ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೋಮಾಲಿನ್ಯಕ್ಕಿದೆ ಮದ್ದು

Published : 27 ಸೆಪ್ಟೆಂಬರ್ 2024, 23:50 IST
Last Updated : 27 ಸೆಪ್ಟೆಂಬರ್ 2024, 23:50 IST
ಫಾಲೋ ಮಾಡಿ
Comments

ದೇಹ ಮತ್ತು ಮನಸ್ಸು…. ಕಾಯ ವಾಚಾ ಮನಸ್ಸು……..ದೃಷ್ಟಿ ಮತ್ತು ಹೃದಯ…… ಬುದ್ಧಿ ಮತ್ತು ಮನಸ್ಸು ಈ ಯಾವುದೇ ಜೋಡು ನುಡಿಗಳನ್ನು ತೆಗೆದುಕೊಂಡರೂ ಮನಸ್ಸು ಅಲ್ಲಿ ಇದ್ದೇ ಇರುತ್ತದೆ.

ದೇಹವನ್ನು ಹಾರ್ಡ್‌ವೇರ್‌ಗೂ ಮನಸ್ಸನ್ನು ಸಾಫ್ಟ್‌ವೇರ್‌ಗೂ ಅನ್ವಯಿಸಿ ಹೇಳುವುದಿದೆ . ದೇಹಕ್ಕೆ ಅಂಟಿದ ಕೊಳಕನ್ನು ತೆಗೆಯಬಹುದು. ಆದರೆ, ಮನಸ್ಸಿಗೆ ಕೊಳಕು ಅಂಟಿದರೆ ತೆಗೆಯುವುದು ಬಹಳ ಕಷ್ಟ. ಈಗಂತೂ ಮಾಲಿನ್ಯಗಳೆ ಮಾಲಿನ್ಯಗಳು. ಉಪಹಗ್ರಹಗಳ ಉಡಾವಣೆಯಿಂದ ಅಂತರಿಕ್ಷವೂ ಮಾಲಿನ್ಯವಾಗಿದೆ.

ಇನ್ನೂ ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯದಂಥ ಪದಗಳು ಬಹಳ ಹಳೆಯವು. ಮಂಡೆ ಬಿಸಿ, ತಲೆಕೆಟ್ಟು ಗೊಬ್ಬರವಾಗಿದೆ, ಚಿಟ್ಟು ಹಿಡಿದಿದೆ ಎನ್ನುವುದಂತೂ ಅಬಾಲವೃದ್ಧರಾದಿಯಾಗಿ ಎಲ್ಲರ ಬಾಯಲ್ಲಿ ಇರುವ ಮಾತುಗಳು. ಇವುಗಳೆ ಮನೋಮಾಲಿನ್ಯದ ಸೂಚಿಗಳು.

ಸರಾಗ ಜೀವನದ ಮೂಲ ದ್ರವ್ಯವೆ ಮನೋವಿಕಾಸ. ಹಾಗಿಲ್ಲದಿದ್ದಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಮಾನಸಿಕ ಸಮಸ್ಯೆಗಳು ಜೀವನವನ್ನು ದುಸ್ತರವಾಗಿಸುತ್ತವೆ. ದುರ್ಬಲ ಮನಸ್ಸು ಇದ್ದವರಿಗೆ ಹಿಂಜರಿಕೆ, ಆತಂಕಗಳೆ ಕಾಡಿ ಯಾವುದೇ ಸವಾಲುಗಳನ್ನು ಸ್ವೀಕರಿಸಲು ಭಯ ಪಡುತ್ತಾರೆ. ಪ್ರತಿಯಾಗಿ ಆ ಸವಾಲುಗಳಿಂದ ವಿಮುಖವಾಗಲು ಪ್ರಯತ್ನಿಸುವುದಲ್ಲದೆ ಕಷ್ಟಗಳನ್ನು ಎದುರಿಸಲು ಸನ್ನದ್ಧರಾಗದೆ ನಿರುಮ್ಮಳವಾಗಿರಲು ಬಯಸಿ ಬೇಗ ಸೋಲೊಪ್ಪಿಕೊಂಡುಬಿಡುತ್ತಾರೆ.

ಜತೆಗೆ ಆತ್ಮವಿಶ್ವಾಸದ ಕೊರತೆಯೂ ಇರುವ ಕಾರಣದಿಂದ ತಮ್ಮ ಶಕ್ತಿ ಹಾಗೂ ಸಾಮರ್ಥ್ಯದ ಬಗ್ಗೆ ನಂಬಿಕೆ ಇರದೆ ತಮ್ಮ ಸುತ್ತ ತಾವೆ ಮಿತಿಗಳ ಬೇಲಿಯನ್ನು ನಿರ್ಮಿಸಿಕೊಳ್ಳುತ್ತಾರೆ. ಹಿಂದೆ ಸಂದು ಹೋದ ತಪ್ಪುಗಳ ಬಗ್ಗೆ ಅತೀವ ಚಿಂತಿತರಾಗಿ ತಮ್ಮ ಭವಿಷ್ಯಕ್ಕೆ ತಾವೇ ಅಡ್ಡವಾಗುತ್ತಾರೆ. ಇದರಿಂದ ನಕಾರಾತ್ಮಕ ಭಾವ ಹೆಚ್ಚಾಗುತ್ತದೆ. ಯಾವ ಬದಲಾವಣೆಗೂ ಮನಸ್ಸು ಮಾಡುವುದಿಲ್ಲ. ತಮಗೇ ತಿಳಿಯದಂತೆ ಅಪರಾಧಿ ಭಾವನೆಗಳು ಇವರಲ್ಲಿ ಹೆಚ್ಚಾಗುತ್ತವೆ.

ಬೇರೆಯವರ ಮೇಲೆ ಹೆಚ್ಚು ಅವಲಂಬಿತರಾಗಿ ಬೇರೆಯವರ ನಿರ್ಧಾರಗಳ ನಿಯಂತ್ರಣದಲ್ಲಿರುತ್ತಾರೆ. ಇವಿಷ್ಟು ಮನೋಮಾಲಿನ್ಯದ ಕೆಲವು ಪರಿಣಾಮಗಳು. ಬದುಕು ಇಂದು ಸಂಕುಚಿತವಾಗಿದೆ. ಆಧುನಿಕ ಜೀವನಶೈಲಿ ಸಂಕುಚಿತ ಮನೋಭಾವದ್ದಾಗಿದ್ದು, ಬೇಕು/ಬೇಡ,ಹೌದು/ಇಲ್ಲ,ಸರಿ/ತಪ್ಪು ಮುಂತಾದ ಎರಡಕ್ಷರದ ಪದಗಳಲ್ಲಿ ಬಂಧಿಯಾಗಿದೆ.

ಆಲೋಚನಾಲಹರಿ ಮನುಷ್ಯನ ಸ್ವಯಂನಿರ್ಮಿತ ಬೇಲಿಯನ್ನು ದಾಟುವುದೇ ಇಲ್ಲ. ಮನೋಮಾಲಿನ್ಯ ಪದವೇ ಹೇಳುವಂತೆ ಸಂಕುಚಿತ ಭಾವನೆಗಳೆ ಹೆಚ್ಚು ಮನಸ್ಸಿನ ಮಾಲಿನ್ಯಕ್ಕೆ ಕಾರಣ ಅನ್ನಿಸುತ್ತದೆ. ವಿಶಾಲ ಚಿಂತನೆ, ಹೆಚ್ಚು ಜನರೊಂದಿಗೆ ಬೆರೆಯುವುದು ಇವುಗಳಿಂದ ಮನೋಮಾಲಿನ್ಯವನ್ನು ತಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT