ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ: ಮನಸ್ಸಿಗೂ ಹೃದಯಕ್ಕೂ ಇದೆ ನಂಟು

ಶರೀರದ ಯಾವುದೇ ಅಂಗಕ್ಕಾದರೂ ಕಾಯಿಲೆ ಬರಬಹುದು. ಆದರೆ, ಹೃದಯ-ಸಂಬಂಧಿ ಕಾಯಿಲೆಗಳು ಪ್ರತಿಯೊಬ್ಬರಲ್ಲೂ ತೀವ್ರ ಆತಂಕ ಮೂಡಿಸುತ್ತವೆ.
Published 2 ಜುಲೈ 2024, 1:11 IST
Last Updated 2 ಜುಲೈ 2024, 1:11 IST
ಅಕ್ಷರ ಗಾತ್ರ

ಶರೀರದ ಯಾವುದೇ ಅಂಗಕ್ಕಾದರೂ ಕಾಯಿಲೆ ಬರಬಹುದು. ಆದರೆ, ಹೃದಯ-ಸಂಬಂಧಿ ಕಾಯಿಲೆಗಳು ಪ್ರತಿಯೊಬ್ಬರಲ್ಲೂ ತೀವ್ರ ಆತಂಕ ಮೂಡಿಸುತ್ತವೆ. ಅಧಿಕ ರಕ್ತದೊತ್ತಡ, ಹೃದಯದ ಧಮನಿಗಳ ರಕ್ತಸಂಚಾರಕ್ಕೆ ಅಡ್ಡಿ, ಜನ್ಮಜಾತ ಹೃದಯ ಸಮಸ್ಯೆಗಳು, ಹೃದಯದ ಕವಾಟಗಳ ದೋಷ, ಹೃದಯದ ಮಾಂಸಖಂಡಗಳ ದೌರ್ಬಲ್ಯ, ಹೃದಯದ ಮಿಡಿತದಲ್ಲಿನ ಏರುಪೇರು – ಹೀಗೆ ಹಲವಾರು ಅನಾರೋಗ್ಯಗಳು ಯಾವುದೇ ವಯೋಮಾನದಲ್ಲೂ ಹೃದಯವನ್ನು ಕಾಡಬಹುದು. ಇವುಗಳ ಪೈಕಿ ಬಹುತೇಕ ಸಮಸ್ಯೆಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು.

ಇಷ್ಟಾದರೂ, ಹೃದಯದ ಕಾಯಿಲೆ ಎಂದ ಒಡನೆಯೇ ಮಾನಸಿಕ ಸಂತುಲನ ಏರುಪೇರಾಗುತ್ತದೆ. ಅಂತೆಯೇ, ಮಾನಸಿಕ ಸಮಸ್ಯೆಗಳಿಂದ ಬಾಧಿತರಾದವರಲ್ಲಿ ಹೃದ್ರೋಗಗಳೂ ಅಧಿಕವಾಗಿ ಕಾಡುತ್ತವೆ. ಮನಸ್ಸು ವ್ಯಗ್ರವಾದಷ್ಟೂ ಶರೀರದಲ್ಲಿ ಹಾರ್ಮೋನುಗಳ ಮಟ್ಟ ಏರುಪೇರಾಗುತ್ತದೆ. ಇದರ ಪರೋಕ್ಷ ಪರಿಣಾಮ ಹೃದಯದ ಗತಿಯ ಮೇಲೆ ಬೀಳುತ್ತದೆ; ರಕ್ತನಾಳಗಳಲ್ಲಿನ ಒತ್ತಡ ಏರುತ್ತದೆ. ಕೋಪ, ತುಮುಲಗಳು ಹೃದಯದ ರಕ್ತನಾಳಗಳನ್ನು ಸಂಕೋಚಿಸಿ, ಆಘಾತ ಉಂಟುಮಾಡಬಲ್ಲವು. ಮಾನಸಿಕ ಅಶಾಂತಿ, ಕೆಲಸದ ಒತ್ತಡಗಳ ಕಾರಣದಿಂದ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಉದ್ವೇಗಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನಗಳ ಚಟ ಬೆಳೆಸಿಕೊಂಡವರು ಇಬ್ಬಗೆಯಿಂದ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇಂತಹ ಒತ್ತಡಗಳು ಪ್ರತಿದಿನವೂ ಹಲವು ಬಾರಿ ಆಗುತ್ತಿದ್ದರೆ ಹೃದಯಕ್ಕೆ ಮತ್ತಷ್ಟು ಹಾನಿ ಖಚಿತ.

ಬಹಳ ಮಂದಿ ಹೃದ್ರೋಗಿಗಳ ಮಾನಸಿಕ ಸಾಮರ್ಥ್ಯ ಕುಸಿಯುತ್ತದೆ. ತಮ್ಮ ಹೃದಯದ ಕೆಲಸ ತಮ್ಮ ನಿಯಂತ್ರಣದಲ್ಲಿ ಇಲ್ಲ; ಅದು ದುರ್ಬಲವಾಗಿ, ಔಷಧಗಳ ಹಂಗಿನಲ್ಲಿದೆ ಎಂಬುದು ಯಾರಿಗಾದರೂ ಆಘಾತ ನೀಡುವ ವಿಷಯ. ಸದಾ ಕಾಲ ಯಾವ ಹೊಸ ಸಮಸ್ಯೆ ಕಾಡುತ್ತದೋ, ಹಳೆಯ ಸಮಸ್ಯೆ ಉಲ್ಬಣಿಸುತ್ತದೋ ಎಂಬ ಆತಂಕ. ಹಿಂದೆಂದೂ ನೋಡಿರದಷ್ಟು ಔಷಧಗಳನ್ನು ಸೇವಿಸಿದರೆ ಇನ್ಯಾವ ಅಡ್ಡಪರಿಣಾಮವಾಗಿ ಮತ್ಯಾವ ತೊಂದರೆ ಉದ್ಭವಿಸುತ್ತದೋ ಎಂಬ ಭೀತಿ. ಇಷ್ಟು ಉದ್ವೇಗಗಳ ನಡುವೆ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಸುಲಭದ ಮಾತಲ್ಲ. ಮಾನಸಿಕ ಉದ್ವೇಗ ಹೃದಯದ ಕೆಲಸಗಳನ್ನು, ಇತರ ಅಂಗಗಳ ಜೊತೆಗಿನ ಅದರ ಸಮನ್ವಯವನ್ನು ಕೆಡಿಸಬಲ್ಲದು. ಇದೊಂದು ರೀತಿಯ ವಿಷಮ ಆವರ್ತನ ಚಕ್ರ. ಮನಸ್ಸಿನ ಭೀತಿ ಹೃದಯದ ಆರೋಗ್ಯದ ಮೇಲೆ ಅಸಹಜ ಪರಿಣಾಮವನ್ನು ಬೀರಿ ಚಿತ್ತಶಾಂತಿಯನ್ನು ಮತ್ತಷ್ಟು ಕಂಗೆಡಿಸುತ್ತದೆ. ಮಾನಸಿಕ ಧೃಢತೆಯನ್ನು ಕಳೆದುಕೊಂಡರೆ ಹೃದಯದ ಆರೋಗ್ಯ ಸುಧಾರಣೆ ಸುಲಭವಲ್ಲ. ಹೀಗಾಗಿ ಮನಸ್ಸನ್ನು ಶಾಂತವಾಗಿ, ಧೃಢವಾಗಿ ಇಟ್ಟುಕೊಳ್ಳುವತ್ತ ಪ್ರಯತ್ನಗಳು ಸದಾ ನಡೆಯುತ್ತಿರಬೇಕು.

ಔಷಧಗಳು ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಪರಿಹಾರವಲ್ಲ. ಈಚೆಗೆ ಅತ್ಯಲ್ಪ ಮಾನಸಿಕ ಒತ್ತಡವನ್ನೂ ಸಹಿಸಲಾರದ ಪೀಳಿಗೆ ನಿರ್ಮಾಣವಾಗುತ್ತಿದೆ. ಜೀವನದಲ್ಲಿ ಸಣ್ಣ ಸಮಸ್ಯೆಯೊಂದು ಕಾಡಿದರೂ ‘ನನಗೆ ಖಿನ್ನತೆಯುಂಟಾಗಿದೆ; ನಾನು ಮಾನಸಿಕ ದೌರ್ಬಲ್ಯಕ್ಕೆ ತುತ್ತಾಗಿದ್ದೇನೆ’ ಎಂದು ಔಷಧಗಳ ಮೊರೆ ಹೋಗುವವರಿದ್ದಾರೆ. ಆದರೆ ಮಾನಸಿಕ ಸಮಸ್ಯೆಗಳ ನಿರ್ವಹಣೆಗೆ ಔಷಧಗಳು ಪ್ರಥಮ ಆದ್ಯತೆಯಲ್ಲ. ಮಾತು, ಚರ್ಚೆ, ಉದ್ವೇಗಗಳನ್ನು ಹೊರಹಾಕುವಿಕೆ, ಜೀವನಶೈಲಿಯ ಬದಲಾವಣೆ ಮೊದಲಾದುವುಗಳಿಂದ ಮನಸ್ಸಿನ ಬಹಳಷ್ಟು ತುಮುಲಗಳನ್ನು ನಿರ್ವಹಿಸಬಹುದು. ಮಾನಸಿಕ ಸಮಸ್ಯೆಗಳು ಮೂಲತಃ ಮಿದುಳಿಗೆ ಸಂಬಂಧಿಸಿದವು. ಹೀಗಾಗಿ, ಇದರ ಔಷಧಗಳು ಮಿದುಳಿನ ಮೇಲೆ, ಭಾವನೆಗಳ ಮೇಲೆ ನೇರ ಪರಿಣಾಮ ಬೀರಬಲ್ಲವು. ಇದರಿಂದ ಹಲವಾರು ಅಡ್ಡಪರಿಣಾಮಗಳಾಗುತ್ತವೆ. ಬೊಜ್ಜು, ಇನ್ಸುಲಿನ್ ಪ್ರತಿರೋಧತೆ, ಮಧುಮೇಹ, ಹೃದಯದ ಲಯದಲ್ಲಿ ಏರುಪೇರು, ಮಿದುಳಿನ ರಕನಾಳಗಳ ಸಂಕೋಚನ ಮೊದಲಾದುವು ಕಾಡುತ್ತವೆ. ಇವೆಲ್ಲವೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೃದಯದ ಆರೋಗ್ಯವನ್ನು ಹದಗೆಡಿಸಬಲ್ಲವು.

ಹೃದ್ರೋಗದಿಂದ ಚೇತರಿಸಿಕೊಳ್ಳುತ್ತಿರುವವರು ಕೂಡ ತಮ್ಮ ಮನಸ್ಸನ್ನು ಉಲ್ಲಸಿತರಾಗಿ ಇಟ್ಟುಕೊಳ್ಳುವುದು ಮುಖ್ಯ. ತಮ್ಮಿಚ್ಛೆಯ ಮುಕ್ತ, ಹಲವೊಮ್ಮೆ ಬೇಜವಾಬ್ದಾರಿ, ಜೀವನಶೈಲಿಗೆ ಹೊಂದಿಕೊಂಡಿರುವ ಜನರಲ್ಲಿ ಹೃದಯದ ಕಾಯಿಲೆ ಏಕಾಏಕಿ ಶಿಸ್ತುಬದ್ಧ ಬದುಕಿನತ್ತ ದೂಡುತ್ತದೆ. ಈ ಸಂಕ್ರಮಣವನ್ನು ಎಲ್ಲರೂ ಸಹಿಸಲಾರರು. ಇದನ್ನು ಅರಗಿಸಿಕೊಳ್ಳಲಾರದೆ ಖಿನ್ನತೆಗೆ ತುತ್ತಾಗುವವರು ಹೆಚ್ಚು. ಇಂತಹ ಸ್ಥಿತ್ಯಂತರದ ಕಾಲದಲ್ಲಿ ಮಾನಸಿಕ ದೃಢತೆ ಬಹಳ ಮುಖ್ಯ. ಇಲ್ಲವಾದರೆ ಹೃದಯ ಮತ್ತೊಂದು ಆಘಾತವನ್ನು ಅನುಭವಿಸುತ್ತದೆ. ಇಂತಹವರಿಗೆ ಮಾನಸಿಕ ತಜ್ಞರ ನೆರವು ಬೇಕಾಗುತ್ತದೆ. ಹೊಸ ಪರಿಸ್ಥಿತಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸಮಯಾವಕಾಶ, ಕುಟುಂಬದವರ ಬೆಂಬಲ ಅಗತ್ಯವಾಗುತ್ತದೆ.

ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು. ಒತ್ತಡದಿಂದ ಬಳಲುವವರು ಮಾನಸಿಕ ಆರೋಗ್ಯ ಸಲಹೆಗಾರರ ಸಹಾಯ ಪಡೆಯಬೇಕು. ನಿಗದಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಅಧ್ಯಾತ್ಮ ಚಿಂತನೆ, ಸಮಾಜಕ್ಕೆ ಅಭಿಮುಖವಾದ ಹವ್ಯಾಸಗಳು, ಆರೋಗ್ಯಕರ ಜೀವನಶೈಲಿ, ಕುಟುಂಬ ಸಭ್ಯರೊಡನೆ ಒಳ್ಳೆಯ ಸಂಬಂಧ, ಸಮಾನಮನಸ್ಕ ಮಿತ್ರಬಳಗ, ಮಾನಸೋಲ್ಲಸವಾದ ಹವ್ಯಾಸಗಳು ಮೊದಲಾದುವು ಮನಸ್ಸಿನ ಶಾಂತಿಗೆ, ಧೃಢತೆಗೆ ಕಾರಣವಾಗಿ, ಹೃದಯದ ಕಠಿಣ ಸಮಸ್ಯೆಗಳನ್ನೂ ಸಹ್ಯವಾಗಿಸಬಲ್ಲವು. ಇವೆಲ್ಲವೂ ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಬಹಳ ಸಹಕಾರಿ. ಹಾಗಾಗಿ ಹೃದ್ರೋಗಿಗಳು ಇಂತಹ ಜೀವಪರವಾದ ಹವ್ಯಾಸಗಳಿಂದ ತಮ್ಮ ಮನೋವ್ಯಾಪಾರಗಳನ್ನು ಹತೋಟಿಯಲ್ಲಿ ಇಡಬೇಕು ಎಂದು ವೈದ್ಯರು ಸೂಚಿಸುತ್ತಾರೆ.

ನಮ್ಮ ದೇಹ ಮತ್ತು ಮನಸ್ಸುಗಳು ಒಂದು ಸಮಗ್ರ ಅಸ್ತಿತ್ವ. ಇದನ್ನು ಪ್ರತ್ಯೇಕ ಅಂಗಗಳ ಮಟ್ಟದಲ್ಲಿ ವಿವೇಚಿಸಲು ಸಾಧ್ಯವಿಲ್ಲ. ಮಾನಸಿಕ ಸಮಸ್ಯೆಗಳು ವಯಸ್ಸಿನ ಅಂತರವಿಲ್ಲದೆ ದೇಹದ ಎಲ್ಲ ಅಂಗಗಳ ಕೆಲಸವನ್ನೂ ಪ್ರಭಾವಿಸುತ್ತವೆ. ಅಂತೆಯೇ, ದೇಹದ ಯಾವುದೇ ಅಂಗದ ಕಾಯಿಲೆ ಮಾನಸಿಕ ಆರೋಗ್ಯವನ್ನು ಕುಂದಿಸಬಲ್ಲವು. ಯಾವುದೇ ಚಿಕಿತ್ಸೆಯ ಮೂಲ ಉದ್ದೇಶ ಮನಸ್ಸೂ ಸೇರಿದಂತೆ ಇಡೀ ದೇಹಕ್ಕೆ ಅನ್ವಯವಾಗಬೇಕಾಗುತ್ತದೆ. ಇದನ್ನು ಸಾಧಿಸುವುದು ಸಮಗ್ರ ಆರೋಗ್ಯ ನಿರ್ವಹಣೆಯ ಅತಿ ಮುಖ್ಯ ಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT