ಚುನಾವಣಾ ನೀತಿ ನಿರೂಪಕ ಪ್ರಶಾಂತ್ ಕಿಶೋರ್ ಮತ್ತು ಹಿರಿಯ ಮುತ್ಸದ್ದಿ ಶರದ್ ಪವಾರ್ ಅವರು ಎರಡು ಬಾರಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ನಂತರ, ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚನೆಯ ಊಹಾಪೋಹಗಳಿಗೆ ಪುನಃ ರೆಕ್ಕೆಪುಕ್ಕಗಳು ಮೂಡಿವೆ.

‘ತೃತೀಯ ರಂಗ ರಚನೆಯ ಉದ್ದೇಶವಿಲ್ಲ’ ಎಂದು ಈ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಹೇಳಿದ್ದರೂ, ದೇಶದಲ್ಲಿ ಈಚಿನ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬ ಭಾವನೆ ದಟ್ಟವಾಗಿ ಮೂಡುತ್ತಿದೆ.

ಚದುರಿಹೋಗಿರುವ ವಿರೋಧಪಕ್ಷಗಳು ಮತ್ತು ಅದರ ಲಾಭ ಪಡೆದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ನ ಒಳಗಿನ ಬೇಗುದಿ ಬಹಿರಂಗಗೊಳ್ಳುತ್ತಿರುವುದು, ನಾಯಕರ ಪಕ್ಷತ್ಯಾಗ ಮುಂತಾದ ಬೆಳವಣಿಗೆಗಳು ತೃತೀಯ ರಂಗದ ಪ್ರವೇಶಕ್ಕೆ ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಆದರೆ, ತೃತೀಯ ರಂಗ ಎಂಬುದು ಒಂದು ಕನಸೇ ವಿನಾ ವಾಸ್ತವದಲ್ಲಿ ಜಾರಿಯಾಗುವುದು ಅಸಾಧ್ಯ ಎಂಬ ವಾದವೂ ಇದೆ. ಇಂಥ ಒಂದು ರಾಜಕೀಯ ವೇದಿಕೆಯನ್ನು ರೂಪಿಸಲು ಈ ಹಿಂದೆ ನಡೆದಿದ್ದ ಪ್ರಯತ್ನಗಳು ಮತ್ತು ಅದರ ಪರಿಣಾಮ ಗಳನ್ನು ಗಮನಿಸಿದರೆ ತೃತೀಯ ರಂಗ ರಚನೆ ಸುಲಭದ ಕೆಲಸವಲ್ಲ ಎಂಬುದು ವ್ಯಕ್ತವಾಗುತ್ತದೆ.

ಮಾಯಾವತಿ, ಅಖಿಲೇಶ್ ಯಾದವ್, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಮುಂತಾದ ನಾಯಕರೂ ತೃತೀಯ ರಂಗ ರಚನೆಗೆ ಪ್ರಯತ್ನಿಸಿದ್ದಿದೆ. ಆಡಳಿತ ಮತ್ತು ವಿರೋಧಪಕ್ಷಗಳಿಂದ ಬೇರೆಯಾದ ರಾಜಕೀಯ ರಂಗನ್ನು ರೂಪಿಸುವ ಪ್ರಯತ್ನಗಳು ಹಿಂದೆಯೂ ನಡೆದಿವೆ. ಇಂಥ ರಂಗಗಳು ರಚಿಸಿದ ಸರ್ಕಾರಗಳು ಅಲ್ಪಾಯುವಾಗಿದ್ದವು ಎಂಬುದನ್ನು ಇತಿಹಾಸ ಹೇಳುತ್ತದೆ.

ನ್ಯಾಷನಲ್ ಫ್ರಂಟ್

ದೇಶದಲ್ಲಿ ತೃತೀಯ ರಂಗ ರಚನೆಯ ಪ್ರಯತ್ನ ಆರಂಭವಾದ್ದು 1987ರಲ್ಲಿ. ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ವಿ.ಪಿ. ಸಿಂಗ್ ಅವರನ್ನು, ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ 1987ರಲ್ಲಿ ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷದಿಂದ ಹೊರಬಂದ ಅವರು ಜನಮೋರ್ಚಾವನ್ನು ರಚಿಸಿದರು.

1989ರ ಲೋಕಸಭಾ ಚುನಾವಣೆಗೂ ಸ್ವಲ್ಪವೇ ಮುನ್ನ ಬೊಫೋರ್ಸ್ ಹಗರಣ ಭಾರಿ ಸುದ್ದಿ ಮಾಡಿತು. ಇದು ರಾಜೀವ್ ನೇತೃತ್ವದ ಸರ್ಕಾರಕ್ಕೆ ಭಾರಿ ಮುಜುಗರ ಉಂಟುಮಾಡಿತು.

ಇದನ್ನೇ ಮುಂದಿಟ್ಟುಕೊಂಡು ಸಿಂಗ್ ಅವರು ಇನ್ನಷ್ಟು ಪಕ್ಷಗಳನ್ನು ಒಗ್ಗೂಡಿಸಿ ‘ನ್ಯಾಷನಲ್ ಫ್ರಂಟ್’ ರಚಿಸಿದರು. ಟಿಡಿಪಿ, ಡಿಎಂಕೆ, ಅಸೋಂ ಗಣಪರಿಷತ್ ಮುಂತಾದವು ಸಿಂಗ್ ಜತೆಗೆ ಕೈಜೋಡಿಸಿದವು. ಈ ಕೂಟಕ್ಕೆ ಬಿಜೆಪಿ ಮತ್ತು ಸಿಪಿಎಂ ಬಾಹ್ಯ ಬೆಂಬಲ ನೀಡಿದವು. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಾಗಿ, 1989ರ ಡಿಸೆಂಬರ್ 2ರಂದು ವಿ.ಪಿ. ಸಿಂಗ್ ದೇಶದ ಪ್ರಧಾನಿಯಾದರು.

ಸಂಖ್ಯಾ ಬಲದ ಕೊರತೆಯಿಂದಾಗಿ ಈ ರಂಗವು ತಮಿಳುನಾಡಿನಲ್ಲಿ ಬದ್ಧ ವೈರಿಗಳಂತಿದ್ದ ಡಿಎಂಕೆ ಮತ್ತು ಎಐಎಡಿಎಂಕೆಯ ಬೆಂಬಲ ಪಡೆಯಲು ಪ್ರಯತ್ನಿಸಿತ್ತು. ಇನ್ನೊಂದೆಡೆ, ರಾಮ ಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸುತ್ತಾ ಬಂದಿದ್ದ ಬಿಜೆಪಿಯು ಬೆಂಬಲ ಹಿಂಪಡೆಯಿತು. ಪರಿಣಾಮ 1990ರ ನವೆಂಬರ್ 10ರಂದು ಸಿಂಗ್ ಅವರು ಅಧಿಕಾರ ಕಳೆದುಕೊಂಡರು.

ಸಿಂಗ್ ರಾಜೀನಾಮೆಯ ಬಳಿಕ, ಚಂದ್ರಶೇಖರ್ ಅವರು ಪ್ರಧಾನಿಯಾದರು. ಕಾಂಗ್ರೆಸ್ ಪಕ್ಷವು ಅವರಿಗೆ ಬೆಂಬಲನೀಡಿತ್ತು. ಆದರೆ ಏಳು ತಿಂಗಳಲ್ಲೇ ಬೆಂಬಲ ಹಿಂಪಡೆದ ಕಾರಣ ಅವರೂ ಅಧಿಕಾರ ಕಳೆದುಕೊಂಡರು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದು, ಪಿ.ವಿ. ನರಸಿಂಹ ರಾವ್ ಪ್ರಧಾನಿಯಾದರು.

ಯುನೈಟೆಡ್ ಫ್ರಂಟ್

1996ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದಾದಾಗ ಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ, ಬಹುಮತ ಸಾಬೀತುಪಡಿಸಲಾಗದೆ ಎರಡೇ ವಾರಗಳಲ್ಲಿ ರಾಜೀನಾಮೆ ನೀಡಬೇಕಾಯಿತು.

ಆಗ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್, ಸರ್ಕಾರ ರಚನೆಗೆ ಮುಂದಾಗಲಿಲ್ಲ. ಬದಲಿಗೆ 13 ಪಕ್ಷಗಳ ಒಕ್ಕೂಟವಾಗಿದ್ದ ‘ಯುನೈಟೆಡ್ ಫ್ರಂಟ್’ಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿತು. 1996ರ ಜೂನ್ 1ರಂದು ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾದರು.

ಈ ಸರ್ಕಾರವೂ ಹೆಚ್ಚು ಕಾಲ ಬಾಳಲಿಲ್ಲ. ದೇವೇಗೌಡರ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಿವಿಧ ರಾಜಕೀಯ ಕಾರಣಗಳಿಗಾಗಿ ಹಿಂಪಡೆಯಿತು. 1997ರ ಏಪ್ರಿಲ್ನಲ್ಲಿ ದೇವೇಗೌಡರೂ ಪ್ರಧಾನಿ ಹುದ್ದೆಯಿಂದ ಇಳಿಯಬೇಕಾಯಿತು.

ದೇವೇಗೌಡರ ನಂತರ ಪ್ರಧಾನಿ ಯಾರಾಗಬೇಕು ಎಂಬ ವಿಚಾರದಲ್ಲಿ ಮುಲಾಯಂ ಸಿಂಗ್ ಯಾದವ್ ಹಾಗೂ ಲಾಲು ಪ್ರಸಾದ್ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಮಾತುಕತೆಯ ಮೂಲಕ ಎಲ್ಲವನ್ನೂ ಸರಿಪಡಿಸಿಕೊಂಡು, ಐ.ಕೆ. ಗುಜ್ರಾಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಯಿತು. 1997ರ ಏಪ್ರಿಲ್ 21ರಂದು ಗುಜ್ರಾಲ್ ಪ್ರಮಾಣವಚನ ಸ್ವೀಕರಿಸಿದರು. ಈ ಸರ್ಕಾರಕ್ಕೂ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿತ್ತು.

ಆದರೆ, ರಾಜೀವ್ ಗಾಂಧಿ ಹತ್ಯೆಯ ತನಿಖೆ ನಡೆಸುತ್ತಿದ್ದ ಜೈನ್ ಆಯೋಗವು, ತಮಿಳುನಾಡಿನಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆಯು ಎಲ್ಟಿಟಿಇಗೆ ಮುಕ್ತ ಸ್ವಾತಂತ್ರ್ಯ ನೀಡುತ್ತಿದೆ ಎಂದು ಆರೋಪಿಸಿತು. ಡಿಎಂಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಲು ಆರಂಭಿಸಿತ್ತು. ಗುಜ್ರಾಲ್ ಇದಕ್ಕೆ ಸಿದ್ಧರಿರಲಿಲ್ಲ. ನವೆಂಬರ್ 28ರಂದು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಹಿಂಪಡೆಯಿತು.

ನಾಯಕತ್ವದ ಕೊರತೆ

1989ರಿಂದ 1998ರವರೆಗಿನ ಅವಧಿಯಲ್ಲಿ ತೃತೀಯ ರಂಗದ ನಾಲ್ಕು ಸರ್ಕಾರಗಳು ರಚನೆಯಾಗಿದ್ದವು. ಆದರೆ ನಾಯಕತ್ವದ ಕೊರತೆ ಮತ್ತು ಸಂಘರ್ಷದಿಂದ ಯಾವ ಸರ್ಕಾರವೂ ಅವಧಿ ಪೂರ್ಣಗೊಳಿಸಲು ಯಶಸ್ವಿಯಾಗಲಿಲ್ಲ.

ಆ ಕಾಲಘಟ್ಟದಲ್ಲಿ ಎಲ್ಲಾ ಪಕ್ಷಗಳಲ್ಲೂ ಸಮರ್ಥ ನಾಯಕರಿದ್ದರು. ಆದರೆ ಒಕ್ಕೂಟದ ನಾಯಕ ಯಾರಾಗಬೇಕು ಎಂಬಲ್ಲಿ ಗೊಂದಲವಿತ್ತು. ಯಾರೂ ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ದೇವೇಗೌಡರಿಗೆ ಪ್ರಧಾನಿ ಹುದ್ದೆ ಒಲಿಯುವುದಕ್ಕೂ ಮುನ್ನ, ಜ್ಯೋತಿ ಬಸು, ಚಂದ್ರಬಾಬು ನಾಯ್ಡು ಹಾಗೂ ವಿ.ಪಿ. ಸಿಂಗ್ ಅವರನ್ನೂ ಈ ಹುದ್ದೆಯನ್ನು ಸ್ವೀಕರಿಸುವಂತೆ ಅಂದಿನ ಮುಖಂಡರು ಮನವಿ ಮಾಡಿದ್ದರು. ಆದರೆ ಅವರು ಪ್ರಸ್ತಾವವನ್ನು ನಿರಾಕರಿಸಿದ್ದರು.

ಒಗ್ಗಟ್ಟಿಗೆ ಅಡ್ಡಿಯಾದ ಒಮ್ಮತದ ಕೊರತೆ

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟ ತೃತೀಯ ರಂಗವನ್ನು ರಚಿಸುವ ಯತ್ನಗಳು 2014ರ ನಂತರ ಪದೇ ಪದೇ ನಡೆದಿವೆ. ಆದರೆ ಯಾವ ಪ್ರಯತ್ನವೂ ಯಶ ಕಂಡಿಲ್ಲ.ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವನ್ನು ಸೇರಿಕೊಂಡು ಬಿಜೆಪಿ ನೇತೃತ್ವದ ಎನ್ಡಿಎಯನ್ನು ಎದುರಿಸುವ ಬಗ್ಗೆ ಯಾವ ಪ್ರಾದೇಶಿಕ ಪಕ್ಷದಲ್ಲೂ ಆಸಕ್ತಿ ಇಲ್ಲ. ಹೀಗಾಗಿ 2014ರ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಒಕ್ಕೂಟದ ಕಿರಿಯ ಮಿತ್ರಪಕ್ಷವಾಗಿ ಮಾತ್ರ ಪರಿಗಣಿಸಲಾಗಿದೆ. ಈ ಸಲುವಾಗಿಯೇ ಪ್ರಾದೇಶಿಕ ಪಕ್ಷಗಳೆಲ್ಲವೂ ಒಟ್ಟಿಗೆ ಸೇರಿ, ತೃತೀಯ ರಂಗ ರಚಿಸುವ ಮಾತು ಬಾರಿಬಾರಿ ಕೇಳಿಬಂದಿದೆ. ಆಗಾಗ ಶಕ್ತಿಪ್ರದರ್ಶನ ನಡೆದಿರುವುದು ಬಿಟ್ಟರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

2018ರ ಮಾರ್ಚ್ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಬಿಜೆಪಿ ವಿರುದ್ಧ ಒಗ್ಗಟ್ಟಾಗುವಂತೆ ಎಲ್ಲಾ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದರು. ಈ ಇಬ್ಬರೂ ನಾಯಕರು ಕೋಲ್ಕತ್ತಾದಲ್ಲಿ ಸಭೆಯನ್ನೂ ನಡೆಸಿದ್ದರು. ಸಭೆಯ ನಂತರ ಕೆ.ಸಿ.ಆರ್ ಅವರು, ‘ಕಾಂಗ್ರೆಸ್ ಅನ್ನು ಹೊರಗಿಟ್ಟು ಎನ್ಡಿಎಯೇತರ ಎಲ್ಲಾ ಪಕ್ಷಗಳೂ ಸೇರಿ ತೃತೀಯ ರಂಗವನ್ನು ರಚಿಸಿ ಬಿಜೆಪಿಯನ್ನು ಎದುರಿಸಬೇಕು’ ಎಂದು ಕರೆ ನೀಡಿದ್ದರು. ಈ ಕರೆಗೆ ಮಮತಾ ಬ್ಯಾನರ್ಜಿ ಅವರೇ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ನಂತರದ ದಿನಗಳಲ್ಲಿ ತೃತೀಯ ರಂಗವನ್ನು ರಚಿಸುವ ಪ್ರಯತ್ನವನ್ನು ಕೆ.ಸಿ.ಆರ್ ಅವರು ತ್ಯಜಿಸಿದರು.

2018ರ ಮೇನಲ್ಲಿ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಎನ್ಡಿಎಯೇತರ ಎಲ್ಲಾ ಪಕ್ಷಗಳ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಪಿಎಂನ ಸೀತಾರಾಂ ಯೆಚೂರಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್ಪಿಯ ಮಾಯಾವತಿ, ಟಿಡಿಪಿಯ ಚಂದ್ರಬಾಬು ನಾಯ್ಡು, ಆರ್ಜೆಡಿಯ ತೇಜಸ್ವಿ ಯಾದವ್ ಮತ್ತಿತರರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದು ಬಿಜೆಪಿ ಮತ್ತು ಎನ್ಡಿಎ ವಿರುದ್ಧದ ಒಕ್ಕೂಟದ ಬಲ ಪ್ರದರ್ಶನ ಎಂದೇ ಬಿಂಬಿಸಲಾಗಿತ್ತು. ಆದರೆ ಈ ಒಗ್ಗಟ್ಟು 2019ರ ಲೋಕಸಭಾ ಚುನಾವಣೆವರೆಗೆ ಉಳಿಯಲಿಲ್ಲ.

2019ರ ಲೋಕಸಭಾ ಚುನಾವಣೆಗೂ ಮುನ್ನ ಕೋಲ್ಕತ್ತಾದಲ್ಲಿ ಮತ್ತೊಮ್ಮೆ ತೃತೀಯ ರಂಗದ ಬಲ ಪ್ರದರ್ಶನ ನಡೆಯಿತು. ಮಮತಾ ಬ್ಯಾನರ್ಜಿ ಅವರು ಕರೆ ನೀಡಿದ್ದ ಈ ಒಕ್ಕೂಟ ರಂಗದ ರ್ಯಾಲಿಯಲ್ಲಿ ಎನ್ಡಿಯೆಯೇತರ ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ಮಾಯಾವತಿ, ಚಂದ್ರಬಾಬು ನಾಯ್ಡು, ತೇಜಸ್ವಿ ಯಾದವ್, ಕೆ.ಸಿ.ಆರ್., ಚಂದ್ರಬಾಬು ನಾಯ್ಡು, ಡಿಎಂಕೆಯ ಎಂ.ಕೆ.ಸ್ಟಾಲಿನ್, ಎನ್ಸಿಪಿಯ ಶರದ್ ಪವಾರ್, ಎನ್ಸಿಯ ಫಾರೂಕ್ ಅಬ್ದುಲ್ಲಾ, ಜೆಎಂಎಂನ ಹೇಮಂತ್ ಸೊರೆನ್, ಎಎಪಿಯ ಅರವಿಂದ ಕೇಜ್ರಿವಾಲ್, ಶರದ್ ಯಾದವ್ ಸರಿದಂತೆ ಎಲ್ಲರೂ ರ್ಯಾಲಿ ನಡೆಸಿದ್ದರು. ಕಾಂಗ್ರೆಸ್ ಪರವಾಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದರು.

ಈ ಒಕ್ಕೂಟ ರಂಗವು ಅಸ್ತಿತ್ವಕ್ಕೆ ಬರುವ ಮುನ್ನವೇ, ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಚರ್ಚೆ ಉದ್ಭವಿಸಿತು. ಇದು ಪೈಪೋಟಿಯಾಗಿ ಬದಲಾಯಿತು. ರಾಹುಲ್ ಗಾಂಧಿ, ಶರದ್ ಪವಾರ್, ಮಾಯಾವತಿ, ಮಮತಾ ಬ್ಯಾನರ್ಜಿ ಎಲ್ಲರೂ ಪ್ರಧಾನಿಯಾಗುವ ಇಂಗಿತ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಒಮ್ಮತ ಮೂಡದೆ ಒಕ್ಕೂಟ ರಂಗವೇ ವಿಸರ್ಜನೆಯಾಯಿತು. ಚುನಾವಣೆಯಲ್ಲಿ ಬಿಜೆಪಿ ಭಾರಿ ಬಲದೊಂದಿಗೆ ಗೆದ್ದು, ಮತ್ತೆ ಸರ್ಕಾರ ರಚಿಸಿತು.

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.