ಎಚ್ಡಿಕೆ, ನಿರಾಣಿ ವಿರುದ್ಧ ಅನುಮತಿ ಏಕಿಲ್ಲ: ಸಿ.ಎಂ
‘ಗಣಿ ಭೂಮಿ ಮಂಜೂರು ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ತಪ್ಪಿತಸ್ಥ ಎಂದು ಉಲ್ಲೇಖಿಸಿ, ಪ್ರಾಸಿಕ್ಯೂಷನ್ ಅನುಮತಿಗೆ ಲೋಕಾಯುಕ್ತ ಮನವಿ ಸಲ್ಲಿಸಿದ್ದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಆದರೆ, ಮುಡಾ ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಡದಿದ್ದರೂ, ತನಿಖೆಯೇ ನಡೆದಿಲ್ಲವಾದರೂ ಅನುಮತಿ ನೀಡಿರುವುದರ ಉದ್ದೇಶವೇನು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಶನಿವಾರ ನಡೆದ ತುರ್ತು ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾ ಪ್ರಕರಣ ನನ್ನ ಸರ್ಕಾರದ ಅವಧಿಯಲ್ಲಿ ನಡೆದಿಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ. ನನ್ನ ವಿಚಾರದಲ್ಲಿ ಸ್ವಂತ ಬುದ್ಧಿಯಿಂದ ರಾಜ್ಯಪಾಲರು ನಡೆದುಕೊಂಡಿಲ್ಲ’ ಎಂದರು. ‘ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುದ್ಧವೂ ತನಿಖೆ ನಡೆಸಿದ್ದ ಲೋಕಾಯುಕ್ತ, ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿ ಈ ಹಿಂದೆಯೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಆದರೆ, ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಆದರೆ, ನನ್ನ ವಿಚಾರದಲ್ಲಿ ತರಾತುರಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಟೀಕಿಸಿದರು. ‘ರಾಜ್ಯಪಾಲರ ತೀರ್ಮಾನ ಕಾನೂನುಬಾಹಿರ, ಅಸಂವಿಧಾನಿಕವೆಂದು ಅಭಿಪ್ರಾಯಪಟ್ಟು, ಇಡೀ ಸಚಿವ ಸಂಪುಟ ತೀವ್ರವಾಗಿ ಖಂಡಿಸಿದೆ. ಪ್ರಾಸಿಕ್ಯೂಷನ್ ಅನುಮತಿಗೆ ಸಂವಿಧಾನದ ಬಲವಿಲ್ಲ ಎಂದೂ ನಿರ್ಣಯಿಸಿದೆ. ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ– ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಜನಾಶೀರ್ವಾದದಿಂದ ರಚನೆಯಾಗಿರುವ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಚಿವ ಸಂಪುಟ ನಿರ್ಣಯಿಸಿದೆ’ ಎಂದರು. ‘ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಸಂಪೂರ್ಣ ರಾಜಕೀಯ ದುರುದ್ದೇಶದ ತೀರ್ಮಾನ. ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ರಾಜಭವನದ ಈ ನಡೆಗೆ ಧಿಕ್ಕಾರ ಹೇಳುತ್ತೇವೆ. ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು. ‘ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡಲು ಹೊರಟಿದ್ದಾರೆ. ಜನರು ನನ್ನ ಜೊತೆ ಇರುವವರೆಗೂ ಇದು ಸಾಧ್ಯವಿಲ್ಲ. ಏಳು ಕೋಟಿ ಕನ್ನಡಿಗರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ’ ಎಂದರು. ‘ಇಡೀ ಸಚಿವ ಸಂಪುಟ ನನ್ನ ಜೊತೆ ಇರುವುದಾಗಿ ಹೇಳಿದೆ. ಪಕ್ಷ ಕೂಡ ಇದನ್ನೇ ಹೇಳಿದೆ. ಸಚಿವರು, ಶಾಸಕರು, ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಜೊತೆ ಇರುತ್ತೇವೆಂದು ಹೈಕಮಾಂಡ್ ನಾಯಕರೂ ದೂರವಾಣಿ ಕರೆ ಮಾಡಿ ಹೇಳಿದ್ದಾರೆ’ ಎಂದರು. ರಾಜೀನಾಮೆ ನೀಡಬೇಕೆಂಬ ವಿಪಕ್ಷಗಳ ಆಗ್ರಹಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ನಾನು ಯಾಕೆ ರಾಜೀನಾಮೆ ನೀಡಬೇಕು? ಏನು ಅಪರಾಧ ಮಾಡಿದ್ದೇನೆ? ನನ್ನ ವಿರುದ್ಧ ಕಾನೂನುಬಾಹಿರವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ತೀರ್ಮಾನ ತೆಗೆದುಕೊಂಡ ರಾಜ್ಯಪಾಲರೇ ರಾಜೀನಾಮೆ ನೀಡಬೇಕು’ ಎಂದು ಏರುಧ್ವನಿಯಲ್ಲಿ ಪ್ರತಿಕ್ರಿಯಿಸಿದರು.