ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ; 2029ರವರೆಗೆ ಮೋದಿಯೇ ಪ್ರಧಾನಿ: ಶಾ

Published 15 ಮೇ 2024, 13:21 IST
Last Updated 15 ಮೇ 2024, 13:21 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ‘ಇದು ಸಾಮಾನ್ಯ ತೀರ್ಪು ಅಲ್ಲ’ ಎಂದು ಹೇಳಿದ್ದಾರೆ.

ಸುದ್ದಿಸಂಸ್ಥೆ ‘ಎಎನ್‌ಐ’ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕೇಜ್ರಿವಾಲ್‌ಗೆ ದೊರತಿರುವ ಮಧ್ಯಂತರ ಜಾಮೀನು ‘ಇದು ಸಾಮಾನ್ಯ ತೀರ್ಪು ಅಲ್ಲ’ ಎಂದು ನಾನು ನಂಬುತ್ತೇನೆ. ಆದರೆ, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ‘ವಿಶೇಷ ತೀರ್ಪು’ ನೀಡಿದೆ ಎಂದು ದೇಶದ ಬಹಳಷ್ಟು ಜನರು ನಂಬುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಅರವಿಂದ ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ ಇದೆ... 2029ರ ವರೆಗೆ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. 2029ರ ನಂತರವೂ ಪ್ರಧಾನಿ ಮೋದಿಯೇ ನಮ್ಮನ್ನು ಮುನ್ನಡೆಸುತ್ತಾರೆ’ ಎಂದು ಶಾ ತಿಳಿಸಿದ್ದಾರೆ.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೊದಲು ಅಪರಾಧ ಕೃತ್ಯಗಳನ್ನು ಎಸಗಲು ಯೋಜನೆ ರೂಪಿಸುತ್ತಾರೆ. ಅದರಂತೆ ಮೊದಲು ದುಷ್ಕೃತ್ಯಗಳನ್ನು ನಡೆಸುತ್ತಾರೆ. ಜನರು ಇದರ ಬಗ್ಗೆ ಮಾತನಾಡುವುದಕ್ಕೆ ಆರಂಭಿಸಿದ ನಂತರ ಕೃತ್ಯಗಳನ್ನು ಮರೆಮಾಚಲು ಯತ್ನಿಸುತ್ತಾರೆ. ಬಳಿಕ ಮತ್ತೊಮ್ಮೆ ದೌರ್ಜನ್ಯ ನಡೆಸುತ್ತಾರೆ. ಇದಕ್ಕೆ ಸಂದೇಶ್‌ಖಾಲಿ ಪ್ರಕರಣವೇ ಸ್ಪಷ್ಟ ಉದಾಹರಣೆ’ ಎಂದು ಶಾ ಹೇಳಿದ್ದಾರೆ.

‘ಮಮತಾ ಬ್ಯಾನರ್ಜಿ ಅವರು ಮಹಿಳಾ ಸಿಎಂ ಆಗಿಯೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಮಾತನಾಡಲಿಲ್ಲ. ಸಂದೇಶ್‌ಖಾಲಿ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಲಿಲ್ಲ. ಆದರೆ, ಹೈಕೋರ್ಟ್ ಮಧ್ಯಪ್ರವೇಶಿಸಬೇಕಾಯ್ತು. ನಂತರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದು ನಾಚಿಕೆಗೇಡಿನ ಸಂಗತಿ’ ಎಂದು ಶಾ ಕಿಡಿಕಾರಿದ್ದಾರೆ.

‘ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ಇಡೀ ‘ಇಂಡಿಯಾ ಒಕ್ಕೂಟ’ ಬಹಿಷ್ಕರಿಸಿತ್ತು. ಮುಸ್ಲಿಮರ ವೋಟ್‌ಬ್ಯಾಂಕ್‌ಗೆ ಹೆದರಿ ಅವರು ಈ ರೀತಿ ನಡೆದುಕೊಂಡಿದ್ದಾರೆ. ಮುಸ್ಲಿಮರೊಂದಿಗೆ ‘ಈದ್’ ಆಚರಿಸಲು ಇಂಡಿಯಾ ಒಕ್ಕೂಟ ನಾಯಕರಿಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಹಿಂದೂಗಳಾಗಿದ್ದರೂ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ. ಏಕೆಂದರೆ ಮುಸ್ಲಿಮರ ವೋಟ್‌ಬ್ಯಾಂಕ್‌ಗೆ ಧಕ್ಕೆಯಾಗುತ್ತದೆ. ಇದು ಯಾವ ರೀತಿಯ ರಾಜಕೀಯ’ ಎಂದು ವಿಪಕ್ಷ ನಾಯಕರ ವಿರುದ್ಧ ಶಾ ಗುಡುಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 25ರಿಂದ 30 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ನನ್ನ ಬಗ್ಗೆ ಭಯ: ಕೇಜ್ರಿವಾಲ್

ಚಂಡೀಗಢ: ‘ಬಿಜೆಪಿಗೆ ನನ್ನ ಬಗ್ಗೆ ಭಯವಿದೆ. ಆದ್ದರಿಂದಲೇ ಜೈಲಿಗೆ ಕಳುಹಿಸಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಕುರುಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಮಾರ್ಚ್‌ 16 ರಂದು ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುತ್ತದೆ. ಮಾರ್ಚ್‌ 21 ರಂದು ಅವರು ನನ್ನನ್ನು ಜೈಲಿಗೆ ಕಳುಹಿಸುತ್ತಾರೆ. ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬಾರದು ಎಂಬುದು ಅವರ ಉದ್ದೇಶವಾಗಿತ್ತು’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT