ದೇಶದಲ್ಲಿ ಒಟ್ಟು 1.25 ಲಕ್ಷ ನವೋದ್ಯಮಗಳು ಸ್ಥಾಪನೆಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನಡೆದ ‘ಸ್ಟಾರ್ಟ್‌ಅಪ್ ಮಹಾಕುಂಭ’ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ‘ಈ ಉದ್ಯಮಗಳಿಂದ ಸರಿಸುಮಾರು 12 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ

ನವೋದ್ಯಮಗಳ ಕುರಿತು ‘ಇಂಡಿಯನ್ ವೆಂಚರ್ ಕ್ಯಾಪಿಟಲ್ 2024’ ಎನ್ನುವ ವರದಿಯೊಂದು 2024ರ ಆರಂಭದಲ್ಲಿ ಬಿಡುಗಡೆಯಾಗಿದೆ. ಈ ವರದಿಯನ್ನು ಬೈನ್ ಆ್ಯಂಡ್ ಕಂಪನಿ ಹಾಗೂ ಇಂಡಿಯನ್ ವೆಂಚರ್ ಆ್ಯಂಡ್ ಆಲ್ಟರ್‌ನೇಟ್ ಕ್ಯಾಪಿಟಲ್ ಅಸೋಸಿಯೇಷನ್ ಸೇರಿ ಸಿದ್ಧಪಡಿಸಿವೆ. ‘2023ರಲ್ಲಿ ಸುಮಾರು 35 ಸಾವಿರ ನವೋದ್ಯಮಗಳು ಬಾಗಿಲು ಮುಚ್ಚಿವೆ’ ಎನ್ನುವುದು ಈ ವರದಿಯ ಪ್ರಮುಖ ಅಂಶಗಳಲ್ಲಿ ಒಂದು

ಒಂದು ಕಡೆ ಭಾರತದಲ್ಲಿ ನವೋದ್ಯಮಗಳ ಸಂಖ್ಯೆ ಏರಿಕೆಯಾಗುತ್ತಿದೆ. ಉದ್ಯಮಗಳ ಸಂಖ್ಯೆಯೊಂದಿಗೆ ಉದ್ಯೋಗಾವಕಾಶಗಳೂ ಏರಿಕೆಯಾಗುತ್ತಿವೆ ಎಂದು ಕೇಂದ್ರ ಸರ್ಕಾರದ ದಾಖಲೆಗಳು ಹೇಳುತ್ತಿವೆ. ಇನ್ನೊಂದೆಡೆ ನವೋದ್ಯಮಗಳು ಬಾಗಿಲು ಮುಚ್ಚುತ್ತಿರುವ ಸಂಖ್ಯೆ ಏರಿಕೆಯಾಗುತ್ತಿದೆ ಮತ್ತು ಅವುಗಳಲ್ಲಿನ ಉದ್ಯೋಗಿಗಳನ್ನು ಕಡಿತ ಮಾಡಲಾಗುತ್ತಿದೆ ಎಂದು ಹಲವು ವರದಿಗಳು ಹೇಳುತ್ತಿವೆ. ಹಾಗಿದ್ದರೆ, ಸಾಂಖ್ಯಿಕ ಏರಿಕೆ ಮಾತ್ರವೇ ಉತ್ತಮ ಬೆಳವಣಿಗೆಯೇ ಅಥವಾ ಸ್ಥಾಪನೆಗೊಂಡ ಉದ್ಯಮವು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದು ಉತ್ತಮ ಬೆಳವಣಿಗೆಯೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ.

2023ರಲ್ಲಿ ದೇಶದಲ್ಲಿ ನವೋದ್ಯಮ ಉಗಮಕ್ಕೆ ಅಷ್ಟೇನು ಉತ್ತಮ ವಾತಾವರಣ ಇರಲಿಲ್ಲ ಎಂದು ‘ಇಂಡಿಯನ್ ವೆಂಚರ್ ಕ್ಯಾಪಿಟಲ್ 2024’ ವರದಿ ಹೇಳುತ್ತದೆ. ನವೋದ್ಯಮಗಳಲ್ಲಿ ಸಾರ್ವಜನಿಕರು ಹೂಡಿಕೆ ಮಾಡುವುದಿರಲಿ, ದೊಡ್ಡ ದೊಡ್ಡ ಕಂಪನಿಗಳು ಕೂಡ ಹೂಡಿಕೆ ಮಾಡುವುದು ಭಾರತದಲ್ಲಿ ಕಡಿಮೆಯಾಗಿವೆ. ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳು ಕೂಡ ಹೂಡಿಕೆಗೆ ಹಿಂದೇಟು ಹಾಕಿವೆ ಎನ್ನುತ್ತದೆ ವರದಿ. 2024ರ ನಂತರವೇ ಉತ್ತಮ ವಾತಾವರಣ ಸೃಷ್ಟಿಯಾಗಬಹುದು ಎಂಬ ನಂಬಿಕೆಯಲ್ಲಿವೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಕಂಪನಿಗಳು.

ಯಾಕಾಗಿ ಹೂಡಿಕೆ ಕುಸಿಯಿತು?:

ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆ ಇಳಿಕೆಯಾಗಲು ಹಲವು ಕಾರಣಗಳಿವೆ. ದೇಶೀಯ ಮಟ್ಟದ ಹೂಡಿಕೆ ಇಳಿಕೆಗೆ ಹೆಚ್ಚಿನ ಬಡ್ಡಿದರ ಪಾವತಿಸಬೇಕಾಗಿರುವುದು ಪ್ರಮುಖ ಕಾರಣ. ಹಣದುಬ್ಬರ ನೀಡಿದ ಹೊಡೆತ, ಹೂಡಿಕೆದಾರರ ನಿರೀಕ್ಷೆಗಳು ಹೆಚ್ಚಾಗಿರುವುದು ಇತರ ಪ್ರಮುಖ ಕಾರಣಗಳು. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ, ಗಾಜಾ ಮೇಲಿನ ಇಸ್ರೇಲ್ ಯುದ್ಧ– ಇವುಗಳ ಕಾರಣದಿಂದಾಗಿ ಅಂತರರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಮುಂದಾಗುತ್ತಿಲ್ಲ. ನವೋದ್ಯಮಗಳು ಅತ್ಯುತ್ತಮ ಪ್ರಗತಿ ತೋರಿಸಬಲ್ಲವು ಎನ್ನುವ ನಂಬಿಕೆ ಇಲ್ಲದ ಕಾರಣಕ್ಕಾಗಿಯೂ ಹೂಡಿಕೆ ಕಡಿತಗೊಂಡಿದೆ.

ಈ ಕಾರಣಗಳಿಗಾಗಿ ನವೋದ್ಯಮಗಳ ನಡುವಿನ, ದೊಡ್ಡ ದೊಡ್ಡ ಕಂಪನಿಗಳು ಹಾಗೂ ನವೋದ್ಯಮಗಳ ನಡುವಿನ ಹೂಡಿಕೆ ಮತ್ತು ಮಾರಾಟ ವಹಿವಾಟುಗಳೂ ಇಳಿಕೆಯಾಗಿವೆ//. 2021–22ರ ಆರ್ಥಿಕ ವರ್ಷದಲ್ಲಿ ಇಂಥ ವಹಿವಾಟುಗಳ ಸಂಖ್ಯೆ 1,611ರಷ್ಟಿತ್ತು. ಅದು 2022–23ರ ಹೊತ್ತಿಗೆ 880ಕ್ಕೆ ಇಳಿಕೆಯಾಗಿದೆ. ಅಂದರೆ, ಕಳೆದ ಆರ್ಥಿಕ ವರ್ಷದ ಹೋಲಿಕೆಯಲ್ಲಿ ಶೇ 45ರಷ್ಟು ವಹಿವಾಟುಗಳು ಕಡಿತಗೊಂಡಿವೆ. ಇನ್ನು ಇಂಥ ವಹಿವಾಟುಗಳ ಮೊತ್ತದಲ್ಲಿಯೂ ಇಳಿಕೆ ಕಂಡುಬಂದಿದೆ. 2021–22ರಲ್ಲಿ ವಹಿವಾಟುಗಳ ಮೊತ್ತವು ಅಂದಾಜು ₹133 ಕೋಟಿಯಷ್ಟಿತ್ತು. ಇದು 2022–23ರ ಹೊತ್ತಿಗೆ ಅಂದಾಜು ₹92 ಕೋಟಿಯಷ್ಟಾಗಿದೆ. ಈ ಎಲ್ಲ ಕಾರಣಗಳಿಂದ ದೇಶದ ಒಟ್ಟು 35 ಸಾವಿರ ನವೋದ್ಯಮಗಳು 2023ರಲ್ಲಿ ಬಾಗಿಲು ಮುಚ್ಚಿವೆ ಎಂದು ‘ಇಂಡಿಯನ್ ವೆಂಚರ್ ಕ್ಯಾಪಿಟಲ್ 2024’ ವರದಿ ಹೇಳಿದೆ.

ಮೂರು ಮಾಹಿತಿ:

ಉದ್ಯೋಗ ಸೃಷ್ಟಿಯ ಕುರಿತು ಕೇಂದ್ರ ಸರ್ಕಾರದ ಬಳಿ ಮೂರು ವಿವಿಧ ಮಾಹಿತಿಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಭಾಷಣದಲ್ಲಿ ಸುಮಾರು 12 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವೇ ಪ್ರಕಟಿಸುವ ಪಿಐಬಿ ಪತ್ರಿಕಾ ಪ್ರಕಟಣೆಯಲ್ಲಿ, ‘ನವೋದ್ಯಮಗಳು ದೇಶದಲ್ಲಿ ಒಟ್ಟು 12.42 ಲಕ್ಷ ಉದ್ಯೋಗವನ್ನು ಸೃಷ್ಟಿಸಿವೆ’ ಎಂದು ಹೇಳಿದೆ. ‘2016ರಿಂದ 2023ರ ನವೆಂಬರ್‌ವರೆಗೆ ದೇಶದಾದ್ಯಂತ ನೋಂದಣಿಯಾದ ನವೋದ್ಯಮಗಳು ಒಟ್ಟು 12.56 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ’ ಎಂದು ಕೇಂದ್ರ ಸರ್ಕಾರವೇ ತನ್ನ ‘ನವೋದ್ಯಮ ಭಾರತದ ಏಳು ವರ್ಷಗಳು:2016–2023’ ವರದಿಯಲ್ಲಿ ಹೇಳಿದೆ.

ಸಾಂಸ್ಥಿಕ ಹೂಡಿಕೆಯಲ್ಲಿ ಭಾರಿ ಇಳಿಕೆ

₹2.13 ಲಕ್ಷ ಕೋಟಿ – 2021–22ರಲ್ಲಿ ದೇಶದ ನವೋದ್ಯಮಗಳಲ್ಲಿ ಆಗಿದ್ದ ಸಾಂಸ್ಥಿಕ ಹೂಡಿಕೆಯ ಮೊತ್ತ

₹79,873 ಕೋಟಿ – 2022–23ರಲ್ಲಿ ದೇಶದ ನವೋದ್ಯಮಗಳಲ್ಲಿ ಆಗಿದ್ದ ಸಾಂಸ್ಥಿಕ ಹೂಡಿಕೆಯ ಮೊತ್ತ

65% ಹೂಡಿಕೆಯಲ್ಲಿ ಆದ ಇಳಿಕೆಯ ಪ್ರಮಾಣ

ನಿಲ್ಲದ ಉದ್ಯೋಗ ಕಡಿತ

ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿ ಹಾಗೂ ನವೋದ್ಯಮಗಳ ಸ್ಥಾಪನೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತದೆ. ಆದರೆ, ಉದ್ಯೋಗ ನಷ್ಟದ ಕುರಿತು ಯಾವುದೇ ಮಾಹಿತಿಯನ್ನು ಸಂಗ್ರಹಿಸಿಡುವುದಿಲ್ಲ. ಈ ಕಾರಣಗಳಿಗಾಗಿ ಹಲವು ವರದಿಗಳನ್ನು ಆಶ್ರಯಿಸಬೇಕಾಗುತ್ತದೆ. ನವೋದ್ಯಮಗಳ ಕುರಿತು ಅಧ್ಯಯನ ನಡೆಸುವ ‘ಗ್ಲೋಬಲ್‌ಡಾಟಾ’ ಉದ್ಯೋಗ ಕಡಿತದ ಕುರಿತು ವರದಿವೊಂದನ್ನು ನೀಡಿತ್ತು. ಈ ವರದಿಯ ಪ್ರಕಾರ, 2023ರ ಮೊದಲ 11 ತಿಂಗಳಲ್ಲಿ ಭಾರತದ ಪ್ರಮುಖ ನವೋದ್ಯಮಗಳು 15,000 ಜನರನ್ನು ಮನೆಗೆ ಕಳುಹಿಸಿವೆ. 2022ರಲ್ಲಿ ಈ ಸಂಖ್ಯೆ 24,000ಕ್ಕಿಂತ ಹೆಚ್ಚು ಇತ್ತು.

ಇನ್ನು, 2023ರಲ್ಲಿ ಅತಿಹೆಚ್ಚು ಜನರನ್ನು (2,500) ಕೆಲಸದಿಂದ ತೆಗೆದುಹಾಕಿದ್ದು ಬೈಜು’ಸ್. ಆ ಹನ್ನೊಂದು ತಿಂಗಳಲ್ಲಿ 100ಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದುಹಾಕಿದ ನವೋದ್ಯಮಗಳ ಸಂಖ್ಯೆ 36. ಇವು ದೊಡ್ಡ ನವೋದ್ಯಮಗಳ ಲೆಕ್ಕ ಮಾತ್ರ. ಆದರೆ 100ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದ ಸಂಸ್ಥೆಗಳ ಮಾಹಿತಿ ಇಲ್ಲ. ಈಗ ಇಂಥದ್ದೇ ಮಾಹಿತಿ ಯನ್ನು ‘ಇಂಡಿಯನ್ ವೆಂಚರ್ ಕ್ಯಾಪಿಟಲ್ 2024’ ವರದಿಯೂ ಹೇಳುತ್ತದೆ. ಈ ವರದಿಯ ಪ್ರಕಾರ 2023ರಲ್ಲಿ ಪ್ರಮುಖ ನವೋದ್ಯಮಗಳು ಒಟ್ಟು 20 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿವೆ ಎಂದು ಹೇಳಿದೆ.

1.24 ಲಕ್ಷ – 2024ರ ಮಾರ್ಚ್‌ವರೆಗೆ ದೇಶದಾದ್ಯಂತ ನೋಂದಣಿಯಾಗಿದ್ದ ನವೋದ್ಯಮಗಳ ಒಟ್ಟು ಸಂಖ್ಯೆ

35,000+ 2023ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಮತ್ತು ತೆರಿಗೆ ಪಾವತಿ ಸ್ಥಗಿತಗೊಳಿಸಿದ ನವೋದ್ಯಮಗಳ ಸಂಖ್ಯೆ

18,000+ 2022ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಮತ್ತು ತೆರಿಗೆ ಪಾವತಿ ಸ್ಥಗಿತಗೊಳಿಸಿದ ನವೋದ್ಯಮಗಳ ಸಂಖ್ಯೆ

71,000+ 2024ರ ಆರಂಭದ ವೇಳೆಗೆ ಕಾರ್ಯನಿರ್ವಹಿಸುತ್ತಿದ್ದ ನವೋದ್ಯಮಗಳ ಸಂಖ್ಯೆ

ಏರಿಕೆ ಹಾದಿಯಲ್ಲಿ ನವೋದ್ಯಮಗಳ ಸಂಖ್ಯೆ ಮತ್ತು ಉದ್ಯೋಗಾವಕಾಶ

(ವರ್ಷ;ಪ್ರತಿ ವರ್ಷ ನೋಂದಣಿಯಾದ ನವೋದ್ಯಮಗಳ ಸಂಖ್ಯೆ;ನವೋದ್ಯಮಗಳ ಒಟ್ಟು ಸಂಖ್ಯೆ)

<+2018 ; 12,372 ; 12,372

2019 ; 10,604 ; 22,976

2020 ; 13,798 ; 36,774

2021 ; 19,371 ; 56,145

2022 ; 26,330 ; 82,475

2023 ; 34,779 ; 1,17,254

2024(ಮೊದಲ 75 ದಿನ) ; 7,151 ; 1,24,405

ವರ್ಷ;ಸೃಷ್ಟಿಯಾದ ಉದ್ಯೋಗಗಳು;ಒಟ್ಟು ಉದ್ಯೋಗಗಳ ಸಂಖ್ಯೆ

<+2018 ; 1.18 ಲಕ್ಷ ;1.18 ಲಕ್ಷ

2019 ; 1.23 ಲಕ್ಷ ;2.41 ಲಕ್ಷ

2020 ; 1.51 ಲಕ್ಷ ;3.92 ಲಕ್ಷ

2021 ; 1.94 ಲಕ್ಷ ;5.86 ಲಕ್ಷ

2022 ; 2.66 ಲಕ್ಷ ;8.52 ಲಕ್ಷ

2023; 3.90 ಲಕ್ಷ ;12.42 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.