶ, ತೇವಾಂಶಗಳನ್ನು ಕೊಲ್ಲಿಯ ಅಲೆಗಳ ಏರಿಳಿತಗಳನ್ನು, ಚಲಿಸುವ ಮೋಡ, ಮಿನುಗುವ ನಕ್ಷತ್ರಗಳನ್ನು ಓದಿ ಬದುಕಿನ ಕಾರ್ಯಸೂಚಿಯನ್ನು ರೂಪುಗೊಳಿಸುತ್ತಿದ್ದ ಏಡಿಗಳು ಗೊಂದಲಕ್ಕೆ ಸಿಲುಕಿವೆ.

ರೆಡ್ ನಾಟ್ ಹಕ್ಕಿಗಳಿಗೂ ಪರಿಸ್ಥಿತಿ ಏನೆಂದು ಅರ್ಥವಾಗುತ್ತಿಲ್ಲ. ಜೈವಿಕ ಗಡಿಯಾರದ ಪ್ರೇರಣೆಗನುಸಾರವಾಗಿ ಕೊಲ್ಲಿಯ ತೀರಕ್ಕೆ ಆಗಮಿಸಿ ಬಾರದ ಏಡಿಗಳಿಗಾಗಿ ಚಂಚು ಕಟ್ಟಿ ಕುಳಿತಿವೆ. ಏಡಿಗಳ ಬದುಕಿನ ಗಲಿಬಿಲಿ ಅವುಗಳಿಗೆ ಅರ್ಥವಾಗುತ್ತಿಲ್ಲ. ಇನ್ನು ನಾಲ್ಕೈದು ದಿನಗಳಲ್ಲಿ ಅವು ಬರಬಹುದೆಂದು ಕಾದು ಕುಳಿತುಕೊಳ್ಳಲು ಅವುಗಳಿಗೆ ಸಮಯವಿಲ್ಲ.

ಆರ್ಟಿಕ್‌ನ ಅಲ್ಪಾವಧಿ ಬೇಸಿಗೆಯಲ್ಲಿ ಹೊರಬರುವ ಕೀಟಗಳು ಮರಿಗಳಿಗೆ ದಕ್ಕುವ ಏಕೈಕ ಆಹಾರ. ಅವುಗಳ ಉದ್ಗಮದಲ್ಲೂ ಏರುಪೇರಾಗಿದೆ. ಹಿಮದ ಆಗಮನಕ್ಕೆ ಮುನ್ನ ಬೆಳೆದ ಮರಿಗಳೊಂದಿಗೆ ತವರಿಗೆ ಹಿಂದಿರುಗಲು ಇರುವ ಅವಧಿ ಅತ್ಯಲ್ಪ. ಏನೋ ಆಗಬಾರದ್ದು ನಡೆದು ಹೋಗಿದೆ ಎಂಬ ಆಲೋಚನೆಗಳಿಗೆ ಅವು ಮೊರೆ ಹೋಗುವಂತಿಲ್ಲ. ಆಧ್ಯಾತ್ಮಿಕ ಚಾವಣಿಯ ನೆರಳಲ್ಲಿ ಆಶ್ರಯ ಪಡೆದು ಸಮಾಧಾನ ಕಂಡುಕೊಳ್ಳುವ ಸಂಸ್ಕೃತಿಯ ಪರಿಚಯವೂ ಅವುಗಳಿಗಿಲ್ಲ. ಸದಾ ಸ್ಫುರಿಸುವ ಹುಟ್ಟರಿವಿನ ನಿರ್ದೇಶನಕ್ಕನುಗುಣವಾಗಿ ವರ್ತಿಸಬೇಕು.

ಬದಲಾದ ಪರಿಸ್ಥಿತಿಯಲ್ಲಿ ಏಡಿಗಳು ಕಣ್ಮರೆಯಾದವೆಂದೇನೂ ಅಲ್ಲ. ಸಂತಾನೋತ್ಪತ್ತಿ ಮಾಡುತ್ತಿಲ್ಲವೆಂದೇನೂ ಅಲ್ಲ. ಮೊಟ್ಟೆ ಇಡಲು ಸೂಕ್ತವಾದ ಸಮಯವನ್ನ ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಅಂದರೆ ನೀವು ಪ್ರಯಾಣಿಸಲು ಮುಂಗಡವಾಗಿ ಕಾದಿರಿಸಿದ ವಿಮಾನ ವಾರ ಮುಂಚಿತವಾಗಿ ತೆರಳಿದಂತೆ ಅಥವಾ ಎಂದಾದರೊಂದು ದಿನ ಬರಬಹುದೆಂಬ ಕವಡೆ ಶಾಸ್ತ್ರದ ಭವಿಷ್ಯವಾಣಿಯಂತೆ. ತಲೆ ತಲೆಮಾರುಗಳಿಂದ ಅನುಷಂಗಿಕವಾಗಿ ತೇಲಿಬಂದಿರುವ ರೆಡ್ ನಾಟ್ ಹಕ್ಕಿಗಳ ಅಪೂರ್ವ ಜ್ಞಾನ ಇದ್ದಕ್ಕಿದ್ದಂತೆ ನಿರುಪಯುಕ್ತವಾಗುತ್ತಿದೆ. ಲಕ್ಷ ಲಕ್ಷ ವರ್ಷಗಳಿಂದ ಮುಗಿಲಿನಲ್ಲಿ ಚಿತ್ತಾರ ಬಿಡಿಸುತ್ತಿದ್ದ ರೆಡ್ ನಾಟ್‌ಗಳು ಕಣ್ಮರೆಯಾಗಲು ವೇದಿಕೆ ಸಿದ್ಧವಾಗುತ್ತಿದೆ.

ದಿನ ನಿತ್ಯ ಭೂಮಂಡಲದಲ್ಲಿ ಸರಾಸರಿ ನೂರೈವತ್ತು ಜೀವಿಗಳನ್ನು ಕಳೆದುಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿ ರೆಡ್ ನಾಟ್ ಹಕ್ಕಿಗಳ ದುರಂತದ ಕಥೆ ಸಮಾಜಕ್ಕೆ ಗಂಭೀರವಾದ ವಿಚಾರವಾಗುವುದಿಲ್ಲ. ಈ ಭೂಮಿಯ ಪ್ರಾಮುಖ್ಯತೆಯನ್ನಾಗಲಿ, ರಚನೆಯ ಸಂಕೀರ್ಣತೆಯನ್ನಾಗಲಿ ಅರ್ಥ ಮಾಡಿಕೊಳ್ಳುವ ವ್ಯವಧಾನ, ಕುತೂಹಲ ಈ ಸಮಾಜಕ್ಕಿಲ್ಲವೆನಿಸುತ್ತಿದೆ. ಹಾಗಾಗಿ ಉಳಿದ ಜೀವಿಗಳ ನೋವಿನ ಧ್ವನಿ ಸಮಾಜಕ್ಕೆ ಕೇಳುತ್ತಿಲ್ಲ.

ಸಂಪತ್ತು, ಅಂತಸ್ತು, ಅಧಿಕಾರ ಮೂಲ ಧ್ಯೇಯವಾದಾಗ ಬದುಕಿನ ಅರ್ಥ ಸೀಮಿತವಾಗುತ್ತದೆ. ಸೂಕ್ಷ್ಮಗಳು ಮಾಯವಾಗಿ ಮೌಲ್ಯಗಳು ಅಪರಿಚಿತ ವಸ್ತುಗಳಾಗಿ ಉಳಿದುಬಿಡುತ್ತವೆ.

ನಮ್ಮನ್ನು ನಾವು ‘ಹೋಮೊ ಸೇಪಿಯನ್’, ಎಂದರೆ ಚಿಂತಿಸುವ ಸಾಮರ್ಥ್ಯವಿರುವ ಬುದ್ಧಿವಂತ ಜೀವಿಯೆಂದು ಕರೆದುಕೊಳ್ಳುತ್ತೇವೆ. ಈ ಹಣೆಪಟ್ಟಿಯಿರುವ ನಾವು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಸಮಯ ಈಗ ನಮ್ಮ ಮುಂದಿದೆ.

ನಾವು ಎಲ್ಲಿಂದ ಬಂದೆವು?

ನಾವು ಎಲ್ಲಿಗೆ ಹೋಗುತ್ತೇವೆ?

ಈ ಪ್ರಶ್ನೆಗಳಿಗೆ ದಾರ್ಶನಿಕರು, ಧರ್ಮಗುರುಗಳು, ತತ್ವವಿಜ್ಞಾನಿಗಳು ಚರಿತ್ರೆಯುದ್ದಕ್ಕೂ ವಿವಿಧ ವ್ಯಾಖ್ಯಾನಗಳಿಂದ ಉತ್ತರಿಸಲು ಯತ್ನಿಸಿದ್ದಾರೆ.

ಇದೇ ಪ್ರಶ್ನೆಗಳನ್ನು ಜೀವ ವಿಜ್ಞಾನಿಗಳಿಗೆ ಕೇಳಿದರೆ ‘ಮನುಷ್ಯ ಕಾಣದ ನಕ್ಷತ್ರ ಪುಂಜಗಳಿಂದಾಗಲಿ ಅಥವಾ ಮಂಗಳ ಗ್ರಹದಿಂದಾಗಲಿ ಅಥವಾ ಅಗೋಚರ ಶಕ್ತಿಗಳ ಕೃಪೆಯಿಂದಾಗಲಿ ಇಲ್ಲಿ ಅವತರಿಸಿಲ್ಲ. ಈ ಭೂಮಿಯ ಸಕಲ ಜೀವಿಗಳನ್ನು ಹುಟ್ಟುಹಾಕಿದ ಸಂಕೀರ್ಣ ನೈಸರ್ಗಿಕ ಪ್ರಕ್ರಿಯೆಗಳು ಮನುಷ್ಯನನ್ನು ಕೂಡ ರೂಪಿಸಿವೆ. ಭೂಮಿ ಮತ್ತದರ ಇತರೆ ಜೀವಿಗಳನ್ನು ರೂಪಿಸಿದ ಮೂಲ ಧಾತುಗಳಿಂದಲೇ ರೂಪುಗೊಂಡು, ಇಲ್ಲಿಯೇ ವಿಕಸಿಸಿ ಮಾನವ ರೂಪುಗೊಂಡಿದ್ದಾನೆ. ತನ್ನ ಜೀವಿತಾವಧಿಯನ್ನು ಮುಗಿಸಿದ ಬಳಿಕ ಮತ್ತೆ ಭೂಮಿಯ ಮೂಲ ಧಾತುಗಳಲ್ಲಿ ಒಂದಾಗುತ್ತಾನೆ’ ಎಂದು ಹೇಳಬಹುದು.

ಹಾಗೆಯೇ, ಬಹಳಷ್ಟು ಮಂದಿ, ಜೀವಪರಿಸರವನ್ನು ಸರಳವಾಗಿ ತಿಳಿಸಲು, ಜಿಂಕೆಗಳು ಬದುಕಲು ಹುಲ್ಲುಗಾವಲುಗಳನ್ನು ಅವಲಂಬಿಸಿದ್ದರೆ, ಜಿಂಕೆಗಳನ್ನು ಹುಲಿಗಳು ಅವಲಂಬಿಸಿವೆ ಎಂದು ಉದಾಹರಣೆ ನೀಡುತ್ತಾರೆ. ಇದು ಜೀವಿ ಜೀವಿಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ಮನದಟ್ಟು ಮಾಡುವ ಸರಳ ಪ್ರಯತ್ನ ಮಾತ್ರ.

ಆದರೆ ಇದೇ ತರ್ಕದ ಅಂತರಾಳದಲ್ಲೆಲ್ಲೋ ಒಂದು ಕಡೆ, ಜೀವಪರಿಸರದ ಸಂಬಂಧಗಳಿಂದ ಮನುಷ್ಯ ಹೊರಗುಳಿಯುವ ಆಲೋಚನಾ ಕ್ರಮ ಕೂಡ ಕಂಡುಬರುತ್ತದೆ. ಉಳಿದೆಲ್ಲ ಜೀವಿಗಳಿಗಿಂತ ತಾನು ಮಿಗಿಲೆಂದು, ಭೂಮಿಯ ಜೀವಪರಿಸರಕ್ಕೂ ತನಗೂ ಯಾವ ಸಂಬಂಧವೂ ಇಲ್ಲವೆಂದು ತರ್ಕಿಸುತ್ತಾ ದೂರ ಸರಿದು ನಿಲ್ಲಲು ಯತ್ನಿಸುತ್ತಾನೆ.

ಬಹುಶಃ ಇದೇ ತರ್ಕ ಅವನ ಸ್ವಭಾವವನ್ನು ರೂಪಿಸಿರಬಹುದು. ಯಾವುದೋ ಅಜ್ಞಾತ ಲೋಕದಿಂದ ಧರೆಗಿಳಿದು ಬಂದಿರಬಹುದೆಂಬಂತೆ ಭೂಮಿಯ ಸಂಪನ್ಮೂಲಗಳನ್ನೆಲ್ಲ ದೋಚಿ, ದರೋಡೆ ಮಾಡಿ ಬೇರೆಲ್ಲಿಗೋ ಕೊಂಡೊಯ್ಯಬಹುದೆಂಬ ಮನಸ್ಥಿತಿ ಆತನಲ್ಲಿ ರೂಪುಗೊಂಡಿರಬಹುದು.

ಈಚೆಗೆ ಭೂಮಿ ತನಗೆ ಜ್ವರ ಬಂದಿರುವ ಲಕ್ಷಣಗಳನ್ನು ತೋರುತ್ತಿದೆ – ನಾನಾ ರೀತಿಯಲ್ಲಿ, ನಾನಾ ವಿಧಾನಗಳಲ್ಲಿ. ರೆಡ್ ನಾಟ್ ಹಕ್ಕಿ ಸಂಕುಲ ವಿನಾಶದೆಡೆಗೆ ಸಾಗುತ್ತಿರುವುದು, ಡೈನೊಸಾರಸ್ ಕಾಲದಿಂದ ನಡೆದು ಬಂದಿದ್ದ ಹಾರ್ಸ್ ಶೂ ಏಡಿಗಳ ಮಹಾಮೇಳ ಅಸ್ತವ್ಯಸ್ತಗೊಂಡಿರುವುದು ಇವೆಲ್ಲವೂ ಭೂಮಿಗೆ ಬಂದಿರುವ ಜ್ವರದ ಕೆಲವು ಲಕ್ಷಣಗಳಷ್ಟೆ.

ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ವಿಷಯವೊಂದಿದೆ. ಭೂಮಿಯಲ್ಲಿರುವ ಉಳಿದ ಜೀವಿಗಳು ಎದುರಿಸುತ್ತಿರುವ ನೋವು, ಸಂಕಟ, ದುಃಖ ಎಲ್ಲವೂ ನಮ್ಮ ನಾಳೆಯ ಮಕ್ಕಳಿಗೆ ಶಾಪವಾಗಿ ತಟ್ಟಲಿದೆ. ಏಕೆಂದರೆ ನಾವು ಉಸಿರಾಡುತ್ತಿರುವುದು ಇದೇ ಗಾಳಿಯನ್ನು, ನಾವು ಕುಡಿಯುತ್ತಿರುವುದು ಇದೇ ನೀರನ್ನು.

ಅಲ್ಲದೆ ಈ ಭೂಮಿ ಮನುಕುಲದಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಸಾವಿರಾರು ಜೀವಿಗಳು ಆಗಮಿಸಿ, ವಿಕಸಿಸಿ, ಕಣ್ಮರೆಯಾದ ಅನೇಕಾನೇಕ ಘಟನಾವಳಿಗಳನ್ನು ಭೂಮಿ ತನ್ನ ಜೀವಿತಾವಧಿಯಲ್ಲಿ ಕಂಡಿದೆ. ಅಂತಹ ಜೀವಿಗಳ ಪಟ್ಟಿಯಲ್ಲಿ ಮನುಷ್ಯ ಮತ್ತೊಂದು ಜೀವಿಮಾತ್ರ.

ಈ ಜೀವ ಮಂಡಲದ ಸಮುಚ್ಚಯಕ್ಕೆ ಮನುಷ್ಯ ಆಗಮಿಸಿದ್ದು ಇತ್ತೀಚೆಗಷ್ಟೆ. ತನ್ನ ಅತಿ ಬುದ್ಧಿವಂತಿಕೆ, ದುರಾಸೆಗಳಿಂದ ಮುಂದೊಂದು ದಿನ ತಾನು ಬದುಕಿ ಬಾಳಿದ ಭೂಮಿಯನ್ನೇ ಹಾಳುಗೆಡವಿ ತನ್ನ ಕಂದಕಗಳನ್ನು ತಾನೆ ತೋಡಿಕೊಂಡು ನಾಶವಾಗಬಹುದು. ಅದು ಭೂಮಿಗೂ ತಿಳಿದಿದೆ. ಆತನಿಗಾಗಿಯಾಗಲಿ, ತನಗಾಗಿಯಾಗಲಿ, ಭೂಮಿ ಎಂದೂ ಮರುಗುವುದಿಲ್ಲ. ದುಃಖಿಸುವುದಿಲ್ಲ.

ಭೂವಿಜ್ಞಾನದ ಸ್ಥಿತ್ಯಂತರಗಳ ಅವಧಿಯಲ್ಲಿ ಭೂಮಿ ಮತ್ತೆ ಚಿಗುರುತ್ತದೆ, ಪುನಃಶ್ಚೇತನಗೊಳ್ಳುತ್ತದೆ. ಹೊಸ ಜೀವ ಪ್ರಬೇಧಗಳೊಂದಿಗೆ ಅದರ ಬದುಕು ಮುಂದುವರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.