ಸುಮಾರು ಇಪ್ಪತ್ತೈದು ಅಡಿ ಉದ್ದದ ದೋಣಿಯಲ್ಲಿ ಸಾಗುತ್ತಿದ್ದ ಹದಿನೈದು ಪ್ರವಾಸಿಗರ ಪೈಕಿ ಆರೇಳು ಮಂದಿ ಬಾಂಗ್ಲಾದೇಶದಲ್ಲೂ ಉಳಿದ ನಾವು ಭಾರತದಲ್ಲೂ ಇದ್ದ ಅಪೂರ್ವ ಕ್ಷಣ. ಅಷ್ಟೊತ್ತಿಗೆ ಭಾರತದ ತಟದಿಂದ ಸೀಟಿ ಸದ್ದು ಕೇಳಿತು. ತಕ್ಷಣ ಎಚ್ಚೆತ್ತ ನಮ್ಮ ಅಂಬಿಗ, ತಟಕ್ಕನೇ ದೋಣಿಯನ್ನೂ ಆ ಆರೇಳು ಜನರನ್ನೂ ಸ್ವದೇಶದತ್ತ ಕರೆಸಿಕೊಂಡ. ಆರೆಂಟು ಕ್ಷಣಗಳಲ್ಲಿ ನಡೆದ ಈ ಘಟನೆ ಪುಳಕ ಮೂಡಿಸಿದ್ದಂತೂ ನಿಜ!

ಕೋಲ್ಕತ್ತಾದಿಂದ ಎರಡು ತಾಸು ಪ್ರಯಾಣದಷ್ಟು ದೂರವಿರುವ ‘ಟಾಕಿ’ ಸಣ್ಣದೊಂದು ಊರು. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಈ ಪಟ್ಟಣವು ಜಮೀನ್ದಾರಿ ಪಳೆಯುಳಿಕೆಗಳ ಜತೆಗೆ ಪ್ರಕೃತಿ ಸೌಂದರ್ಯವನ್ನೂ ಹೊತ್ತು ನಿಂತಿದೆ.

ಬಾಂಗ್ಲಾ ಹಾಗೂ ಭಾರತ ದೇಶಗಳು ನಾಲ್ಕು ಸಾವಿರ ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಒಂದು ಕಡೆ ಆ ಗಡಿಯಗುಂಟ ಹರಿಯುತ್ತಿರುವ ಇಚ್ಛಾಮತಿ (ಸ್ಥಳೀಯರ ಪ್ರಕಾರ ‘ಇಚ್ಚಾಮೊತೀ’) ನದಿಯು ಎರಡೂ ದೇಶಗಳ ಗಡಿರೇಖೆಯಂತಿದೆ. ಅರ್ಧ ಭಾಗ ಆ ದೇಶಕ್ಕೂ ಉಳಿದರ್ಧ ಈ ದೇಶಕ್ಕೂ!

ನದಿದಂಡೆಯ ಉದ್ದಕ್ಕೂ ಸಿಗುವ ಪಾಳುಬಿದ್ದ ಬಂಗಲೆಗಳು

ಎರಡು ದೇಶಗಳ ನಡುವಿನ ಪ್ರದೇಶ ಸದಾ ಅಚ್ಚರಿಯ ಕೇಂದ್ರ. ಇಲ್ಲಿಂದ ‘ಆ’ ಕಡೆ ಹೋಗಲು ಕಾನೂನು ಕಟ್ಟಳೆ. ‘ಟಾಕಿ’ ಪ್ರಸಿದ್ಧಿ ಪಡೆದಿರುವುದೇ ಗಡಿಗೆ ಅಂಟಿದ ನಯನಮನೋಹರ ಪ್ರವಾಸಿ ತಾಣ ಎಂದು. ಸುಂದರಬನ ಶುರುವಾಗುವುದು ಊರಿನಿಂದ ಎಂಬ ಹೆಗ್ಗಳಿಕೆಯೂ ಇದೆ. ನದಿಯ ಹರಿವಿಗಿಂತ ಐದು ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಊರನ್ನು ತಲುಪುವ ದಾರಿ ಬಲು ಸುಂದರ. ಗಿಜಿಗುಡುವ ಕೋಲ್ಕತ್ತಾವನ್ನು ದಾಟಿದ ಮೂವತ್ತು ಕಿ.ಮೀ ನಂತರ ಭತ್ತದ ಗದ್ದೆಗಳು ದಿಗಂತದ ಅಂಚಿನವರೆಗೂ ಗೋಚರಿಸುತ್ತವೆ. ಗುಡಿಸಲಿನ ಪಕ್ಕದಲ್ಲಿರುವ ಹೊಂಡದ ದಂಡೆಯಲ್ಲಿ ಹೆಂಗಳೆಯರು- ಮಕ್ಕಳು ಗಾಳ ಹಾಕಿ ಕಾಯುತ್ತ ಕೂತಿರುವ ನೋಟಗಳು ಕ್ಯಾಮೆರಾಕ್ಕೆ ಸುಲಭವಾಗಿ ದಕ್ಕುತ್ತವೆ.

ಟಾಕಿ ಪಟ್ಟಣದ ಉದ್ದ ಬರೀ ಮೂರು ಕಿಲೋಮೀಟರ್ ಮಾತ್ರ. ಇಚ್ಛಾಮತಿ ದಂಡೆಯುದ್ದಕ್ಕೂ ಅಚ್ಚುಕಟ್ಟಾದ ರಸ್ತೆಯಿದ್ದು, ಅದರಾಚೆಗೆ ಅಂಗಡಿ- ಹೋಟೆಲ್, ವಸತಿಗೃಹಗಳಿವೆ.

ಬಂಗಲೆಗಳು
ಟಾಕಿ ಅಕ್ಕಪಕ್ಕ ನದಿತಟದಲ್ಲಿನ ಬಂಗಲೆ(ಬಾರಿ)ಗಳ ಲೋಕ ಕುತೂಹಲಕರ. ಒಂದರಿಂದ ಎರಡು ಎಕರೆ ವಿಸ್ತಾರದಲ್ಲಿ ಮೈದಳೆದಿರುವ ಬೃಹತ್ ಮಹಲುಗಳನ್ನು ಜಮೀನ್ದಾರರು ತಮ್ಮ ವಾಸ್ತವ್ಯಕ್ಕಾಗಿ ನಿರ್ಮಿಸಿಕೊಂಡಿದ್ದರು. ಅವುಗಳ ಭವ್ಯತೆ, ಆಕಾರಗಳು ದಿಗಿಲು ಮೂಡಿಸುತ್ತವೆ.

ಇಚ್ಛಾಮತಿ ನದಿಯಲ್ಲಿ ಕಾಣುವ ಸೂರ್ಯೋದಯದ ಸೊಬಗು

ಪ್ರವೇಶ ದ್ವಾರವೇ ಹದಿನೈದು ಅಡಿ ಎತ್ತರ. ಒಳಪ್ರವೇಶಿಸುತ್ತಲೇ ಎರಡೂ ಬದಿ ನೀರಿನ ಕೊಳ; ಮಧ್ಯೆ ಕಾರಂಜಿಗಳ ಅಲಂಕಾರ. ಗಾರೆ ಹಾಗೂ ಇಟ್ಟಿಗೆಯಿಂದ ಕಟ್ಟಿದ ಗೋಡೆಗಳೂ ಕಲಾತ್ಮಕ. ನಾಲ್ಕೈದು ಕಡೆಗಳಿಂದ ವರಾಂಡಾಕ್ಕೆ ಬರಲು ಸುಂದರ ಬಾಗಿಲುಗಳು. ಅತಿಥಿಗಳ ಜತೆ ಮಾತುಕತೆಗೆ ಬಾಲ್ಕನಿ. ಅಡುಗೆ ಮನೆಗಳ ವಿಸ್ತಾರ ನೋಡಿದರೆ, ಅಲ್ಲಿ ದಿನಕ್ಕೆ ನೂರು ಜನರಿಗೆ ಊಟ ತಯಾರಾಗುತ್ತಿತ್ತೇನೋ? ನದಿಯಿಂದ ನೀರು ತರಲು ಸುಸಜ್ಜಿತ ಮೆಟ್ಟಿಲುಗಳು ನೇರವಾಗಿ ಅಡುಗೆಮನೆಗೆ ಸಂಪರ್ಕ ಕಲ್ಪಿಸುವ ದಾರಿಯೂ ಅಚ್ಚರಿ ಮೂಡಿಸುತ್ತದೆ. ‘ಮೊದಲೆಲ್ಲ ಈ ಕಾಂಪೌಂಡ್ ಒಳಗೆ ಹೂತೋಟ, ಕಾರಂಜಿ ಇದ್ದವು ಎಂದು ನಮ್ಮ ತಂದೆ ಹೇಳುತ್ತಿದ್ದರು. ನಾನಂತೂ ನೋಡಿಲ್ಲ. ಬಹುಶಃ ಐವತ್ತು ವರ್ಷಗಳಿಂದ ಈಚೆಗೆ ಇಲ್ಲಿನ ಎಷ್ಟೋ ಬಂಗಲೆಗಳು ಹಾಳಾಗುತ್ತ ಬಂದಿವೆ’ ಎಂದು ‘ಬವುಡೆ ಬಾರಿ’ ಪಕ್ಕದಲ್ಲಿ ಚಹಾದ ಅಂಗಡಿ ಇಟ್ಟುಕೊಂಡಿರುವ ಮಾಲೀಕ ಯೂನೂಸ್ ಹೇಳಿದ.

ಇಚ್ಛಾಮತಿ ತಟದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಂಗಲೆಗಳ ಗತಿ ಹೀಗೆಯೇ! ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕಂಡುಬಂದ ಬದಲಾವಣೆಗಳು ಟಾಕಿ ಮೇಲೂ ಪ್ರಭಾವ ಬೀರಿದವು. ಬಂಗಲೆಗಳಲ್ಲಿ ಇದ್ದ ಜಮೀನ್ದಾರರ ಕುಟುಂಬದವರ ಪೈಕಿ ಸಾಕಷ್ಟು ಮಂದಿ ವಿದ್ಯಾಭ್ಯಾಸಕ್ಕೆಂದು ಬೇರೆಡೆ ಹೋದವರು, ಅಲ್ಲೇ ಉಳಿದುಕೊಂಡರು. ಇದರಿಂದ ಬಂಗಲೆಗಳ ಉಸ್ತುವಾರಿ ನಡೆಯದೇ ಪಾಳುಬಿದ್ದವು. ‘ನಮ್ಮಜ್ಜ ಈ ಬಾರಿಯಲ್ಲಿ ನೀರು ತುಂಬುವ ಕೆಲಸ ಮಾಡುತ್ತಿದ್ದ. ಆತನ ನಂತರ ನಮ್ಮ ತಂದೆ ಒಂದಷ್ಟು ವರ್ಷ ಕೆಲಸ ಮಾಡಿದರು. ಆದರೆ ಅವರ ಕುಟುಂಬದ ಸದಸ್ಯರು ವರ್ಷಾನುಗಟ್ಟಲೇ ಕಾಲ ಬರಲೇ ಇಲ್ಲ. ಈಗ ನೋಡಿ ಇದರ ಮುಕ್ಕಾಲು ಭಾಗ ಬಿದ್ದೇ ಹೋಗಿದೆ. ಒಂದು ಭಾಗದಲ್ಲಿ ನಾವು ವಾಸಿಸುತ್ತಿದ್ದೇವೆ’ ಎಂದು ‘ಬಾರಿ’ಯೊಂದರ ಕಾವಲುಗಾರ ಅಭಯ್ ಪಾಳುಗೋಡೆಯನ್ನು ತೋರಿಸುತ್ತ ನಿಟ್ಟುಸಿರು ಬಿಟ್ಟ.

ಟಾಕಿಯ ಇಚ್ಛಾಮತಿ ನದಿಯಲ್ಲಿ ದೋಣಿವಿಹಾರ

ಜಮೀನ್ದಾರ ಕುಟುಂಬದ ಕೆಲವರು ಅಂಥ ಮಹಲುಗಳನ್ನು ಹೋಟೆಲ್ ಆಗಿ ಪರಿವರ್ತಿಸಿಕೊಂಡಿದ್ದಾರೆ. ಸುಸಜ್ಜಿತ ಕೊಠಡಿ
ಯೊಂದಿಗೆ ಆಧುನಿಕ ಸೌಲಭ್ಯ ಕಲ್ಪಿಸಿ, ಪ್ರವಾಸಿಗರನ್ನು ಸೆಳೆಯುತ್ತಿದ್ದಾರೆ. ಅಂಥ ಮಹಲುಗಳಲ್ಲಿ ‘ಬಾಗನ್ಬಾರಿ’ ಜನಪ್ರಿಯ. ಹಾಗೆಂದು ದರ ದುಬಾರಿಯೇನಿಲ್ಲ. ಎರಡು ರೂಪಾಯಿಗೆ ಚಹಾ, ಮೂವತ್ತು ರೂಪಾಯಿಗೆ ಹೊಟ್ಟೆತುಂಬ ಊಟ ಕೊಡುವ ಟಾಕಿ ಹೋಟೆಲುಗಳು ಪ್ರವಾಸಿಗರಿಗೆ ಅಚ್ಚುಮೆಚ್ಚು.

ದುರ್ಗಾಪೂಜೆ
ಎರಡು ದೇಶಗಳ ಕೊಂಡಿಯಂತೆ ಭಾಸವಾಗುವ ಟಾಕಿ ಪಟ್ಟಣ, ದಸರಾ ಸಮಯದಲ್ಲಿ ಗಿಜಿಗಿಡುತ್ತದೆ. ಹಬ್ಬದ ಕೊನೆಯ ದಿನದಂದು ದುರ್ಗಾ ವಿಗ್ರಹವನ್ನು ಪೂಜಿಸಿ, ಇಚ್ಛಾಮತಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಇತ್ತ ಭಾರತ- ಅತ್ತ ಬಾಂಗ್ಲಾದ ಜನರು ನದಿಯ ಮಧ್ಯೆ ಬಂದು ವಿಗ್ರಹ ವಿಸರ್ಜಿಸುವ ದಿನ ಸಂಭ್ರಮ ಸಡಗರದಿಂದ ತುಳುಕುತ್ತದೆ. ತಮ್ಮ ತಮ್ಮ ದೇಶಗಳ ಧ್ವಜವನ್ನು ದೋಣಿಗೆ ಕಟ್ಟಿ ದುರ್ಗಾ ವಿಗ್ರಹದೊಂದಿಗೆ ಬರುತ್ತಾರೆ. ದುರ್ಗೆಗೆ ಜೈಕಾರ ಹಾಕುತ್ತ ವಿಗ್ರಹ ವಿಸರ್ಜಿಸಿ, ಸಿಹಿ ಹಂಚಿಕೊಂಡು ಉಭಯ ಕುಶಲೋಪರಿ ಮಾಡಿಕೊಳ್ಳುತ್ತಾರೆ. ಈ ಸಂಭ್ರಮದ ಅವಧಿಯುದ್ದಕ್ಕೂ ಎರಡೂ ದೇಶಗಳ ಗಡಿಭದ್ರತಾ ಪಡೆಯ ಸಿಬ್ಬಂದಿ ನಿಗಾ ವಹಿಸಿರುತ್ತಾರೆ.

ನಿಸರ್ಗಪ್ರಿಯರಿಗೆ ಇಲ್ಲಿ ಸಿಗುವ ಇನ್ನೊಂದು ಸೊಬಗಿನ ತಾಣ- ಕುಮಿರ್ಮರಿರ್ ದ್ವೀಪ. 120 ಎಕರೆ ವಿಸ್ತೀರ್ಣದ ಗೋಲ್ಪತ್ಥರ್ ಕಾಡಿನೊಳಗೆ ಇರುವ ಈ ದ್ವೀಪಕ್ಕೆ ದೋಣಿಯಲ್ಲಿ ಹೋಗಬೇಕು. ಆದರೆ ಇದು ಭಾರತ- ಬಾಂಗ್ಲಾ ಗಡಿಯಾಗಿರುವ ಕಾರಣ, ಪ್ರವಾಸಿಗರು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ಬಿಎಸ್ಎಫ್ ಸಿಬ್ಬಂದಿಗೆ ಕೊಟ್ಟು ಮುಂದೆ ಸಾಗಬೇಕು. ಕಾಡಿನೊಳಗೆ ಹೋಗಲು ವಾಕಿಂಗ್ ಪಾತ್ ಹಾಗೂ ಅಲ್ಲಲ್ಲಿ ವೀಕ್ಷಣಾ ಗೋಪುರಗಳು ಇವೆ. ಪಕ್ಷಿ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆಂದೇ ನೂರಾರು ಜನರು ಇಲ್ಲಿಗೆ ಬರುತ್ತಾರೆ.

ಭೋಜನಪ್ರಿಯರಿಗೆ ‘ಟಾಕಿ’ ಹೇಳಿಮಾಡಿಸಿದಂಥದು. ಸಿಹಿತಿಂಡಿ, ಮೀನುಗಳ ತರಹೇವಾರಿ ತಿನಿಸುಗಳು ಜಿಹ್ವಾಚಾಪಲ್ಯವನ್ನು ತಣಿಸುತ್ತವೆ. ಹೊಂಡದಿಂದ ಮೀನು ಹಿಡಿದು, ಬಯಸಿದ ತಿನಿಸು ಅಲ್ಲೇ ಮಾಡಿಕೊಡುವ ಪರಿ ನೋಡುವಂತಿರುತ್ತದೆ. ಉಳಿದಂತೆ ಚಳಿಗಾಲದಲ್ಲಿ ಸುತ್ತಮುತ್ತಲಿನ ಗಾಣದಿಂದ ಉತ್ಪಾದಿಸುವ ‘ಪತ್ಲಿ ಗೂಡ್’ (ಬೆಲ್ಲ) ಹಾಗೂ ಅದರಿಂದ ತಯಾರಿಸುವ ‘ಛನಾರ್ ಮಲ್ಪೋವಾ’ ಟಾಕಿಯ ವಿಶೇಷ ತಿನಿಸು. ಒಂದಷ್ಟು ನೇಕಾರ ಕುಟುಂಬಗಳು ಶತಮಾನಗಳಿಂದಲೂ ತಮ್ಮ ವೃತ್ತಿ ಮುಂದುವರಿಸಿಕೊಂಡು ಬಂದಿದ್ದು, ಅವರು ನೇಯುವ ತೆಳು ಪಂಚೆ ಪ್ರಸಿದ್ಧ.

ಯುನೆಸ್ಕೋದಿಂದ ‘ವಿಶ್ವಪರಂಪರೆ ತಾಣ’ ಎಂಬ ಮಾನ್ಯತೆ ಪಡೆದ ಸುಂದರಬನ ಕಾಂಡ್ಲಾ ಕಾಡುಗಳಿಂದ ಆವೃತವಾಗಿದೆ. ಸುಂದರಬನಕ್ಕೆ ಪ್ರವೇಶದ ಬಾಗಿಲು ಎಂಬ ಹೆಗ್ಗಳಿಕೆ ಈ ‘ಟಾಕಿ’ ಪಟ್ಟಣಕ್ಕಿದೆ. ಒಂದೆರಡು ದಿನಗಳ ಪ್ರವಾಸಕ್ಕೆ ಸೂಕ್ತವೆನಿಸಿದ ‘ಟಾಕಿ’ಯಲ್ಲಿ ಊಟೋಪಚಾರಗಳೆಲ್ಲ ಕೈಗೆಟಕುವ ದರದಲ್ಲಿ ಲಭ್ಯ.

ಇಚ್ಛಾಮತಿಯ ‘ಬಾಂಗ್ಲಾ ತಟದಲ್ಲಿ ಬೆಳೆದಿರುವ ಕಾಂಡ್ಲಾ ಕಾಡಿನಲ್ಲಿ ಜೇನುಗೂಡು ಹೇರಳವಾಗಿವೆ. ಹತ್ತಿರದಿಂದ ಆ ಜೇನುಗೂಡು ನೋಡುವ ಆಸೆಯೊಂದಿಗೆ ದೋಣಿ ಹತ್ತಿದಾಗ ಅಂಬಿಗ ಮುನೀಶ್ ಕೇಳಿದ ಶುಲ್ಕ ಒಬ್ಬರಿಗೆ ಇಪ್ಪತ್ತು ರೂಪಾಯಿ. ಒಂದೂವರೆ ತಾಸು ಅವಧಿಯ ವಿಹಾರ ಶುರುವಾಯಿತು. ಮುಂದೆ ಸಾಗಿದಂತೆ, ಶತಮಾನಗಳ ಕಾಲ ಜಮೀನ್ದಾರಿ ಆಳ್ವಿಕೆಗೆ ಸಾಕ್ಷಿಯಾಗಿದ್ದ ಬೃಹತ್ ಬಂಗಲೆಗಳು ಬಿಳಲುಗಳಿಂದ ಆವೃತವಾಗಿ ಶಿಥಿಲಗೊಂಡ ನೋಟ ಒಂದೆಡೆ ಕಂಡರೆ, ಒಪ್ಪೊತ್ತಿನ ಊಟಕ್ಕಾಗಿ ಮೂರ್ನಾಲ್ಕು ಬುಟ್ಟಿಗಳಲ್ಲಿ ಮೀನು ತುಂಬಿಕೊಂಡು ಬರುತ್ತಿದ್ದ ಸಣ್ಣ ದೋಣಿಗಳು ಎದುರಾದವು.

ತಲುಪುವುದು ಹೇಗೆ?
ಕೋಲ್ಕತ್ತಾದಿಂದ 80 ಕಿ.ಮೀ. ದೂರ. ಸೆಲ್ಡಾದಿಂದ ಹೋಶ್ನಾಬಾದ್ ರೈಲಿನಲ್ಲಿ ಹೊರಟು ‘ಟಾಕಿ ರೋಡ್’ ನಿಲ್ದಾಣದಲ್ಲಿ ಇಳಿದು, ಆಟೊ ಮೂಲಕ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.