ಚೊಚ್ಚಲ ಹೆರಿಗೆ ಸಹಜವಾಗಿ ಆಗಿದ್ದು, 15 ದಿನಗಳಾಗಿವೆ. ನನಗೆ ತಿಳಿ ಗುಲಾಬಿ ಬಣ್ಣ ಮಿಶ್ರಿತ ಬಿಳಿಮುಟ್ಟು ಕೀವಿನ ತರಹ ಸ್ರಾವವಾಗುತ್ತಿದೆ. ಬರೀ ಸ್ರಾವವಷ್ಟೆ. ವಾಸನೆ ಏನೂ ಇಲ್ಲ. ಆದರೆ ಬಟ್ಟೆ ಬದಲಾಯಿಸುವುದು ತಡವಾದಲ್ಲಿ ಕೆಟ್ಟವಾಸನೆ ಅನಿಸುತ್ತದೆ. ಆಗೊಮ್ಮೆ ಈಗೊಮ್ಮೆ ಹೊಟ್ಟೆಹಿಂಡಿದ ಹಾಗಾಗುತ್ತದೆ. ನನಗೆ ಇನ್ನೂ ಎಷ್ಟು ದಿನ ಇಂತಹ ಸ್ರಾವವಾಗುತ್ತದೆ? ಇದು ಅಪಾಯವೇ? ತಿಳಿಸಿ ನಮ್ಮ ವೈದ್ಯರು ಒಂದು ತಿಂಗಳ ನಂತರವೇ ಚೆಕ್‌ಅಪ್‌ಗೆ ಬರಲು ತಿಳಿಸಿದ್ದಾರೆ. ನಮ್ಮಮ್ಮ ಅವರಿಗೂ ಎರಡು ತಿಂಗಳವರೆಗೆ ಸ್ರಾವವಾಗಿತ್ತು ಎಂದು ಹೇಳುತ್ತಿದ್ದಾರೆ ತೊಂದರೆ ಇಲ್ಲವೇ ಮೇಡಂ?
ಹೆರಿಗೆಯ ನಂತರ ಈ ತರಹದ ರಕ್ತಸ್ರಾವ ಆಗುವುದು ಸಹಜ. ಇದು ನಾಲ್ಕರಿಂದ ಆರುವಾರಗಳವರೆಗೆ ಕೆಲವೊಮ್ಮೆ ಎರಡು ತಿಂಗಳವರೆಗೂ ಆಗಬಹುದು. ಇದು ಗರ್ಭಕೋಶ ತನ್ನಲ್ಲಿರುವ ಒಳ ಅಂಗಾಂಶವನ್ನು ರಕ್ತದ ಜೊತೆ ಹೊರಹಾಕುವುದರಿಂದ ಬರುವ ಸ್ರಾವ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಲೋಖಿಯಾ ಎನ್ನುತ್ತಾರೆ. ಮೊದಲ ಮೂರು ನಾಲ್ಕು ದಿನದಲ್ಲಿ ಅಚ್ಚ ಕೆಂಪಿನ ರಕ್ತಸ್ರಾವ ಉಂಟಾಗಿ ಸ್ವಲ್ಪ ಹೋಗಬಹುದು ಇದನ್ನು ಲೋಖಿಯಾ ರುಬ್ರ ಎಂದೂ ಕರೆಯುತ್ತಾರೆ.
ನಾಲ್ಕು ದಿನದ ನಂತರ ವಾರದವರೆಗೆ ಗುಲಾಬಿ ಬಣ್ಣ ಅಥವಾ ಕಂದು ಬಣ್ಣದ ಸ್ರಾವ ಉಂಟಾಗುತ್ತದೆ ಅದನ್ನ ಲೋಖಿಯಾ ಸಿರೋಸ ಎನ್ನುತ್ತಾರೆ.
ನಂತರ 8ರಿಂದ 15 ದಿನಗಳ ತನಕ ಸ್ರಾವವು ಬಿಳಿ ಅಥವಾ ಸ್ವಲ್ಪ ಹಳದಿ ಬಣ್ಣದಲ್ಲಿದ್ದು, ಸ್ವಲ್ಪ ಕೀವಿನ ತರಹವೇ ಅನಿಸಬಹುದು. ಆದರೆ ಅದು ಕೀವಲ್ಲ. ನಿಮಗೆ ಕೀವಾದರೆ ಸ್ರಾವವೂ ತುಂಬಾ ದುರ್ವಾಸನೆ ಇರುತ್ತದೆ ಜತೆಗೆ ಜ್ವರವು ಇರಬಹುದು. ಪ್ರಸವಾನಂತರ ಗರ್ಭಕೋಶವು ಮೊದಲಿದ್ದ ಸ್ಥಿತಿಗೆ ಮರಳುವವರೆಗೂ ಈ ರೀತಿಯ ಸ್ರಾವ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಜನನಾಂಗದ ಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಸ್ವಚ್ಛವಾದ ಹತ್ತಿ ಬಟ್ಟೆಯ ಒಳಉಡುಪು ಪ್ರತಿ 3ರಿಂದ 4 ಗಂಟೆಗಳಿಗೊಮ್ಮೆ ಬದಲಾಯಿಸುತ್ತಿರಬೇಕು.
ಕೆಲವು ಮಹಿಳೆಯರಲ್ಲಿ ಈ ಸ್ರಾವವು ಒಂದೇ ತಿಂಗಳಿಗೆ ನಿಂತುಹೋಗಬಹುದು. ಕೆಲವರಲ್ಲಿ ಎರಡು ತಿಂಗಳವರೆಗೂ ಮುಂದುವರಿಯಬಹುದು. ಆರಂಭದಲ್ಲಿ ಸ್ವಲ್ಪ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ, ಕಾಲಕ್ರಮೇಣ ಅದು ಕಡಿಮೆಯಾಗುತ್ತಾ ಬರುತ್ತದೆ.
ಈ ಸಮಯದಲ್ಲಿ ಅತಿಯಾದ ಚಟುವಟಿಕೆ ಬೇಡ. ಗರ್ಭಧಾರಣೆಯಲ್ಲಿ ಹಿಗ್ಗಿದ ಗರ್ಭಕೋಶ ಸಹಜಸ್ಥಿತಿಗೆ ಬರುವ ಸಂದರ್ಭದಲ್ಲಿ, ಅದು ಕುಗ್ಗುವಾಗ ಹೊಟ್ಟೆ ಕಿವುಚಿದ ಅನುಭವ ಕೆಲವರಿಗಾಗುತ್ತದೆ. ನಿಮಗೆ ಹೀಗೆ ಆಗುತ್ತಿರಬಹುದು. ಅದಕ್ಕೆ ನೀವು ಬಿಸಿನೀರಿನ ಚೀಲದಿಂದ ಹೊಟ್ಟೆಯ ಮೇಲೆ ಆಗಾಗ್ಗೆ ಶಾಖ ತೆಗೆದುಕೊಳ್ಳಿ. ಸಾಧ್ಯವಾದಷ್ಟು ನೋವು ನಿವಾರಕಗಳನ್ನ ನುಂಗುವುದನ್ನ ಕಡಿಮೆ ಮಾಡಿ. ಹೆಚ್ಚಿನ ಔಷಧಿಗಳು ಎದೆ ಹಾಲಿನಲ್ಲಿ ಅದು ಮಗುವಿಗೂ ವರ್ಗಾಯಿಸಲ್ಪಡುತ್ತದೆ. ನಿಮಗೇನಾದರೂ ಅಧಿಕ ರಕ್ತಸ್ರಾವ ಅಂದರೆ ದಿನಕ್ಕೆ ನಾಲ್ಕೈದು ಪ್ಯಾಡ್‌ಗಳಿಗಿಂತ ಹೆಚ್ಚು ಬದಲಾಯಿಸಬೇಕಾಗಿ ಬಂದರೆ ಅಥವಾ ನಿಮಗೆ ಅತಿಯಾದ ಕಿಬ್ಬೊಟ್ಟೆನೋವು ಬಂದು ಜತೆಗೆ ಜ್ವರವೂ ಬಂದರೆ, ಯೋನಿಭಾಗವೇನಾದರೂ ಊದಿಕೊಂಡರೆ, ಕೆಟ್ಟ ವಾಸನೆಯುಳ್ಳ ಸ್ರಾವ ಆಗುತ್ತಿದ್ದರೆ, ಅದರ ಜೊತೆಗೆ ಮಲಮೂತ್ರ ವಿಸರ್ಜನೆಯಲ್ಲೂ ಏನಾದರೂ ವ್ಯತ್ಯಾಸ ಬಂದಲ್ಲಿ ನೀವು ತಕ್ಷಣವೇ ವೈದ್ಯರನ್ನ ಕಾಣಬೇಕು.
ಹೆರಿಗೆಯ ನಂತರದ ಎರಡು ಮೂರು ತಿಂಗಳು ಕೂಡ ನೀವು ಪೌಷ್ಟಿಕ ಆಹಾರ ಸೇವನೆ ಮಾಡುತ್ತಾ ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಹಾಗೂ ಸುರಕ್ಷಿತ ಸ್ತನ್ಯಪಾನದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸಲೇಬೇಕು. ಹೆರಿಗೆ ನಂತರದ ಮೂರು ತಿಂಗಳನ್ನು ನಾಲ್ಕನೇ ತ್ರೈಮಾಸಿಕವೆಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ತಾಯಿ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಕಾಳಜಿ ವಹಿಸಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.