ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ ವಿದ್ಯಮಾನ | ಬಾಂಗ್ಲಾ ದೇಶ: ಚರಿತ್ರೆ ಸೃಷ್ಟಿಸಿದ ವಿದ್ಯಾರ್ಥಿ ದಂಗೆ

Published : 5 ಆಗಸ್ಟ್ 2024, 23:32 IST
Last Updated : 5 ಆಗಸ್ಟ್ 2024, 23:32 IST
ಫಾಲೋ ಮಾಡಿ
Comments
ಹಲವು ಸೇನಾ ಕ್ರಾಂತಿ‌ಗಳ ಕಾರಣಕ್ಕೆ ಅಸ್ಥಿರವಾಗಿದ್ದ ಬಾಂಗ್ಲಾ ದೇಶದ ರಾಜಕಾರಣ ಮತ್ತು ಆಡಳಿತಕ್ಕೆ ಸ್ಥಿರತೆ ನೀಡಿದ್ದ ಶೇಖ್‌ ಹಸೀನಾ ನೇತೃತ್ವದ ಸರ್ಕಾರವು ಜನರೇ, ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳೇ ಮುನ್ನಡೆಸಿದ್ದ ದಂಗೆಯಿಂದಾಗಿ ಪತನವಾಗಿದೆ. ಸತತ ನಾಲ್ಕನೇ ಬಾರಿ ಅಧಿಕಾರಕ್ಕೆ ಏರಿದ್ದ ಹಸೀನಾ ದೇಶ ತೊರೆದಿದ್ದಾರೆ. ಮೀಸಲಾತಿ ವಿಚಾರವನ್ನು ಇಟ್ಟುಕೊಂಡು ಎರಡು ತಿಂಗಳ ಹಿಂದೆ ರೂಪುಗೊಂಡ ಚಳವಳಿ, ಬಾಂಗ್ಲಾ ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಿದೆ. ಶ್ರೀಲಂಕಾದಲ್ಲಿ ಆದಂತೆ, ಜನರೇ ಸರ್ಕಾರವನ್ನು ಉರುಳಿಸಿದ್ದಾರೆ

‘ಅಂತಿಮ ಹೋರಾಟದ ಗಳಿಗೆ ಹತ್ತಿರವಾಗಿದೆ. ವಿದ್ಯಾರ್ಥಿ ದಂಗೆಗೆ ಅಂತಿಮ ಸಹಿ ಹಾಕುವ ಕಾಲ ಬಂದಿದೆ. ಚರಿತ್ರೆಯ ಭಾಗವಾಗಲು ಢಾಕಾಕ್ಕೆ ಬನ್ನಿ. ವಿದ್ಯಾರ್ಥಿಗಳು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ...’

–ಹೀಗೆ ಕರೆ ಕೊಟ್ಟಿದ್ದು ‘ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ’ಯ ಸಂಚಾಲಕ ಆಸಿಫ್ ಮಹಮ್ಮದ್. ಅವರು ಹೇಳಿದಂತೆಯೇ ಸೋಮವಾರ ಬಾಂಗ್ಲಾದೇಶದಲ್ಲಿ ಇತಿಹಾಸ ನಿರ್ಮಾಣವಾಗಿದೆ. 2024ರ ಜನವರಿಯಲ್ಲಿ ಸತತ ನಾಲ್ಕನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದಿದ್ದಾರೆ. ಬಾಂಗ್ಲಾದ ರಾಜಕೀಯ ಇತಿಹಾಸದಲ್ಲಿ ಮಹತ್ವದ ವಿದ್ಯಮಾನವೊಂದು ಘಟಿಸಿದೆ.

ಜನವರಿಯಲ್ಲಿ ಪ್ರಧಾನಿಯಾಗಿ ಆಯ್ಕೆಯಾದಾಗಲೇ ಹಸೀನಾ ವಿರುದ್ಧ ಆರೋಪಗಳು ಬಂದಿದ್ದವು. ಚುನಾವಣೆ ಮುಕ್ತವಾಗಿ, ನ್ಯಾಯಸಮ್ಮತವಾಗಿ ನಡೆಯುವುದೇ ಎಂದು ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು.  ಕೆಲವು ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಮುಖಂಡರನ್ನು ಬಂಧಿಸಲಾಗಿತ್ತು. ಬಹುತೇಕ ಕ್ಷೇತ್ರಗಳಲ್ಲಿ ಹಸೀನಾ ಅವರ ಪಕ್ಷ ಅವಾಮಿ ಲೀಗ್‌ಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಚುನಾವಣೆಯಲ್ಲಿ ಶೇ 40ರಷ್ಟು ಮಾತ್ರ ಮತದಾನವಾಗಿತ್ತು. ಹಸೀನಾ ಪಕ್ಷ ಮೂರನೇ ಎರಡರಷ್ಟು ಬಹುಮತ ಪಡೆದಿತ್ತು.

ಹಸೀನಾ ಅವರ ಅಧಿಕಾರ ಅಬಾಧಿತ ಎಂದೇ ಎಲ್ಲರೂ ಭಾವಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ದೇಶ ಹಲವು ವಲಯಗಳಲ್ಲಿ ಅಭಿವೃದ್ಧಿ ಸಾಧಿಸಿತ್ತು. ಆರ್ಥಿಕವಾಗಿಯೂ ಮುಂದುವರಿದ ದೇಶವಾಗುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿತ್ತು. ಅದೇ ಹೊತ್ತಿಗೆ, ದೇಶದಲ್ಲಿ ಎಲ್ಲ ವಲಯಗಳ ಮೇಲೂ ಅವರ ಹಿಡಿತ ಪ್ರಬಲವಾಗಿತ್ತು. ಈ ಕಾರಣಕ್ಕೆ ಒಂದು ವರ್ಗದ ಜನರಲ್ಲಿ ಹಸೀನಾ ಅಧಿಕಾರದ ವಿರುದ್ಧದ ಅಸಮಾಧಾನ ತೀವ್ರವಾಗಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಅದಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟಿದ್ದು ವಿದ್ಯಾರ್ಥಿಗಳ ದಂಗೆ.

ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ‘ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ’ ರೂಪಿಸಿದರು. ಸರ್ಕಾರ ಹಾಗೂ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾದ ಛಾತ್ರಾ ಲೀಗ್‌ನಂಥ ಸಂಘಟನೆಗಳ ಸದಸ್ಯರು ಮೀಸಲಾತಿ ವಿರೋಧಿ ಹೋರಾಟದ ದಮನಕ್ಕೆ ಮುಂದಾದರು. ಅದರಿಂದ ವಿದ್ಯಾರ್ಥಿ ಹೋರಾಟ ಮತ್ತಷ್ಟು ತೀವ್ರಗೊಂಡಿತು. 

ಜುಲೈ 16ರಂದು ಪ್ರತಿಭಟನೆನಿರತ ವಿದ್ಯಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿ ಮತ್ತು ಸರ್ಕಾರದ ಪರವಾದ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಿತ್ತು. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಕಂಡಲ್ಲಿ ಗುಂಡು ಆದೇಶ ನೀಡಿ ಕರ್ಫ್ಯೂ ಜಾರಿಗೊಳಿಸಿದ್ದರು. ಇಂಟರ್‌ನೆಟ್ ಮತ್ತು ಮೊಬೈಲ್ ಡೇಟಾ ಅನ್ನು ಕಡಿತಗೊಳಿಸಲಾಗಿತ್ತು. ಹೀಗೆ ಪ್ರತಿಭಟನೆ ಹಿಂಸಾರೂಪ ತಳೆಯಿತು. ಅದನ್ನು ದಮನ ಮಾಡಲು ಹಸೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿತು.

ಹಿಂಸಾಚಾರಕ್ಕೆ ಸಂಬಂಧಿಸಿ 11 ಸಾವಿರ ಜನರನ್ನು ಸರ್ಕಾರ ಬಂಧಿಸಿತ್ತು. ಜಮಾತ್-ಎ-ಇಸ್ಲಾಮಿ ಸಂಘಟನೆ ಮತ್ತು ಅದರ ವಿದ್ಯಾರ್ಥಿ ವಿಭಾಗವಾದ ಇಸ್ಲಾಮಿ ಛಾತ್ರಾ ಶಿಬಿರ್ ಅನ್ನು ಬಾಂಗ್ಲಾದ ಭಯೋತ್ಪಾದನಾ ನಿಗ್ರಹ ಕಾಯ್ದೆಯ ಅಡಿ ಆಗಸ್ಟ್ 1ರಂದು ನಿಷೇಧ ಮಾಡಲಾಗಿತ್ತು. ಈ ಸಂಘರ್ಷದಲ್ಲಿ 300ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದ್ದರು.    

ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಹಿಂಪ‍ಡೆಯುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ಅದಕ್ಕೆ ಸರ್ಕಾರ ಸಮ್ಮತಿಸಿತು. ಅಲ್ಲಿಗೆ ಪ್ರತಿಭಟನೆ ನಿಲ್ಲಬಹುದು ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ, ಹಿಂಸಾಚಾರಕ್ಕೆ ಹಾಗೂ ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ತಮ್ಮ ಜತೆಗೆ ಸಮಾಜದ ಎಲ್ಲ ವರ್ಗದವರನ್ನೂ ಸೇರಿಸಿಕೊಂಡು, ಪ್ರತಿಭಟನೆಯನ್ನು ಮತ್ತಷ್ಟು ವಿಸ್ತರಿಸಿದರು. ವಿರೋಧ ಪಕ್ಷಗಳೂ ಅವರ ಜತೆಗೂಡಿದವು. ಮೀಸಲಾತಿ ವಿರೋಧಿ ವಿದ್ಯಾರ್ಥಿ ದಂಗೆಯು ಸರ್ಕಾರ ವಿರೋಧಿ ಜನರ ದಂಗೆಯಾಗಿ ಪರಿವರ್ತನೆಗೊಂಡಿತು. 

1971ರಲ್ಲಿ ಪ್ರತ್ಯೇಕ ರಾಷ್ಟ್ರವಾದ ಬಳಿಕ ಹಲವು ಸೇನಾ ಕ್ರಾಂತಿಗಳಿಗೆ ಸಾಕ್ಷಿಯಾಗಿದ್ದ ಬಾಂಗ್ಲಾದೇಶದಲ್ಲಿ ಜನರ ದಂಗೆಗೆ ಪ್ರಧಾನಿ ದೇಶ ತೊರೆದಿರುವುದು, ಸರ್ಕಾರ ಪತನವಾಗಿರುವುದು ಇದೇ ಮೊದಲು.  

ಆಧಾರ: ಪಿಟಿಐ, ಬಿಬಿಸಿ, ರಾಯಿಟರ್ಸ್‌

ಪ್ರತಿಭಟನಕಾರರನ್ನು ಕೆರಳಿಸಿದ್ದ ಹಸೀನಾ ಹೇಳಿಕೆ
ಮೀಸಲಾತಿ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಶೇಖ್‌ ಹಸೀನಾ ಅವರು ನೀಡಿದ್ದ ಹೇಳಿಕೆ ಪ್ರತಿಭಟನಕಾರರನ್ನು ಕೆರಳಿಸಿತ್ತು. l ಭಾನುವಾರ (ಆ.4) ಮತ್ತೆ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ, ‘ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿಲ್ಲ. ದೇಶವನ್ನು ಅಸ್ಥಿರಗೊಳಿಸಲು ಭಯೋತ್ಪಾದಕರು ಬೀದಿಗೆ ಇಳಿದಿದ್ದಾರೆ’ ಎಂದು ಹಸೀನಾ ಹೇಳಿದ್ದರು.

ದಂಗೆಯಾದ ಆಕ್ರೋಶ

  •  1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಸಂಘರ್ಷದ ಮೂಲ.

  •  1972ರಲ್ಲಿ ಜಾರಿಗೆ ಬಂದ ಈ ಮೀಸಲಾತಿ ವ್ಯವಸ್ಥೆ 2018ರವರೆಗೂ ಜಾರಿಯಲ್ಲಿತ್ತು. ಆ ವರ್ಷ ಕೆಲವು ತಿಂಗಳ ಮಟ್ಟಿಗೆ ಈ ವ್ಯವಸ್ಥೆಯನ್ನು ರದ್ದುಪಡಿಸಲಾಗಿತ್ತು. ಆ ಬಳಿಕ ಮತ್ತೆ ಜಾರಿಗೆ ತರಲಾಗಿತ್ತು.

  • ಈ ಮೀಸಲಾತಿ ವ್ಯವಸ್ಥೆ ತಾರತಮ್ಯ ಮಾಡುತ್ತದೆ ಮತ್ತು ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಿದೆ ಎಂಬುದು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಯುವಜನರ ಪ್ರಮುಖ ಆರೋಪವಾಗಿತ್ತು.

  • ಈ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಿ ಪ್ರತಿಭೆ ಆಧಾರದಲ್ಲಿ ಸರ್ಕಾರಿ ಉದ್ಯೋಗ ಕೊಡಬೇಕು ಎಂಬುದು ಯುವಜನರ ಆಗ್ರಹವಾಗಿತ್ತು.

  • ಬಾಂಗ್ಲಾದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಖಾಸಗಿ ಕಂಪನಿಗಳಲ್ಲಿ ನೀಡುವ ವೇತನವೂ ಕಡಿಮೆ. ಹೀಗಾಗಿ ಪದವೀಧರರು, ಸೇವಾ ಭದ್ರತೆ ಮತ್ತು ಸವಲತ್ತುಗಳಿರುವ ಸರ್ಕಾರಿ ಉದ್ಯೋಗತ್ತ ಆಕರ್ಷಿತರಾಗಿದ್ದರು.

  • ದೇಶದಲ್ಲಿ ಹೆಚ್ಚಾದ ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗ ಸಮಸ್ಯೆ ಕೂಡ ಹಸೀನಾ ಸರ್ಕಾರದ ಬಗ್ಗೆ ಜನರಲ್ಲಿ ಅಸಮಾಧಾನ ಹುಟ್ಟುಹಾಕಿತ್ತು.

  • ಜೂನ್‌ ತಿಂಗಳಲ್ಲಿ ಢಾಕಾ ವಿ.ವಿಯಲ್ಲಿ ಮೀಸಲಾತಿ ವ್ಯವಸ್ಥೆಯ ವಿರುದ್ಧ ಆರಂಭಗೊಂಡ ಪ್ರತಿಭಟನೆ ರಾಷ್ಟ್ರದಾದ್ಯಂತ ವ್ಯಾಪಿಸಿತ್ತು. 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದಕ್ಕೆ ಶೇಖ್‌ ಹಸೀನಾ ಅವರೇ ಕಾರಣ ಎಂಬ ಆಕ್ರೋಶ ಯುವಜನರಲ್ಲಿ ಮಡುಗಟ್ಟಿತ್ತು.

  • ‘ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಲ್ಲಿ ಪಾಲ್ಗೊಂಡವರು ವಿದ್ಯಾರ್ಥಿಗಳಲ್ಲ. ಘರ್ಷಣೆ ಮತ್ತು ಹಿಂಸಾಚಾರಕ್ಕೆ ಇಸ್ಲಾಮಿಕ್ ಪಾರ್ಟಿ, ಜಮಾತ್‌ ಎ–ಇಸ್ಲಾಮಿ ಮತ್ತು ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಕಾರಣ’ ಎಂದು ಹಸೀನಾ ಹೇಳಿದ್ದರು.

  • ಜುಲೈ 21ರಂದು ಸುಪ್ರೀಂ ಕೋರ್ಟ್‌ ಶೇ 30ರಷ್ಟು ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಿ, 1971ರ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರ ಕುಟುಂಬದ ಸದಸ್ಯರಿಗೆ ಶೇ 5ರಷ್ಟು ಮೀಸಲಾತಿ ನಿಗದಿಪಡಿಸಿತು. ಶೇ 93ರಷ್ಟು ಉದ್ಯೋಗಗಳನ್ನು ಪ್ರತಿಭೆ ಆಧಾರದಲ್ಲಿ ಭರ್ತಿ ಮಾಡಲು ಮತ್ತು ಶೇ 2ರಷ್ಟು ಹುದ್ದೆಗಳನ್ನು ಜನಾಂಗೀಯ ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಂಗವಿಕಲರಿಗೆ ಕಾಯ್ದಿರಿಸಿ ತೀರ್ಪು ನೀಡಿತು. ನಂತರ ಕೆಲವು ದಿನ ಪ್ರತಿಭಟನೆ ತಣ್ಣಗಾಗಿತ್ತು.

  • ಹೋರಾಟದ ಸಂದರ್ಭದಲ್ಲಿ ಪ್ರತಿಭಟನಕಾರರು ಮೃತಪಡಲು ಪ್ರಧಾನಿ ಶೇಖ್‌ ಹಸೀನಾ ಕಾರಣ, ಇದಕ್ಕೆ ಅವರು ಕ್ಷಮೆ ಕೋರಬೇಕು, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮತ್ತೆ ಯುವಜನರು ಚಳವಳಿ ಆರಂಭಿಸಿದರು.

  • ಅಸಹಕಾರ ಚಳವಳಿಯ ಜೊತೆಗೆ ಆಗಸ್ಟ್‌ 5ಕ್ಕೆ ‘ಢಾಕಾದತ್ತ ಮೆರವಣಿಗೆ’ ನಡೆಸಲು ನೀಡಿದ ಕರೆಗೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತು, ಅದು ದಂಗೆಯಾಗಿ ಮಾರ್ಪಟ್ಟಿತು

ಶೇಖ್ ಹಸೀನಾ ನಡೆದು ಬಂದ ದಾರಿ...
ಶೇಖ್ ಹಸೀನಾ, ಪೂರ್ವ ಬಂಗಾಳದಲ್ಲಿ 1947ರಲ್ಲಿ ಜನಿಸಿದರು. ಅವರ ತಂದೆ ಶೇಖ್ ಮುಜೀಬುರ್ ರಹಮಾನ್, ಬಾಂಗ್ಲಾದ ರಾಷ್ಟ್ರಪಿತ. ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಳ್ಳುವ ನಿರ್ಣಾಯಕ ಹೋರಾಟದ ನಾಯಕತ್ವ ವಹಿಸಿದ್ದರು. ಅಷ್ಟೊತ್ತಿಗಾಗಲೇ ಢಾಕಾ ವಿಶ್ವವಿದ್ಯಾಲಯದಲ್ಲಿ ಶೇಖ್ ಹಸೀನಾ ವಿದ್ಯಾರ್ಥಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು. 1975ರಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮುಜೀಬುರ್ ರಹಮಾನ್ ಸೇರಿದಂತೆ ಅವರ ಕುಟುಂಬದ ಬಹುತೇಕ ಮಂದಿ ಹತ್ಯೆಗೊಳಗಾಗಿದ್ದರು. ಭಾರತದಲ್ಲಿ ಆಶ್ರಯ ಪಡೆದಿದ್ದ ಹಸೀನಾ ಅವರು, 1981ರಲ್ಲಿ ಬಾಂಗ್ಲಾಕ್ಕೆ ಹಿಂದಿರುಗಿ ತನ್ನ ತಂದೆಯ ಅವಾಮಿ ಲೀಗ್ ಪಕ್ಷದ ನಾಯಕತ್ವ ವಹಿಸಿಕೊಂಡರು. ಜನರಲ್ ಇರ್ಷಾದ್ ಅವರ ಸೇನಾ ಆಡಳಿತವನ್ನು ವಿರೋಧಿಸಿ ಇತರೆ ಪಕ್ಷಗಳೊಂದಿಗೆ ಆಂದೋಲನ ನಡೆಸಿ, ಜನಪ್ರಿಯ ನಾಯಕಿಯಾಗಿ ರೂಪುತಳೆದರು. 1996ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಹಸೀನಾ, ಭಾರತದೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದರು. ನಂತರದ ಚುನಾವಣೆಯಲ್ಲಿ ಹಸೀನಾ ಅವರನ್ನು ಕೆಳಕ್ಕಿಳಿಸಿ, ಬೇಗಂ ಖಲೀದಾ ಝಿಯಾ ಪ್ರಧಾನಿ ಆಗಿದ್ದರು. ಮೂರು ದಶಕಕ್ಕೂ ಹೆಚ್ಚು ‘ಇಬ್ಬರು ಬೇಗಂ’ಗಳು ಬಾಂಗ್ಲಾವನ್ನು ಆಳಿದರು. 2009ರಲ್ಲಿ ಮತ್ತೆ ಅಧಿಕಾರಕ್ಕೇರಿದ ಹಸೀನಾ, ನಂತರ ಸತತವಾಗಿ ನಾಲ್ಕು ಬಾರಿ ದೇಶದ ಪ್ರಧಾನಿ ಆಗಿದ್ದರು. ಅವರ ಮೇಲೆ ಹಲವು ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿದ್ದವು. ಅವರನ್ನು ದೇಶ ಬಿಟ್ಟು ಓಡಿಸುವ ಪ್ರಯತ್ನಗಳೂ ನಡೆದವು. 2004ರಲ್ಲಿ ಸೇರಿದಂತೆ ಹಲವು ಬಾರಿ ಅವರ ಹತ್ಯಾಯತ್ನಗಳು ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT