ಆಯುಷ್ಮಾನ್ ಭಾರತ್ ಆರೊಗ್ಯ ಯೋಜನೆ ಇಂದಿನಿಂದ ವಿಸ್ತೃತ ರೂಪ ಪಡೆಯಲಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಪ್ರಜೆಗಳಿಗೂ ಎಬಿ–ಪಿಎಂಜೆಎವೈ ಅಡಿ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆಯಿಂದ ದೇಶದ ಎಲ್ಲ ಜಾತಿ ಸಮುದಾಯಗಳ, ಎಲ್ಲ ಆರ್ಥಿಕ ವರ್ಗಗಳ ಹಿರಿಯ ನಾಗರಿಕರೂ ಪ್ರಯೋಜನ ಪಡೆಯಬಹುದಾಗಿದೆ. ಆದರೆ, ಇದುವರೆಗೆ ಈ ಯೋಜನೆ ಅನುಷ್ಠಾನದ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದವು. ಹೊಸ ರೂಪ ಪಡೆದುಕೊಂಡಿರುವ ಯೋಜನೆ ದೇಶದ ಎಲ್ಲ ಹಿರಿಯ ನಾಗರಿಕರನ್ನೂ ಒಳಗೊಂಡಂತೆ ಹೆಚ್ಚು ಜನರನ್ನು ತಲುಪುವ ಗುರಿಯನ್ನು ಹೊಂದಿದೆ...

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ–ಪಿಎಂಜೆಎವೈ) ಮಂಗಳವಾರ ಹೊಸ ರೂಪದಲ್ಲಿ ಅನುಷ್ಠಾನಕ್ಕೆ ಬರಲಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಯೋಜನೆ ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. 70 ಮತ್ತು ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯನ್ನು ಒದಗಿಸಲಿದೆ.

ದೇಶದ ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ 2018ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಆಯುಷ್ಮಾನ್ ಭಾರತ್ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸುತ್ತಿದೆ. ಮೊದಲನೆಯದ್ದು, ಆಯುಷ್ಮಾನ್ ಆರೋಗ್ಯ ಮಂದಿರ. ಎರಡನೆಯದ್ದು, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ–ಪಿಎಂಜೆಎವೈ).

ಈ ಯೋಜನೆಯ ಅಡಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಅಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದ ಚಿಕಿತ್ಸೆಗಳನ್ನು ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದಾಗಿತ್ತು. ಪರಿಷ್ಕೃತ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ₹5 ಲಕ್ಷದವರೆಗಿನ ವಿಮಾ ಸೌಲಭ್ಯ ಹಾಗೆಯೇ ಇರಲಿದೆ. ಹೆಚ್ಚುವರಿಯಾಗಿ ಆದಾಯದ ಇತಿ ಮಿತಿಗಳಿಲ್ಲದೆ, 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ವಾರ್ಷಿಕ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಸಿಗಲಿದೆ.

ಹಲವು ಬಾರಿ ವಿಸ್ತರಣೆ: 2018ರಲ್ಲಿ ಯೋಜನೆ ಆರಂಭಿಸಿದ ನಂತರ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಹಲವು ಬಾರಿ ಇದನ್ನು ವಿಸ್ತರಣೆ ಮಾಡಲಾಗಿದೆ. ಆರಂಭದಲ್ಲಿ ಯೋಜನೆ ಅಡಿ 10.74 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದರು. ಜನವರಿ 2022ರಂದು ಕೇಂದ್ರ ಸರ್ಕಾರವು ದೇಶದ ಜನಸಂಖ್ಯಾ ವೃದ್ಧಿಗೆ ತಕ್ಕಂತೆ 12 ಕೋಟಿ ಕುಟುಂಬಗಳಿಗೆ ಯೋಜನೆಯನ್ನು ವಿಸ್ತರಿಸಿತು. ನಂತರ ಸಾಮಾಜಿಕ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕಿಯರು ಹಾಗೂ ಅವರ ಕುಟುಂಬಗಳನ್ನೂ ಯೋಜನೆಯ ವ್ಯಾಪ್ತಿಗೆ ತರಲಾಯಿತು. ಇದೀಗ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರನ್ನೂ ಯೋಜನೆಯ ವ್ಯಾಪ್ತಿಗೆ ತರಲು ಕೇಂದ್ರವು ಕ್ರಮ ಕೈಗೊಂಡಿದೆ.

ಫಲಾನುಭವಿಗಳು ತಮ್ಮ ತವರು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಯಾವುದೇ ಭಾಗದಲ್ಲಿಯೂ ಚಿಕಿತ್ಸೆ ಪಡೆಯಬಹುದು.

ಎಬಿಪಿಎಂಜೆಎವೈ ಜಾರಿಯಲ್ಲಿ ಕೇಂದ್ರದ ಪಾಲು ಶೇ 60ರಷ್ಟಿದ್ದರೆ, ರಾಜ್ಯಗಳ ಪಾಲು ಶೇ 40 ಎಂದು ನಿರ್ಧರಿಸಲಾಗಿತ್ತು. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ರಾಜ್ಯದ ಆರೋಗ್ಯ ಸೇವಾ ಯೋಜನೆಗಳ ಜತೆಗೆ ಎಬಿಪಿಎಂಜೆಎವೈ ಅನ್ನು ವಿಲೀನಗೊಳಿಸಲಾಗಿತ್ತು. ಕರ್ನಾಟಕದಲ್ಲಿ 'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.

ಯೋಜನೆಯ ಅಡಿಯಲ್ಲಿ ರಾಜ್ಯದ 1.15 ಕೋಟಿ (ಬಿಪಿಎಲ್) ಕುಟುಂಬಗಳ ಪೈಕಿ 62 ಲಕ್ಷ ಕುಟುಂಬಗಳಿಗೆ ಮಾತ್ರ ಕೇಂದ್ರ ಸರ್ಕಾರವು ಶೇ 60ರಷ್ಟು, ರಾಜ್ಯ ಸರ್ಕಾರವು ಶೇ 40ರಷ್ಟು ಅನುದಾನ ಭರಿಸುತ್ತದೆ.ಇನ್ನುಳಿದ 53 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ಶೇ 100ರಷ್ಟು ವೆಚ್ಚ ಭರಿಸುತ್ತದೆ. ಸಾಮಾನ್ಯ ವರ್ಗದ 19 ಲಕ್ಷ ಕುಟುಂಬಗಳಿಗೂ ರಾಜ್ಯ ಸರ್ಕಾರವೇ ಶೇ 100ರಷ್ಟು ವೆಚ್ಚ ಭರಿಸುತ್ತದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿತ್ತು.

ಎಎಪಿ ಆಡಳಿತ ನಡೆಸುತ್ತಿದ್ದ ದೆಹಲಿ, ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳ ಮತ್ತು ಬಿಜೆಡಿ ಆಡಳಿತವಿದ್ದ ಒಡಿಶಾ ರಾಜ್ಯಗಳು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿರಲಿಲ್ಲ. ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಹಲವು ಬಾರಿ ಒತ್ತಡ ಹೇರಿದ್ದರೂ ಅವು ಮಣಿದಿರಲಿಲ್ಲ. ಒಡಿಶಾದಲ್ಲಿ ಬಿಜೆಡಿ ಸರ್ಕಾರ ಪತನಗೊಂದು, ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಯೋಜನೆ ಜಾರಿಗೆ ನಿರ್ಧರಿಸಿದ್ದು, ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

ಆದರೆ, ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ, ವಿಪರೀತ ನಿಯಮಗಳಿಂದಾಗಿ ನೋಂದಣಿಯಾಗಲು ಇಚ್ಛಿಸುವ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ, ಯೋಜನೆಗೆ ಅಗತ್ಯವಾದ ಹಣಕಾಸು ನೆರವನ್ನು ಕೇಂದ್ರ ಸರ್ಕಾರ ಒದಗಿಸಿಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು. ಯೋಜನೆಯ ಅಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಯ ಶುಲ್ಕದ ಮೊತ್ತ ಪಾವತಿಸುವಲ್ಲಿ ವಿಳಂಬವಾಗುತ್ತಿದೆ ಎನ್ನುವ ದೂರುಗಳು ಸಾಮಾನ್ಯವಾಗಿದ್ದವು.

ಹೊಸ ಯೋಜನೆಯ ವಿವರ

* 70 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ನಾಗರಿಕರಿಗೂ (ಆದಾಯ ಎಷ್ಟೇ ಇದ್ದರೂ) ವಿಮಾ ಸೌಲಭ್ಯ

* ದೇಶದ 4.60 ಕೋಟಿ ಕುಟುಂಬಗಳು ಮತ್ತು 6 ಕೋಟಿ ಹಿರಿಯ ನಾಗರಿಕರಿಗೆ ಪ್ರಯೋಜನ

* ಪ್ರತಿ ಕುಟುಂಬಕ್ಕೆ ವಾರ್ಷಿಕ ₹5 ಲಕ್ಷದವರೆಗೆ ವಿಮಾ ಸೌಲಭ್ಯ

* ಈ ಯೋಜನೆಯ ಅಡಿಯಲ್ಲಿ ಬರುವ ಕುಟುಂಬಗಳಲ್ಲಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಿಗೆ ಹೆಚ್ಚುವರಿಯಾಗಿ (ಟಾಪ್ ಅಪ್) ₹5 ಲಕ್ಷದವರೆಗೆ ವಿಮಾ ಸೌಲಭ್ಯ. ಇದು ಅವರಿಗಷ್ಟೇ ಮೀಸಲು. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಟುಂಬದ ಬೇರೆ ಸದಸ್ಯರೊಂದಿಗೆ ಹಂಚಿಕೊಳ್ಳುವಂತಿಲ್ಲ

* 70 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಹೊಸ ಯೋಜನೆಯ ಅಡಿಯಲ್ಲಿ ಹೊಸ ಆರೋಗ್ಯ ಕಾರ್ಡ್ ಪಡೆಯಲಿದ್ದಾರೆ.

* ಆಯ್ಕೆಗೆ ಅವಕಾಶ: ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳಾದ ಕೇಂದ್ರ ಸರ್ಕಾರ ಆರೋಗ್ಯ ಯೋಜನೆ (ಸಿಜಿಎಚ್ಎಸ್), ನಿವೃತ್ತ ಸೈನಿಕರ ಚಂದಾ ಆರೋಗ್ಯ ಯೋಜನೆ (ಇಸಿಎಚ್ಎಸ್) ಅಥವಾ ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಯೋಜನೆಗಳ ಫಲಾನುಭವಿಗಳು ಈ ಯೋಜನೆಗಳಲ್ಲಿಯೇ ಮುಂದುವರಿಯಬಹುದು ಅಥವಾ ಎಬಿ–ಪಿಎಂ–ಜೆಎವೈ ಅನ್ನು ಆಯ್ಕೆ ಮಾಡಿಕೊಳ್ಳಬಹುದು

* ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ನೌಕರರ ರಾಜ್ಯ ವಿಮಾ ಯೋಜನೆಗಳ ಫಲಾನುಭವಿಗಳು ಕೂಡ ಎಬಿ–ಪಿಎಂ–ಜೆಎವೈ ಲಾಭ ಪಡೆಯಲು ಅರ್ಹರು

ಅನುಷ್ಠಾನದಲ್ಲಿ ಹಲವು ಕೊರತೆ

l ಆಯುಷ್ಮಾನ್ ಭಾರತ್ ಯೋಜನೆಯು ದೇಶದಾದ್ಯಂತ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ

l 2023ರ ಮಹಾಲೇಖಪಾಲರ (ಸಿಎಜಿ) ವರದಿಯು ಈ ಯೋಜನೆಯಲ್ಲಿನ ಲೋಪಗಳ ಬಗ್ಗೆ ಬೊಟ್ಟು ಮಾಡಿತ್ತು. ‘ಅರ್ಹ ಫಲಾನುಭವಿಗಳು ಯೋಜನೆ ವ್ಯಾಪ್ತಿಯಿಂದ ಹೊರಗಿದ್ದಾರೆ. ಫಲಾನುಭವಿಗಳ ದತ್ತಾಂಶಗಳಲ್ಲಿ ದೋಷ ಇದೆ. ಫಲಾನುಭವಿಗಳಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ವಿಮಾ ಮೊತ್ತ ಪಾವತಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ’ ಎಂದು ಯೋಜನೆಯ ಜಾರಿಯಲ್ಲಿನ ಕೊರತೆಗಳ
ಬಗ್ಗೆ ವರದಿ ಪ್ರಸ್ತಾಪಿಸಿತ್ತು

l ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಈ ಯೋಜನೆ ಅಡಿಯಲ್ಲಿ ಅವಕಾಶ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ, ವೈದ್ಯಾಧಿಕಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಿಖಿತವಾಗಿ ಶಿಫಾರಸು ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ₹5 ಲಕ್ಷ ವೆಚ್ಚದವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಸರ್ಕಾರಿ ವೈದ್ಯರ ಶಿಫಾರಸು ಪತ್ರ ಇಲ್ಲದೇ ದಾಖಲಾದವರು ಆಯುಷ್ಮಾನ್ ಕಾರ್ಡ್ ಇದ್ದರೂ, ಚಿಕಿತ್ಸೆಗಾಗಿ ಕೈಯಿಂದ ದುಡ್ಡು ತೆರಬೇಕು (ಕರ್ನಾಟಕ ಸರ್ಕಾರವು ಈ ಶಿಫಾರಸು ಪದ್ಧತಿಯನ್ನು ಕೈಬಿಡುವ ಬಗ್ಗೆ ಚಿಂತನೆ ನಡೆಸಿದೆ)

l ಖಾಸಗಿ ಆಸ್ಪತ್ರೆಗಳು ಯೋಜನೆಯ ಫಲಾನುಭವಿಗಳಿಂದ ಹಣ ವಸೂಲು ಮಾಡುವ ಆರೋಪವೂ ಇದೆ

l ಮುಖ್ಯವಾಗಿ ಈ ಯೋಜನೆ ಒಳರೋಗಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನರು
ದೊಡ್ಡ ಸಂಖ್ಯೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೂ ಈ ವಿಮಾ ಯೋಜನೆ ಅನ್ವಯವಾಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ

ಅರ್ಜಿ ಸಲ್ಲಿಸುವುದು ಹೇಗೆ?

ಈವರೆಗೂ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಅನುಸರಿಸಲಾಗುತ್ತಿದ್ದ ವಿಧಾನವೇ ಪರಿಷ್ಕೃತ ಯೋಜನೆಗೂ ಅನ್ವಯವಾಗಲಿದೆ. ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಅರ್ಜಿದಾರರು ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ಗಳನ್ನು ಹೊಂದಿದ್ದರೆ ಸಾಕು ಎಂದು ಹೇಳುತ್ತಾರೆ ಅಧಿಕಾರಿಗಳು.

ಆಧಾರ: ಪಿಟಿಐ, ಪಿಐಬಿ, ಆಯುಷ್ಮಾನ್ ಭಾರತ್ ವೆಬ್ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.