ಹೊರಡಲು ಒಂದು ತಿಂಗಳಿದ್ದಂತೆ ವಾಟ್ಸಪ್‌ನಲ್ಲಿ ಗ್ರೂಪ್ ಸೃಷ್ಟಿಸಿದ್ದಾಯಿತು. ‘ಯಾರ್ಯಾರು ಬರ್ತೀರಾ’ ಎಂದು ಕೇಳಿದ್ದಾಯಿತು. ಬರುವವರಿಗೆಲ್ಲಾ ಏನೇನು ತರಬೇಕು ಎಂದು ತಿಳಿಸಿದ್ದಾಯಿತು. ಹೊರಡುವ ದಿನವೂ ಹತ್ತಿರವಾಯಿತು. ಆದರೆ ಪರ್ವತದ ‘ಬೇಸ್’ನಲ್ಲಿ ಮಾತ್ರ ತಳಮಳ. ಕಾರಣ ಅಕಾಲಿಕ ಗುಡುಗು ಸಹಿತ ಭಾರಿ ಮಳೆ.

ಮಳೆಗಾಲದ ಕಡೆಯ ದಿನಗಳಲ್ಲಿ ಹೊರಟವರಿಗೂ ವರುಣರಾಯ ತನ್ನ ಪವರ್ ತೋರಿಸಿದ್ದ. ಸಹಜವಾಗಿಯೇ ಎಲ್ಲ ಚಾರಣಿಗರ ಶತ್ರು ಮಳೆ, ಗುಡುಗು ಹಾಗೂ ಸಿಡಿಲು. ಮಳೆ ಅನೇಕ ರೀತಿಯಲ್ಲಿ ಚಾರಣಿಗರಿಗೆ ತೊಂದರೆಕೊಡುತ್ತದೆ. ನೆನೆವ ಸರಕು ಸರಂಜಾಮು, ಜಾರುವ ಕಠಿಣ ಹಾದಿ, ಯಾವಾಗ ಬೇಕಾದರೂ ಮುರಿದುಬೀಳುವ ಗಿಡಮರಗಳು, ಇತ್ಯಾದಿ.

ಇಷ್ಟೆಲ್ಲಾ ಅಡೆತಡೆ ದಾಟಿದರೂ ಚಾರಣ ಯಶಸ್ವಿ ಎಂದೇನೂ ಭಾವಿಸಬೇಕಿಲ್ಲ. ಇದ್ದಕ್ಕಿದ್ದಂತೆ ಕವಿಯುವ ಮಂಜು ಚಾರಣಿಗರಿಗೆ ತಣ್ಣೀರೆರಚಬಹುದು. ಎದುರಿದ್ದವರೂ ಕಾಣದಂತಾಗಬಹುದು. ಕ್ಯಾಮೆರಾಗೆ ಕೆಲಸ ಇಲ್ಲವಾಗಬಹುದು. ಆ ಆತಂಕದಲ್ಲಿ ಇಡೀ ಚಾರಣವನ್ನು ಕ್ಯಾನ್ಸಲ್ ಮಾಡುವ ಮೂಡಿನಲ್ಲಿದ್ದವರಿಗೆ ಮರುದಿನ ನೀಲಿ ಆಗಸ, ಸೂರ್ಯನ ಮೊಗ ಕಾಣಿಸಿ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡವೂ ಇಲ್ಲವಾಯಿತು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದ ಬಹುತೇಕರಿಗೆ ಅಲ್ಲಿನ ದೇಗುಲದ ರಾಜಗೋಪುರ ಎದ್ದುಕಂಡರೆ ನಮ್ಮಂಥ ‘ಎತ್ತಲೂ ಮುಟ್ಟದವರಿಗೆ’ ದೇವಳದ ಹಿನ್ನೆಲೆಯೇ ಆಗಿರುವ ನಿಸರ್ಗ ನಿರ್ಮಿತ ಬೃಹತ್ ಹಸಿರುಗೋಪುರ ಕಣ್ಣು ಕುಕ್ಕುತ್ತಿರುತ್ತದೆ. ಇದು ಯಾವ ಗುಡಿಗೆ ಇಟ್ಟ ಕಳಸ ಎಂಬ ಪ್ರಶ್ನಾರ್ಥಕ ಚಿಹ್ನೆ ಕಣ್ಣಮುಂದೆ. ಅದರ ಫಲವಾಗಿ ಕಾಲು ಕಡಿಯಲಾರಂಭಿಸುತ್ತದೆ!

ಪುಷ್ಪಗಿರಿ, ಕುಮಾರ ಪರ್ವತ ಎಂದರೆ ನೆಟ್ಟಿಗರೂ ಆದ ಟ್ರೆಕ್ಕಿಗರಿಗೆ ಎಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ. ಆದರೆ ‘ಕೆಪಿ’ ಎಂದರೆ ಮಾತ್ರ ದೂರದೇಶದ ಚಾರಣಿಗರೂ ಕಿವಿ ನಿಮಿರಿಸುತ್ತಾರೆ. ಟ್ರೆಕ್ಕಿಗಳ ಪರಿಭಾಷೆಯಲ್ಲಿ ಹೇಳುವುದಾದರೆ ಈ ಪರ್ವತಕ್ಕೆ ಎರಡು ಪ್ರಮುಖ ‘ಬೇಸ್’ಗಳಿವೆ. ಅದರಲ್ಲಿ ಒಂದು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಮತ್ತೊಂದು ಕೊಡಗು ಜಿಲ್ಲೆಯ ಬೀದಳ್ಳಿ.

ಕುಕ್ಕೆಯಿಂದ ಪರ್ವತದ ನೆತ್ತಿಗೆ ಒಟ್ಟು 12 ಕಿ.ಮೀ. ಇಲ್ಲಿಂದ ಹೊರಟ ನಮ್ಮ ತಂಡಕ್ಕೆ ‘ಕೆಪಿ’ಯದ್ದೇ ಧ್ಯಾನ ಎಂದು ತಿಳಿದಿದ್ದರೆ ನಿಮ್ಮ ಊಹೆ ತಪ್ಪು. ಸುಬ್ರಹ್ಮಣ್ಯದಿಂದ ಹೊರಟ ಸ್ವಲ್ಪಹೊತ್ತಿನಲ್ಲೇ ಎಲ್ಲರೂ ಸುಸ್ತೋ ಸುಸ್ತು. ಜೊತೆಗೆ ಘಟ್ಟದ ಕೆಳಗಿನ ತಡೆಯಲಾರದ ಸೆಕೆ. ಎಷ್ಟು ಹೊತ್ತಿಗೆ ‘ಭಟ್ಟರ ಮನೆ’ ಸಿಗುತ್ತದೋ ಎನಿಸಿಬಿಡುತ್ತದೆ.

‘ಕೆಪಿ’ ಎಷ್ಟು ಜನಪ್ರಿಯವೋ ಅಷ್ಟೇ ಜನಪ್ರಿಯ ಭಟ್ಟರ ಮನೆ. ಮಧ್ಯೆ ಸಿಗುವ ಭೀಮನ ಬಂಡೆ ಮತ್ತು ಅದರ ಸಮೀಪವೇ ಸಣ್ಣಗೆ ಹರಿವ ತೊರೆ ಬಿಟ್ಟರೆ ಮರಗಿಡಗಳೇ ಚಾರಣಿಗರ ಸಂಗಾತಿಗಳು. ಮೇಲೆ ಹೋದಂತೆ ಹವೆ ತಂಪು ತಂಪು. ಸಂಜೆ ನಾಲ್ಕು ಗಂಟೆಯ ನಂತರ ಯಾವ ಚಾರಣಿಗರೂ ಕುಮಾರ ಪರ್ವತದ ಕಡೆ ಪಯಣಿಸುವುದು ಸೂಕ್ತವಲ್ಲ. ಏಕೆಂದರೆ ಭಟ್ಟರ ಮನೆ ತಲುಪಲು ಕನಿಷ್ಠ ಮೂರುಗಂಟೆ ಬೇಕು. ಯೋಜನೆ ಇಲ್ಲದೆ ಹೊರಟರೆ ಕತ್ತಲು ಮತ್ತು ಕಾನು – ಎರಡೂ ತೊಂದರೆ ಕೊಡಬಹುದು.

ನಾಗರಿಕತೆಯ ತುಣುಕು ಸಿಡಿದು ಆ ಮಲೆಯ ಮೇಲೆ ಬಿದ್ದಂತೆ ಭಟ್ಟರ ಮನೆಯಿದೆ. ಅವರಿರುವ ತಾಣವೇ ಗಿರಿಗದ್ದೆ. ಮುಗಿಲಿನ ಮೊಲೆ ಚೀಪುತ್ತಿರುವಂತೆ ಕಾಣುವ ‘ಕೆಪಿ’ ಒಂದೆಡೆಯಾದರೆ, ಇನ್ನೊಂದೆಡೆ ದೂರದಲ್ಲಿ ಬೆಳ್ಳಗೆ ಬಿಳುಚಿದ ಕಟ್ಟಡಗಳ ಸುಬ್ರಹ್ಮಣ್ಯ. ಇದು ಗಿರಿಗದ್ದೆಯಿಂದ ಎದ್ದು ಕಾಣುವ ದೃಶ್ಯ.

ಪುಟ್ಟಮನೆ, ಪುಟ್ಟ ತೋಟ, ಸೋಲಾರ್ ಕರೆಂಟು, ಒಂದಷ್ಟು ದನಕರುಗಳು, ಇದರೊಂದಿಗೆ, ಬಂದವರನ್ನು ಆದರಿಸುವ ದೊಡ್ಡ ಮನಸ್ಸು – ಇವಿಷ್ಟು ಭಟ್ಟರ ಮನೆಯ ಆಸ್ತಿ. ರಾತ್ರಿ ಅಲ್ಲಿ ತಂಗಲು ವ್ಯವಸ್ಥೆ ಇದೆ. ಸ್ವಂತ ಟೆಂಟು ತಂದವರು ಅಲ್ಲಿ ಊಟ ಮಾಡಿ ಅರಣ್ಯ ಇಲಾಖೆ ಸರಹದ್ದಿನ ಯಾವ ಸ್ಥಳದಲ್ಲಾದರೂ ಮಲಗಬಹುದು.

ಟೆಂಟ್ ಇಲ್ಲದವರು ಭಟ್ಟರಮನೆಯಲ್ಲಿ ಆಶ್ರಯ ಪಡೆಯಬಹುದು. ಅಲ್ಲದೆ ಸಮೀಪದಲ್ಲೇ ಇರುವ ಅರಣ್ಯ ಇಲಾಖೆ ಕಟ್ಟಡದಲ್ಲೂ ಉಳಿಯಲು ಅವಕಾಶ ಉಂಟು.ಹಕ್ಕಿಗಳ ಚಿಲಿಪಿಲಿ ಕೇಳುವುದಕ್ಕೂ ಮುನ್ನ ಎದ್ದು ಹೊರಟರೆ ಸೂರ್ಯೋದಯದ ಹೊತ್ತಿಗೆ ‘ಕೆಪಿ’ಯ ನೆತ್ತಿಯೇರಬಹುದು.

ಭಟ್ಟರಮನೆಯಿಂದ ಕುಮಾರಪರ್ವತದ ತುದಿ ಮುಟ್ಟಲು ಕನಿಷ್ಠ ಮೂರು ಗಂಟೆ ಹಿಡಿಯಬಹುದು. ಆದರೆ ಟ್ರೆಕಿಂಗ್‌ನಲ್ಲಿ ನಾವಿನ್ನೂ ‘ಕಿಂಗ್’ಗಳಲ್ಲದೇ ಇದ್ದುದರಿಂದ ನಮಗೆ ಬೆಳಗಿನ ಜಾವ ಮೂರು–ನಾಲ್ಕು ಗಂಟೆಗೇ ಎದ್ದು ಗುರಿ ತಲುಪುವುದು ಕಷ್ಟದ ಸಂಗತಿಯಾಗಿತ್ತು. ಅರಣ್ಯ ಇಲಾಖೆಯವರು ಅಷ್ಟು ಹೊತ್ತಿಗೆ ನೆತ್ತಿ ತಲುಪಲು ಅವಕಾಶ ಕೊಡುವರೇ ಎಂಬ ಅನುಮಾನದಲ್ಲೇ ನಿದ್ರಿಸಿದವರು ಎಚ್ಚರಾದಾಗ ಗಂಟೆ ಆರು ದಾಟಿತ್ತು.

ಯಥಾಪ್ರಕಾರ ಸೂರ್ಯ ಹುಟ್ಟಿದ ನಂತರ ಏಳುವ ‘ಸೂರ್ಯವಂಶಸ್ಥರು’ ಎಂದು ಒಬ್ಬರನ್ನೊಬ್ಬರು ಬೈದುಕೊಂಡು ಹೊರಡಲು ಅನುವಾದೆವು. ಆದರೇನಂತೆ, ಪ್ರಕೃತಿಯ ರಸಗವಳ ನಮಗಾಗಿ ಕಾಯುತ್ತಿತ್ತು. ದಕ್ಷಿಣಕ್ಕೆ ಕೇರಳದ ಮಲೆರಾಶಿ. ಉತ್ತರಕ್ಕೆ ಬಿಸಿಲೆ ಅರಣ್ಯ, ಪೂರ್ವಕ್ಕೆ ಕೊಡಗಿನ ಬೆಟ್ಟಸಾಲು, ಪಶ್ಚಿಮಕ್ಕೆ ಘಟ್ಟದ ತಳ. ಬೆಚ್ಚನೆ ಬಿಸಿಲಿನ ಜತೆಗೆ ತಣ್ಣನೆ ಗಾಳಿ, ಒಂದು ಬದಿಗೆ ಗುಡ್ಡಸಾಲು ಮತ್ತೊಂದು ಬದಿಗೆ ಕಣಿವೆಯ ಕವಲು. ಹಸಿರು ನೀಲಿಯನ್ನೆಲ್ಲಾ ಕಣ್ಣಲ್ಲಿ ಹೊತ್ತು, ಮಾತು ಮರೆಯುವ ‘ಹೊತ್ತು’ ಅದು.

‘ಇದು ಕರ್ನಾಟಕದ ಆರನೆಯ ದೊಡ್ಡ ಪರ್ವತ ಗೊತ್ತಾ?’ ಎಂದು ತಂಡದ ಎಳೆಯರೊಬ್ಬರು ಇಂಟರ್ನೆಟ್ ಮಾಹಿತಿಯನ್ನೇ ಕಕ್ಕಿದರು. ಪಕ್ಕದಲ್ಲಿದ್ದವರು ಬಿಡಬೇಕೆ? ‘ಓಹೋ ಹಾಗಾದರೆ ಇದರ ಅಪ್ಪನಂಥವು, ಅಣ್ಣನಂಥವು, ಅಂಕಲ್‌ನಂಥವು ಇನ್ನೂ ಇವೆ ಅನ್ನು!’ ಎಂದು ನಕ್ಕರು. ಇನ್ಯಾರೋ ‘ಕೆ2 ಅಷ್ಟು ಗ್ರೇಟ್ ಆಗಲು ಕೆಪಿಗೆ ಎಂದೆಂದಿಗೂ ಸಾಧ್ಯವಿಲ್ಲ’ ಎಂದು ಬೀಗಿದರು. ‘ಕೆ2 ಅಥವಾ ಕಿಲಿಮಂಜಾರೋಗಿಂತಲೂ ನನಗೆ ಕೆಪಿಯೇ ದೊಡ್ಡದು’ ಎಂದರು ಮತ್ತೊಬ್ಬರು.

ದಾರಿ ಸವೆಯಿತು. ಭಟ್ಟರಮನೆ, ಅರಣ್ಯ ಇಲಾಖೆಯ ಪೋಸ್ಟ್, ವ್ಯೂ ಪಾಯಿಂಟ್, ಎಲ್ಲ ಸಣ್ಣ ಕಾಳಿನ ಗಾತ್ರ ಪಡೆದವು. ಕಲ್ಲು ಮಂಟಪದ ನೀರಿನ ಸೆಲೆಯೂ ಕಾಣದಾಯಿತು. ಹುಲ್ಲುಗಾವಲು ಮತ್ತು ದಟ್ಟ ಮರಗಳು ಹದವಾಗಿ ಬೆರೆತ ಶೋಲಾ ಕಾಡು ಅದು. ಬೆಟ್ಟಕ್ಕೆ ಬೈತಲೆ ತೆಗೆದಂತೆ ಕಾಲುಹಾದಿ, ಮಧ್ಯೆ ಸಾಲುಗಟ್ಟಿದ ಹೇನಿನಂತೆ ಮನುಷ್ಯರು. ಅದೋ ಬಂತು ಶೇಷಪರ್ವತ ಎಂದುಕೊಳ್ಳುವಾಗಲೇ ಮತ್ತೆ ನಿರಾಸೆ.

ಶೇಷಪರ್ವತವೇ ಇಷ್ಟು ದೂರವಾದರೆ ‘ಕೆಪಿ’ಯ ನೆತ್ತಿಗೇರುವುದು ಯಾವಾಗ ಎಂಬ ಹತಾಶೆ. ಮತ್ತೆ ಕಾಲ್ನಡಿಗೆ. ಕೊನೆಗೂ ಗುಡ್ಡದ ನೆತ್ತಿಯೇರಿ ಅದರ ಚುಂಗು ಹಿಡಿವ ಹುಮ್ಮಸ್ಸು. ನೀವು ಚಾರಣಕ್ಕೆ ಹೊಸಬರಾಗಿದ್ದರೆ ಕುಮಾರ ಪರ್ವತದಿಂದ ನಿಮ್ಮ ಟ್ರೆಕ್ಕಿಂಗ್ ಅಧ್ಯಯನವನ್ನು ಆರಂಭಿಸುವುದು ಒಳಿತು. ನೈಜ ಪಂದ್ಯಕ್ಕೂ ಮೊದಲು ಅಭ್ಯಾಸ ಪಂದ್ಯ ಆಡುತ್ತಾರಲ್ಲ, ಹಾಗೆ. ಅತ್ತ ಕಠಿಣವೂ ಅಲ್ಲದ ಇತ್ತ ಸುಲಭವೂ ಅಲ್ಲದ ಉತ್ತಮ ತರಬೇತುದಾರನಂತೆ ‘ಕೆಪಿ’ ಕಂಗೊಳಿಸುತ್ತದೆ.

ಸುರಕ್ಷತೆಯ ದೃಷ್ಟಿಯಿಂದಲೂ ಇದು ಒಳ್ಳೆಯ ಆಯ್ಕೆ. ಮಳೆಗಾಲದ ಸ್ವಲ್ಪ ಅವಧಿ ಹೊರತುಪಡಿಸಿದರೆ ವರ್ಷದುದ್ದಕ್ಕೂ ಸಂಚಾರಕ್ಕೆ ಮುಕ್ತ. ಪಿಕ್ನಿಕ್‌ಗೆ ಕೂಡ ಹೇಳಿಮಾಡಿಸಿದ ತಾಣ.

ಶೇಷಪರ್ವತದಿಂದ ಕೊಂಚ ಮುಂದೆ ಹೋದರೆ ಎದುರಾಗುತ್ತದೆ ದಟ್ಟ ಅರಣ್ಯ. ಸಾಮಾನ್ಯ ಹೃದಯಗಳನ್ನು ತಕ್ಕಮಟ್ಟಿಗೆ ನಡುಗಿಸುವ ಭಾರೀ ನೆರಳಿನಿಂದ ಕೂಡಿದ, ಜಿಗಣೆಗಳೇ ಹೆಚ್ಚಿರುವ ಕಾಡು ಅದು. ಅದನ್ನು ದಾಟಿದರೆ ಕುಮಾರಪರ್ವತದ ಉತ್ತುಂಗ. ಮತ್ತಷ್ಟು ಕಠಿಣ ಹಾದಿ. ಏರಿದರೆ ಶಿವನ ಜಡೆಯ ಮೇಲೆಲ್ಲೋ ಆಡಿದ ಅನುಭವ–ಅನುಭಾವ.

ಅಪರೂಪದ ಜೀವಿಗಳ ತವರು
ಗುಜರಾತಿನಿಂದ ತಮಿಳುನಾಡಿನವರೆಗೆ ಹಬ್ಬಿರುವ ಪಶ್ಚಿಮಘಟ್ಟದ ಸರಿಸುಮಾರು ಮಧ್ಯಭಾಗದಲ್ಲಿದೆ ಪುಷ್ಪಗಿರಿ ವನ್ಯಧಾಮ. ಅಪರೂಪದ ಖಗಮೃಗಗಳ ಆವಾಸಸ್ಥಾನ ಇದು. ಕಾಡು ಪಾರಿವಾಳದಿಂದ ಹಿಡಿದು ಹೆಗ್ಗೊಕ್ಕಿನ ಮಂಗಟ್ಟೆಯವರೆಗೆ ನೂರಾರು ಹಕ್ಕಿ ಪ್ರಭೇದಗಳು ಇಲ್ಲಿ ಕಂಡುಬರುತ್ತವೆ.

ಕಾಡುಹಂದಿಯಿಂದ ಕಾಡಾನೆಯವರೆಗೆ ಅನೇಕಾನೇಕ ಮೃಗಗಳು ಇಲ್ಲಿನ ನಿವಾಸಿಗಳು. ಹಾವುಗಳಿಗಂತೂ ಲೆಕ್ಕವೇ ಇಲ್ಲ. ಮಂಡಲದ ಹಾವು, ನಾಗರಗಳಷ್ಟೇ ಅಲ್ಲ ಕಾಳಿಂಗ, ಹೆಬ್ಬಾವುಗಳು ಕೂಡ ಇಲ್ಲಿವೆ. ಕಡಮಕಲ್ ಮೀಸಲು ಅರಣ್ಯ ವ್ಯಾಪ್ತಿಯ ವನ್ಯಜೀವಿಧಾಮ ಅಸ್ತಿತ್ವಕ್ಕೆ ಬಂದದ್ದು 1987ರಲ್ಲಿ.

ಇಲ್ಲಿ ಗುಡುಗಿದರೆ ಅಲ್ಲಿ ನಡುಗುತ್ತೆ!
ಮೇ ಮಧ್ಯದ ಅವಧಿ ಮುಗಿಯಿತೆಂದರೆ ಕುಮಾರಪರ್ವತದಲ್ಲಿ ಸಣ್ಣಗೆ ಗುಡುಗು ಸಿಡಿಲಿನ ಆರ್ಭಟ. ಆಗ ಬೆಂಗಳೂರಿನಂಥ ನಗರಗಳ ಚಾರಣಿಗರಿಗೆ ಸೋಮವಾರಪೇಟೆಯ ಅರಣ್ಯಾಧಿಕಾರಿಗಳಿಂದ ಎಚ್ಚರಿಕೆಯ ಗಂಟೆ ಮೊಳಗುತ್ತದೆ. ಈ ಸಂದೇಶ ಟ್ರೆಕ್ಕಿಗರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ.

ಮಳೆಗಾಲ ಮುಗಿಯುವವರೆಗೆ ಚಾರಣಿಗರು ಪುಷ್ಪಗಿರಿಯ ಕನಸು ಕಾಣುವಂತಿಲ್ಲ. ರಾಜಧಾನಿಯಿಂದ ಹೊರಟವರು, ಅರ್ಧದಾರಿಯಲ್ಲಿ ಪಯಣಿಸುತ್ತಿರುವವರು ಮರಳಬೇಕು. ‘ಚಾರಣಿಗರ ನಿಧನದಂಥ ಅಹಿತಕರ ಘಟನೆಗಳು ನಡೆದ ಬಳಿಕ ಪ್ರತಿವರ್ಷ ಜೂನ್‌ನಿಂದ ತಾತ್ಕಾಲಿಕವಾಗಿ ಚಾರಣ ನಿಷೇಧಿಸಲು ತೀರ್ಮಾನಿಸಲಾಗಿದೆ’ ಎನ್ನುತ್ತವೆ ಅರಣ್ಯ ಇಲಾಖೆಯ ಮೂಲಗಳು.

ಪುಷ್ಪಗಿರಿ/ ಕುಮಾರ ಪರ್ವತ/ ಕೆಪಿ
* ಜಿಲ್ಲೆ: ಕೊಡಗು
* ದೂರ: ಸೋಮವಾರಪೇಟೆ ತಾಲ್ಲೂಕು ಬೀದಳ್ಳಿಯಿಂದ ಸುಮಾರು 7 ಕಿ.ಮೀ
* ಸುಳ್ಯ ತಾಲ್ಲೂಕು ಕುಕ್ಕೆ ಸುಬ್ರಹ್ಮಣ್ಯದಿಂದ 12 ಕಿ.ಮೀ
*ಎತ್ತರ: 1712 ಮೀಟರ್
*ಸವಾಲು: ಅನನುಭವಿಗಳೂ ಪಯಣಿಸಬಹುದಾದ ಕಠಿಣ ಹಾದಿ
*ಸಂವಹನ: ಮೊಬೈಲ್ ನೆಟ್‌ವರ್ಕ್ ಲಭ್ಯ
*ಸೂಕ್ತ ಸಮಯ: ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ
*ಚಾರಣದ ಒಟ್ಟು ಅವಧಿ: 7ರಿಂದ 10 ಗಂಟೆಗಳು (ಒಂದು ಬದಿ)
*ಅನುಮತಿ: ಅರಣ್ಯ ಇಲಾಖೆ ಕಚೇರಿಯಿಂದ ಪಡೆಯತಕ್ಕದ್ದು
* ಶುಲ್ಕ: ಭಾರತೀಯರಿಗೆ 200 ರೂಪಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.