ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಭಾಷೆಯ ಗೀತೆಗಳ ಭಾವಲೋಕ

Published : 31 ಜುಲೈ 2015, 19:30 IST
ಫಾಲೋ ಮಾಡಿ
Comments

ದೇವಭಾಷೆ ಎಂದೇ ಹೇಳಲಾಗುವ ಸಂಸ್ಕೃತ, ಅಪಾರ ಕೃತಿ ಸಂಪತ್ತನ್ನು ಹೊಂದಿರುವ ಜ್ಞಾನಭಾಷೆಯೂ ಹೌದು. ಸಾಮಾನ್ಯ ಜನರಿಗೆ ಸಂಸ್ಕೃತವೆಂದರೆ ಬರೀ ಮಂತ್ರ, ಶ್ಲೋಕಗಳು ಎಂಬ ಭಾವವೇ ಇದೆ.

ಆದರೆ ಕನ್ನಡ ಮತ್ತು ಇತರ ಬಳಕೆಯ ಭಾಷೆಯಲ್ಲಿರುವಂತೆಯೇ ಸಂಸ್ಕೃತದಲ್ಲಿಯೂ ಬೇರೆ ಬೇರೆ ಪ್ರಕಾರದ ಸಾಹಿತ್ಯಗಳಿವೆ. ಅದರಲ್ಲಿಯೂ ಲಘು ಸಂಗೀತಕ್ಕೆ ಒಗ್ಗುವ ಸಾಹಿತ್ಯದ ರಚನೆ ಸಾಧ್ಯ ಎನ್ನುವುದನ್ನು ಸಾಬೀತುಪಡಿಸುವ ಉದ್ದೇಶದಿಂದ ನಗರದ ಮೈತ್ರೀ–ಸಂಸ್ಕೃತ–ಸಂಸ್ಕೃತಿ ಪ್ರತಿಷ್ಠಾನಮ್‌, ಸಂಸ್ಕೃತ ಭಾವಗೀತೆಗಳ ಸೀಡಿಯನ್ನು ತರಲು ಯೋಜಿಸಿದೆ. ‘ಸಾಮರಸ್ಯಮ್‌’ ಎಂಬ ಹೆಸರಿನ ಈ ಸೀಡಿ ಇದೇ ಶನಿವಾರ ಸಂಜೆ ಭಾರತೀಯ ವಿದ್ಯಾಭವನದಲ್ಲಿ ಬಿಡುಗಡೆಯಾಗಲಿದೆ.

ಸಂಸ್ಖೃತ ಸಂಗೀತ ಯಾನ
ಮೈತ್ರೀ–ಸಂಸ್ಕೃತ–ಸಂಸ್ಕೃತಿ ಪ್ರತಿಷ್ಠಾನಮ್‌ ಕಳೆದ 22 ವರ್ಷಗಳಿಂದ ಸಂಸ್ಕೃತ ಪ್ರಚಾರ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ಅವಧಿಯಲ್ಲಿ ದೇಶ ವಿದೇಶಗಳ ಸಾವಿರಾರು ಜನರಿಗೆ ಸಂಸ್ಕೃತ ಕಲಿಸಿದ ಹೆಮ್ಮೆ ಈ ಸಂಸ್ಥೆಯದು. ‘ಕಳೆದ 22 ವರ್ಷಗಳಿಂದ ಹಲವಾರು ರೀತಿಯಲ್ಲಿ ಸಂಸ್ಕೃತ ಭಾಷೆಯ ಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ.

ಸಂಸ್ಕೃತ ಕಲಿಕೆಯ ಅನೇಕ ಪುಟ್ಟ ಪುಟ್ಟ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ಇತ್ತೀಚೆಗೆ ಸಂಸ್ಕೃತದ ಬಗ್ಗೆ ಜನರಿಗೆ ಮಾಹಿತಿ ಒದಗಿಸಲು ‘ಸಂಸ್ಕೃತ ಸಂಗೀತ ಯಾನ’ ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ಸಂಗೀತದ ಜತೆಜತೆಗೇ ಸಂಸ್ಕೃತ ಕಲಿಕೆಯ ಬಗ್ಗೆ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮವಿದು’ ಎಂದು ವಿವರಿಸುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಹೆಗಡೆ. ಸಂಸ್ಕೃತ ಗೀತ ಯಾನ ಅಭಿಯಾನವೂ ಇದೇ ಸಮಯದಲ್ಲಿ ಉದ್ಘಾಟನೆಯಾಗಲಿದೆ. ‘ಸಾಮರಸ್ಯಮ್‌’ ಸೀಡಿ ಬಿಡುಗಡೆ ಕೂಡ ಈ ಅಭಿಯಾನದ ಒಂದು ಭಾಗ. ಈ ಸೀಡಿಯಲ್ಲಿ ಸಂಸ್ಕೃತದ ಎಂಟು ಹಾಡುಗಳಿವೆ.

‘ಜನರು ಬರೀ ಭಾಷಣದ ಮೂಲಕ ಸಂಸ್ಕೃತ ಕಲಿಯಿರಿ ಎಂದರೆ ಕೇಳುವುದಿಲ್ಲ. ಸಂಗೀತವೆಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಆದ್ದರಿಂದಲೇ ಸಂಸ್ಕೃತದ ಎಂಟು ಹಾಡುಗಳನ್ನು ಹಾಡುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತೇವೆ. ಹಾಡುಗಳ ಮಧ್ಯೆ ಸ್ವಲ್ಪ ಸ್ವಲ್ಪ ಸಮಯ ಸಂಸ್ಕೃತ ಭಾಷೆ, ಅದರ ಕಲಿಕೆಯ ಮಹತ್ವ, ಸಂಸ್ಕೃತ ಭಾಷೆ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆ, ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಇದರಿಂದ ಮನರಂಜನೆಯ ಜತೆ ಮಾಹಿತಿಯೂ ನೀಡಿದಂತಾಗುತ್ತದೆ. ಇದಕ್ಕಾಗಿಯೇ ಎಂಟು ಸಂಸ್ಕೃತ ಹಾಡುಗಳನ್ನು ಸಿದ್ಧಪಡಿಸಿದ್ದೇವೆ. ಅವುಗಳನ್ನೇ ಸೀಡಿ ರೂಪದಲ್ಲಿಯೂ ತರುತ್ತಿದ್ದೇವೆ’ ಎಂದು ‘ಸಾಮರಸ್ಯಮ್‌’ ಗೀತಗುಚ್ಛದ ಹಿನ್ನೆಲೆಯನ್ನು ಗಣಪತಿ ವಿವರಿಸುತ್ತಾರೆ.

ಹೊಸದೇ ಸಾಹಿತ್ಯ
ಈ ಸೀಡಿಯಲ್ಲಿನ ಹಾಡುಗಳು ಹಳೆಯ ಸಂಸ್ಕೃತ ಸಾಹಿತ್ಯದಿಂದ ಆಯ್ದವೇನಲ್ಲ. ಗಣಪತಿ ಹೆಗಡೆ ಅವರೇ ಆರು ಹಾಡುಗಳನ್ನು ಬರೆದಿದ್ದಾರೆ. ಜಿ. ಮಹಾಬಲೇಶ್ವರ ಭಟ್‌ ಮತ್ತು ಮಂಜುನಾಥ ಶರ್ಮ ಎನ್ನುವವರು ಉಳಿದ ಎರಡು ಹಾಡುಗಳನ್ನು ಬರೆದಿದ್ದಾರೆ.

ಸಂಸ್ಕೃತ, ದೇಶಭಕ್ತಿ ಸೇರಿ ಸಾಮರಸ್ಯ
ಈ ಎಂಟು ಹಾಡುಗಳನ್ನು ನಿರ್ದಿಷ್ಟ ಉದ್ದೇಶದಿಂದ ರಚಿಸಲಾಗಿದೆ. ಗಣಪತಿ ಹೆಗಡೆ ಈ ಹಾಡುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ. ‘ಮುಖ್ಯವಾಗಿ ಮೂರು ಉದ್ದೇಶಗಳನ್ನು ಇಟ್ಟು ಕೊಂಡು ಈ ಹಾಡುಗಳ ಸಾಹಿತ್ಯ ರಚಿಸಲಾಗಿದೆ. ಮೊದಲನೆಯದು ದೇಶಭಕ್ತಿ. ದೇಶಭಕ್ತಿಯನ್ನು ಸಾರುವ ಮೂರು ಹಾಡುಗಳು ಈ ಗೀತಗುಚ್ಛದಲ್ಲಿವೆ. ಹಾಗೆಯೇ ಸಂಸ್ಕೃತ ಭಾಷೆಯ ಕುರಿತಾಗಿಯೇ ಇರುವ ಜಾನಪದ ಶೈಲಿಯ ನಾಲ್ಕು ಹಾಡುಗಳೂ ಇವೆ. ಹೀಗೆ ಸಂಸ್ಕೃತ ಮತ್ತು ದೇಶಭಕ್ತಿ ಸೇರಿದಲ್ಲಿ ಸಾಮರಸ್ಯ ಉಂಟಾಗುವುದು ಎನ್ನುವುದು ನಮ್ಮ ನಂಬಿಕೆ. ಆದ್ದರಿಂದಲೇ ಸಾಮರಸ್ಯವನ್ನು ಸಾರುವ ಒಂದು ಹಾಡನ್ನೂ ಬಳಸಿಕೊಂಡಿದ್ದೇವೆ’ ಎಂದು ಹಾಡುಗಳ ಸಾಹಿತ್ಯದ ಹಿಂದಿನ ಉದ್ದೇಶಗಳ ಕುರಿತು ಹೇಳುತ್ತಾರೆ.

ಉತ್ತಮ ಜನಸ್ಪಂದನ
ಆಡುಮಾತಿನ ಬಳಕೆಯಲ್ಲಿ ಇಲ್ಲದ ಸಂಸ್ಕೃತ ಗೀತೆಗಳನ್ನು ಜನರು ಕೇಳುತ್ತಾರೆಯೇ ಎಂಬ ಪ್ರಶ್ನೆಗೆ ಗಣಪತಿ ‘ಖಂಡಿತ ಕೇಳುತ್ತಾರೆ’ ಎಂಬ ಭರವಸೆಯ ಉತ್ತರ ನೀಡುತ್ತಾರೆ. ‘ನಾವು ಈಗಾಗಲೇ ಸ್ಯಾಂಪಲ್‌ಗಾಗಿ ಕೆಲವು ಕಡೆಗಳಲ್ಲಿ ಈ ಹಾಡುಗಳನ್ನು ಕೇಳಿಸಿದ್ದೇವೆ. ಜನರು ತುಂಬ ಇಷ್ಟಪಟ್ಟು ಮತ್ತೆ ಮತ್ತೆ ಕೇಳಿಸಿಕೊಂಡಿದ್ದಾರೆ. ಹಾಗೆಯೇ ಅವರಲ್ಲಿ ಸಂಸ್ಕೃತದ ಬಗ್ಗೆ ಆಸಕ್ತಿ ಕುದುರಿಸುವಲ್ಲಿಯೂ ಈ ಹಾಡುಗಳು ಯಶಸ್ವಿಯಾಗಿವೆ’ ಎನ್ನುವುದು ಅವರ ವಿವರಣೆ.

ಈ ಹಾಡುಗಳಿಗೆ ಗಾಯಕ ಗಣೇಶ ದೇಸಾಯಿ ಸಂಗೀತ ಸಂಯೋಜಿಸಿರುವುದಲ್ಲದೇ ಕೆಲವು ಹಾಡುಗಳನ್ನು ಹಾಡಿದ್ದಾರೆ. ಗಣಪತಿ ಹೆಗಡೆ ಅವರ ಪತ್ನಿ ಭವಾನಿ ಹೆಗಡೆ ಕೂಡ ಕೆಲವು ಹಾಡುಗಳನ್ನು ಹಾಡಿದ್ದಾರೆ. ಮುಂದೆ ಇವರಿಬ್ಬರಿಂದಲೂ ರಾಜ್ಯ ಹೊರ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಸಂಸ್ಕೃತ ಗೀತೆ ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಸ್ಕೃತ ಸಂಗೀತ ಯಾನ ನಡೆಸಲು ಪ್ರತಿಷ್ಠಾನ ಯೋಜಿಸಿಕೊಂಡಿದೆ. ಈಗಾಗಲೇ ಶಂಕರಾಚಾರ್ಯರ ಕೃತಿಗಳನ್ನು, ಸಂಸ್ಕೃತ ಸುಗಂಧ ಎಂಬ ಹೆಸರಿನಲ್ಲಿ 60 ಸಂಸ್ಕೃತ ಶ್ಲೋಕಗಳನ್ನು ಸೀಡಿ ರೂಪದಲ್ಲಿ ಬಿಡುಗಡೆ ಮಾಡಿರುವ ಪ್ರತಿಷ್ಠಾನ, ಮುಂದೆ ಸಂಸ್ಕೃತ ಶಿಶು ಸಾಹಿತ್ಯ ಸೇರಿದಂತೆ ಬೇರೆ ಬೇರೆ ರೀತಿಯ ಗೀತೆಗಳನ್ನೂ ಸೀಡಿ ರೂಪದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.
***
ಕಾರ್ಯಕ್ರಮದ ವಿವರಗಳು
ಸಂಸ್ಕೃತ ಸಂಗೀತ ಯಾನ ಅಭಿಯಾನದ ಶುಭಾರಂಭ ಮತ್ತು ಸಾಮರಸ್ಯಮ್‌ ಸುಮಧುರ ಸಂಸ್ಕೃತ ಗೀತೆಗಳ ಭಾವಲೋಕ  ಸೀಡಿ ಬಿಡುಗಡೆ.
ದಿನ: ಶನಿವಾರ ಸಂಜೆ 5.30.
ಸ್ಥಳ: ಭಾರತೀಯ ವಿದ್ಯಾಭವನ. ರೇಸ್‌ಕೋರ್ಸ್‌ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT