ಜನರು ನಿತ್ಯ ಬಳಸುವ ಯಾವುದೇ ಉತ್ಪನ್ನವಿರಲಿ, ಅದಕ್ಕೆ ಪ್ರಪಂಚದಲ್ಲಿ ಬಹಳ ದೊಡ್ಡ ಮಾರುಕಟ್ಟೆಯಿರುವುದು ಸಹಜ. ಒಮ್ಮೆ ಒಂದು ಉತ್ಪನ್ನಕ್ಕೆ ಮಾರುಕಟ್ಟೆ ಸೃಷ್ಟಿಯಾಗಿ ಅದೊಂದು ದೊಡ್ಡ ಉದ್ಯಮವಾಗಿ ಬೆಳೆದಾಗ, ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಅಬ್ಬರದ ಪ್ರಚಾರ ಮತ್ತು ಸುಳ್ಳು ಮಾಹಿತಿಗಳ ಮೂಲಕ ಜನರಿಗೆ ತಲುಪಿಸಲು ತೊಡಗುತ್ತವೆ. ಆಹಾರ ಮತ್ತು ಔಷಧಗಳ ಕ್ಷೇತ್ರವೂ ಇದಕ್ಕೆ ಹೊರತಲ್ಲ.

ಒಂದನೆಯ ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ಧೂಮಪಾನದ ಅಭ್ಯಾಸವು ಸಾಮಾಜಿಕವಾಗಿ ಒಪ್ಪಿಕೊಂಡ ಪದ್ಧತಿಯಾಯಿತು. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ಆಗಿನ ಹಲವರು ಮಹಾನಾಯಕರು ಕೈಯಲ್ಲಿ ಸಿಗರೇಟು ಹಿಡಿದಿರುವ ಚಿತ್ರಗಳೇ ಕಾಣಿಸಿಕೊಂಡವು. ಸಿಗರೇಟಿನಿಂದ ಆರೋಗ್ಯ ಮತ್ತು ಏಕಾಗ್ರತೆಗಳು ವೃದ್ಧಿಸುತ್ತವೆ ಎಂಬ ಜಾಹೀರಾತುಗಳು ಕೂಡ ಚಾಲ್ತಿಯಲ್ಲಿದ್ದವು. ಸಿಗರೇಟಿನ ಸೇವನೆಗೂ, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಇನ್ನಿತರೆ ಕ್ಯಾನ್ಸರ್ ಕಾಯಿಲೆಗಳಿಗೂ ನೇರವಾದ ಸಂಬಂಧವಿರುವ ಬಗ್ಗೆ ಹಲವು ವೈಜ್ಞಾನಿಕ ವರದಿಗಳು ಆಗಲೇ ಪ್ರಕಟವಾಗಿದ್ದವು. ಹೀಗಿದ್ದೂ ಸಿಗರೇಟು ಕಂಪೆನಿಗಳು ಲಾಬಿ ನಡೆಸಿ, ಸಿಗರೇಟಿಗೂ ಕ್ಯಾನ್ಸರ್ಗೂ ಯಾವುದೇ ಸಂಬಂಧವಿಲ್ಲವೆಂಬ ಸುಳ್ಳು ಮಾಹಿತಿಯನ್ನು ಹರಡಿದವು.

ಕೆಲವು ದಶಕಗಳಿಂದೀಚೆಗೆ ಸರ್ಕಾರಗಳು ಸಿಗರೇಟಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಶಾಲಾವಲಯದ ಸುತ್ತಮುತ್ತ ಸಿಗರೇಟ್ಗಳು ಲಭ್ಯವಾಗದಂತೆ ನೀತಿ–ನಿಯಮಗಳನ್ನು ಜಾರಿಗೆ ತಂದಿವೆ. ಈಗ ಸಿಗರೇಟಿನ ಜಾಹೀರಾತುಗಳನ್ನು ಕಾಣಲಾರೆವು. ಆದರೆ ವಿವಿಧ ಮದ್ಯಕಂಪನಿಗಳ ಜಾಹೀರಾತುಗಳನ್ನು ಹೇರಳವಾಗಿ ನೋಡಬಹುದು.

ಮದ್ಯತಯಾರಿಕೆ ಹಾಗೂ ಮಾರಾಟ ದೊಡ್ಡ ಉದ್ಯಮವಾಗಿರುವ ಕಾರಣ, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ನಿಖರವಾದ ಮಾಹಿತಿ ಜನರನ್ನು ತಲುಪುತ್ತಿಲ್ಲ. ಸ್ವಲ್ಪ ಕುಡಿದರೆ ಹೃದಯದ ಕಾಯಿಲೆಗಳಿಗೆ ಒಳ್ಳೆಯದು, ಶೀತವಾದರೆ ಸ್ವಲ್ಪ ಬ್ರಾಂದಿ ಕುಡಿಯಬಹುದು – ಹೀಗೆ ಅಸ್ಪಷ್ಟ ಮಾಹಿತಿಗಳನ್ನು ತೇಲಿಬಿಟ್ಟು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ದೇವಲೋಕದಲ್ಲಿಯೂ ಸುರಪಾನ ಮಾಡುವ ಅಭ್ಯಾಸವಿತ್ತು ಎಂಬ ನೆಪವೊಡ್ಡಿ ಮದ್ಯಪಾನವನ್ನು ಸಮರ್ಥಿಸಿಕೊಳ್ಳಲಾಗುತ್ತದೆ!

ಆದರೆ, ನೆನಪಿರಲಿ ಕಡಿಮೆ ಪ್ರಮಾಣದಲ್ಲಿ ಮದ್ಯಪಾನ ಮಾಡಿದರೂ, ಆ ಅಭ್ಯಾಸ ಹಲವು ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಇಪ್ಪತ್ತೊಂದು ಬಗೆಯ ಕ್ಯಾನ್ಸರ್ ಕಾಯಿಲೆಗಳಿಗೆ ಮದ್ಯಪಾನ ಸೇವನೆಯೇ ಕಾರಣ ಎಂಬುದರ ಬಗ್ಗೆ ನಮಗೆ ಅರಿವಿಲ್ಲ. ಅತಿ ಹೆಚ್ಚು ಮದ್ಯಪಾನದ ಸೇವನೆಯಿಂದ ಯಕೃತ್ತಿನ (ಲಿವರ್) ವೈಫಲ್ಯ ಉಂಟಾಗಿ ಕಾಮಾಲೆ ಕಾಯಿಲೆ ಬರಬಹುದು.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮದ್ಯಪಾನ ಸೇವನೆಯ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಮದ್ಯವನ್ನು ಜೀರ್ಣಿಸಿಕೊಳ್ಳಬಲ್ಲ ಸಾಮರ್ಥ್ಯದಲ್ಲಿ ಪುರುಷರ ಯಕೃತ್ತಿನ ಸಾಮರ್ಥ್ಯದಲ್ಲಿ ಶೇಕಡ ಹತ್ತರಷ್ಟು ಮಾತ್ರ ಮಹಿಳೆಯರ ಯಕೃತ್ತು ನಿಭಾಯಿಸಬಲ್ಲದು. ಈ ಕಾರಣದಿಂದ ಮದ್ಯಸೇವನೆಯ ಅಭ್ಯಾಸ ಇರುವ ಮಹಿಳೆಯರಲ್ಲಿ ಯಕೃತ್ತಿನ ಸಮಸ್ಯೆಗಳು ತೀವ್ರವಾಗುತ್ತವೆ. ಮುಂದುವರಿದ ದೇಶಗಳಲ್ಲಿ ಈಗ ಯಕೃತ್ತಿನ ಕಸಿಗಾಗಿ ಕಾದಿರುವವರ ಸಾಲಿನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯನು ಸೇವಿಸುವ ಆಹಾರವು ಸಣ್ಣ ಮತ್ತು ದೊಡ್ಡ ಕರುಳಿನ ಮೂಲಕ ರಕ್ತವನ್ನು ಸೇರಿದರೆ, ಮದ್ಯವು ಹೊಟ್ಟೆಯಿಂದ ನೇರವಾಗಿ ಯಕೃತ್ತಿನ ಮೂಲಕ ರಕ್ತವನ್ನು ಸೇರಿಕೊಂಡು ಮಿದುಳನ್ನು ಪ್ರವೇಶಿಸುತ್ತದೆ. ಮಿದುಳಿನ ಮೇಲೆ ಬೀರುವ ಪ್ರಭಾವದ ಕಾರಣದಿಂದ ಕುಡಿದವರಲ್ಲಿ ಆತ್ಮವಿಶ್ವಾಸ ಹೆಚ್ಚಾದಂತೆ ಕಾಣುತ್ತದೆ. ಮನುಷ್ಯನ ಮಿದುಳಿನ ಮುಂಭಾಗದಲ್ಲಿರುವ ‘ಕಾರ್ಟೆಕ್ಸ್’ ಭಾಗದಲ್ಲಿ ಮದ್ಯವು ಬೀರುವ ಪ್ರಭಾವದ ಕಾರಣದಿಂದ ಆತನ ವಿವೇಚನಾಶಕ್ತಿ ಮಂಕಾಗುವುದರ ಜತೆಗೆ ಹುಸಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಪಾನಮತ್ತರು ಅಸಂಬದ್ಧವಾಗಿ ಮತ್ತು ಅನಗತ್ಯವಾಗಿ ಮಾತನಾಡುತ್ತಾರೆ. ಕುಡಿದ ಬಳಿಕ ಕ್ರಿಯಾಶೀಲರಾದಂತೆ ಕಂಡುಬರುವ ಕಾರಣದಿಂದಾಗಿ ಮದ್ಯವು ಮಿದುಳನ್ನು ಉತ್ತೇಜಿಸುತ್ತದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಅಸಲಿಗೆ ನಿಯಮಿತ ಮದ್ಯಸೇವನೆಯಿಂದ ಮಿದುಳು ಮಂಕಾಗುತ್ತದೆ. ಮದ್ಯಪಾನಿಗಳು ಜ್ಞಾಪಕಶಕ್ತಿ ಮತ್ತು ಸೃಜನಶೀಲಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂಬ ಅಂಶವನ್ನು ವಿವಿಧ ವೈಜ್ಞಾನಿಕ ವರದಿಗಳು ಈಗಾಗಲೇ ದೃಢಪಡಿಸಿವೆ. ಗರ್ಭಿಣಿಯರು ಮದ್ಯಪಾನ ಮಾಡಿದರೆ, ಹುಟ್ಟುವ ಮಗುವಿನ ತೂಕ ಮತ್ತು ಮಿದುಳಿನ ಗಾತ್ರವು ಕಡಿಮೆಯಾಗುವ ಅಂಶವೂ ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಬಾಯಿಯಿಂದ ಹಿಡಿದು ಅನ್ನನಾಳ, ಹೊಟ್ಟೆ, ಕರುಳು, ಯಕೃತ್ತು ಮತ್ತು ದೇಹದ ವಿವಿಧ ಭಾಗಗಳಲ್ಲಿ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆಯೂ ಹೆಚ್ಚು. ಕುಡಿತದ ಕಾರಣದಿಂದಾಗಿ ಸರಿಯಾದ ಪೌಷ್ಟಿಕಾಹಾರವನ್ನು ಸೇವಿಸದ ಕಾರಣ ಅಗತ್ಯ ವಿಟಮಿನ್ಗಳ ಕೊರತೆಯೂ ಮದ್ಯಪಾನಿಗಳಲ್ಲಿ ಉಂಟಾಗಬಹುದು. ಮದ್ಯಪಾನ ಮಾಡುವವರಲ್ಲಿ ‘ಪ್ಯಾಂಕ್ರಿಯಾಸ್’ ಗ್ರಂಥಿಯಲ್ಲಿ ಸಮಸ್ಯೆ ಕಂಡುಬಂದು, ಮಧುಮೇಹವು ಉಲ್ಬಣಗೊಳ್ಳಬಹುದು. ಪುರುಷರಲ್ಲಿ ಮದ್ಯಪಾನದಿಂದ ‘ಟೆಸ್ಟೊಸ್ಟಿರೋನ್’ ಹಾರ್ಮೋನ್ ಪ್ರಮಾಣ ಕಡಿಮೆಯಾಗಿ, ವೀರ್ಯದ ಗುಣಮಟ್ಟ ಹಾಗೂ ಪ್ರಮಾಣ ಕಡಿಮೆಯಾಗಬಹುದು. ಮದ್ಯವನ್ನು ಸೇವಿಸಿದರೆ ಒಳ್ಳೆಯ ನಿದ್ರೆ ಬರುತ್ತದೆ ಎಂಬ ತಪ್ಪು ಕಲ್ಪನೆಯೂ ನಮ್ಮಲ್ಲಿದೆ. ಮದ್ಯಪಾನ ಮಾಡಿದರೆ ನಿದ್ರೆಯ ಗುಣಮಟ್ಟವು ಕಳಪೆಯಾಗುತ್ತದೆ. ಈ ಕಾರಣದಿಂದಾಗಿ ಮಿದುಳಿನ ಜ್ಞಾಪಕಶಕ್ತಿಯೂ ಕುಗ್ಗುತ್ತದೆ. ಅಂಥವರು ಎಷ್ಟೇ ನಿದ್ರೆ ಮಾಡಿದರೂ ಮರುದಿನ ನಿರುತ್ಸಾಹಿಗಳಾಗಿಯೇ ಉಳಿಯುತ್ತಾರೆ. ಯಕೃತ್ತು ಅಂಗಾಂಗದ ವೈಫಲ್ಯದ ಹೊರತಾಗಿ ಮದ್ಯಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಸರಿಯಾದ ಮಾಹಿತಿ ಇಲ್ಲ. ಹೆಚ್ಚು ಕುಡಿದರೆ ಯಕೃತ್ತಿನ ವೈಫಲ್ಯವಾಗುತ್ತದೆ. ಆದರೆ ಇತಿಮಿತಿಯಲ್ಲಿ ಕುಡಿದರೆ ಏನೂ ಆಗುವುದಿಲ್ಲವೆಂಬ ಭ್ರಮೆಯಲ್ಲಿರುವವರಿಗೆ ಹೆಚ್ಚಿನ ಅರಿವನ್ನು ಮೂಡಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.