‘ದಿಟವಾದ ಪವಾಡ ಎಂದರೆ ನೀರಿನ ಮೇಲೆ ನಡೆಯುವುದಲ್ಲ; ನೆಮ್ಮದಿಯಿಂದ ಜೀವನದ ಹೆಜ್ಜೆಗಳನ್ನು ಭೂಮಿಯ ಮೇಲೆ ಊರುತ್ತ ಸಾಗುವುದು ಪವಾಡ’. ಇತ್ತಿಚೆಗಷ್ಟೆ ನಮ್ಮನ್ನು ಅಗಲಿದ ಬೌದ್ಧಮಹಾಗುರು ಥಿಕ್ ನ್ಯಾಟ್ ಹಾನ್ ಅವರ ಮಾತು. ಇದು ನಮ್ಮ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮಾತು.

ನಮಗೆ ಜೀವನದಲ್ಲಿ ಏನೇನೋ ಭ್ರಾಂತಿಗಳು, ಮೋಹಗಳು, ಬಯಕೆಗಳು ಇರುತ್ತವೆ. ಇವೇ ನಮ್ಮ ಜೀವನವನ್ನು ನಿರ್ದೇಶಿಸುತ್ತಿರುತ್ತವೆ; ನಮ್ಮ ಎಲ್ಲ ಚಟುವಟಿಕೆಗಳು, ನಿರ್ಧಾರಗಳು, ಸಂತೋಷ–ಸಂಭ್ರಮಗಳು, ನೋವು–ದುಃಖಗಳು – ಇವುಗಳ ಸುತ್ತಲೇ ತಿರುಗುತ್ತಿರುತ್ತವೆ.

ಭ್ರಾಂತಿ, ಮೋಹ, ಬಯಕೆಗಳನ್ನೇ ‘ಪವಾಡ’ ಎಂದು ಅಂದುಕೊಳ್ಳುತ್ತೇವೆ. ನೀರಿನ ಮೇಲೆ ನಡೆಯುವ ಸಿದ್ಧಿ ಎಂಬ ಪವಾಡ ಇಲ್ಲಿ ಒಂದು ಪ್ರತಿಮೆಯಷ್ಟೆ. ಇಂಥ ಎಷ್ಟೋ ‘ಅದ್ಭುತ’ಗಳನ್ನೇ ನಾವು ಜೀವನದಲ್ಲಿ ಪವಾಡ ಎಂದು ನಂಬಿಕೊಂಡು, ಅವುಗಳನ್ನು ಸಿದ್ಧಿಸಿಕೊಳ್ಳಲು ರಾತ್ರಿ–ಹಗಲು ಶ್ರಮಪಡುತ್ತೇವೆ. ಹೇರಳವಾಗಿ ಹಣವನ್ನು ಸಂಪಾದಿಸುವುದು, ದೊಡ್ಡ ಮನೆಯನ್ನು ನಿರ್ಮಿಸಿಕೊಳ್ಳುವುದು, ದೇಶ–ವಿದೇಶಗಳನ್ನು ಸುತ್ತುವುದು, ಕೆಜಿಗಟ್ಟಲೇ ಚಿನ್ನಾಭರಣಗಳನ್ನು ಧರಿಸುವುದು – ಇವೆಲ್ಲವೂ ನಮ್ಮ ಪಾಲಿಗೆ ದೊಡ್ಡ ಸಿದ್ಧಿಗಳೇ. ಹೀಗಾಗಿಯೇ ಇಂಥವನ್ನು ದಕ್ಕಿಸಿಕೊಂಡವರನ್ನು ನಾವು ಬೆರಗುಗಣ್ಣಿನಿಂದ ನೋಡುವುದು; ಅಸಾಧ್ಯವಾದುದನ್ನು ಸಾಧ್ಯವಾಗಿಸಿಕೊಂಡಿದ್ದಾರೆ ಎಂದು ಅಂಥವರನ್ನು ಕೊಂಡಾಡುವುದು. ಸಹಜವಾಗಿ ಸಿದ್ಧಿಸದಿರುವ, ಎಲ್ಲರಿಗೂ ಮಾಡಲು ಸಾಧ್ಯವಾಗದ ಕಾರ್ಯಗಳನ್ನೇ ಅಲ್ಲವೆ ‘ಪವಾಡ’ ಎನ್ನುವುದು. ಶ್ರೀಮಂತರಾಗುವುದು, ಅಧಿಕಾರವನ್ನು ಹಿಡಿಯುವುದು – ಇವೆಲ್ಲ ಸುಲಭದ ಕೆಲಸವಲ್ಲ. ಹೀಗಾಗಿಯೇ ಇವು ನಮ್ಮ ಪಾಲಿಗೆ ಪವಾಡಗಳು.

ಗುರು ಥಿಕ್ ನ್ಯಾಟ್ ಹಾನ್ ಇಂಥ ಪವಾಡಗಳ ಬಗ್ಗೆ ನಮ್ಮನ್ನು ಎಚ್ಚರಿಸುತ್ತಿದ್ದಾರೆ. ಏನೇನೋ ಅದ್ಭುತಗಳನ್ನು ಸಾಧಿಸುವುದು ಪವಾಡವಲ್ಲ. ಅವು ನೀರಿನ ಮೇಲೆ ನಡೆಯುವುದಾಗಿರಬಹುದು, ರಾಶಿ ರಾಶಿ ದುಡ್ಡನ್ನು ಸಂಪಾದಿಸುವುದಾಗಿರಬಹುದು – ಇಂಥವು ಪವಾಡಗಳಲ್ಲ; ನಮ್ಮ ಜೀವನವೇ ದಿಟವಾದ ಪವಾಡ ಎಂದು ಅವರು ಘೋಷಿಸುತ್ತಿದ್ದಾರೆ. ಜೀವನದ ಅರಿವು, ಜೀವನದ ಮೂಲಬಿಂದುವಾದ ನೆಮ್ಮದಿಯ ಅರಿವು – ಇವು ದಿಟವಾದ ಪವಾಡ. ಹೀಗಾಗಿಯೇ ಅವರು ಹೇಳುತ್ತಿರುವುದು ‘ನೀರಿನ ಮೇಲೆ ನಡೆಯವುದು ಪವಾಡವಲ್ಲ; ಭೂಮಿಯ ಮೇಲೆ ನಡೆಯವುದು ಪವಾಡ; ನೆಮ್ಮದಿಯಿಂದ ಸಂತೋಷದಿಂದ ಈ ಹೆಜ್ಜೆಗಳನ್ನಿಡಲು ಸಾಧ್ಯವಾದರೆ ಅದು ಪವಾಡ.’

ನಿಜ, ನಾವೆಲ್ಲರೂ ಜೀವನದಲ್ಲಿ ಬಯಸುವುದು ನೆಮ್ಮದಿಯನ್ನೇ. ಹೀಗಾಗಿಯೇ ನಾವು ನಿರಂತರ ನೆಮ್ಮದಿಯನ್ನು ಹುಡುಕುತ್ತಲೇ ಇರುತ್ತೇವೆ. ಅದಕ್ಕಾಗಿ ಏನೇನೋ ಕಸರತ್ತುಗಳನ್ನು ಮಾಡುತ್ತಲೇ ಇರುತ್ತೇವೆ. ಈ ಪ್ರಯತ್ನದಲ್ಲಿ ನಾವು ನೀರಿನ ಮೇಲೆ ನಡೆಯುವುದನ್ನು ಕಲಿಯುತ್ತೇವೆಯೇ ವಿನಾ ನೆಲದ ಮೇಲೆ ನಡೆಯುವುದನ್ನೇ ಮರೆತುಬಿಡುತ್ತೇವೆ. ನಮ್ಮ ಶರೀರ, ಪ್ರಕೃತಿ, ಅನ್ನ, ನಿದ್ರೆ, ನಗು, ಮಗು – ಹೀಗೆ ಇಡಿಯ ಸೃಷ್ಟಿಯೇ ಅನಂತ ಪವಾಡಗಳ ಸರಮಾಲೆ.

ಇವು ಸಹಜವಾಗಿಯೇ ನಮಗೆ ಒದಗಿರುವ ಸಂಪತ್ತುಗಳು ಕೂಡ. ಇವುಗಳ ಜೊತೆಗೆ ಒಂದಾಗಿ, ಆನಂದವಾಗಿ ಬದುಕುವುದನ್ನು ಕಲಿಯದೇ ನಾವು ನೆಮ್ಮದಿಯನ್ನು ಬೇರೆ ಎಲ್ಲೆಲ್ಲೋ ಅರಸುತ್ತಿದ್ದೇವೆ ಎಂದು ಎಚ್ಚರಿಸುತ್ತಿದ್ದಾರೆ, ಗುರುಗಳು. ನಾವು ಉಸಿರನ್ನು ಎಳೆದುಕೊಂಡಾಗ ಸಮಸ್ತ ಸೃಷ್ಟಿಯನ್ನೇ ನಮ್ಮದನ್ನಾಗಿಸಿಕೊಳ್ಳುತ್ತಿರುತ್ತವೆ; ನಾವು ಉಸಿರನ್ನು ಹೊರಗೆ ಬಿಟ್ಟಾಗ ಇಡಿಯ ಸೃಷ್ಟಿಯೊಂದಿಗೆ ಬೆರೆಯುತ್ತಿರುತ್ತೇವೆ. ಇದಕ್ಕಿಂತಲೂ ದೊಡ್ಡ ಪವಾಡ ಮತ್ತೇನಿದ್ದೀತು? ಇಡಿಯ ಬ್ರಹ್ಮಾಂಡವೇ ನಾನಾಗಿರುವೆ – ಎಂಬ ಅರಿವಿನ ವೈಶಾಲ್ಯಕ್ಕೆ ಹೋಲಿಸಿದರೆ ಯಾವ ಸಂಪತ್ತು ತಾನೆ ದೊಡ್ಡದಾಗಿರಲು ಸಾಧ್ಯ? ಇಂಥ ಸಂಪತ್ತನ್ನು ಪಡೆದವ ಬಡನಾಗಿರಲು ಸಾಧ್ಯವೆ? ಇಡಿಯ ಸೃಷ್ಟಿಯೇ ನನ್ನದು ಎಂಬ ಭಾವವು ಬಲಿತಮೇಲೆ ಇನ್ನೊಬ್ಬರನ್ನು ದ್ವೇಷಿಸಲು ಮನಸ್ಸಾದರೂ ಹೇಗೆ ಬಂದೀತು? ದ್ವೇಷಿಸುವ ಮನಸ್ಸೇ ಇಲ್ಲದ ಮೇಲೆ ಅಶಾಂತಿಗೆ ಅವಕಾಶವಾದರೂ ಎಲ್ಲಿದ್ದೀತು? ಹೀಗೆ ನಮ್ಮಲ್ಲಿಯೇ ಇರುವ ಬ್ರಹ್ಮಾಂಡದಷ್ಟು ನೆಮ್ಮದಿಯ ಅರಿವೇ ನಮ್ಮ ಜೀವನದ ಒಂದೊಂದು ಹೆಜ್ಜೆಯ ಗುರಿ ಆಗಿರಬೇಕು ಎನ್ನುತ್ತಾರೆ, ಥಿಕ್ ನ್ಯಾಟ್ ಹಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.