ವರ್ಷದಿಂದ ವರ್ಷಕ್ಕೆ ಜಗತ್ತಿನಲ್ಲಿ ಪ್ಲಾಸ್ಲಿಕ್ ಉತ್ಪಾದನೆ ಹೆಚ್ಚುತ್ತಲೇ ಇದೆ. 1950ರಲ್ಲಿ ಜಾಗತಿಕ ಮಟ್ಟದಲ್ಲಿ 20 ಲಕ್ಷ ಟನ್ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗುತ್ತಿತ್ತು. 2021ರ ಹೊತ್ತಿಗೆ ಅದು 39 ಕೋಟಿ ಟನ್‌ಗಳಿಗೆ ಹೆಚ್ಚಳವಾಗಿದೆ. ಪ್ಲಾಸ್ಟಿಕ್ ಬಳಕೆ ಹೆಚ್ಚಿದಂತೆಲ್ಲ ಪ್ಲಾಸ್ಟಿಕ್ ತ್ಯಾಜ್ಯವೂ ಜಾಸ್ತಿಯಾಗುತ್ತಿದೆ. ಕಳವಳಕಾರಿ ಸಂಗತಿ ಎಂದರೆ, ಪ್ಲಾಸ್ಟಿಕ್ ಈಗ ಅತಿ ಸೂಕ್ಷ್ಮ ಕಣಗಳ ರೂಪದಲ್ಲಿ (ಮೈಕ್ರೊಪ್ಲಾಸ್ಟಿಕ್) ನಾವು ಸೇವಿಸುವ ಆಹಾರ ವಸ್ತುಗಳಲ್ಲಿ ಬೆರೆತುಹೋಗಿದೆ. ಭಾರತದಲ್ಲಿ ಬಳಸಲಾಗುವ ಉಪ್ಪು ಮತ್ತು ಸಕ್ಕರೆಗಳಲ್ಲಿ ಮೈಕ್ರೊಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ ಎಂದು ನವದೆಹಲಿಯ ‘ದ ಜಸ್ಟ್ ಎನ್ವಿರಾನ್‌ಮೆಂಟ್ ಚಾರಿಟಬಲ್ ಟ್ರಸ್ಟ್’ನ ‘ಟಾಕ್ಸಿಕ್ಸ್ ಲಿಂಕ್’ ಸಂಸ್ಥೆ ನಡೆಸಿರುವ ಇತ್ತೀಚಿನ ಅಧ್ಯಯನ ಹೇಳಿದೆ.