ದೇಹ ಮತ್ತು ಮನಸ್ಸಿಗೆ ಚೈತನ್ಯವನ್ನು ಕೊಡುವ ಹಾಗೂ ಶಿಸ್ತುಬದ್ಧ ಬದುಕಿಗೆ ಪೂರಕವಾಗಿರುವ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದೆಂದರೆ ಪ್ರತಿಯೊಬ್ಬರಿಗೂ ಖುಷಿ. ಗೆಳೆಯರ ಬಳಗದಲ್ಲಿಯೋ, ಪರಿಚಿತರಲ್ಲೋ ಅಂತಹ ಅಭ್ಯಾಸಗಳನ್ನು ಕರಗತ ಮಾಡಿಕೊಂಡಿರುವುದನ್ನು ಕಂಡು ನಾವೂ ಅವುಗಳನ್ನೆಲ್ಲ ಅನುಸರಿಸಬೇಕು ಎಂದುಕೊಳ್ಳುತ್ತೇವೆ. ಒಂದು ದಿನ ಮನಸ್ಸಿನಲ್ಲಿ ಸಂಕಲ್ಪ ಮಾಡಿ ಹೊಸ ಅಭ್ಯಾಸವನ್ನು ಆರಂಭಿಸಿಯೂ ಬಿಡುತ್ತೇವೆ. ಅದು ‘ಆರಂಭ ಶೂರತ್ವ’ ಎನ್ನುವಂತೆ ಮೊದಮೊದಲು ಬಹಳ ಪರಿಪೂರ್ಣವಾಗಿ ಮತ್ತು ತೀವ್ರವಾಗಿಯೇ ಸಾಗುತ್ತಾ ಹೋಗುತ್ತದೆ. ಆದರೆ ನಾಲ್ಕು ದಿನಗಳಾದ ನಂತರ ಟುಸ್ ಪಠಾಕಿಯಂತೆ ಯಾವುದೋ ನೆಪದಿಂದ ನಿಂತು ಬಿಡುತ್ತದೆ. ಮತ್ತೆ ಬೇಸರ, ಮತ್ತೆ ಪುನರಾರಂಭ, ಹೀಗೆಯೇ ನಡೆಯುತ್ತದೆ. ಇದು ಬಹುತೇಕ ಎಲ್ಲರ ಅನುಭವಕ್ಕೂ ಬಂದಿರಲು ಸಾಧ್ಯ.

ಅಭ್ಯಾಸಗಳು ಇಂತಹದ್ದೇ ಆಗಿರಬೇಕೆಂದಿಲ್ಲ. ಅದು ಮನೆ, ಕಚೇರಿ, ಉದ್ಯಮ, ಹವ್ಯಾಸ – ಹೀಗೆ ಎಲ್ಲಿಯೂ ಆಗಿರಬಹುದು, ಅಥವಾ ಸಣ್ಣ ಪುಟ್ಟ ಆರೋಗ್ಯಕರ ದಿನಚರಿಗಳೂ ಆಗಿರಬಹುದು. ಬೆಳಿಗ್ಗೆ ಬೇಗನೆ ಏಳುವ, ನಿತ್ಯವೂ ವ್ಯಾಯಾಮ ಮಾಡುವ, ಹಿತಮಿತ ಆಹಾರವನ್ನು ಸೇವಿಸುವ, ಮಕ್ಕಳಿಗೆ ಸ್ತೋತ್ರಗಳನ್ನು ಹೇಳಿಕೊಡುವ, ಎಲ್ಲರೊಡನೆ ಆತ್ಮೀಯತೆಯಿಂದ ಮಾತನಾಡುವ, ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೊದಲಾದವು ಮನಸ್ಸಿಗೆ ಹಿತ ನೀಡುವ ರೂಢಿಗಳು. ಈ ಎಲ್ಲ ಉತ್ತಮ ಅಭ್ಯಾಸಗಳ ಪ್ರಾಮುಖ್ಯ ನಮಗೆ ತಿಳಿದೇ ಇರುತ್ತದೆ. ಅವುಗಳಿಂದಾಗುವ ಪ್ರಯೋಜನಗಳನ್ನೂ ಅರಿತಿರುತ್ತೇವೆ. ಆದರೆ ಯಾವುದೋ ಉದಾಸೀನತೆ ಅಥವಾ ಕೆಲವೊಮ್ಮೆ ಸೋಮಾರಿತನ ಅಥವಾ ಶುರುವಿನಲ್ಲಿ ಅನುಭವಕ್ಕೆ ಬರುವ ಅನನುಕೂಲತೆಗಳು ನಮ್ಮನ್ನು ಮುಂದುವರೆಯದಂತೆ ತಡೆಯುತ್ತವೆ. ಆದರೆ, ನಾವು ಹೊಸದನ್ನು ಪ್ರಾರಂಭಿಸುವಾಗ ಕಾಣಿಸಿಕೊಳ್ಳುವ ಆ ಕ್ಷಣದ ಅನನುಕೂಲತೆಗಳಿಗೆ ಹೆಚ್ಚು ಮಹತ್ವ ಕೊಡಬಾರದು. ಬದಲಾಗಿ, ಅದರ ಧೀರ್ಘಕಾಲಿಕ ಒಳ್ಳೆಯ ಪರಿಣಾಮಗಳ ಬಗ್ಗೆ ಯೋಚಿಸಬೇಕು. ವ್ಯಾಯಾಮದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪ್ರತಿಯೊಬ್ಬರಿಗೂ ಅದರ ಆರೋಗ್ಯಕರ ಪ್ರಯೋಜನಗಳು ಗೊತ್ತಿರುವುದೇ. ಆದರೆ ಎಷ್ಟು ಜನರು ಅದನ್ನು ನಿಯಮಿತವಾಗಿ ದಿನಚರಿಯಲ್ಲಿ ಅಳವಡಿಸಿಕೊಳ್ಳುತ್ತಾರೆ – ಎಂದು ವಿಚಾರ ಮಾಡಿದರೆ ಆಶಾದಾಯಕ ಉತ್ತರ ಸಿಗದು. ಕುಂಟುನೆಪಗಳನ್ನು ಹೇಳುತ್ತ, ವ್ಯಾಯಾಮವಿಲ್ಲದೆ ದಿನಗಳನ್ನು ತಳ್ಳುವವರೇ ಹೆಚ್ಚು.
ಹಿತಮಿತ ಆಹಾರಾಭ್ಯಾಸದ ಕಥೆಯೂ ಅಷ್ಟೆ. ಒಂದೆರಡು ದಿನ ಕಟ್ಟುನಿಟ್ಟಾಗಿ ಆಹಾರತಜ್ಞರು ಸೂಚಿಸಿದ ಪೌಷ್ಟಿಕ ಆಹಾರ ಪದಾರ್ಥಗಳನ್ನೇ ತಟ್ಟೆಯಲ್ಲಿ ಬಡಿಸಿಕೊಳ್ಳುತ್ತೇವೆ. ನಾಲ್ಕು ದಿನಗಳಾದ ನಂತರ ಮತ್ತೆ ಪುನಃ ಮೊದಲಿನಂತೆ ಸಿಕ್ಕಿದ್ದನ್ನೆಲ್ಲಾ ತಿನ್ನುವ ಚಾಳಿಗೆ ಮರಳುತ್ತೇವೆ.

ಮನೆಯಲ್ಲಿ ವಸ್ತುಗಳನ್ನು ಸರಿಯಾದ ಸ್ಥಾನಗಳಲ್ಲಿರಿಸಿ ಕ್ರಮಬದ್ಧವಾಗಿಡಬೇಕೆಂಬ ಅಭ್ಯಾಸವೂ ಒಂದೆರಡು ದಿನಗಳಿಗೇ ನಿಂತು ಹೋಗಿರುತ್ತದೆ. ಮತ್ತೆ ಅಡ್ಡಾದಿಡ್ಡಿಯಾಗಿ ಮನಸ್ಸಿಗೆ ಬಂದಲೆಲ್ಲಾ ವಸ್ತುಗಳನ್ನು ಹರಡಿರುತ್ತೇವೆ. ಹವ್ಯಾಸಗಳನ್ನು ಪೊರೆಯುವಲ್ಲಿಯೂ ಉದಾಸೀನತೆಯನ್ನು ತೋರುವವರೇ ಹೆಚ್ಚು. ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ – ಹೀಗೆ ಯಾವುದೇ ಕಲೆ ನಮ್ಮ ವಶವಾಗಬೇಕಾದರೆ ಪರಿಶ್ರಮ ಮತ್ತು ನಿರಂತರತೆ ಅತ್ಯಗತ್ಯ. ಈ ಗುಣಗಳಿಲ್ಲದಿದ್ದಾಗ ಪ್ರತಿಭೆಯಿದ್ದರೂ ಅದು ಬೆಳಕಿಗೆ ಬರದಂತಾಗುತ್ತದೆ.

ಹಾಗಾದರೆ ಒಳ್ಳೆಯ ಅಭ್ಯಾಸಗಳನ್ನು ನಿತ್ಯಬದುಕಿನಲ್ಲಿ ಅಳವಡಿಸಿಕೊಳ್ಳುವುದು ಹೇಗೆ?

ಕೆಲವು ದೃಢ ಮನಸ್ಸಿನ ಗಟ್ಟಿ ವ್ಯಕ್ತಿತ್ವದವರು ಸದಭ್ಯಾಸಗಳನ್ನು ನಿರಂತರವಾಗಿ ಪೋಷಿಸಿ, ಅವನ್ನು ದಿನಚರಿಯ ಭಾಗವನ್ನಾಗಿಸಿಕೊಳ್ಳುತ್ತಾರೆ; ಉತ್ತಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಇದನ್ನು ಕಾರ್ಯರೂಪಕ್ಕೆ ತರಲು ಅಧ್ಯಯನಗಳು ಹೊಸದೊಂದು ಸೂತ್ರವನ್ನು ತಿಳಿಸುತ್ತವೆ. ಇದರಲ್ಲಿ ತಿಳಿಸುವಂತೆ ಯಾವುದೇ ಅಭ್ಯಾಸವನ್ನು ಸತತವಾಗಿ ಕನಿಷ್ಠ ಒಂದು ತಿಂಗಳ ಕಾಲ ಬಿಡದಂತೆ ರೂಢಿಸಿಕೊಂಡಿದ್ದಾದರೆ, ಅದು ನಿಮ್ಮ ನಿತ್ಯದ ದಿನಚರಿಯ ಭಾಗವಾಗುತ್ತದೆ. ಆದರೆ ಆರಂಭದ ದಿನಗಳಲ್ಲಿ ಎದುರಾಗುವ ಸಣ್ಣ ಪುಟ್ಟ ತೊಡಕುಗಳನ್ನು ಜಯಿಸಿ ಮುಂದೆ ಸಾಗಬೇಕಷ್ಟೆ. ನಮ್ಮನ್ನು ಹಿಂದಕ್ಕೆ ಜಗ್ಗುವ ಸೋಮಾರಿತನವನ್ನು ಹೊಡೆದೋಡಿಸಬೇಕು; ಉದಾಸೀನತೆಯನ್ನು ಮನಸ್ಸಿನಿಂದ ಕಿತ್ತೊಗೆಯಬೇಕು. ಗಟ್ಟಿ ಮನಸ್ಸು ಮಾಡಿ ‘ಇದನ್ನು ಮಾಡಿಯೇ ತೀರುತ್ತೇನೆ’ ಎನ್ನುವ ಅಚಲ ನಿರ್ಧಾರದಿಂದ ಮುನ್ನಡಿಯಿಟ್ಟರೆ ಖಂಡಿತ ಯಶಸ್ಸು ನಿಮ್ಮದು. ಒಮ್ಮೆ ನಿಮ್ಮ ಮನಸ್ಸು ದೇಹ ಆ ಅಭ್ಯಾಸಕ್ಕೆ ಹೊಂದಿಕೊಂಡರೆ, ಅಷ್ಟು ಸುಲಭವಾಗಿ ನೀವು ಅದನ್ನು ಬಿಡಲಾರಿರಿ.

ಇವೇ ರೂಢಿಗಳನ್ನು ಮುಂದುವರೆಸಿ ಸುಮಾರು ಮೂರು ತಿಂಗಳು ಬಿಡದೆ ನಿರಂತರವಾಗಿ ನಡೆಸಿಕೊಂಡು ಬಂದಿರಾದರೆ ಅದು ನಿಮ್ಮ ಬದುಕಿನ ಭಾಗವಾಗಿ ಜೀವನ ಶೈಲಿಯಾಗುತ್ತದೆ ಎನ್ನುತ್ತಾರೆ ಅನುಭವಸ್ಥರು. ಆದರೆ ಆ ನಿರಂತರತೆಯನ್ನು ಕಾಪಾಡಿಕೊಳ್ಳುವ ಮನಸ್ಸಿರಬೇಕಷ್ಟೆ. ಯಾವುದೇ ಸಾಧನೆಗೆ ನಿರಂತರ ಅಭ್ಯಾಸ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.