ದೂರದರ್ಶನದ ಒಂದು ಜಾಹೀರಾತು: ಪ್ರಿಯಕರನೊಬ್ಬ ಪ್ರೇಯಸಿಯನ್ನು ಔತಣಕ್ಕೆ ಆಹ್ವಾನಿಸಲು ಬರುತ್ತಾನೆ. ಆಕೆಯ ಭುಜ ಮತ್ತು ಕುತ್ತಿಗೆಯ ಭಾಗದ ಮೇಲೆ ಬಿದ್ದ ಬೆಳ್ಳಗಿನ ಸಣ್ಣ ಹುಡಿಗಳನ್ನು ಕಂಡು ‘ಮತ್ತೆ ತಲೆ ಹೊಟ್ಟಾ!’ ಎನ್ನುತ್ತಾನೆ. ಆಕೆ ನಾಚಿಕೆ, ಅವಮಾನ ಮತ್ತು ಬೇಸರದಿಂದ ಕುಗ್ಗುತ್ತಾಳೆ. ಆತ ಆಕೆಯೊಡನೆಯ ಔತಣವನ್ನು ನಿರಾಕರಿಸಿ, ಮುಂದಕ್ಕೆ ಹೊರಟುಬಿಡುತ್ತಾನೆ. ನಿಜಜೀವನದಲ್ಲಿ ತಲೆಹೊಟ್ಟು ಇಂತಹ ಸಮಸ್ಯೆಯನ್ನು ತರದಿದ್ದರೂ, ವ್ಯಕ್ತಿಗೆ ಒಂದು ಬಗೆಯ ಕಿರಿಕಿರಿಯನ್ನು ಉಂಟುಮಾಡುವುದಂತೂ ಸತ್ಯ.

ವಿಪರೀತ ತುರಿಕೆಯಿಂದ ಕೂಡಿದ ಈ ತಲೆಹೊಟ್ಟಿನ ಸಮಸ್ಯೆ ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರನ್ನೂ ಬಾಧಿಸಿರುತ್ತದೆ. ಪ್ರೌಢಾವಸ್ಥೆಯ ಆರಂಭದ ದಿನಗಳಿಂದ ಮಧ್ಯವಯಸ್ಸಿನವರೆಗೂ ಗಂಡು–ಹೆಣ್ಣು ಎಂಬ ಭೇದವಿಲ್ಲದೆ ಇಬ್ಬರನ್ನೂ ಕಾಡುತ್ತದೆಯಾದರೂ ಈ ಸಮಸ್ಯೆ ಪುರುಷರಲ್ಲಿ ಹೆಚ್ಚು. ಇದರ ತೀವ್ರತೆ ವಾತಾವರಣದ ಉಷ್ಣತೆ ಮತ್ತು ತೇವಾಂಶದ ಮೇಲೆಯೂ ಅವಲಂಬಿತವಾಗಿರುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ತಲೆಹೊಟ್ಟು ವಿಪರೀತಕ್ಕೆ ಹೋಗಬಹುದು.

ಕಾರಣಗಳೇನು?

ಹಲವು ಅಧ್ಯಯನಗಳ ಮೂಲಕ ತಲೆಹೊಟ್ಟಿಗೆ ಕಾರಣವನ್ನು ವಿಶ್ಲೇಷಿಸಲಾಗಿದೆ.

• ಒಂದು ಅಧ್ಯಯನದ ಪ್ರಕಾರ ಇದೊಂದು ಸಹಜ ಜೈವಿಕ ಕ್ರಿಯೆ. ಚರ್ಮವು ಹಲವು ಪದರಗಳಿಂದ ಮಾಡಲ್ಪಟ್ಟಿದೆ. ಕೆಳಗಿನ ಪದರಗಳು ಪಕ್ವವಾಗುತ್ತಾ ಮೇಲ್ಪದರಗಳಾಗುವುದು ಮತ್ತು ಮೇಲ್ಪದರದ ಸತ್ತ ಜೀವಕೋಶಗಳು ನಿಯಮಿತವಾಗಿ ದೇಹದಿಂದ ಹೊರಹಾಕಲ್ಪಡುವುದು ಸಹಜ ಪ್ರಕ್ರಿಯೆ. ನೆತ್ತಿಯ ಚರ್ಮವೂ ಇದಕ್ಕೆ ಹೊರತಲ್ಲ. ಈ ಭಾಗದ ಚರ್ಮದ ಮೇಲ್ಪದರಗಳಿಂದ ಉದುರುವ ಸತ್ತ ಜೀವಕೋಶಗಳೇ ತಲೆಹೊಟ್ಟು. ಸಾಮಾನ್ಯವಾಗಿ ಒಂದು ಚದರ ಸೆಂಟಿಮೀಟರ್ ನೆತ್ತಿಯ ಚರ್ಮದ ಮೂಲಕ ನಾಲ್ಕುಲಕ್ಷದ ಎಂಬತ್ತೇಳು ಸಾವಿರ ಜೀವಕೋಶಗಳು ಉದುರಿದರೆ, ತಲೆಹೊಟ್ಟಿನ ಸಮಸ್ಯೆಯಿಂದ ಬಳಲುವವರಲ್ಲಿ ಈ ಸಂಖ್ಯೆ ಎಂಟು ಲಕ್ಷದಷ್ಟಿರುತ್ತದೆ. ಈ ಜೀವಕೋಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇವು ಪರಸ್ಪರ ಹೆಚ್ಚು ಅಂಟಿಕೆಯನ್ನು ಹೊಂದಿದ್ದು ಕೆಳಗಿನ ಪದರಗಳಿಂದ ವೇಗಗತಿಯಲ್ಲಿ ಬೇರ್ಪಟ್ಟಿರುವುದು ಗಮನಕ್ಕೆ ಬರುತ್ತದೆ. ಅಲ್ಲದೆ, ಕೆಳಗಿನ ಪದರಗಳ ಜೀವಂತ ಜೀವಕೋಶಗಳೂ ಒಮ್ಮೊಮ್ಮೆ ಹೊಟ್ಟಿನೊಂದಿಗೆ (ಸತ್ತ ಜೀವಕೋಶಗಳೊಂದಿಗೆ) ಉದುರಿರುತ್ತವೆ. ಹೊಟ್ಟಿನ ಗಾತ್ರ ಮತ್ತು ಸಂಖ್ಯೆ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ನೆತ್ತಿಯ ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಬೇರೆಯಾಗಿರುತ್ತದೆ.

• ನೆತ್ತಿಯ ಚರ್ಮದ ಕೆಳಪದರಗಳಲ್ಲಿ ತೈಲಾಂಶ ಉತ್ಪತ್ತಿ ಮಾಡುವ ಗ್ರಂಥಿಗಳು ಉರಿಯೂತಕ್ಕೆ ಒಳಗಾದಾಗಲೂ ಮೇಲ್ಪದರಗಳಿಂದ ಹೆಚ್ಚು ಸತ್ತ ಜೀವಕೋಶಗಳು ಉದುರುತ್ತವೆ.

• ಮೆಲಸೇಜಿಯ ಗುಂಪಿನ ಶಿಲೀಂಧ್ರಗಳು ಮತ್ತು ‘ಸ್ಟ್ಯಾಫಿಲೋಕಾಕ್ಕೈ’ ಗುಂಪಿನ ಬ್ಯಾಕ್ಟೀರಿಯಾಗಳಿಂದ ನೆತ್ತಿಯ ಚರ್ಮದ ಸೋಂಕು ಉಂಟಾದಾಗಲೂ ಹೊಟ್ಟು ಹೆಚ್ಚಾಗಬಹುದು.

• ಶರೀರದಲ್ಲಿ ಹೆಚ್ಚಾದ ಕೊಬ್ಬಿನಾಂಶವೂ ಪರೋಕ್ಷವಾಗಿ ಹೊಟ್ಟಿನ ಸಮಸ್ಯೆಗೆ ಪೂರಕವಾಗಬಹುದು. ಮುಖ್ಯವಾಗಿ ಚರ್ಮದ ಮೇಲ್ಪದರುಗಳಲ್ಲಿ ಕೊಬ್ಬಿನಾಂಶ ಹೆಚ್ಚಾದಾಗ ಉತ್ಪತ್ತಿಯಾಗುವ ಹೊಟ್ಟೂ ಹೆಚ್ಚಾಗುತ್ತದೆ.

• ಕೆಂಪು ರಕ್ತಕಣಗಳ ಪ್ರತಿಜನ್ಯಗಳು ಮತ್ತು ನಿರ್ದಿಷ್ಟ ಶಿಲೀಂಧ್ರಗಳೊಡನೆಯ ಪ್ರತಿಕ್ರಿಯೆಗಳೂ ಹೆಚ್ಚು ಹೊಟ್ಟು ಉತ್ಪಾದನೆಗೆ ಕಾರಣ ಎನ್ನುತ್ತವೆ ಕೆಲವು ಅಧ್ಯಯನಗಳು. ಹಾಗಾಗಿಯೇ ‘ಬಿ’ ಪಾಸಿಟಿವ್ ಮತ್ತು ‘ಒ’ ಪಾಸಿಟಿವ್ ರಕ್ತದ ಗುಂಪಿನ ವ್ಯಕ್ತಿಗಳಲ್ಲಿ ತಲೆಹೊಟ್ಟಿನ ಸಮಸ್ಯೆಯ ಸಂಭವ ಹೆಚ್ಚು. ‘ಬಿ’ ನೆಗೆಟಿವ್ ಗುಂಪಿನ ವ್ಯಕ್ತಿಗಳಲ್ಲಿ ತಲೆ ಹೊಟ್ಟಿನ ಸಂಭವ ಕಡಿಮೆ.

• ಪಾರ್ಕಿನ್ಸನ್ ಮತ್ತಿತರ ನರಸಂಬಂಧಿತ ಕಾಯಿಲೆಗಳಿಂದ ಬಳಲುವವರಲ್ಲಿ ಈ ಸಮಸ್ಯೆಯ ಸಂಭವ ಹೆಚ್ಚು.
• ತಲೆಗೂದಲನ್ನು ಹೆಚ್ಚು ಹೆಚ್ಚು ಬಿಸಿಲು, ದೂಳಿಗೆ ತೆರದಿಡುವುದು ಮತ್ತು ಪ್ರಸಾಧನದ ರೂಪದಲ್ಲಿನ ರಾಸಾಯನಿಕಗಳ ಬಳಕೆಯೂ ತಲೆಹೊಟ್ಟಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ.

• ಪುರುಷರ ಸಂತಾನೋತ್ಪತ್ತಿ ರಸದೂತಗಳು ಚರ್ಮದ ಕೆಳಪದರಗಳಲ್ಲಿನ ತೈಲಾಂಶ ಉತ್ಪತ್ತಿ ಮಾಡುವ ಗ್ರಂಥಿಗಳನ್ನು ಪ್ರಚೋದಿಸುತ್ತವೆ. ಹಾಗಾಗಿಯೇ ಈ ಸಮಸ್ಯೆ ಪ್ರೌಢವಾಸ್ಥೆಯ ಹೊಸ್ತಿಲಲ್ಲಿನ ಪುರುಷರಲ್ಲಿ ಹೆಚ್ಚು.

• ಆಹಾರದಲ್ಲಿ ಸತು (ಜಿಂಕ್) ಮತ್ತು ವಿಟಮಿನ್ ಬಿ ಸಮೂಹಗಳ ಕೊರತೆಯಿದ್ದಾಗಲೂ ತಲೆಹೊಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ.

• ತಲೆಹೊಟ್ಟಿನ ಸಮಸ್ಯೆ ಕೂದಲು ಉದುರುವಿಕೆಗೂ ಕಾರಣವಾಗಬಹುದು. ಆರೋಗ್ಯವಂತ ವ್ಯಕ್ತಿಯಲ್ಲಿ ಸುಮಾರು 50-100 ಕೂದಲುಗಳು ಉದುರಿದರೆ, ಹೊಟ್ಟಿನ ಸಮಸ್ಯೆಯಿರುವವರಲ್ಲಿ ಸುಮಾರು 100-300 ಕೂದಲು ಉದುರುತ್ತವೆ.

ಚಿಕಿತ್ಸೆ ಏನು?

• ಸ್ಯಾಲಿಸಿಲಿಕ್ ಆ್ಯಸಿಡ್, ಸಲ್ಫರ್, ಜಿಂಕ್ ಪೈರಿಥಿಯೋನ್, ಟಾರ್ ಮೊದಲಾದ ರಾಸಾಯನಿಕಗಳನ್ನು ಹೊಂದಿದ ಶ್ಯಾಂಪೂಗಳ ನಿಯಮಿತ ಬಳಕೆಯಿಂದ ಸಮಸ್ಯೆಯನ್ನು ನಿಯಂತ್ರಿಸಬಹುದು.

• ಕೀಟೊಕೊನಜೋಲ್, ಇಮಿಡಜೋಲ್, ಸೆಲೆನಿಯಂ ಸಲ್ಫೈಡ್ ಮೊದಲಾದುವುಗಳನ್ನು ಹೊಂದಿದ ಔಷಧೀಯ ಶ್ಯಾಂಪೂಗಳ ಬಳಕೆಯೂ ಉತ್ತಮ.

• ಚರ್ಮರೋಗತಜ್ಞರ ಸಲಹೆಯ ಮೇರೆಗೆ ಸೂಕ್ತ ಶ್ಯಾಂಪೂವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಸಮಸ್ಯೆಯ ನಿಯಂತ್ರಣಕ್ಕೆ

• ವಾರಕ್ಕೆ ಎರಡು ಬಾರಿ ತಲೆಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿರಿ.

• ನಿಮ್ಮ ಬಾಚಣಿಗೆಯನ್ನು ಪ್ರತ್ಯೇಕವಾಗಿರಿಸಿಕೊಳ್ಳಿ, ಇತರರೊಂದಿಗೆ ಹಂಚಿಕೊಳ್ಳುವುದು ಬೇಡ.

• ಅತಿಯಾದ ಶ್ಯಾಂಪೂ ಬಳಕೆ ಬೇಡ. ಪದೇ ಪದೇ ಶ್ಯಾಂಪೂ ಬದಲಾವಣೆಯೂ ಒಳ್ಳೆಯದಲ್ಲ.

• ಪದೇ ಪದೇ ತಲೆಕೂದಲನ್ನು ಜೋರಾಗಿ ಬಾಚುವುದು, ಬಿಗಿಯಾಗಿ ಎಳೆದು ಕಟ್ಟುವುದು ಕೂಡ

ಸಮಸ್ಯೆಯನ್ನು ಉಲ್ಭಣಗೊಳಿಸಬಹುದು.

• ಅತಿಯಾದ ಬಿಸಿಲು, ಗಾಳಿ ಮತ್ತು ದೂಳಿಗೆ ನೆತ್ತಿಯನ್ನು ಒಡ್ಡದಿರವುದು ಕ್ಷೇಮ.

• ಸಮತೋಲನ ಆಹಾರಸೇವನೆಯು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೂ ಅತ್ಯವಶ್ಯಕ.

• ಅತಿಯಾದ ಒತ್ತಡವೂ ತಲೆಹೊಟ್ಟನ್ನು ಹೆಚ್ಚಿಸಬಹುದು. ಒತ್ತಡ ನಿರ್ವಹಣೆಯ ಕೌಶಲಗಳನ್ನು ಕರಗತಗೊಳಿಸಿಕೊಳ್ಳಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.