ಮುಖ್ಯ ಚುನಾವಣಾ ಆಯುಕ್ತರು (ಸಿ.ಇ.ಸಿ) ಮತ್ತು ಇತರ ಚುನಾವಣಾ ಆಯುಕ್ತರ (ಇ.ಸಿ) ನೇಮಕಕ್ಕೆ ಸಂಬಂಧಿಸಿದ, ತಿದ್ದುಪಡಿಗಳನ್ನು ಮಾಡಲಾಗಿರುವ ಮಸೂದೆಗೆ ರಾಜ್ಯಸಭೆಯು ಅಂಗೀಕಾರ ನೀಡಿದೆ. ಈ ಮಸೂದೆಯಲ್ಲಿ ಇರುವ ಅಂಶಗಳು, ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿಗಳನ್ನು ನಡೆಸುವಾಗ ಪಾಲಿಸಬೇಕಿರುವ ಮಾನದಂಡಗಳನ್ನು ಒಳಗೊಂಡಿಲ್ಲ. ಈ ಮಸೂದೆಯನ್ನು ಕೇಂದ್ರ ಸರ್ಕಾರವು ಆಗಸ್ಟ್ನಲ್ಲಿ ಮಂಡಿಸಿತ್ತು. ಆ ಮಸೂದೆಗೂ ಈಗಿನ ಮಸೂದೆಗೂ ಕೆಲವು ಬದಲಾವಣೆಗಳು ಇವೆ. ಮೊದಲು ಮಂಡನೆ ಆಗಿದ್ದ ಮಸೂದೆಗೆ ಎದುರಾದ ಟೀಕೆಗಳ ಕಾರಣದಿಂದಾಗಿ ಈ ಬದಲಾವಣೆಗಳನ್ನು ತಂದಿರಬಹುದು. ಹೀಗಿದ್ದರೂ ಮಸೂದೆಯಲ್ಲಿನ ಅತ್ಯಂತ ಪ್ರಮುಖ ಲೋಪಗಳನ್ನು ಸರಿಪಡಿಸುವ ಕೆಲಸ ಆಗಿಲ್ಲ. ಶಿಷ್ಟಾಚಾರದ ವಿಚಾರವಾಗಿ, ಸಿ.ಇ.ಸಿ. ಹಾಗೂ ಇ.ಸಿ. ಹುದ್ದೆಗಳು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಹುದ್ದೆಗಳಿಗೆ ಸಮಾನವಾಗಿರುತ್ತವೆ ಎಂದು ಈಗಿನ ಮಸೂದೆಯಲ್ಲಿ ಹೇಳಲಾಗಿದೆ. ಆಗಸ್ಟ್ನಲ್ಲಿ ಮಂಡನೆ ಆಗಿದ್ದ ಮಸೂದೆಯಲ್ಲಿ ಸಿ.ಇ.ಸಿ. ಮತ್ತು ಇ.ಸಿ. ಹುದ್ದೆಗಳಲ್ಲಿ ಇರುವವರು ಶಿಷ್ಟಾಚಾರದ ವಿಚಾರವಾಗಿ ಸಂಪುಟ ಕಾರ್ಯದರ್ಶಿ ಹುದ್ದೆಗೆ ಸಮಾನರಾಗಿರುತ್ತಾರೆ ಎಂದು ಹೇಳಲಾಗಿತ್ತು. ಕೇಂದ್ರವು ತಂದಿರುವ ಪ್ರಮುಖ ಬದಲಾವಣೆಗಳಲ್ಲಿ ಇದೂ ಒಂದು. ಹೀಗಿದ್ದರೂ ಸಿ.ಇ.ಸಿ. ಮತ್ತು ಇ.ಸಿ. ಹುದ್ದೆಗಳಿಗೆ ಸರ್ಕಾರವೇ (ಕಾರ್ಯಾಂಗ) ನೇಮಕಾತಿ ನಡೆಸಲಿದೆ ಎಂಬ ಅಂಶವು ಬದಲಾವಣೆ ಕಂಡಿಲ್ಲ. ಈ ಕಾರಣದಿಂದಾಗಿ, ಈ ಹುದ್ದೆಗಳಿಗೆ ನಡೆಯುವುದು ರಾಜಕೀಯ ಲೆಕ್ಕಾಚಾರದ ನೇಮಕಾತಿಗಳೇ ಆಗಲಿವೆ.

ಸುಪ್ರೀಂ ಕೋರ್ಟ್ ನೀಡಿದ ಸೂಚನೆಯ ಅನುಸಾರವಾಗಿ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಈ ಮಾತಿನಲ್ಲಿ ಇರುವುದು ಅರ್ಧಸತ್ಯ ಮಾತ್ರ. ಈ ಮಸೂದೆಯು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಆಶಯಕ್ಕೆ ಅನುಗುಣವಾಗಿ ಇಲ್ಲ. ಸಿ.ಇ.ಸಿ. ನೇಮಕಕ್ಕೆ ಸಂವಿಧಾನವು ನಿರ್ದಿಷ್ಟ ಪ್ರಕ್ರಿಯೆ ಯನ್ನು ರೂಪಿಸಿರಲಿಲ್ಲ. 1991ರ ಕಾನೂನಿನಲ್ಲಿ ಕೂಡ ನಿರ್ದಿಷ್ಟ ಪ್ರಕ್ರಿಯೆಯ ವಿವರ ಇಲ್ಲ. ಕಾನೂನಿನ ಲೋಪವನ್ನು ಹಿಂದಿನ ಆಡಳಿತ ವ್ಯವಸ್ಥೆಗಳು ದುರ್ಬಳಕೆ ಮಾಡಿಕೊಂಡಿರಬಹುದು. ಈ ವರ್ಷದ ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವೊಂದನ್ನು ನೀಡಿದೆ. ಅದರ ಪ್ರಕಾರ, ಸಿ.ಇ.ಸಿ. ಹುದ್ದೆಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ತೀರ್ಮಾನಿಸಬೇಕು. ಈ ಪ್ರಕ್ರಿಯೆಯು ಸಿ.ಇ.ಸಿ. ನೇಮಕದ ವಿಚಾರವಾಗಿ ಸಾರ್ವಜನಿಕರ ವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡುವಂತೆ ಇತ್ತು. ಆದರೆ ಕೇಂದ್ರ ಸರ್ಕಾರವು ಸಿಜೆಐ ಅವರನ್ನು ನೇಮಕ ಪ್ರಕ್ರಿಯೆಯಿಂದ ಹೊರಗೆ ಇರಿಸಿದೆ. ಮಸೂದೆಯ ಪ್ರಕಾರ, ಸಿ.ಇ.ಸಿ. ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಕೇಂದ್ರ ಸಂಪುಟದ ಒಬ್ಬ ಸದಸ್ಯ ಹಾಗೂ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಇರುತ್ತಾರೆ. ಸಿ.ಇ.ಸಿ. ಹಾಗೂ ಇ.ಸಿ. ಕೈಗೊಳ್ಳುವ ಯಾವುದೇ ತೀರ್ಮಾನವು ಅದೆಷ್ಟೇ ತಪ್ಪಾಗಿದ್ದರೂ ಅವರು ಕಾನೂನಿನ ಪ್ರಕ್ರಿಯೆಯಿಂದ ಅತೀತರಾಗಿ ಇರುತ್ತಾರೆ ಎಂಬ ಅಂಶವು ಕೂಡ ಮಸೂದೆಯಲ್ಲಿ ಇದೆ.

ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ಪ್ರತಿನಿಧಿ ಇರುತ್ತಾರಾದರೂ ಎಲ್ಲ ಹಂತಗಳಲ್ಲಿಯೂ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರವೇ ನಿಯಂತ್ರಿಸುತ್ತಿರುತ್ತದೆ. ವಿರೋಧ ಪಕ್ಷದ ನಾಯಕನ ಪಾತ್ರವು ಇಲ್ಲಿ ಔಪಚಾರಿಕ ಮಾತ್ರ, ಇದು ಕಣ್ಣೊರೆಸುವ ತಂತ್ರವೂ ಹೌದು. ಸರ್ಕಾರವು ತಾನು ಬಯಸಿದವರನ್ನು ನೇಮಕ ಮಾಡಬಹುದು. ಹೀಗಾಗಿ, ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಆಗುವ ರೀತಿಯಲ್ಲಿಯೇ ಅದು ನೇಮಕಾತಿಗಳನ್ನು ನಡೆಸಬಹುದು. ಆಗ ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಋಣಿಯಾಗಿರುವ ಸಂಸ್ಥೆಯಂತೆ ಆಗುತ್ತದೆ. ಚುನಾವಣೆಗಳು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು ಎಂದಾದರೆ, ಚುನಾವಣಾ ಆಯೋಗವು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಇದು ಪ್ರಜಾತಂತ್ರ ವ್ಯವಸ್ಥೆಯ ಆರೋಗ್ಯಕ್ಕೆ ಅತ್ಯಂತ ಮಹತ್ವದ್ದು. ಆಯೋಗಕ್ಕೆ ನಡೆಯುವ ಪ್ರಮುಖ ನೇಮಕಾತಿಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಒಂದು ವಿಧವೆಂದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಸಿಜೆಐ ಅವರನ್ನೂ ಒಳಗೊಳ್ಳುವುದು. ಅಥವಾ, ಈಗಿನ ಮಸೂದೆಯನ್ನೇ ಪರಿಗಣಿಸಿ ಹೇಳುವುದಾದರೆ, ನೇಮಕಾತಿ ವಿಚಾರದಲ್ಲಿ ಆಯ್ಕೆ ಸಮಿತಿಯಲ್ಲಿ ಒಮ್ಮತ ಇರಬೇಕು ಎಂಬ ಅಂಶವನ್ನು ಕಡ್ಡಾಯಗೊಳಿಸಬಹುದು. ಆಗ ಸಿ.ಇ.ಸಿ, ಇ.ಸಿ. ಹುದ್ದೆಗಳಿಗೆ ನೇಮಕ ಆಗುವವರು ವಿರೋಧ ಪಕ್ಷಕ್ಕೂ ಒಪ್ಪಿಗೆಯಾಗುತ್ತಾರೆ. ಮಸೂದೆಯು ಈಗಿರುವ ಸ್ಥಿತಿಯಲ್ಲಿ, ರಾಜಕೀಯದಿಂದ ಹೊರಗೆ ನಿಂತಿರುವ ಹಾಗೂ ಸ್ವತಂತ್ರವಾಗಿ ಕೆಲಸ ಮಾಡುವ ಚುನಾವಣಾ ಆಯೋಗವನ್ನು ಕಟ್ಟುವ ಬಗೆಯಲ್ಲಿ ಇಲ್ಲ. ಈಗಿನ ಮಸೂದೆಯು ಕೈಗೊಂಬೆ ಆಯುಕ್ತರನ್ನು ನೇಮಕ ಮಾಡುವುದನ್ನೇ ಕಾನೂನು ಆಗಿಸುವ ಉದ್ದೇಶ ಹೊಂದಿರುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.