ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!
ಆಳ–ಅಗಲ: ಸಿವಿಸಿ ವಾರ್ಷಿಕ ವರದಿ 2023 ಬಿಡುಗಡೆ– ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ!
ಫಾಲೋ ಮಾಡಿ
Published 3 ಸೆಪ್ಟೆಂಬರ್ 2024, 23:36 IST
Last Updated 3 ಸೆಪ್ಟೆಂಬರ್ 2024, 23:36 IST
Comments
ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹನೆಯ ನೀತಿಯನ್ನು ಅನುಸರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದಾಗ್ಯೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಹಲವು ವರದಿಗಳು ಹೇಳಿವೆ. ಇತ್ತೀಚೆಗೆ ಪ್ರಕಟವಾಗಿರುವ ಕೇಂದ್ರ ಜಾಗೃತ ಆಯೋಗದ (ಸಿವಿಸಿ) 2023ರ ವಾರ್ಷಿಕ ವರದಿಯೂ ಇದನ್ನೇ ಹೇಳುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಪ್ರಮಾಣ, ಅವುಗಳ ವಿಚಾರಣೆ, ಶಿಕ್ಷೆಯ ಸ್ವರೂಪದ ಬಗ್ಗೆ ವರದಿ ಬೆಳಕು ಚೆಲ್ಲಿದೆ.

ಸಾರ್ವಜನಿಕ ಜೀವನದಿಂದ ಭ್ರಷ್ಟಾಚಾರವನ್ನು ಹೋಗಲಾಡಿಸುವ ಉದ್ದೇಶದೊಂದಿಗೆ ಸ್ಥಾಪನೆಯಾದ ಸಂಸ್ಥೆ ಕೇಂದ್ರ ಜಾಗೃತ ಆಯೋಗ (ಸಿವಿಸಿ). ಇದರ 2023ರ ವಾರ್ಷಿಕ ವರದಿಯು ಕೇಂದ್ರ ಸರ್ಕಾರದ ಅಡಿಯಲ್ಲಿರುವ ವಿವಿಧ ಇಲಾಖೆ/ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ವಸ್ತುಸ್ಥಿತಿಯ ಬಗ್ಗೆ ಗಮನ ಸೆಳೆಯುತ್ತಿದೆ.       

ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಇಲಾಖಾ ಮಟ್ಟದಲ್ಲೇ ಒಂದು ವ್ಯವಸ್ಥೆ ಇದೆ. ಪ್ರತಿ ಇಲಾಖೆ/ಸಂಸ್ಥೆಯಲ್ಲಿಯೂ ಭ್ರಷ್ಟಾಚಾರರಹಿತ ಆಡಳಿತದ ಪ್ರಾಥಮಿಕ ಜವಾಬ್ದಾರಿ ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅವರದ್ದಾಗಿರುತ್ತದೆ. ಅವರಿಗೆ ಭ್ರಷ್ಟಾಚಾರ ನಿಗ್ರಹದ ವಿಚಾರದಲ್ಲಿ ಸಲಹೆ ನೀಡಲು ಇಲಾಖೆಗಳಲ್ಲಿ ಮುಖ್ಯ ಜಾಗೃತ ಅಧಿಕಾರಿ (ಸಿವಿಒ) ನೇತೃತ್ವದ ವಿಚಕ್ಷಣಾ ಘಟಕವೊಂದು ಇರುತ್ತದೆ. ಅವರು ಸಿವಿಸಿಯ ವಿಸ್ತರಣಾ ಭಾಗದಂತೆ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಈ ವ್ಯವಸ್ಥೆಯನ್ನೂ ಮೀರಿ ಪ್ರತಿವರ್ಷ ಸಾವಿರಾರು ಪ್ರಕರಣಗಳು ಸಿವಿಸಿಯಲ್ಲಿ ದಾಖಲಾಗುತ್ತಿವೆ. ಆಯಾ ಇಲಾಖೆ/ಸಂಸ್ಥೆಯ ಭ್ರಷ್ಟರ ವಿರುದ್ಧದ ದೂರುಗಳ ಬಗ್ಗೆ ಆಯೋಗವು, ಕೇಂದ್ರ ಜಾಗೃತ ಆಯೋಗ ಕಾಯ್ದೆ–2003ರ ಪ್ರಕಾರ ಕ್ರಮ ಜರುಗಿಸುತ್ತದೆ.  

ಕಳೆದ ವರ್ಷ, ಸಿವಿಸಿ ಮತ್ತು ಸಿವಿಒಗಳು ಸ್ವೀಕರಿಸಿರುವ ಭ್ರಷ್ಟಾಚಾರದ ಒಟ್ಟು ದೂರುಗಳ ಸಂಖ್ಯೆ 74,203. ಅವುಗಳ ಪೈಕಿ 66,373 ದೂರುಗಳು ವಿಲೇವಾರಿಯಾಗಿದ್ದರೆ, 7,830 ಪ್ರಕರಣಗಳು ಇನ್ನೂ ಬಾಕಿ ಇವೆ. ಅತಿ ಹೆಚ್ಚು ದೂರುಗಳು ರೈಲ್ವೆ ಇಲಾಖೆಯ ಉದ್ಯೋಗಿಗಳಿಗೆ ಸಂಬಂಧಿಸಿದ್ದಾಗಿವೆ. ರೈಲ್ವೆ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ 10,447 ದೂರುಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ದೆಹಲಿಯ ಸ್ಥಳೀಯ ಸಂಸ್ಥೆಗಳು (ದೆಹಲಿ ರಾಷ್ಟ್ರೀಯ ರಾಜಧಾನಿ ಸರ್ಕಾರ–ಜಿಎನ್‌ಸಿಟಿಡಿ ಹೊರತುಪಡಿಸಿ) ಇವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಭ್ರಷ್ಟಾಚಾರದ ಬಗ್ಗೆ ಆಯೋಗದಲ್ಲಿ 7,004 ದೂರುಗಳು ದಾಖಲಾಗಿವೆ. ಅಲ್ಪಸಂಖ್ಯಾತ ವ್ಯವಹಾರಗಳು, ಆಹಾರ ಸಂಸ್ಕರಣಾ ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಸಿವಿಸಿಗೆ ಸಲ್ಲಿಕೆಯಾಗಿಲ್ಲ ಎನ್ನುವುದು ಗಮನಾರ್ಹ.

ಆಯೋಗವು ಕಳೆದ ವರ್ಷ 2,661 ಪ್ರಕರಣಗಳನ್ನು ದಾಖಲಿಸಿದೆ. ಈ ಪೈಕಿ, 554 ಪ್ರಕರಣಗಳು 2022ರಲ್ಲಿ ದಾಖಲಾದಂಥವು. 1,955 ಪ್ರಕರಣಗಳಲ್ಲಿ ಸಿವಿಸಿ ತನ್ನ ಸಲಹೆ (ಶಿಕ್ಷೆ, ದಂಡದ ಸ್ವರೂಪದ ವಿವರ ಅಥವಾ ಪ್ರಕರಣ ಮುಕ್ತಾಯದ ಮಾಹಿತಿ. ಸಿವಿಸಿಯು ಪ್ರತಿ ದೂರಿಗೆ ಸಂಬಂಧಿಸಿದಂತೆ ಎರಡು ಹಂತದಲ್ಲಿ ಸಲಹೆ ನೀಡುತ್ತದೆ) ನೀಡಿದೆ. ಸಿವಿಸಿಯು 2023ರಲ್ಲಿ 3,019 ಅಧಿಕಾರಿಗಳಿಗೆ ಸಂಬಂಧಿಸಿದ 1,373 ಪ್ರಕರಣಗಳ ಕುರಿತು ಕ್ರಮ ಜರುಗಿಸುವ ಬಗ್ಗೆ ಮೊದಲ ಹಂತದ ಸಲಹೆ ನೀಡಿದೆ. 253 ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡನೇ ಹಂತದ ಸಲಹೆ ನೀಡಿದೆ. 

ದೂರುಗಳ ಬಗ್ಗೆ ಸಿವಿಸಿಯು (ಸಿವಿಒ ಮೂಲಕ) ತನಿಖೆ ನಡೆಸಿ ವರದಿ ತಯಾರಿಸುತ್ತದೆ. ತನಿಖೆಯಲ್ಲಿ ಕಂಡುಬಂದ ಅಂಶಗಳ ಆಧಾರದ ಮೇಲೆ ಪ್ರಕರಣವನ್ನು ಮುಕ್ತಾಯ ಮಾಡಬಹುದು. ಅಧಿಕಾರಿ ಭ್ರಷ್ಟಾಚಾರ ಮಾಡಿರುವುದು ದೃಢಪಟ್ಟರೆ, ಇಲಾಖಾ ಕ್ರಮಕ್ಕಾಗಿ ಅಥವಾ ಆಡಳಿತಾತ್ಮಕ ಕ್ರಮಕ್ಕಾಗಿ ಶಿಫಾರಸು ಮಾಡಬಹುದು. ನಿರ್ದಿಷ್ಟ ಶಿಫಾರಸುಗಳನ್ನು ಒಳಗೊಂಡ ತನಿಖಾ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತದೆ.

ಭ್ರಷ್ಟಾಚಾರ ದೂರಿನ ಸಂಬಂಧ ಸಿವಿಸಿಯ ಮೊದಲ ಹಂತದ ಸಲಹೆ ಮತ್ತು ಎರಡನೆಯ ಹಂತದ ಸಲಹೆಗಳ ಆಧಾರದಲ್ಲಿ ಅಧಿಕಾರಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸುವ ಜವಾಬ್ದಾರಿಯೂ ಸಿವಿಒ ಅವರದ್ದಾಗಿರುತ್ತದೆ. ಇಲಾಖಾ ವಿಚಾರಣೆಗಳ ಬಗ್ಗೆಯೂ ಸಿವಿಒ ಆಯೋಗಕ್ಕೆ ಕಾಲದಿಂದ ಕಾಲಕ್ಕೆ ಮಾಹಿತಿ ನೀಡಬೇಕು. 2023ರಲ್ಲಿ ಒಟ್ಟು 1,496 ಇಲಾಖಾ ವಿಚಾರಣೆಗಳು ನಡೆದಿದ್ದು, ಅವುಗಳ ಪೈಕಿ 733 ವಿಚಾರಣೆಗಳು ಮುಕ್ತಾಯವಾಗಿವೆ; 763 ವಿಚಾರಣೆಗಳು ಬಾಕಿ ಇವೆ ಎಂದು ವರದಿ ತಿಳಿಸಿದೆ.

879 ಪ್ರಕರಣ ದಾಖಲಿಸಿದ ಸಿಬಿಐ

ಕಳೆದ ವರ್ಷ ಕೇಂದ್ರ ತನಿಖಾ ದಳವು (ಸಿಬಿಐ) ಭ್ರಷ್ಟಾಚಾರಕ್ಕೆ ಸಂಬಂಧಿಸಿದ 768 ಸಾಮಾನ್ಯ (ಆರ್‌ಸಿ–ಸಂಸ್ಥೆಯೇ ನೇರವಾಗಿ ದಾಖಲಿಸುವ) ಮತ್ತು 108 ಪ್ರಾಥಮಿಕ ತನಿಖೆಗಳ ಪ್ರಕರಣ ಸೇರಿದಂತೆ 876 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.   

198 ಮಂದಿ ಸಿಬ್ಬಂದಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ, ಸಿಬ್ಬಂದಿಯನ್ನು ತನ್ನ ಬಲೆಗೆ ಕೆಡವಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದಂತೆ 37 ಪ್ರಕರಣಗಳನ್ನು ದಾಖಲಿಸಿದೆ. 

876 ಪ್ರಕರಣಗಳಲ್ಲಿ 91 ಪ್ರಕರಣಗಳನ್ನು ನ್ಯಾಯಾಲಯದ ಸೂಚನೆ ಮೇರೆಗೆ ದಾಖಲಿಸಿಕೊಂಡಿದ್ದರೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿರುವ ಶಿಫಾರಸಿನಂತೆ 84 ಪ್ರಕರಣಗಳನ್ನು ಕೈಗೆತ್ತಿಕೊಂಡಿದೆ. 

ಸಿಬಿಐ ತನಿಖೆ ನಡೆಸುತ್ತಿದ್ದ ಪ್ರಕರಣಗಳ ಪೈಕಿ 2023ರಲ್ಲಿ 636 ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಆದೇಶ ನೀಡಿವೆ. ಈ ಪೈಕಿ 411 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. 140 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. 24 ಪ್ರಕರಣಗಳಲ್ಲಿ ಆರೋಪಗಳನ್ನು ಕೈಬಿಡಲಾಗಿದೆ. 61 ಪ್ರಕರಣಗಳನ್ನು ನ್ಯಾಯಾಲಯಗಳು ವಿಲೇವಾರಿ ಮಾಡಿವೆ. ಕಳೆದ ವರ್ಷ, ಅಪರಾಧ ಸಾಬೀತು ಪ್ರಮಾಣ ಶೇ 71.4ರಷ್ಟಿತ್ತು. 2022ರಲ್ಲಿ ಇದು ಶೇ 74.59ರಷ್ಟು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿತ್ತು ಎಂದು ವರದಿ ಹೇಳಿದೆ.

221 ಸಿಬ್ಬಂದಿ ವಿರುದ್ಧ ವಿಚಾರಣೆಗೆ ಅನುಮತಿ ಬಾಕಿ

ಯಾವುದೇ ಅಧಿಕಾರಿ/ನೌಕರರ ವಿರುದ್ಧ ತನಿಖೆ ನಡೆಸಿದ ಸಂಸ್ಥೆಯು, ಆ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲು ಸಾಕಷ್ಟು ಸಾಕ್ಷ್ಯಗಳು ಲಭ್ಯವಿವೆ ಎಂದು ಅಭಿಪ್ರಾಯಪಟ್ಟಲ್ಲಿ ಸಿವಿಸಿಯು ಸಂಬಂಧಿಸಿದ ಪ್ರಾಧಿಕಾರಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸೂಚಿಸುತ್ತದೆ. ಕಳೆದ ವರ್ಷ 801 ಪ್ರಕರಣಗಳಲ್ಲಿ ಸಿಬ್ಬಂದಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೇಳಿತ್ತು. ಈ ಪೈಕಿ 426 ಪ್ರಕರಣಗಳಲ್ಲಿ ಸಂಬಂಧಿಸಿದ ಇಲಾಖೆ/ಪ್ರಾಧಿಕಾರ ಅನುಮತಿ ನೀಡಿವೆ. 154 ಪ್ರಕರಣಗಳಲ್ಲಿ ಅನುಮತಿ ನಿರಾಕರಿಸಿವೆ. 221 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಬಾಕಿ ಇದೆ.

ನಿಯಮ, ಸಲಹೆ ಕಡೆಗಣನೆಗೆ ಅಸಮಾಧಾನ 

ಕೇಂದ್ರ ಸರ್ಕಾರದ ಸಚಿವಾಲಯಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ಪ್ರಾಧಿಕಾರಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ, ಅವ್ಯವಹಾರಗಳ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಆಯೋಗ ನೀಡುವ ಸಲಹೆಗಳನ್ನು ಪಾಲಿಸದಿರುವುದರ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿರುವ ಆಯೋಗವು, ಕೆಲವು ಪ್ರಕರಣಗಳನ್ನು ಉದಾಹರಣೆಗಳ ಸಹಿತ ವಿವರಿಸಿದೆ. 

ದೂರುಗಳನ್ನು ವಿಲೇವಾರಿ ಮಾಡಲು ವಿಳಂಬ ಮಾಡುತ್ತಿರುವುದು, ಪ್ರಕರಣಗಳ ನಿರ್ವಹಣೆಯಲ್ಲಿ ನಿಯಮ ಪಾಲಿಸದಿರುವುದು, ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವುದರ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

ಆಧಾರ: ಪಿಟಿಐ, ಸಿವಿಸಿ ವಾರ್ಷಿಕ ವರದಿ–2023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT