ಈ ಶಾಲೆಯ ವಿದ್ಯಾರ್ಥಿಗಳು ಸಂಪೂರ್ಣ ಭಿನ್ನ. ಇವರು ನೂಲುತ್ತಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ಸಾವಯವ ಗೊಬ್ಬರ ತಯಾರಿಸುತ್ತಾರೆ. ಹತ್ತಿ, ಮೆಕ್ಕೆಜೋಳ, ಜೋಳ ಹಾಗೂ ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ.

ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯ ಚಿತ್ರಣವಿದು. ದೇಶದ ಎಲ್ಲಾ ಶಾಲೆಗಳಲ್ಲಿ ಶಿಕ್ಷಣದ ಜೊತೆ ಜೀವನ ಶಿಕ್ಷಣ ನೀಡಬೇಕೆಂಬ ಗಾಂಧೀಜಿಯ ಕನಸಿಲ್ಲಿ ಸಾಕಾರಗೊಳ್ಳುತ್ತಿದೆ.

ಇಲ್ಲಿಯ ವಿದ್ಯಾರ್ಥಿಗಳು ತಾವು ಬೆಳೆದ ಬೆಳೆಗಳಿಗೆ ತಾವೇ ಮಾಲೀಕರು. ಅವರ ಪರಿಶ್ರಮದಿಂದ ನೂರಾರು ಮರಗಳು ೧೫ ಎಕರೆ ಪ್ರದೇಶದಲ್ಲಿ ಇಂದು ಬೃಹದಾಕರವಾಗಿ ಬೆಳೆದು ನಿಂತಿವೆ. ಇವರದ್ದು ರೇಷ್ಮೆ ಕೃಷಿಯಲ್ಲೂ ಎತ್ತಿದ ಕೈ. ಇವರಿಗೆ ಹೈನುಗಾರಿಕೆ ಬಗ್ಗೆಯೂ ತಿಳಿವಳಿಕೆ ನೀಡಲಾಗುತ್ತಿದೆ. ಅದಕ್ಕಾಗಿ ಇಲ್ಲಿ ಹಸುಗಳನ್ನು ಸಾಕಲಾಗಿದೆ. ಹಸುಗಳ ಪಾಲನೆಯಿಂದ ಹಿಡಿದು ಹಾಲಿನ ಉತ್ಪನ್ನಗಳ ಕುರಿತು ತರಬೇತಿ ನೀಡಲಾಗುತ್ತದೆ. ಇಲ್ಲಿ ಶಿಕ್ಷಣ ಮುಗಿಸಿದ ಬಹಳಷ್ಟು ವಿದ್ಯಾರ್ಥಿಗಳು ಹೈನುಗಾರಿಕೆ ವೃತ್ತಿ ಕೈಗೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.

ಎಲ್ಲವೂ ಗಾಂಧಿಮಯ
ಊಟ ಉಪಚಾರದಿಂದ ಹಿಡಿದು ಆಚಾರ ವಿಚಾರಗಳೆಲ್ಲವೂ ಇಲ್ಲಿ ಗಾಂಧಿಮಯ. ಗಾಂಧಿಯ ಖಾದಿ ಮಂತ್ರ ನಿತ್ಯ ಇಲ್ಲಿ ಪಠಣವಾಗುತ್ತದೆ. ವಿದ್ಯಾರ್ಥಿಗಳಿಗೆ ಖಾದಿ ಕುರಿತು ತಿಳಿವಳಿಕೆ ನೀಡುವ ವ್ಯವಸ್ಥೆಯೂ ಇದೆ.

ಇಲ್ಲಿನ ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಖಾದಿ ಅಂಗಿ, ನೀಲಿ ಬಣ್ಣದ ಚಡ್ಡಿ ಹಾಗೂ ಗಾಂಧಿ ಟೋಪಿ ಕಡ್ಡಾಯ. ದಿನಕ್ಕೆ ಎರಡು ಬಾರಿ ನಡೆಯುವ ಸಾಮೂಹಿಕ ಧ್ಯಾನದಲ್ಲಿ ವಿದ್ಯಾರ್ಥಿಗಳು ಸರ್ವಧರ್ಮ ಮಂತ್ರ ಪಠಣ ಮಾಡುತ್ತಾರೆ.

ಬೆಳಿಗ್ಗೆ ಯೋಗ ಅಭ್ಯಾಸ ಇಲ್ಲಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ನೀಡಲಾಗುತ್ತದೆ. ಶಾಲೆಯ ಆವರಣ, ತರಗತಿ ಕೋಣೆ, ವಸತಿ ನಿಲಯ ಹಾಗೂ ಪ್ರಸಾದ ನಿಲಯ ಶುಚಿಗೊಳಿಸುವ ಕಾರ್ಯ ವಿದ್ಯಾರ್ಥಿಗಳ ಸ್ವಯಂ ಪ್ರೇರಣೆಯಿಂದ ನಡೆಯುತ್ತದೆ. ಇದರಿಂದಾಗಿ ಇಲ್ಲಿ ಮಕ್ಕಳಲ್ಲಿ ಮೇಲು ಕೀಳು ಎಂಬ ಭಾವನೆಗೆ ಅವಕಾಶವಿಲ್ಲ.

ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಮೂಲಕ ಪ್ರತಿವರ್ಷ ೪೦ ಬಡ ಮಕ್ಕಳಿಗೆ ೫ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಆಯ್ಕೆಯಾದ ಮಕ್ಕಳಿಗೆ ಎಸ್ಸೆಸ್ಸೆಲ್ಸಿಯವರೆಗೆ ಶಿಕ್ಷಣ ನಡೆಯುತ್ತದೆ. ಇಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಊಟ, ವಸತಿ, ಪುಸ್ತಕ, ಲೇಖನ ಸಾಮಗ್ರಿ ಎಲ್ಲವೂ ಉಚಿತ.

ಈ ರೀತಿಯಾದ ಮಾದರಿ ಶಾಲೆಯ ವಾತಾವರಣಕ್ಕೆ ಟೊಂಕ ಕಟ್ಟಿ, ಮಾದರಿ ಕೆಲಸಕ್ಕೆ ನಿಂತವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆರ್.ಎಸ್.ಪಾಟೀಲ್ ಹಾಗೂ ಇಲ್ಲಿಯ ಶಿಕ್ಷಕ ವರ್ಗ.

ಕ್ರೀಡೆಯಲ್ಲೂ ಉತ್ಸಾಹ
ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಹಲವಾರು ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗುರುಕುಲದ ಕೀರ್ತಿ ಹೆಚ್ಚಿಸಿದ್ದಾರೆ. ಗುರುಗಳ ಮಾರ್ಗದರ್ಶನದಿಂದ ಆಟದೊಂದಿಗೆ ಪಾಠ, ಹಾಸ್ಯ, ಮನೋರಂಜನೆ, ಕಥೆ, ಕಾವ್ಯ, ಗಣಿತ ಚಮತ್ಕಾರ, ವಿಜ್ಞಾನ, ಚಿತ್ರಕಲೆ, ಜಾದೂ ಪ್ರದರ್ಶನ ಹೀಗೆ ವೈವಿಧ್ಯಮಯ ಪಠ್ಯೇತರ ಚಟುವಟಿಕೆಗಳು ಈ ಶಾಲೆಯ ವಿದ್ಯಾರ್ಥಿಗಳಿಂದ ಮೆರುಗು ಪಡೆಯುತ್ತವೆ.

ಪಾಲಕರು ತಮ್ಮ ಮಕ್ಕಳನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸುವ ವ್ಯವಸ್ಥೆ ಇದೆ. ವರ್ಷದಲ್ಲಿ ಎರಡು ಬಾರಿ ಪಾಲಕರ ಸಭೆ ಕರೆದು ಮುಕ್ತ ಚರ್ಚೆ ನಡೆಸಿ ಸಲಹೆ ಸೂಚನೆ ಪಡೆದು ಮುಂದಿನ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ.

ಅಪ್ಪಟ ಗಾಂಧಿ ಅನುಯಾಯಿ ದಿ.ಗುದ್ಲೆಪ್ಪ ಹಳ್ಳಿಕೇರಿ ಅವರ ಉದಾತ್ತ ಶೈಕ್ಷಣಿಕ ಚಿಂತನೆಗಳ ಫಲವೇ ಈ ಗುರುಕುಲ. ಅಂದಿನ ಶಿಕ್ಷಣ ಸಚಿವ ಎಸ್.ಆರ್. ಕಂಠಿ ನೇತೃತ್ವದಲ್ಲಿ ಗುರುಕುಲ ಸ್ಥಾಪನೆಯ ಸಮಗ್ರ ಯೋಜನೆ ರೂಪಿಸಿ ಶಿಕ್ಷಣ ತಜ್ಞ ಮ.ಗು.ಹಂದ್ರಾಳರಿಗೆ ಜವಾಬ್ದಾರಿ ವಹಿಸಿದರು. ಆಗ ಹಂದ್ರಾಳರು ದೇಶದಲ್ಲಿರುವ ಗಾಂಧಿ ಕೇಂದ್ರಗಳೆಲ್ಲವನ್ನೂ ಸಂದರ್ಶಿಸಿ ಗುರುಕುಲ ಸ್ಥಾಪನೆಗೆ ಸಮಗ್ರ ಯೋಜನೆಯನ್ನು ರೂಪಿಸಿದರು.

ಅವರ ನಿಧನದ ನಂತರ ಗುದ್ಲೆಪ್ಪ ಹಳ್ಳಿಕೇರಿ ಟ್ರಸ್ಟ್ ಹುಟ್ಟಿಕೊಂಡಿತು. ತಮ್ಮ ಹುಟ್ಟೂರು ಹೊಸರಿತ್ತಿಯಲ್ಲಿ ಗಾಂಧಿ ವಿಚಾರಗಳಿಗೆ ಜೀವ ತುಂಬುವ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟು ಹಾಕಬೇಕೆಂಬ ದಿ.ಗುದ್ಲೆಪ್ಪ ಹಳ್ಳಿಕೇರಿಯವರ ಆಸೆಯನ್ನು ಈ ಟ್ರಸ್ಟ್ ನೆರವೇರಿಸಿತು. ಗುದ್ಲೆಪ್ಪ ಹಳ್ಳಿಕೇರಿಯವರ ಷಷ್ಠಬ್ದಿ ಕಾರ್ಯಕ್ರಮವನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಂಡರು.

ಸಾರ್ವಜನಿಕರಿಂದ ಸಂಗ್ರಹಣೆಯಾದ ಹಣದಲ್ಲಿ ಗ್ರಾಮದ ಹೊರ ವಲಯದಲ್ಲಿ ೩೦ ಎಕರೆ ಜಮೀನು ಖರೀದಿಸಿದರು. ೧೯೮೪ರ ಅಕ್ಟೋಬರ್ ೨ ರಂದು ಆರಂಭವಾದ ಗುರುಕುಲ ಗಾಂಧಿ ತತ್ವ ಚಿಂತನೆಗಳ ಉಳಿವಿಗೆ ಶ್ರಮಿಸುತ್ತಿದೆ.
ನಾವೆಲ್ಲರೂ ಅಕ್ಟೋಬರ್ ೨ ಬಂದಾಗ ಮಹಾತ್ಮಾ ಗಾಂಧೀಜಿಯವರನ್ನು, ಅವರ ಚಿಂತನೆಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ಆದರೆ ಈ ಗುರುಕುಲದಲ್ಲಿ ನಡೆ-ನುಡಿ, ಉಡುಗೆ-ತೊಡುಗೆ, ಶೈಕ್ಷಣಿಕ ಪದ್ಧತಿ ಪ್ರತಿಯೊಂದು ಹಂತದಲ್ಲೂ ಮಹಾತ್ಮಾ ಗಾಂಧೀಜಿ ಕಲ್ಪನೆಯ ಛಾಯೆಯನ್ನು ಕಾಣಬಹುದು.

ಕೃಷಿ ಆಧರಿತ ಶಿಕ್ಷಣ
ಕೃಷಿ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮ ಆಧರಿತ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡುವುದಷ್ಟೆ ಅಲ್ಲದೇ ಸ್ವಯಂವೃತ್ತಿ ಆರಂಭಿಸಿ ಸ್ವಾಭಿಮಾನದ ಜೀವನ ನಡೆಸಲೂ ತರಬೇತಿ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ನಂತರ ಶಿಕ್ಷಣ ಮುಂದುವರೆಸಲು ಸಾಧ್ಯವಾಗದ ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ಪಡೆದ ಅನುಭವದಿಂದಲೇ ಬದುಕು ಕಟ್ಟಿಕೊಂಡಿರುವ ನಿದರ್ಶನಗಳಿವೆ.

ಆಧುನಿಕ ತಂತ್ರಜ್ಞಾನದ ಅರಿವನ್ನು ಮೂಡಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತಿದೆ. ಸುಸಜ್ಜಿತ ಗ್ರಂಥ ಭಂಡಾರವೂ ಇದೆ.

ಗಾಂಧಿ ಗ್ರಾಮೀಣ ಗುರುಕುಲದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶವನ್ನು ಪಡೆಯುತ್ತಲೇ ಬಂದಿದ್ದು, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.