ಅದೊಂದು ದೊಡ್ಡಗೇಟ್. ಅದನ್ನು ದಾಟಿ ಮುಂದೆ ಹೋದರೆ ವಾಡೆಯ ಮುಂಬಾಗಿಲು. ಬಾಗಿಲು ತೆಗೆದು, ಒಳಗೆ ಹೆಜ್ಜೆ ಇಡುತ್ತಿದ್ದಂತೆ, ದೊಡ್ಡ ಹಜಾರ. ಅಲ್ಲಿ ನಿಂತರೆ ಮನಸ್ಸಿನಲ್ಲಿ ಎತ್ತ ಕಡೆ ಹೋಗಬೇಕು, ಏನನ್ನು ನೋಡಬೇಕೆಂಬ ಗೊಂದಲ ಹುಟ್ಟುತ್ತದೆ. ಆ ಕಡೆ ಹೋಗೋದಾ, ಈ ಕಡೆ ಹೋಗೋದಾ ಎಂದು ಮನಸ್ಸು ಉಯ್ಯಾಲೆಯಂತಾಡುತ್ತದೆ.

‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಹೇಳಿದ ಆದಿಕವಿ ಪಂಪ ಹುಟ್ಟಿದ ಮನೆ ಇದು. ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಅಣ್ಣಿಗೇರಿಯಲ್ಲಿರುವ ಈ ಮನೆಯನ್ನು, ಗ್ರಾಮದ ಜನರು ಪಂಪನ ವಾಡೆ ಎಂದೇ ಕರೆಯುತ್ತಾರೆ. ಆ ಮನೆಗೆ ‘ದೇಶಪಾಂಡೆಯವರ ವಾಡೆ’ ಎಂಬ ಹೆಸರೂ ಇದೆ.

ಒಟ್ಟು ಐದು ಎಕರೆ ಪ್ರದೇಶದಲ್ಲಿ ಮೂರು ಎಕರೆಯಷ್ಟು ವಾಡೆಯ ಕಟ್ಟಡ ಆವರಿಸಿದೆ! ಆರೇಳು ಅಡಿ ಅಗಲದ ದಪ್ಪ–ದಪ್ಪ ಗೋಡೆಗಳು, ಮರದ ಬೃಹತ್ ಗಾತ್ರದ ಕಂಬಗಳ ಸಾಲುಗಳು, ಗೋಡೆಯ ಮೇಲಿರುವ ಪಂಪನ ವಾರಸುದಾರರ ಚಿತ್ರಗಳು ಗಮನ ಸೆಳೆಯುತ್ತವೆ. ಮೊದಲ ಹಜಾರದಲ್ಲಿರುವ ಎತ್ತರದ ಕಂಬಗಳ ಸಾಲುಗಳನ್ನು ಕಂಡಾಗ, ‘ಇಷ್ಟೆತ್ತರವಿದ್ದಾವೆಯೇ ಮರದ ಕಂಬಗಳು’ ಎಂದು ಉದ್ಗರಿಸುವಂತಾಗುತ್ತದೆ. ಕಂಬಗಳ ಸಾಲು ದಾಟಿ, ವಾಡೆಯ ಗೋಡೆಗಳತ್ತ ನೋಟ ಹರಿಸಿದರೆ, ತರಹೇವಾರಿ ಚಿತ್ರಗಳ ಜತೆಗೆ, ಬ್ರಿಟಿಷರ ಕಾಲದ ಕನ್ನಡಿಯೊಂದು ಗಮನ ಸೆಳೆಯುತ್ತದೆ.

ಭಾವಚಿತ್ರ ಬಿಟ್ಟರೆ ಬೇರೇನೂ ಇಲ್ಲ
ಪಂಪನಿಗೆ ಸಂಬಂಧಿಸಿದ ಯಾವ ವಸ್ತುಗಳು ಈಗ ಇಲ್ಲಿ ಇಲ್ಲ. ಮೊದಲು ಸಿಗುವ ಹಜಾರದಲ್ಲಿ ಪಂಪನ ಭಾವಚಿತ್ರ ಹಾಕಿರುವುದು ಬಿಟ್ಟರೆ ಬೇರೇನು ವಸ್ತುಗಳಿಲ್ಲ. ಹಜಾರದ ಪಕ್ಕದಲ್ಲಿರುವ ಕೋಣೆ ಪ್ರವೇಶಿಸಿದರೆ ಹಲವು ಕಂಬಗಳ ದನದ ಕೊಟ್ಟಿಗೆ ಕಾಣುತ್ತದೆ. ಈ ಕೊಟ್ಟಿಗೆಗೆ ಅಂಟಿಕೊಂಡಂತೆ, ರಾಗಿ, ಅಕ್ಕಿ ಬೀಸುವ ದೊಡ್ಡದಾದ ಕೊಠಡಿ ಇದೆ. ಆರೇಳು ಬೀಸುವ ಕಲ್ಲುಗಳಿವೆ. ಪಕ್ಕದಲ್ಲಿ ಕುದುರೆ ಕಟ್ಟುತ್ತಿದ್ದ ಲಾಯವೂ ಇದೆ.

ವಾಡೆಯಲ್ಲಿ ವಿಶಾಲವಾದ ಹತ್ತು ಕೊಠಡಿಗಳಿವೆ. ವಾಡೆಯ ಅಟ್ಟಕ್ಕೆ ಏರಲು ಹಜಾರದ ಮಧ್ಯದಿಂದ ಹದಿನಾಲ್ಕು ಕಡೆಗಳಲ್ಲಿ ಮೆಟ್ಟಿಲ ಬಾಗಿಲುಗಳಿವೆ. ವಾಡೆಯ ಹಜಾರ ಇನ್ನೆಷ್ಟು ಅಗಲವಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ! ಮಹಡಿಯಲ್ಲಿ ನಿಂತು ಹೊರಾಂಗಣವನ್ನು ನೋಡಲು ಇರುವ ಬಾಲ್ಕನಿ ರೀತಿಯ ಕಿಟಕಿಗಳು ಗಮನ ಸೆಳೆಯುತ್ತವೆ. ಕುಟುಂಬಕ್ಕೆ ಸೇರಿದ, ಹಿರಿಯರಿಗೆ ಸಂಬಂಧಿಸಿದ ಅನೇಕ ಪರಿಕರಗಳನ್ನು ನೋಡಬಹುದು. ದೊಡ್ಡದೊಡ್ಡ ಮರದ ದಿಮ್ಮಿಗಳನ್ನು ಬಳಸಿ ವಾಡೆ ಕಟ್ಟಿರುವುದರಿಂದ ವಿನ್ಯಾಸವೇ ಮನಮೋಹಕವಾಗಿದೆ.

ಹಳೆಯದಾದ ಕಾರಣ ವಾಡೆ ತನ್ನ ಚೈತನ್ಯ ಕಳೆದುಕೊಂಡಂತೆ ಕಾಣುತ್ತದೆ. ಕೆಲವು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಪಂಪನ ಮನೆತನದಭೀಮಪ್ಪಯ್ಯ ಚಂದ್ರಪ್ಪಯ್ಯ ರಾವ್ ಸಾಹೇಬ ದೇಶಪಾಂಡೆ (ಒಂದೇ ಹೆಸರು) ಹಾಗೂ ಅವರ ಸಹೋದರರು ಈ ಮನೆಯಲ್ಲಿ ಈಗ ವಾಸವಿಲ್ಲ. ಊರಿಗೆ ಬಂದಾಗ ವಾಡೆಯಲ್ಲೇ ಉಳಿಯುತ್ತಾರೆ. ಹೋಟೆಲ್ ಉದ್ಯಮ ನಡೆಸಿಕೊಂಡು ಕೊಲ್ಲಾಪುರದಲ್ಲಿ ಇದ್ದಾರೆ. ಹೀಗಾಗಿ ಮನೆಯ ನಿರ್ವಹಣೆಗೆ ಇಬ್ಬರನ್ನು ನೇಮಕ ಮಾಡಿದ್ದಾರೆ. ಇವರಿಂದ ಅಲ್ಪಸ್ವಲ್ಪ ಮಾಹಿತಿ ಪಡೆಯಬಹುದು.

ಉತ್ತರ ಕರ್ನಾಟಕದ ಭಾಗದಲ್ಲಿ ರಾಜರ ಸಾಮಂತರಾಗಿ ಕುಲಕರ್ಣಿ, ದೇಶಪಾಂಡೆ, ದೇಸಾಯಿಗಳು ಆಳುತ್ತಿದ್ದರು. ಈ ಮನೆತನದವರು ವಾಡೆಗಳಲ್ಲಿ (ಕೋಟೆಗಳಂತ ಮನೆಗಳು) ವಾಸಿಸುತ್ತಿದ್ದರು. ಈಗಲೂ ಈ ಭಾಗದ ಹಲವು ಕಡೆಗಳಲ್ಲಿ ಇಂಥ ವಾಡೆಗಳನ್ನು ಕಾಣಬಹುದು.

ಅಣ್ಣಿಗೇರಿ ಪಂಪನ ಊರು
ಪಂಪನ ಪೂರ್ವಜರು ಜೈನ ಧರ್ಮಕ್ಕೆ ಮತಾಂತರ ಆದವರು. ಸಂಶೋಧಕರಾದ ಡಾ. ಎಂ. ಎಂ. ಕಲಬುರ್ಗಿ, ಆರ್. ಸಿ. ಹಿರೇಮಠ ಅವರು ಮೊದಲಿಗೆ ಪಂಪನ ಊರು ಅಣ್ಣಿಗೇರಿ ಎಂಬುದನ್ನು ಶೋಧಿಸಿದವರು’ ಎನ್ನುತ್ತಾರೆ ಅಣ್ಣಿಗೇರಿಯ ಆದಿಕವಿ ಪಂಪ ಪ್ರತಿಷ್ಠಾನದ ಕಾರ್ಯದರ್ಶಿ ಪ್ರೋ. ಎಸ್. ಎಸ್. ಹರ್ಲಾಪುರ.

‘ಸಾಮಾನ್ಯವಾಗಿ ಜೈನರು ಸವದತ್ತಿ ಎಲ್ಲಮ್ಮನಿಗೆ ಪೂಜೆ ಸಲ್ಲಿಸುವುದಿಲ್ಲ. ಪಂಪನ ವಂಶಸ್ಥರಾದ ದೇಶಪಾಂಡೆ ಮನೆತನದವರು ಜೈನರಾದರೂ ಸವದತ್ತಿಯ ಎಲ್ಲಮ್ಮನಿಗೆ ಪ್ರತಿವರ್ಷ ‘ಪಡಲಗಿ’ ತುಂಬುತ್ತಾರೆ. ಎಲ್ಲಮ್ಮನ ದೇವಸ್ಥಾನದ ಬಾಗಿಲ ಮೇಲೆ ‘ಪದ್ಮಾವತಿ’ ದೇವಿಯ ಚಿತ್ರ ಇದೆ. ಈ ಎಲ್ಲ ಕಾರಣದಿಂದ ಎಲ್ಲಮ್ಮನ ದೇವಸ್ಥಾನ ಹಿಂದೆ ಜೈನ ಬಸದಿಯಾಗಿತ್ತು ಎಂಬ ತೀರ್ಮಾನಕ್ಕೂ ಬರಲಾಗಿದೆ. ದೇಶಪಾಂಡೆ ಮನೆತದವರ ಹೆಸರಿನೊಂದಿಗೆ ಈಗಲೂ ಪಂಪನ ತಂದೆ ಭೀಮಪ್ಪಯ್ಯ, ಅಜ್ಜ ಚಂದ್ರಪ್ಪಯ್ಯನ ಹೆಸರುಗಳು ಸೇರಿಕೊಂಡಿವೆ. ಈ ಹೆಸರುಗಳು ಸೇರಿಕೊಂಡಿರುವುದು ಮತ್ತು ದೇಶಪಾಂಡೆ ಕುಟುಂಬದವರು ಜೈನ ಧರ್ಮೀಯರು ಆಗಿರುವುದು ಪಂಪನ ವಂಶಸ್ಥರು ಇವರೇ ಎಂಬ ತೀರ್ಮಾನಕ್ಕೆ ಬರಲು ಕಾರಣವಾಯಿತು’ ಎಂದು ವಿವರಿಸುತ್ತಾರೆ ಹರ್ಲಾಪುರ.

ಹೀಗೆ ಪಂಪ ಸಿಕ್ಕಿದ
‘ಅಣ್ಣಿಗೇರಿ ದೇಶಪಾಂಡೆ ಮನೆತನದ ಜೋಯಿಸಿಂಗರ ಮಗಳು ಅಬ್ಬಣಬ್ಬೆಯೇ ಪಂಪನ ತಾಯಿ. ಅಜ್ಜಿಯ ಮನೆಯಲ್ಲಿಯೇ ಪಂಪ ಹುಟ್ಟಿದ್ದು’ ಎಂಬ ಮಾಹಿತಿ ಪಂಪನ ಸಹೋದರ ಜಿನವಲ್ಲಭನ ಶಾಸನದಲ್ಲಿದೆ. ಈ ಶಾಸನವು ಆಂಧ್ರಪ್ರದೇಶದ ಕರೀಂನಗರದ ಕುರ್ಕಿಯಾಲ್ ಎಂಬ ಗುಡ್ಡದಲ್ಲಿ ಈಗಲೂ ಇದೆ. ಇದನ್ನು 1961ರಲ್ಲಿ ಮೊದಲು ಪತ್ತೆ ಹಚ್ಚಿದವರು ಕಲಬುರ್ಗಿ ಹಾಗೂ ಹಿರೇಮಠ. ಹೀಗೆ ನಮ್ಮ ಅಣ್ಣಿಗೇರಿಯ ಪಂಪ ಸಿಕ್ಕಿದ. ಅಣ್ಣಿಗೇರಿಯೇ ಪಂಪ ಹುಟ್ಟಿದ ಊರು ಎಂಬುದು ಖಚಿತವಾಗಿ ಹೋಯಿತು.

‘ಪಂಪ ಅಣ್ಣಿಗೇರಿಯಲ್ಲಿ ಹುಟ್ಟಿದ್ದರೂ, ಈ ಭಾಗದಲ್ಲಿ ಬಾಳಿ ಬದುಕಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಹೇಳುತ್ತಾರೆ ಹರ್ಲಾಪುರ. ಪಂಪನ ಕಾಲದಲ್ಲಿ ಅಣ್ಣಿಗೇರಿ ಒಂದು ಪ್ರಾಂತ್ಯವಾಗಿತ್ತು. ಇದು 300 ಗ್ರಾಮಗಳನ್ನು ಒಳಗೊಂಡಿತ್ತು. ಈ ಗ್ರಾಮಗಳಲ್ಲಿ ಈಗಿನ ಬನವಾಸಿಯೂ ಸೇರಿತ್ತು. ಹೀಗಾಗಿಯೇ ಪಂಪ ಬನವಾಸಿ ಹಾಡಿ ಹೊಗಳಲು ಕಾರಣ. ಆತ ಬದುಕಿದ್ದು, ಆಂಧ್ರಪ್ರದೇಶದಲ್ಲಿದ್ದ ಅರಿಕೇಸರಿಯ ಆಸ್ಥಾನದಲ್ಲಿ. ಆದರೂ ಬನವಾಸಿಯನ್ನು ಹಾಡಿ ಹೊಗಳಿದ. ಎಷ್ಟೆ ಆಗಲಿ ಅಜ್ಜಿಯ ಊರು, ಯಾವ ಮೊಮ್ಮಕ್ಕಳಿಗೆ ಚೆಂದ ಕಾಣುವುದಿಲ್ಲ, ನೀವೆ ಹೇಳಿ?

ಸಿಗದ ವಾಡೆ!
ಪಂಪ ಹುಟ್ಟಿದ ಈ ವಾಡೆಯನ್ನು ಸ್ಮಾರಕವಾಗಿ ಮಾಡುವ ಬಯಕೆ ಸರ್ಕಾರಕ್ಕೆ ಇತ್ತು. ಆದರೆ ಇದನ್ನು ಕೊಡಲು ಪಂಪನ ವಂಶಸ್ಥರು ಒಪ್ಪದ ಕಾರಣ ಗ್ರಾಮದಲ್ಲಿ ಬೇರೆ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣ ಮಾಡಲಾಗಿದೆ.

‘ಐತಿಹಾಸಿಕ ಪ್ರವಾಸೋದ್ಯಮ ಕೇಂದ್ರವಾಗಿ ವಾಡೆ ರೂಪುಗೊಳ್ಳುವ ಸಾಧ್ಯತೆ ಇತ್ತು. ಸ್ಮಾರಕ ಮಾಡಲು ಬಿಟ್ಟುಕೊಡುವಂತೆ ಕಲಬುರ್ಗಿ, ಹಾ.ಮ.ನಾಯಕರು ಸೇರಿ ಅನೇಕ ಸಾಹಿತಿ, ಸಂಶೋಧಕರು ಮನೆಯವರನ್ನು ಕೇಳಿಕೊಂಡಿದ್ದರು. ಆದರೆ, ಅವರು ಒಪ್ಪಿಕೊಳ್ಳಲಿಲ್ಲ’ ಎನ್ನುತ್ತಾರೆ ಹರ್ಲಾಪುರ.

‘ವಾಡೆ, ಈಗ ಶಿಥಿಲಗೊಳ್ಳತೊಡಗಿದೆ. ಸರ್ಕಾರ ಈ ವಾಡೆಯನ್ನು ಪಡೆದುಕೊಳ್ಳಲು ಮಾಲೀಕರ ಮನವೊಲಿಸುವ ಕೆಲಸ ಮಾಡಬೇಕು. ಇದನ್ನು ಪ್ರವಾಸೋದ್ಯಮ ಸ್ಥಳವಾಗಿ ಗುರುತಿಸಬೇಕು’ ಎಂದು ಹೇಳುತ್ತಾರೆ ಅವರು.

‘ನಾವೇ ನಿರ್ವಹಣೆ ಮಾಡುತ್ತೇವೆ’
‘ಊರಿಗೆ ಬಂದಾಗಲೆಲ್ಲ ವಾಡೆಯಲ್ಲೇ ನಾವು ಇರುತ್ತೇವೆ. ನಮ್ಮದು ಹೊಲ, ಮನಿ ಇದೆ. ವಾಡೆಯನ್ನು ಜತನದಿಂದ ಸಂರಕ್ಷಿಸಿಕೊಂಡು ಬಂದಿದ್ದೇವೆ’ ಎಂದು ಪಂಪನ ವಂಶಸ್ಥರಾದ ರಾಜೇಂದ್ರ ದೇಶಪಾಂಡೆ ತಿಳಿಸಿದರು.

‘ವಾಡೆ ದುರಸ್ತಿಗೊಳಿಸಲು ₹ 15 ಲಕ್ಷ ತೆಗೆದಿರಿಸಿದ್ದೇವೆ. ಈ ಮಳೆಗಾಲದ ಬಳಿಕ ದುರಸ್ತಿ ಕೆಲಸ ಆರಂಭವಾಗಲಿದೆ. ಆ ವಾಡೆಯಲ್ಲಿ ಇಬ್ಬರು ಕೆಲಸಗಾರರನ್ನು ಇಟ್ಟಿದ್ದೇವೆ. ನಾವು ಇಲ್ಲದ ವೇಳೆ ಮನೆ ನೋಡಲು ಬರುವವರಿಗೆ ಅವರು ಮಾಹಿತಿ ನೀಡುತ್ತಾರೆ’ ಎಂದು ವಿವರಣೆ ನೀಡುತ್ತಾರೆ.

‘ರಾಜ್ಯದ ಬೇರೆ ಜಿಲ್ಲೆಗಳಿಂದ ಮಾತ್ರವಲ್ಲ, ಮಹಾರಾಷ್ಟ್ರದಿಂದಲೂ ವಾಡೆ ನೋಡಲು ಜನರು ಬರುತ್ತಾರೆ. ಎಲ್ಲರಿಗೂ ವಾಡೆ ತೋರಿಸಿ, ಪ್ರೀತಿಯಿಂದ ಕಳಿಸುತ್ತೇವೆ. ವಾಡೆಯ ಮೇಲಿನ ನಮ್ಮ ಹಕ್ಕು ಬಿಟ್ಟುಕೊಡಲು ಸಾಧ್ಯವೇ ಇಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.