ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್‌ | ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ಭಾರತೀಯರು ಸೇರಿ 49 ಮಂದಿ ಸಾವು

Published : 12 ಜೂನ್ 2024, 10:54 IST
Last Updated : 12 ಜೂನ್ 2024, 10:54 IST
ಫಾಲೋ ಮಾಡಿ
Comments

ದುಬೈ/ನವದೆಹಲಿ: ಕುವೈತ್‌ನ ಕಟ್ಟಡವೊಂದರಲ್ಲಿ ಬುಧವಾರ ನಡೆದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹಲವರು ಭಾರತೀಯರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳು ಕೂಡ ಇದೇ ಮಾತು ಹೇಳಿವೆ. ಕುವೈತ್‌ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಒಂದೇ ಕಂಪನಿಯ 160 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.

ಮೃತರಲ್ಲಿ ಹೆಚ್ಚಿನವರು ಭಾರತೀಯರು. ಅವರೆಲ್ಲ 20ರಿಂದ 50 ವರ್ಷ ವಯಸ್ಸಿನ ನಡುವಿನವರು ಎಂದು ವಿಧಿವಿಜ್ಞಾನ ಇಲಾಖೆಯ ಮಹಾನಿರ್ದೇಶಕ ಮೇಜರ್ ಜನರಲ್ ಇದ್ ಅಲ್–ಒವೈಹಾನ್ ಅವರು ಹೇಳಿರುವುದಾಗಿ ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ನಿವಾಸಿಗಳು ನಿದ್ರಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಹೆಚ್ಚಿನವರು ದಟ್ಟವಾಗಿ ಆವರಿಸಿದ ಹೊಗೆಯ ಪರಿಣಾಮವಾಗಿ ಮೃತಪಟ್ಟಿದ್ದಾರೆ, ಕಟ್ಟಡದಲ್ಲಿ ಇದ್ದ ಹಲವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕುವೈತ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಆರಂಭಿಸಿದೆ (ಸಂಖ್ಯೆ: +965-65505246). ಸಂಬಂಧಪಟ್ಟವರು ಈ ಸಂಖ್ಯೆಗೆ ಕರೆಮಾಡುವಂತೆ ಕಚೇರಿಯು ಹೇಳಿದೆ.

ಕುವೈತ್‌ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ ಶೇಕಡ 21ರಷ್ಟಿದೆ (10 ಲಕ್ಷ).

‘ಕುವೈತ್‌ ನಗರದಲ್ಲಿನ ಅಗ್ನಿ ಅವಘಡದ ಸುದ್ದಿ ತಿಳಿದು ಆಘಾತವಾಗಿದೆ. ನಮ್ಮ ರಾಯಭಾರಿ ಅಲ್ಲಿಗೆ ತೆರಳಿದ್ದಾರೆ. ಇನ್ನಷ್ಟು ಮಾಹಿತಿಗೆ ಕಾಯುತ್ತಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಎಕ್ಸ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ಸಂಬಂಧಪಟ್ಟ ಎಲ್ಲರಿಗೂ ನಮ್ಮ ರಾಯಭಾರ ಕಚೇರಿಯು ಪೂರ್ಣ ನೆರವು ಒದಗಿಸಲಿದೆ’ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭಾರತದ ರಾಯಭಾರಿ ಆದರ್ಶ್ ಸ್ವೈಕಾ ಭೇಟಿ ನೀಡಿದ್ದರು. ನಂತರ ಅವರು, ಗಾಯಗೊಂಡಿರುವ ಭಾರತೀಯರನ್ನು ದಾಖಲಿಸಿರುವ ಆಸ್ಪತ್ರೆಗಳಿಗೂ ತೆರಳಿದ್ದರು.

‘ತುರ್ತು ವೈದ್ಯಕೀಯ ಸೇವೆಗಳಿಗೆ, ಇತರ ಅಗತ್ಯ ಕ್ರಮಗಳಿಗಾಗಿ ರಾಯಭಾರ ಕಚೇರಿಯು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ’ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ ರಾಯಭಾರಿಯು ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಕಚೇರಿ ತಿಳಿಸಿದೆ.

ಕುವೈತ್‌ನ ಆಂತರಿಕ ವ್ಯವಹಾರಗಳು ಹಾಗೂ ರಕ್ಷಣಾ ಖಾತೆಯ ಹೊಣೆ ಹೊತ್ತಿರುವ ಪ್ರಥಮ ಉಪ ಪ್ರಧಾನಿ ಶೇಖ್ ಫಹಾದ್ ಅಲ್–ಯೂಸುಫ್ ಅಲ್–ಸಬಾ ಅವರು ಬೆಂಕಿ ಅನಾಹುತ ಸಂಭವಿಸಿದ ಕಟ್ಟಡದ ಮಾಲೀಕರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಅಲ್ಲದೆ, ದುರಂತ ಸಂಭವಿಸಿದ ಸ್ಥಳವನ್ನು ಕ್ರಿಮಿನಲ್ ಸಾಕ್ಷ್ಯ ಕಲೆಹಾಕುವ ಸಿಬ್ಬಂದಿಯು ತಪಾಸಣೆ ನಡೆಸುವವರೆಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರನ್ನು ಕೂಡ ಬಂಧಿಸಬೇಕು ಎಂದು ಅವರು ಸೂಚಿಸಿದ್ದಾರೆ ಎಂದು ಕುವೈತ್ ಟೈಮ್ಸ್ ಪತ್ರಿಕೆಯ ವರದಿ ಹೇಳಿದೆ.

ಕಂಪನಿ ಹಾಗೂ ಕಟ್ಟಡದ ಮಾಲೀಕರ ದುರಾಸೆಯ ಫಲವಾಗಿ ಈ ಘಟನೆ ನಡೆದಿದೆ ಎಂದು ಅಲ್–ಸಬಾ ಅವರು ಹೇಳಿದ್ದಾರೆ.

ಕುವೈತ್‌ಗೆ ತೆರಳಿದ ಸಚಿವ ಸಿಂಗ್

ನವದೆಹಲಿ: ಅಗ್ನಿ ಅನಾಹುತದಲ್ಲಿ ಗಾಯಗೊಂಡಿರುವ ಭಾರತೀಯರಿಗೆ ನೆರವು ಒದಗಿಸುವ ಕಾರ್ಯದ ಉಸ್ತುವಾರಿಗೆ ಹಾಗೂ ಮೃತಪಟ್ಟವರ ದೇಹಗಳನ್ನು ಭಾರತಕ್ಕೆ ತ್ವರಿತವಾಗಿ ತರಲು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ತುರ್ತಾಗಿ ಕುವೈತ್‌ಗೆ ತೆರಳುತ್ತಿದ್ದಾರೆ. ಸಿಂಗ್ ಅವರಿಗೆ ತುರ್ತಾಗಿ ತೆರಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ. ಈ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ ಮೂಲಕ ತಿಳಿಸಿದ್ದಾರೆ.

ದುರಂತವು ಬಹಳ ದುಃಖದ ಸಂಗತಿ. ತೊಂದರೆಗೆ ಒಳಗಾದವರಿಗೆ ನೆರವಾಗಲು ಕುವೈತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಅಧಿಕಾರಿಗಳ ಜೊತೆಗೂಡಿ ಕೆಲಸ ಮಾಡುತ್ತಿದೆ.
– ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT