‘ಮುಖಂಡರು ಕಾರ್ಯಕರ್ತರ ಇಚ್ಛೆಯಂತೆ ಪ್ರಭಾ ಅಭ್ಯರ್ಥಿ’
‘ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರು ಕಾರ್ಯಕರ್ತರ ಇಚ್ಚೆಯಂತೆ ಶಾಮನೂರು ಕುಟುಂಬದ ಡಾ. ಪ್ರಭಾ ಮಲ್ಲಿಕಾರ್ಜುನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಜಿ.ಬಿ. ವಿನಯ್‌ಕುಮಾರ್ ಪಕ್ಷಕ್ಕೆ ಬಂದು 6 ತಿಂಗಳಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬ 40 ವರ್ಷಗಳಿಂದ ಕಾಂಗ್ರೆಸ್ ಜತೆಗಿದೆ. ಅದಕ್ಕೆ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಬೇಕು‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ‘ನಾನು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಎಚ್.ಎಂ.ರೇವಣ್ಣ ಕರೆದು ಮಾತನಾಡಿದರೂ ವಿನಯ್‌ಕುಮಾರ್ ಮಾತು ಕೇಳಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಅವರಿಗೆ ಏನು ಲಾಭವಿದೆ. ಅದು ಬಿಜೆಪಿಗೆ ಅಲ್ಲವೇ’ ಎಂದು ಪ್ರಶ್ನಿಸಿದರು. ‘ವಿನಯ್‌ಕುಮಾರ್ ಮನೆಗೆ ಮಾಜಿ ಸಚಿವ ಬೈರತಿ ಬಸವರಾಜ ರಾತ್ರೋರಾತ್ರಿ ಹೋಗಿದ್ದಾರೆ. ಏಕೆ ಹೋಗಿದ್ದಾರೆ? ವ್ಯವಹಾರ ಕುದುರಿಸಲಾ’ ಎಂದು ಆರೋಪಿಸಿದ ಸಿಎಂ ‘ಹಿಂದಿನ ಚುನಾವಣೆಯಲ್ಲಿ ಬೇರೆಯವರ ಟಿಕೆಟ್ ತಪ್ಪಿಸಿ ಬೈರತಿ ಬಸವರಾಜಗೆ ನೀಡಿದರೂ ಆತ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಅಂತಹವರಿಗೆ ಬೆಂಬಲ ನೀಡುವಿರಾ’ ಎಂದು ಪ್ರಶ್ನಿಸಿದರು.