ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯು ಸಂಘರ್ಷದ ನೆಲೆಯಾಗಿಯೇ ಬೆಳೆದಿದ್ದರೂ ಗಣನೀಯವಾದ ಸಾಧನೆಯನ್ನು ಮಾಡಿದೆ. ಅನೇಕ ಸಂಸ್ಥೆಗಳು, ದೇಶದ ಏಕಮೇವ ಸಂಸ್ಥೆಗಳು ಇಲ್ಲಿ ನೆಲೆಗೊಂಡು ಉನ್ನತವಾಗಿ ಬೆಳೆದಿವೆ. ಉದಾಹರಣೆಗೆ ಐಐಎಸ್‌ಸಿ, ಐಐಎಂ ಇತ್ಯಾದಿ. ಇವುಗಳ ಪ್ರಗತಿಯಲ್ಲಿ ಕರ್ನಾಟಕದ ಪಾಲುಗಾರಿಕೆ ದೊಡ್ಡದು. ಆಶಾದಾಯಕ ವಿದ್ಯಮಾನವೆಂದರೆ, ಇಂದಿನ ತಲೆಮಾರಿನ ಅನೇಕರು ಶಿಕ್ಷಣದ ಪಡಿಯಚ್ಚುಗಳಿಂದ ಮುಕ್ತವಾಗಿ ಕನ್ನಡದ ಮೂಲಕವೇ ಹೊಸ ಕಲಿಕೆಯ ಸೃಜನಶೀಲ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇವು ಸರ್ಕಾರದ ಅಧಿಕೃತ ಶಿಕ್ಷಣ ನೀತಿಯ ಭಾಗವಾಗಬೇಕಿದೆ.