ಬೆಂಗಳೂರು: ಕೆರೆಗಳನ್ನೆಲ್ಲ ಆಪೋಶನ ತೆಗೆದುಕೊಂಡು ಲಂಗುಲಗಾಮಿಲ್ಲದೇ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ‘ಜಲದಾಹ’ವೂ ದಿನೇ ದಿನೇ ಹೆಚ್ಚುತ್ತಲೇ ಇದೆ. ಜಲಮಂಡಳಿಯು ನಿತ್ಯ 140 ಕೋಟಿ ಲೀಟರ್ (ಗೃಹ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸೇರಿ) ನೀರನ್ನು ನಗರಕ್ಕೆ ಪೂರೈಸುತ್ತಿದೆ. 2031ರ ಹೊತ್ತಿಗೆ ಈ ಬೇಡಿಕೆ ದಿನಕ್ಕೆ 354 ಕೋಟಿ ಲೀಟರ್‌ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.

ನಗರದ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಸರ್ಕಾರ ಸ್ಥಳೀಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಬದಲು ನೂರಾರು ಕಿಲೋಮೀಟರ್ ದೂರದಿಂದ ನೀರು ತರಿಸುವುದಕ್ಕೇ ಆದ್ಯತೆ ನೀಡುತ್ತಿದೆ.

ಕಾವೇರಿ ಐದನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಕೆಆರ್‌ಎಸ್ ಜಲಾಶಯದ ನೀರಿನ ಪಾಲು ನಗರಕ್ಕೆ ಲಭಿಸದು. ಇದನ್ನರಿತ ಸರ್ಕಾರ, ಜಲಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಎನ್.ತ್ಯಾಗರಾಜ ನೇತೃತ್ವದ ಸಮಿತಿ ವರದಿಯ ಶಿಫಾರಸಿನಂತೆ ಲಿಂಗನಮಕ್ಕಿ ಜಲಾಶಯದ ನೀರಿನ ಮೇಲೆ ಕಣ್ಣಿಟ್ಟಿತ್ತು. ಸುಮಾರು 350 ಕಿ.ಮೀ ದೂರದಿಂದ 10 ಟಿಎಂಸಿ ಅಡಿ ನೀರು ತರುವ ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವ ಸಿದ್ಧತೆಯೂ ನಾಲ್ಕು ವರ್ಷಗಳ ಹಿಂದೆ ನಡೆದಿತ್ತು. ಮಲೆನಾಡಿನ ಹಸಿರು ವನಸಿರಿಯನ್ನೇ ಬುಡಮೇಲು ಮಾಡುವ ಈ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಬೆಂಗಳೂರಿನ ಉಸ್ತುವಾರಿ ಸಚಿವರಾಗಿದ್ದಾಗ ಆಲಮಟ್ಟಿಯ ನೀರನ್ನು ಇಲ್ಲಿಗೆ ಹರಿಸುವ ಪ್ರಸ್ತಾಪವನ್ನೂ ಮಾಡಿದ್ದರು. ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿ ಬಳಸುವ ನಿಟ್ಟಿನಲ್ಲೂ ಚರ್ಚೆಗಳು ನಡೆದಿದ್ದವು. ಹೊರಗಡೆಯಿಂದ ನಗರಕ್ಕೆ ನೀರು ತರುವ ಯೋಜನೆಗಳಿಗೆ ಇತ್ತೀಚಿನ ಸೇರ್ಪಡೆ ಮೇಕೆದಾಟು. ಈ ನಡುವೆ ಎತ್ತಿನಹೊಳೆ ಯೋಜನೆ ಬಳಸಿಕೊಂಡು 2.5 ಟಿಎಂಸಿ ಅಡಿ ನೀರನ್ನು ಪಡೆದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಸಂಗ್ರಹಿಸಿ ಬಳಸುವ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ.

ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 937 ಕೆರೆಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ ಉಳಿದಿರುವ ಕೆರೆಗಳು 210 ಮಾತ್ರ. ಕೆರೆಗಳಿಗೆ ಮಳೆ ನೀರು ಹರಿಸಲು 850 ಕಿ.ಮೀ ಉದ್ದದ ರಾಜಕಾಲುವೆ ಜಾಲವೂ ನಗರದಲ್ಲಿದೆ. ಹಾಗಿದ್ದರೂ ದೂರದ ಊರುಗಳಿಂದ ನಗರಕ್ಕೆ ನೀರು ಪೂರೈಸಲು ಸಾವಿರಾರು ಕೋಟಿ ಸುರಿಯುವ ಬದಲು ಇಲ್ಲಿನ ಕೆರೆಗಳ ಹಾಗೂ ರಾಜಕಾಲುವೆಗಳ ಪುನರುಜ್ಜೀವನಕ್ಕೆ ಆ ಹಣವನ್ನು ಬಳಸಬಹುದಲ್ಲವೇ ಎಂಬುದು ತಜ್ಞರ ಪ್ರಶ್ನೆ.

ರಾಜಧಾನಿಯ ನೀರಿನ ಅಗತ್ಯವನ್ನು 1970ರ ದಶಕದವರೆಗೂ ಪೂರೈಸುತ್ತಿದ್ದುದು ಇಲ್ಲಿನ ಕೆರೆಗಳು ಹಾಗೂ ಬಾವಿಗಳು. 1974ರಲ್ಲಿ ನಗರಕ್ಕೆ ಕಾವೇರಿ ನೀರಿನ ಪೂರೈಕೆ ಆರಂಭವಾದ ಬಳಿಕ ಕೆರೆ ಕಾಲುವೆಗಳನ್ನು ಕಾಪಾಡುವ ಕಾಳಜಿ ಕಣ್ಮರೆಯಾಯಿತು. ಒತ್ತುವರಿ ಹೆಚ್ಚಳವಾಗಿ ಕೆರೆಗಳು ಅವಸಾನದ ಹಾದಿ ಹಿಡಿದವು. ಶೌಚನೀರು ಸೇರಿ ಕೆರೆಗಳು ಮಲಗುಂಡಿಗಳಂತಾದವು. ನಗರಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ ಹೆಸರಘಟ್ಟದಂತಹ ಕೆರೆಗಳ ನೀರೂ ಕುಡಿಯಲು ಯೋಗ್ಯವಲ್ಲದಂತಾಯಿತು. ಈಗ ಅವುಗಳನ್ನು ಪುನಃಶ್ಚೇತನಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಸಲಹೆ ನೀಡುತ್ತಾರೆ ತಜ್ಞರು.

ನಗರದ ಕೆರೆಗಳಲ್ಲಿ ನೀರು ಸಂಗ್ರಹದ ಒಟ್ಟು ಸಾಮರ್ಥ್ಯ 1800ರಲ್ಲಿ 35 ಟಿಎಂಸಿ ಅಡಿಗಳಷ್ಟಿತ್ತು. 1970ರ ದಶಕದಲ್ಲಿ ನಗರದ ಕೆರೆಗಳ ಪ್ರದೇಶ 3,180 ಹೆಕ್ಟೇರ್‌ಗಳಷ್ಟಿತ್ತು. ಅದೀಗ 2,792 ಹೆಕ್ಟೇರ್‌ಗಳಿಗೆ ಇಳಿಕೆಯಾಗಿದೆ. ಕೆರೆಗಳ ಈಗಿನ ವಿಸ್ತೀರ್ಣದ ಪ್ರಕಾರ ಅವುಗಳಲ್ಲಿ 5 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಿಸಬಹುದು. ಹೂಳು ತುಂಬಿರುವುದರಿಂದ ವಾಸ್ತವದಲ್ಲಿ 1.2 ಟಿಎಂಸಿ ಅಡಿಗಳಷ್ಟು ಮಾತ್ರ ನೀರು ಸಂಗ್ರಹಿಸಬಹುದು. ಈ ಕೆರೆಗಳ ಹೂಳೆತ್ತಿ, ಪುನರುಜ್ಜೀವನಗೊಳಿಸಿದರೆ, ಅವುಗಳ ಸಂಗ್ರಹ ಸಾಮರ್ಥ್ಯವೂ ಹೆಚ್ಚಲಿದೆ ಎಂದು ಐಐಎಸ್ಸಿಯ ಅಧ್ಯಯನ ವರದಿಗಳು ತಿಳಿಸಿವೆ.

‘ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ 787 ಮಿ.ಮೀ ಮಳೆ ಆಗುತ್ತದೆ. 14.80 ಟಿಎಂಸಿ ಅಡಿಯಷ್ಟು ಮಳೆ ನೀರು ಪ್ರತಿ ವರ್ಷ ಸಿಗುತ್ತದೆ. ಸದ್ಯಕ್ಕೆ ನಗರಕ್ಕೆ 18.34 ಟಿಎಂಸಿ ಅಡಿಗಳಷ್ಟು ನೀರು ಸಾಕಾಗುತ್ತದೆ. ಮಳೆ ನೀರು ಸಂಗ್ರಹಿಸಿ ಬಳಸಲು ಹಾಗೂ ಕೆರೆಗಳಲ್ಲಿ ಶುದ್ಧ ಮಳೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ನಗರಕ್ಕೆ ನೂರಾರು ಕಿ.ಮೀ ದೂರದಿಂದ ನೀರು ತರುವ ಯೋಜನೆಗಳಿಗೆ ತಗಲುವ ಅರ್ಧದಷ್ಟು ಬಂಡವಾಳವೂ ಇದಕ್ಕೇ ಬೇಕಾಗದು. ಕಾವೇರಿ ನೀರು ಪೂರೈಕೆಯ ಹೊರತಾಗಿಯೂ ನಗರದಲ್ಲಿ ಈಗಲೂ ಶೇ 40ರಷ್ಟು ಮಂದಿ ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ. ಕೆರೆ ಪುನಶ್ಚೇತನದಿಂದ ಅಂತರ್ಜಲವೂ ವೃದ್ಧಿಸಲಿದೆ’ ಎಂದು ಐಐಎಸ್ಸಿಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ತಿಳಿಸಿದರು.

ಅಂಕಿ ಅಂಶ

14.80 ಟಿಎಂಸಿ ಅಡಿ – ನಗರದಲ್ಲಿ ವರ್ಷದಲ್ಲಿ ಲಭ್ಯವಾಗುವ ಮಳೆ ನೀರು

16.04 ಟಿಎಂಸಿ ಅಡಿ – ನಗರದಲ್ಲಿ ವರ್ಷದಲ್ಲಿ ಕೊಳಚೆ ನೀರು ಶುದ್ಧೀಕರಣದಿಂದ ಲಭಿಸಬಹುದಾದ ನೀರು

18.34 ಟಿಎಂಸಿ ಅಡಿ – ಗೃಹ ಮತ್ತು ವಾಣಿಜ್ಯ ಬಳಕೆಗೆ ಅಗತ್ಯವಿರುವ ನೀರು (ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್‌ನಂತೆ)

ನೀರಿನ ಮೌಲ್ಯ ಅರ್ಥ ಮಾಡಿಕೊಳ್ಳುತ್ತಿಲ್ಲ: ಜಲ ತಜ್ಞರ ಅಭಿಪ್ರಾಯ

ನಾಗರಿಕರು ನೀರಿನ ಬೆಲೆ ಅರ್ಥ ಮಾಡಿಕೊಳ್ಳದ ಕಾರಣ ಮನಸೋ ಇಚ್ಛೆ ಬಳಸುವ ಮನೋಭಾವ ಹೊಂದಿದ್ದಾರೆ. ಹೀಗಾಗಿಯೇ, ನಗರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಟ್ಟಡಗಳಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎನ್ನುವುದು ಜಲತಜ್ಞರ ಅಭಿಪ್ರಾಯ.

‘ನೀರು ದಂಡಿಯಾಗಿ ಲಭ್ಯವಿರುವಾಗ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಟ್ಟಡಗಳಲ್ಲಿ ಏಕೆ ಅಳವಡಿಸಬೇಕು ಎನ್ನುವ ಮನಸ್ಥಿತಿ ಇದೆ’ ಎಂದು ಜಲತಜ್ಞ ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

‘ಕೊಳವೆಬಾವಿ ಹೊಂದಿರುವ ಮನೆಗಳಿಗೆ ಕಡ್ಡಾಯವಾಗಿ ಈ ವ್ಯವಸ್ಥೆ ಅಳವಡಿಸುವಂತೆ ನಿಯಮ ರೂಪಿಸಬೇಕು. ಆಗ ಮಾತ್ರ ಪರಿಸ್ಥಿತಿ ಸುಧಾರಿಸಬಹುದು. ಬೆಂಗಳೂರಿನಲ್ಲಿ ಅಂದಾಜು ಮೂರು ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲಾಗಿದೆ. ಚೆನ್ನೈ ನಂತರ ಬೆಂಗಳೂರಿನಲ್ಲೇ ಅತಿ ಹೆಚ್ಚು ಈ ವ್ಯವಸ್ಥೆ ಅಳವಡಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಕಟ್ಟಡದ ಮಾಲೀಕತ್ವ ಹೊಂದಿರುವವರು ಮತ್ತು ನೀರಿನ ಬಗ್ಗೆ ಕಾಳಜಿ ಹೊಂದಿರುವವರು ಈ ವ್ಯವಸ್ಥೆ ಅಳವಡಿಸಿದ್ದಾರೆ. ಕೆಲವರಿಗೆ ಮನಸ್ಸು ಇದ್ದರೂ ಜಾಗದ ಕೊರತೆ ಇದೆ. ಹೊಸ ಕಟ್ಟಡಗಳಿಗೆ ಕಡ್ಡಾಯವಾಗಿ ಈ ವ್ಯವಸ್ಥೆ ಅಳವಡಿಸುವಂತೆ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ವಿವರಿಸಿದ್ದಾರೆ.

‘ಸುಲಭವಾಗಿ ಕಾವೇರಿ ನೀರು ದೊರೆಯುತ್ತಿರುವುದರಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲು ನಾಗರಿಕರು ಆಸಕ್ತಿ ತೋರುತ್ತಿಲ್ಲ. ನೀರಿನ ಬೆಲೆಯೂ ಇಲ್ಲಿ ಬಹಳ ಕಡಿಮೆ ಇದೆ’ ಎಂದು ಜಲ ಸಂರಕ್ಷಣಾ ತಜ್ಞ ಎ.ಆರ್. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

‘ಬೆಂಗಳೂರು ಜಲಮಂಡಳಿ ಒಂದು ಸಾವಿರ ಲೀಟರ್‌ಗೆ ₹7 ನಿಗದಿಪಡಿಪಡಿಸಿದೆ. ನೀರಿನ ಬೆಲೆ ಅರ್ಥ ಮಾಡಿಕೊಂಡರೆ ಮಾತ್ರ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ಜನರು ಮುಂದಾಗಬಹುದು. ಕೆಲವರು ಕಾವೇರಿ ಮತ್ತು ಮಳೆ ನೀರು ಸಂಗ್ರಹ ಬೇಡ ಎಂದು ಕೊಳವೆ ಬಾವಿ ಕೊರೆಯಿಸಿಕೊಂಡು ಅದರ ಮೇಲೆಯೇ ಅವಲಂಬನೆಯಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಒಂದು ಕುಟುಂಬಕ್ಕೆ ಪ್ರತಿ ತಿಂಗಳು 10 ಸಾವಿರ ಲೀಟರ್ ನೀರು ಪೂರೈಸಬೇಕು. 10 ಸಾವಿರ ಲೀಟರ್ ನಂತರ ಬಳಸುವ ಪ್ರತಿ ಲೀಟರ್ ನೀರಿಗೆ ₹250ರಿಂದ ₹300 ದರ ನಿಗದಿಪಡಿಸಬೇಕು. ಈ ರೀತಿಯ ಕ್ರಮಗಳಿಗೆ ರಾಜಕೀಯ ಇಚ್ಛಾಶಕ್ತಿ ಮುಖ್ಯ’ ಎಂದು ವಿವರಿಸಿದ್ದಾರೆ.

ಎ.ಆರ್. ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.