ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | Solar Mission- ‘ಆದಿತ್ಯ’ನ ಅನ್ವೇಷಣೆ
ಆಳ–ಅಗಲ | Solar Mission- ‘ಆದಿತ್ಯ’ನ ಅನ್ವೇಷಣೆ
ಫಾಲೋ ಮಾಡಿ
Published 1 ಸೆಪ್ಟೆಂಬರ್ 2023, 23:36 IST
Last Updated 1 ಸೆಪ್ಟೆಂಬರ್ 2023, 23:36 IST
Comments
ಕರಗಿದ ಚಿನ್ನದಂತೆ ಬೆಳಗುತ್ತಿರುವವನೂ ಅಗ್ನಿಸ್ವರೂಪನೂ ಕತ್ತಲೆ ನಾಶ ಮಾಡುವವನೂ ವಿಶ್ವಸಾಕ್ಷಿಯಾದ ಜ್ಯೋತಿರ್ಮಯಿ ಸೂರ್ಯ, ಭೂಮಿಯ ಸಕಲ ಜೀವರಾಶಿಗಳಿಗೂ ಚೈತನ್ಯದ ಮೂಲ. ಬೆಳಕು, ಶಾಖ, ಶಕ್ತಿಯ ಆಕರವೇ ಸೂರ್ಯ. ಆತನ ಕುರಿತಂತೆ ಸೀಮಿತ ಪ್ರಮಾಣದ ಅಧ್ಯಯನ ಮಾಡುವುದು, ಅದರಿಂದ ಸಿಗುವ ವೈಜ್ಞಾನಿಕ ಮಾಹಿತಿ ಮತ್ತು ಜ್ಞಾನವನ್ನು ಮನುಕುಲಕ್ಕೆ ಹಂಚುವುದು ಇಸ್ರೊದ ‘ಆದಿತ್ಯ ಎಲ್‌–1’ ಯೋಜನೆಯ ಉದ್ದೇಶ. ಈ ಸಾಹಸಕ್ಕೆ ಕೈ ಹಾಕಿರುವ ನಾಲ್ಕನೇ ದೇಶ ಭಾರತ
ಶತಮಾನಗಳ ಭೂ ‘ಭವಿಷ್ಯ’ದ ಮುನ್ಸೂಚನೆ
‘ಭೂಮಿಯನ್ನು ನಿರಂತರವಾಗಿ ಬಾಧಿಸುವ ಹವಾಮಾನ ವೈಪರೀತ್ಯ, ಹವಾಮಾನ ಬದಲಾವಣೆಗಳಿಗೂ ಸೂರ್ಯನ ಚಟುವಟಿಕೆಗಳು ಸಂಬಂಧವಿದೆಯೇ? ಬರ, ಪ್ರವಾಹ, ನಿಸರ್ಗ ವಿಕೋಪಕ್ಕೂ ಈ ಚಟುವಟಿಕೆಗಳಿಗೂ ನಂಟು ಇರಬಹುದೇ? ಇದ್ದರೆ ಅದನ್ನು ಮುಂಚಿತವಾಗಿ ತಿಳಿದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗಳು ವಿಜ್ಞಾನಿಗಳನ್ನು ಬಹುಕಾಲದಿಂದಲೂ ಕಾಡುತ್ತಿವೆ. ಇದನ್ನು ಕರಾರುವಕ್ಕಾಗಿ ಅಧ್ಯಯನ ಮಾಡಿದರೆ, ಸೂರ್ಯನ ವರ್ತನೆಯ ಭೂತ, ವರ್ತಮಾನ ಮತ್ತು ಭವಿಷ್ಯದ ಕುರಿತು ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬಹುದು. ಮುಂದಿನ 10 ಅಥವಾ 100 ವರ್ಷಗಳಲ್ಲಿ ಹವಾಮಾನ ಬದಲಾವಣೆ ಹೇಗಾಗುತ್ತದೆ ಎನ್ನುವುದನ್ನು ತಿಳಿಯಬಹುದು. ಅದರಿಂದ ಸೃಷ್ಟಿಯಾಗುವ ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ಮುನ್ಸೂಚನೆ ಪಡೆಯಬಹುದು. ಅದಕ್ಕೆ ತಕ್ಕಂತೆ ಸರ್ಕಾರಗಳು ಪರಿಹಾರ ಯೋಜನೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ‘ಆದಿತ್ಯ’ನಿಂದ ಬಂದ ಮಾಹಿತಿಯ ದತ್ತಾಂಶದಿಂದ ಹಲವು ದಶಕಗಳು ಮತ್ತು ಶತಮಾನಗಳ ಹವಾಮಾನ ಬದಲಾವಣೆಯನ್ನು ಮುಂಚಿತವಾಗಿಯೇ ಗ್ರಹಿಸಲು ಸಾಧ್ಯ’ ಎನ್ನುತ್ತಾರೆ ಸೌರ ಭೌತ ವಿಜ್ಞಾನಿ ದೀಪಂಕರ್‌ ಬ್ಯಾನರ್ಜಿ. ‘ನಮ್ಮ ಅಸ್ತಿತ್ವ ಮತ್ತು ಭೂಮಿಯಲ್ಲಿ ಜೀವಿಗಳು ಇರುವುದೇ ಸೂರ್ಯನಿಂದಾಗಿ. ಎಲ್ಲ ಬಗೆಯ ಶಕ್ತಿಗಳು ಬರುವುದೇ ಸೂರ್ಯನಿಂದ. ಈಗಿನಂತೆಯೇ ಮುಂದೆಯೂ ಸೂರ್ಯ ವಿಕಿರಣವನ್ನು ಸೂಸುತ್ತದೆಯೊ, ಅದರಲ್ಲಿ ಬದಲಾವಣೆ ಆಗುತ್ತದೆಯೊ ಎಂಬುದನ್ನು ಅರ್ಥೈಸಿಕೊಳ್ಳುವುದು ಮುಖ್ಯವಾಗಿದೆ. ಸೂರ್ಯ ಈಗಿನಂತೆಯೇ ಶಕ್ತಿ ಸೂಸದೇ ಇದ್ದರೆ, ನಮ್ಮ ಹವಾಮಾನದ ಮೇಲೆ ಭಾರೀ ಪ್ರಮಾಣದ ಪರಿಣಾಮ ಬೀರಲಿದೆ. ಅದರಿಂದ ಉಂಟಾಗುವ ಪರಿಣಾಮಗಳನ್ನು ಊಹಿಸಲೂ ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.
ಸೌರ ಮಂಡಲದಮಹಾ ನಕ್ಷತ್ರ
ಸೂರ್ಯ, ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ.15 ಕೋಟಿ ಕಿ.ಮೀ ದೂರದಲ್ಲಿದೆ. ಆಕಾಶದಲ್ಲಿ ನಮ್ಮ ದೃಷ್ಟಿಗೆ ನಿಲುಕುವ ದೊಡ್ಡ ಕಾಯ. ಇದರಿಂದ ಬೆಳಕು ಹೊರಬಿದ್ದು, ಭೂಮಿ ತಲುಪಲು 8 ನಿಮಿಷ ಬೇಕಾಗುತ್ತದೆ. ಸೂರ್ಯ ಎಷ್ಟು ದೊಡ್ಡವನು ಎಂದರೆ ಅವನೊಳಗೆ 13 ಲಕ್ಷ ಭೂಮಿಗಳನ್ನು ಕೂಡಿಡಬಹುದು. ವಿಜ್ಞಾನಿಗಳು ಇದನ್ನು ಸಾಮಾನ್ಯ ನಕ್ಷತ್ರ ಎಂದು ಕರೆಯುತ್ತಾರೆ. ಏಕೆಂದರೆ ಇದಕ್ಕಿಂತ ನೂರು ಪಟ್ಟು ದೊಡ್ಡದಿರುವ ನಕ್ಷತ್ರಗಳು ನಮ್ಮ ಗ್ಯಾಲಕ್ಸಿಗಳಲ್ಲಿವೆ. ಆರ್ದಾ ನಕ್ಷತ್ರ ನಮ್ಮ ಸೂರ್ಯನಿಗಿಂತ 1,400 ಪಟ್ಟು ದೊಡ್ಡದು. ಇಡೀ ಸೂರ್ಯ ಅನಿಲಗಳಿಂದಾಗಿದೆ. ಭೂಮಿಯಂತೆ ಗಟ್ಟಿ ಬಂಡೆಯಲ್ಲ. ಅಲ್ಲಿಯ ಮೇಲ್ಮೈ ತಾಪಮಾನ 5,700 ಕೆಲ್ವಿನ್‌ ಅಂದರೆ 5,426.85 ಡಿಗ್ರಿ ಸೆಲ್ಸಿಯಸ್‌ ಇದೆ.ಇದರ ಗರ್ಭದ ಉಷ್ಣಾಂಶ 1,50,00,000 ಕೆಲ್ವಿನ್‌ (14,999,726.85 ಡಿಗ್ರಿ ಸೆಲ್ಸಿಯಸ್‌)!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT