ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಪಕ್ಷೀಯವಾಗಿ ಸ್ಪೀಕರ್ ಅಭ್ಯರ್ಥಿ ಆಯ್ಕೆ: ಕಾಂಗ್ರೆಸ್ ನಡೆಗೆ ಟಿಎಂಸಿ ಅಸಮಾಧಾನ

Published : 26 ಜೂನ್ 2024, 3:31 IST
Last Updated : 26 ಜೂನ್ 2024, 3:31 IST
ಫಾಲೋ ಮಾಡಿ
Comments

ನವದೆಹಲಿ: ಸ್ಪೀಕರ್ ಸ್ಥಾನಕ್ಕೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕೋಡಿಕುನ್ನಿಲ್ ಸುರೇಶ್ ಅವರನ್ನು ಗೊತ್ತು ಮಾಡುವುದಕ್ಕೂ ಮುನ್ನ ಸಮಾಲೋಚನೆ ನಡೆಸದ ಕಾಂಗ್ರೆಸ್ ನಡೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಸಮಾಧಾನ ವ್ಯಕ್ತಪಡಿಸಿದೆ. ಬುಧವಾರ ತನ್ನ ನಿಲುವು ಪ್ರಕಟಿಸುವುದಾಗಿ ತಿಳಿಸಿದೆ.

ಸ್ಪೀಕರ್‌ ಚುನಾವಣೆಯಲ್ಲಿ ಮತಚಲಾಯಿಸುವ ಬಗ್ಗೆ ಚರ್ಚಿಸಲು ಮಂಗಳವಾರ ರಾತ್ರಿ ನಡೆದ ಇಂಡಿಯಾ ಬಣದ ಸಂಸದೀಯ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದ ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಒಬ್ರಯಾನ್ ಹಾಗೂ ಕಲ್ಯಾಣ್ ಬ್ಯಾನರ್ಜಿ, ಸುರೇಶ್ ಅವರ ಹೆಸರು ಘೋಷಣೆಗೂ ಮುನ್ನ ಸಮಾಲೋಚನೆ ನಡೆಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಬೆಳಿಗ್ಗೆ 9.30ಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಟಿಎಂಸಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ಪಕ್ಷವು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಕೋರಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿದ್ದರು. ಆದರೆ, ತಮ್ಮ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಅವರು ರಾಜನಾಥ್‌ ಸಿಂಗ್‌ಗೆ ತಿಳಿಸಿದ್ದಾರೆ.

‘ಸುರೇಶ್ ಅವರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದನ್ನು ಮಾಧ್ಯಮ ವರದಿಗಳ ಮೂಲಕ ನಮಗೆ ತಿಳಿಯಿತು. ಈ ಬಗ್ಗೆ ಕಾಂಗ್ರೆಸ್ ನಮ್ಮ ಜೊತೆ ಚರ್ಚಿಸಿಲ್ಲ’ ಎಂದು ಲೋಕಸಭೆಯಲ್ಲಿ ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಸುರೇಶ್ ಅವರ ನಾಮಪತ್ರ ಸಲ್ಲಿಕೆ ಬಗ್ಗೆ ಮಾಹಿತಿ ಇಲ್ಲ ಎಂದು ಹಲವು ಟಿಎಂಸಿ ನಾಯಕರು ಹೇಳಿದ ಬಳಿಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟಿಎಂಸಿಯ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಲೋಕಸಭೆಯಲ್ಲಿಯೇ ಸಂಸದರ ಪ್ರಮಾಣವಚನ ನಡೆಯುತ್ತಿರುವಾಗ ಸುದೀರ್ಘ ಮಾತುಕತೆ ನಡೆಸಿದರು.

ಡೆಪ್ಯೂಟಿ ಸ್ಪೀಕರ್‌ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ನೀಡುವ ಬಗ್ಗೆ ಬಿಜೆಪಿ ವಾಗ್ದಾನ ಮಾಡದ ಕಾರಣ, ತರಾತುರಿಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಸ್ಪೀಕರ್‌ ಹುದ್ದೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶದ ಕೊರತೆ ಇದ್ದುದ್ದರಿಂದ ಮೈತ್ರಿಕೂಟದ ಎಲ್ಲ ಪಕ್ಷಗಳ ಜೊತೆ ಸಮಾಲೋಚನೆ ನಡೆಸಲು ಸಾಧ್ಯವಾಗಿಲ್ಲ ಎಂದು ರಾಹುಲ್ ಗಾಂಧಿಯವರು ಅಭಿಷೇಕ್ ಬ್ಯಾನರ್ಜಿ ಅವರ ಜೊತೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಬಳಿಕ ಸಂಜೆ 5 ಗಂಟೆಗೆ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿದ ರಾಹುಲ್ ಗಾಂಧಿ, ಸುರೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕಾಗಿ ಬಂದ ಅನಿವಾರ್ಯತೆಯನ್ನು ವಿವರಿಸಿದರು ಎನ್ನಲಾಗಿದೆ. ‘ವಿರೋಧ ಪಕ್ಷಗಳ ಮಧ್ಯೆ ಹೊಂದಾಣಿಕೆ ಇರಬೇಕು. ಅದರ ಜವಾಬ್ದಾರಿ ಕಾಂಗ್ರೆಸ್‌ ಮೇಲಿದೆ’ ಎಂದು ಮಮತಾ ಹೇಳಿದ್ದಾಗಿ ಮೂಲಗಳಿಂದ ಗೊತ್ತಾಗಿದೆ. ಇದಾದ ಬಳಿಕವೇ ಮಮತಾ ಅವರು ತಮ್ಮ ಪಕ್ಷದ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಹಲವು ಪಕ್ಷಗಳು ಕೂಡ ಅಸಮಾಧಾನ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ. ಸ್ಪೀಕರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತ ಇರಲಿಲ್ಲ. ಇಂತಹ ಬೆಳವಣಿಗೆಗಳು ಒಡಕಿಗೂ ಕಾರಣವಾಗಬಹುದು ಎಂದು ಪಕ್ಷಗಳು ಆತಂಕ ವ್ಯಕ್ತಪಡಿಸಿವೆ ಎಂದು ಗೊತ್ತಾಗಿದೆ.

ಸಂಖ್ಯಾಬಲದ ಕೊರತೆ ಇರುವುದರಿಂದ ಸ್ಪೀಕರ್‌ ಆಯ್ಕೆಗೆ ನಡೆಯುವ ಚುನಾವಣೆಗೆ ಮತದಾನಕ್ಕೆ ಆಗ್ರಹಿಸುವ ಬದಲು, ಧ್ವನಿ ಮತದ ಮೂಲಕ ಅಯ್ಕೆ ಮಾಡುವುದು ಒಳಿತು ಎಂದು ಹಲವು ಪಕ್ಷಗಳು ಸಲಹೆ ನೀಡಿವೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT