ಡಾಲ್ಫಿನ್ ಸಫಾರಿಗಾಗಿ ಡೆನ್ಮಾರ್ಕ್ನ ಕೋಪನ್ಹೇಗನ್ನಿಂದ ಲಿಮ್ಫ್ಜೋರ್ಡ್ಗೆ ಸುಮಾರು 530 ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಅಲ್ಲಿಗೆ ತಲುಪಲು ರಸ್ತೆ, ರೈಲು, ವಿಮಾನ, ದೋಣಿ ಮಾರ್ಗಗಳಿವೆ. ನಾವು ರಸ್ತೆ ಮಾರ್ಗವನ್ನು ಆಯ್ದು ಲಿಮ್ಫ್ಜೋರ್ಡ್ ಬಂದರನ್ನು ತಲುಪಿದೆವು. ಸುಮಾರು ಎಂಟು ಜನರ ಸಾಮರ್ಥ್ಯದ ಸಣ್ಣ ಮೋಟಾರ್ ಬೋಟ್ ನಮಗಾಗಿ ಕಾಯುತ್ತಿತ್ತು.

ನಮ್ಮ ಬೋಟ್ನಲ್ಲಿ ನಾರ್ವೆ ಹಾಗೂ ಡೆನ್ಮಾರ್ಕ್ನವರೂ ಇದ್ದರು. ಸುಮಾರು ಒಂದೂವರೆ ಗಂಟೆ ಪ್ರಯಾಣದಲ್ಲಿ ಅನುಭವಿ ಚಾಲಕ ಕಮ್ ಗೈಡ್ ನಮ್ಮೊಂದಿಗೆ ಇಂಗ್ಲಿಷಿನಲ್ಲಿ ಕಷ್ಟಪಟ್ಟು ನಾಲ್ಕೈದು ಪುಟ್ಟ ಪುಟ್ಟ ವಾಕ್ಯಗಳನ್ನು ಮಾತನಾಡುತ್ತಾ, ‘ಲೆಟ್ಸ್ ಗೋ...’ ಎಂದು ನಮ್ಮನ್ನು ಥ್ಯೆಬೊರೊನ್ ಕಾಲುವೆಯ ಮೇಲೆ ತೇಲಿಸುತ್ತಾ ಹೋದರು. ಮಧ್ಯ ಸಮುದ್ರದ ಭಾಗಕ್ಕೆ ಬಂದು ನಮ್ಮನ್ನು ‘ನೀರನ್ನೇ ನೋಡುತ್ತಾ ಇರಿ, ಡಾಲ್ಫಿನ್ಗಳು ಕಾಣಬಹುದು’ ಎಂದು ಸಣ್ಣದೊಂದು ಸೂಚನೆ ಕೊಟ್ಟರು. ಹಾಗೇ ದೂರ ಸಮುದ್ರದ ಉದ್ದಕ್ಕೂ ನಮ್ಮೆಲ್ಲರ ಕಣ್ಣುಗಳು ಕಾಣಬಹುದಾದ ಡಾಲ್ಫಿನ್ಗಳತ್ತ ನೆಟ್ಟಿದ್ದವು.

ಮೇಲೆ ಮೋಡಗಳಿಲ್ಲದ ನೀಲಾಕಾಶ, ಸಂಜೆಯ ಬಿಸಿಲು, ಸಮುದ್ರದ ಮೇಲಿಂದ ಬೀಸುವ ತಣ್ಣನೆಯ ಗಾಳಿಯಲ್ಲಿ ದೋಣಿಯಲ್ಲಿ ಕುಳಿತವರೆಲ್ಲರೂ ಡಾಲ್ಫಿನ್ಗಳ ಧ್ಯಾನದಲ್ಲಿದ್ದೆವು. ಸಿಂಗಪುರಕ್ಕೆ ಭೇಟಿ ನೀಡಿದ್ದಾಗ ತರಬೇತಿ ಪಡೆದಿದ್ದ ಡಾಲ್ಫಿನ್ಗಳ ಪ್ರದರ್ಶನಗಳನ್ನು ನೋಡಿದ್ದೆವು. ಆಳ ಸಮುದ್ರದಲ್ಲಿ ಡಾಲ್ಫಿನ್ ಸಫಾರಿ ಹೊಸ ಅನುಭವ. ನಮ್ಮೆಲ್ಲರ ಕಣ್ಣುಗಳು ಸಮುದ್ರಜೀವಿಗಳಿಗಾಗಿ ತಡಕಾಡಿದವು. ಗೈಡ್ ಇನ್ನೂ ತುಂಬಾ ದೂರ ಹೋಗಬೇಕು ಎಂಬ ಸೂಚನೆ ನೀಡಿದರು. ನೀರಿನ ಮಧ್ಯೆ ನಾಲ್ಕಾರು ಬೋಟುಗಳಲ್ಲಿ ಬಂದವರ ಕಣ್ಣುಗಳೂ ಡಾಲ್ಫಿನ್ಗಳನ್ನೇ ಅರಸುತ್ತಿದ್ದವು.

ಸೀಗಲ್ ಪಕ್ಷಿಗಳು ತಲೆಯ ಮೇಲೆ ಜೋರಾಗಿ ಶಬ್ದ ಮಾಡುತ್ತಾ ನೋಡ ನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗು ಹಾಕಿ ಮೀನುಗಳನ್ನು ಬೇಟೆಯಾಡಿ ಹೊರಬಂದು ಹಾಗೇ ನೀರಿನಲ್ಲಿ ಒಂದು ಕ್ಷಣ ತೇಲಿ ಮತ್ತೆ ಹಾಗೇ ಹಾರಿ ಹೋದವು. ದೋಣಿಯಲ್ಲಿ ಇದ್ದವರು ಯಾರೋ ‘ಹೋ....’ ಎಂದು ಕೂಗಿ ಕೈ ತೋರಿಸಿದರು. ನಮ್ಮೆಲ್ಲರ ಕಣ್ಣುಗಳು ಆ ಕಡೆಗೆ ತಿರುಗಿದವು. ಅಲ್ಲೊಂದು ಡಾಲ್ಫಿನ್ ಮುಳುಗು ಹಾಕಿ ಮುಂದೆ ಮರೆಯಾಗಿ ಹೋಯಿತು. ನಮ್ಮೆಲ್ಲರ ಗಮನ ಮತ್ತೆ ಅದನ್ನು ಹುಡುಕುವುದರತ್ತವೇ ಇತ್ತು. ನಮ್ಮ ನಿರೀಕ್ಷೆ ಆ ಸಮುದ್ರಜೀವಿಯ ಪೂರ್ಣ ದರ್ಶನ ಮಾಡುವುದಾಗಿತ್ತು. ಅದನ್ನು ಹುಸಿ ಮಾಡದಂತೆ ಡಾಲ್ಫಿನ್ ನೀರ ಮೇಲಿಂದ ಹಾರಿ ಮುಳುಗು ಹಾಕಿತು. ನಾವೆಲ್ಲ ಒಟ್ಟಾಗಿ ‘ಹೋ...’ ಎಂದು ಕೂಗಿದೆವು. ಒಂದು, ಎರಡು, ಮೂರು–ಹೀಗೆ ಲೆಕ್ಕ ಮಾಡುತ್ತಲೇ ಹೋದೆವು. ನಾವು ನೆಟ್ಟ ಕಣ್ಣಂಚನ್ನು ತಪ್ಪಿಸಿ ಮತ್ತೆಲ್ಲೋ ಎದ್ದು ಬಂದ ಡಾಲ್ಫಿನ್ ರೆಕ್ಕೆಯನ್ನು ನೀರಿನಲ್ಲಿ ಜೋರಾಗಿ ಬಡಿಯುತ್ತಾ ಪಕ್ಕದ ಬೋಟಿನ ಪ್ರವಾಸಿಗರಿಗೆ ನೀರಿನ ಸಿಂಚನ ಮಾಡಿಸಿತು. ಅವರೆಲ್ಲಾ ಜೋರಾಗಿ ಕೂಗಿದಾಗ ನಮ್ಮ ಬೋಟ್ ಬಳಿಯೂ ಬರಬಾರದೆ ಎಂದು ನಾವು ಕಾತರಿಸುತ್ತಿದ್ದಾಗಲೇ ಡಾಲ್ಫಿನ್ಗಳು ನಮ್ಮ ಬೋಟ್ ಮುಂದೆಯೇ ತಾವೇ ದಾರಿ ತೋರಿಸುವಂತೆ ಮುಂದೆ ಮುಂದೆ ಮುಳುಗು ಹಾಕಿದವು. ಅವು ಸಮುದ್ರದಿಂದ ಹೊರಬರುತ್ತಿದ್ದಂತೆ ಕಾನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಬರುವ ಸುಂದರಿಯರನ್ನು ಕ್ಯಾಮೆರಾಗಳು ಸೆರೆ ಹಿಡಿಯುವಂತೆ ನಾವೂ ಈ ಮಾನವ ಸ್ನೇಹಿ ಸಸ್ತನಿಗಳ ವಿವಿಧ ಭಂಗಿಯನ್ನು ಸೆರೆ ಹಿಡಿದು ಸಂಭ್ರಮಿಸಿದೆವು.

ಇಲ್ಲಿ ಪ್ರವಾಸಿಗರಿಗೆ ಸದಾ ಕಾಣಸಿಗುವ ಮೂರು ಡಾಲ್ಫಿನ್ಗಳಿಗೆ ಹೆಸರುಗಳನ್ನು ಇಟ್ಟಿದ್ದಾರೆ. ಚೆವ್ಬಾಕ್ಕಾ, ಕರು ಮತ್ತು ಲಿಯಾ ಎಂದು. ಗೈಡ್ ಅವುಗಳ ಹೆಸರಿಡಿದು ಕರೆಯುತ್ತಿದ್ದದ್ದು ನಮ್ಮ ಕಿವಿಗೆ ಬೀಳುತ್ತಿತ್ತು. ಅವು ಕೂಡ ಮನೆಯ ಮಕ್ಕಳಂತೆ ಕೆಲವೊಮ್ಮೆ ಓಗೊಡುವಂತೆ ಅಲ್ಲೆಲ್ಲೋ ಕಾಣಿಸಿಕೊಳ್ಳುತ್ತಿದ್ದವು, ಮತ್ತೊಮ್ಮೆ ಮಾಯವಾಗುತ್ತಿದ್ದವು. ಹವಾಮಾನ ಚೆನ್ನಾಗಿರುವ ಕಾಲದಲೆಲ್ಲಾ ಡಾಲ್ಫಿನ್ಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ ಎಂದು ಗೈಡ್ ತಿಳಿಸಿದರು.

ಆ ಡಾಲ್ಫಿನ್ಗಳ ಚಿನ್ನಾಟ ನೋಡುವುದರಲ್ಲಿ ಸಮಯ ಕಳೆದದ್ದು ನಮ್ಮ ಅರಿವಿಗೆ ಬರಲಿಲ್ಲ. ಅವುಗಳು ರೆಕ್ಕೆಯನ್ನು ಬಡಿಯುತ್ತಾ ಮತ್ತೊಮ್ಮೆ ತಮ್ಮ ಇಡೀ ದೇಹವನ್ನು ನೀರಿನಿಂದ ಆಚೆ ತಂದು ಡೈವ್ ಮಾಡುತ್ತಾ, ಒಮ್ಮೆ ಒಂಟಿ, ಮತ್ತೊಮ್ಮೆ ಜೋಡಿಯಾಗಿ, ಇನ್ನೊಮ್ಮೆ ಗುಂಪಾಗಿ–ಹೀಗೆ ಸುಮಾರು ಹೊತ್ತು ನಮ್ಮೆಲ್ಲರ ಗಮನವೂ ಅವುಗಳಿಂದ ಕದಲದಂತೆ ಮಾಡಿದವು. ಸುತ್ತ ಇದ್ದ ಅನೇಕ ಬೋಟಿನ ಪ್ರವಾಸಿಗರೊಂದಿಗೆ ನಾವೂ ಆನಂದಿಸಿದೆವು. ಗೈಡ್ ‘ಎಂಜಾಯ್ಡ್' ಎಂದು ಕೇಳಿ ಮತ್ತೆ ಬೋಟ್ ಅನ್ನು ಚಲಾಯಿಸಿಕೊಂಡು ದಡಕ್ಕೆ ತಂದು ನಿಲ್ಲಿಸಿದರು.

ನಾವು ಅಲ್ಲಿಯೇ ಹತ್ತಿರವಿದ್ದ ಬಿಳಿಮರಳ ದಂಡೆಯಲ್ಲಿ ಸಮುದ್ರದ ಜೊತೆ ಹಾಗೇ ಒಂದು ಹೆಜ್ಜೆ ಹಾಕಿ, ನುಣ್ಣನೆಯ ಕಲ್ಲುಗಳನ್ನು ಆಯ್ದುಕೊಂಡೆವು. ಆ ಮೇಲೆ ಮತ್ತೆ ಬಂದರಿಗೆ ಬಂದೆವು. ಅಲ್ಲಿ ನಿಂತಿದ್ದ ಫೆರ್ರಿಯನ್ನು ಏರಿದೆವು. ಅದು ಅರ್ಧಗಂಟೆಗೆ ಮತ್ತೊಂದು ದಡಕ್ಕೆ ತಂದು ನಿಲ್ಲಿಸಿತು. ಮೊದಲೇ ಗೊತ್ತು ಮಾಡಿದ್ದ ಹಳ್ಳಿಯೊಂದರ ಮನೆಗೆ ಹೋದೆವು. ಅಲ್ಲೇ ಉಳಿದಿದ್ದೆವು. ಅಂದು ರಾತ್ರಿ ಕನಸಿನಲ್ಲಿಯೂ ಡಾಲ್ಫಿನ್ಗಳದ್ದೇ ಚಿನ್ನಾಟ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.