ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಡಿಗಡಿಗೆ ಕಾಡುವ ಘೀ ರೋಸ್ಟ್‌ ಸಿಗಡಿ

ಫಾಲೋ ಮಾಡಿ
Comments

ಗಡಿಯ ತಾಜಾತನ, ಮನೆಯ ಶೈಲಿಯಲ್ಲಿ ಕುಟ್ಟಿ ಪುಡಿ ಮಾಡಿದ ಮಸಾಲೆಯ ಸಾಚಾತನ, ತುಪ್ಪದಲ್ಲಿ ಹುರಿಯುತ್ತಾ ಬೇಯುವಾಗ ಬಿಟ್ಟುಕೊಂಡ ರಸ, ಕರಿಬೇವಿನೆಲೆಯ ಘಮ... ಸಿಗಡಿ ಘೀ ರೋಸ್ಟ್‌ನ ಮೊದಲ ತುತ್ತು ಬಾಯಿಗಿಟ್ಡೆ.ದವಡೆ ಹಲ್ಲುಗಳ ನಡುವಿನಿಂದ ಚಿರ್ರ್‌ ಅಂತ ಚಿಮ್ಮಿತು. ಸಿಗಡಿ ರಸ ಬಾಯಿಯೊಳಗೆ ಲಾಲಾರಸದ ಸರೋವರ! ಅರೆ ಕ್ಷಣ ಧ್ಯಾನಸ್ಥ ಸ್ಥಿತಿಗೆ ಬಂದುಬಿಟ್ಟೆ!

ಕಣ್ಮುಚ್ಚಿ ಆಸ್ವಾದಿಸಿದೆ... ತುಪ್ಪ, ಮಸಾಲೆಯಲ್ಲಿನ ಬ್ಯಾಡಗಿ ಮೆಣಸು, ಮೆಂತೆ, ಕೊತ್ತಂಬರಿ ಬೀಜ, ಓಮ, ಕರುಂಕುರುಂ ಎನ್ನುವಂತೆ ಹುರಿದ ಕರಿಬೇವಿನೆಲೆಯ ಜೊತೆಗೆ ಸಿಗಡಿ ಸೃಷ್ಟಿಸಿದ ಅದ್ಭುತ ರುಚಿ. ಮುಂದಿನ ನಾಲ್ಕೈದು ತುತ್ತು ಸಿಗಡಿ ಹೊಟ್ಟೆಗಿಳಿಯುವವರೆಗೂ ಇದೇ ಆನಂದ.

ಅಪ್ಪಟ ಮಂಗಳೂರು ಶೈಲಿಯ ಮೀನಿನ ಆಹಾರಗಳಿಗೆ ಮನೆ ಮಾತಾಗಿರುವ, ಜಯನಗರ ನಾಲ್ಕನೇ ಬ್ಲಾಕ್‌ನ ‘ಪರಿವಾರ್‌’ ಹೋಟೆಲ್‌ನಲ್ಲಿ ಸಿಗಡಿ ಘೀ ರೋಸ್ಟ್ ಸವಿದಾಗಿನ ಅನುಭವಸಾರವಿದು.

ಯೀಸ್ಟ್‌ ಹಾಕದ ‘ಪರಿವಾರ್‌ ಸ್ಪೆಷಲ್‌ ಗಿನ್ನಲ್‌ ಇಡ್ಲಿ’, ನೀರು ದೋಸೆ, ಮೆಂತೆ ದೋಸೆಗೆ ಬಡಿಸಿದ ನಾಟಿ ಕೋಳಿ ಸಾರು, ಚಟ್ನಿಯನ್ನು ತಟ್ಟೆಯ ಬದಿಗಿಟ್ಟು ಸಿಗಡಿ ಘೀ ರೋಸ್ಟ್‌ನ ಗ್ರೇವಿಯಲ್ಲೇ ಅವುಗಳನ್ನೂ ತಿನ್ನುವಷ್ಟು ಇಷ್ಟವಾಯಿತು.

ಗುಣಮಟ್ಟವೇ ಯಶಸ್ಸಿನ ಸೂತ್ರ:‘ಗುಣಮಟ್ಟ ಮತ್ತು ರುಚಿಯ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವುದು ಹೋಟೆಲ್‌ ಉದ್ಯಮದಲ್ಲಿ ಗೆಲ್ಲಲು ಬೇಕಾದ ಮೂಲಮಂತ್ರ. ಮಂಗಳೂರಿನಿಂದ ಪ್ರತಿದಿನ ಬೆಳಗಿನ ಜಾವ ಯಶವಂತಪುರ ಮಾರುಕಟ್ಟೆಗೆ ಬರುವ ಬಗೆ ಬಗೆಯ ಮೀನುಗಳನ್ನು ನಾವು ಕೈಯಾರೆ ಆಯ್ದು ತರುತ್ತೇವೆ. ಈ ತಾಜಾತನ ನಮ್ಮ ಆಹಾರದಲ್ಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ’ ಎಂದು ವಿವರಿಸುತ್ತಾರೆ, ಮಾಲೀಕ ವಿಶ್ವನಾಥ ಪೂಜಾರಿ.

ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಜೊತೆಯಾಗಿ ಊಟಕ್ಕೆ ಬಂದರೆ ಹವಾನಿಯಂತ್ರಿತ ಕೊಠಡಿಗಿಂತ ಹೊರಗಿನ ಕೊಠಡಿಯಲ್ಲಿ ಕೂರುವಂತೆ ಸಲಹೆ ಕೊಡುತ್ತೇವೆ. ಮಾಂಸಾಹಾರದ ಘಮಲು ಸಸ್ಯಾಹಾರಿಗಳಿಗೆ ಕಿರಿಕಿರಿ ಅನಿಸಬಾರದು ಎಂಬುದು ನಮ್ಮ ಉದ್ದೇಶ’ ಎಂದು ಮ್ಯಾನೇಜರ್‌ ಪ್ರಭಾಕರ್‌ ರೈ ಹೇಳುತ್ತಾರೆ.

ಆರೋಗ್ಯಕರ ತಂದೂರಿ ಫ್ರೈಗಳು: ಕೊಡ್ಡೈ, ಮಾಂಜಿ, ಅಂಜಲ್‌, ಬಂಗುಡೆ, ದೊಡ್ಡ ಕಾಣೆ ಮೀನುಗಳ ತವಾ ಅಥವಾ ಮಸಾಲಾ ಫ್ರೈಗೆ ಹೆಚ್ಚು ಎಣ್ಣೆ ಬಳಕೆಯಾಗುತ್ತದೆ. ಹಾಗಾಗಿ ಎಣ್ಣೆಯ ಅವಶ್ಯಕತೆಯೇ ಇಲ್ಲದ ತಂದೂರಿ ಫ್ರೈಗಳಿಗೆ ಹೆಚ್ಚು ಬೇಡಿಕೆ ಇಡುತ್ತಾರೆ.

ಮಾಂಸಾಹಾರಿ ಮತ್ತು ಸಸ್ಯಾಹಾರಿ ಖಾದ್ಯಗಳಿಗೆ ಬಳಸುವ ಮಸಾಲೆ ಪುಡಿಗಳನ್ನು ‘ಪರಿವಾರ್‌’ನ ಅಡುಗೆ ಮನೆಯಲ್ಲಿ ಹುರಿದು, ಕುಟ್ಟಿ ಮಾಡಲಾಗುತ್ತದೆ. ಯಾವುದೇ ಕೃತಕ ಬಣ್ಣ ಅಥವಾ ಸಿದ್ಧಆಹಾರ ಪುಡಿಗಳ ಬಳಕೆ ಇಲ್ಲಿ ನಿಷಿದ್ಧ. ಯಾವುದೇ ಬಗೆಯ ಊಟ ಮಾಡಿದರೂಕೊನೆಯಲ್ಲಿ, ವಿಶಿಷ್ಟವಾದ ಫ್ರೈಡ್‌ ಐಸ್‌ಕ್ರೀಮ್‌ ಸವಿಯಲು ಮರೆಯಬೇಡಿ. ಸ್ಟಾರ್ಟರ್‌ಗಳಲ್ಲಿ ‘ಫ್ರೂಟ್‌ ಪಂಚ್‌’ ಕೂಡಾ ನಿಮ್ಮ ಮೆನುವಿನಲ್ಲಿರಲಿ.

ಇಲ್ಲಿ ಸಿಗುವ ಮಾಂಸಾಹಾರಿ ಥಾಲಿಗೆ ಕೇವಲ ₹160. ಅದರಲ್ಲಿ ಬಂಗುಡೆ ಸಾರು, ಕಾಣೆ ಫ್ರೈ, ಕೆಂಪು ಅಥವಾ ಬಿಳಿ ಅನ್ನ, ತರಕಾರಿ ಪಲ್ಯಗಳು ಮತ್ತು ಫುಲ್ಕ ಇರುತ್ತದೆ. ಶನಿವಾರ ಮತ್ತು ಭಾನುವಾರಗಳಂದು ಸಸ್ಯಾಹಾರ ಮತ್ತು ಮಾಂಸಾಹಾರದ ಥಾಲಿಗೆ ವಾರದ ರಜೆ.

ರಸಂ ಹಿಂದಿದೆರಸವತ್ತಾದ ಕತೆ
ರಸಂ ಹಿಂದೆ ಒಂದು ರಸವತ್ತಾದ ಕತೆಯೂ ಇದೆ ಎಂದು ನಕ್ಕರುಪ್ರಭಾಕರ್‌ ರೈ. ‘ಮದ್ಯ ಸೇವಿಸುವವರು ಏನನ್ನಾದರೂ ನೆಂಜಿಕೊಳ್ಳುವುದು ಸಾಮಾನ್ಯ. ಗರಂ, ಕುರುಂ, ಖಾರವಾದದ್ದು ಏನೂ ಇಲ್ಲದಿದ್ದರೆ ಉಪ್ಪಿನಕಾಯಿಯನ್ನು ನಾಲಿಗೆ ಮಧ್ಯಕ್ಕೆ ತಾಗಿಸಿ ಚಪ್ಪರಿಸುತ್ತಾರೆ. ಆದರೆ ನಮ್ಮಲ್ಲಿ ಕೆಲವು ಮದ್ಯ ಪ್ರಿಯರು ಪ್ರತಿ ಗುಟುಕಿನ ಮಧ್ಯೆ ಈ ರಸಂ ನೆಂಜಿಕೊಳ್ಳುತ್ತಾರಂತೆ!

ಹೆಸರು: ಪರಿವಾರ್‌– ದಿ ಮಲ್ಟಿ ಕ್ಯಸಿನ್‌ ಫ್ಯಾಮಿಲಿ ರೆಸ್ಟೊರೆಂಟ್‌,
11ನೇ ಮುಖ್ಯರಸ್ತೆ, ಸಿಡಿಆರ್ ಮೆಡಿಕಲ್‌ ಸೆಂಟರ್‌ ಎದುರು, 4ನೇ ಬ್ಲಾಕ್‌ ಜಯನಗರ
ಸಮಯ: ಬೆಳಿಗ್ಗೆ 11ರಿಂದ ರಾತ್ರಿ 11 (ಸಂಜೆ 4ರಿಂದ 6 ನಿಗದಿತ ಆಹಾರ)
ವಿಶೇಷ: ಸಿಗಡಿ ಘೀ ರೋಸ್ಟ್‌, ಮೀನಿನ ಖಾದ್ಯ, ಗಿನ್ನಲ್‌ ಇಡ್ಲಿ, ಮೆಂತೆ ದೋಸೆ
ಒಬ್ಬರಿಗೆ: ಮಾಂಸಾಹಾರಿ ಥಾಲಿ– ₹ 160
ಟೇಬಲ್‌ ಕಾಯ್ದಿರಿಸಲು: 70222 37157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT