ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಣಿವೆಯಲ್ಲಿ ದಶಕದ ನಂತರ ವಿಧಾನಸಭಾ ಚುನಾವಣೆ: ಕಾಶ್ಮೀರದಲ್ಲಿ ಮತ್ತೆ ಮತಹಬ್ಬ

ಕಣಿವೆಯಲ್ಲಿ ದಶಕದ ನಂತರ ಮತ್ತೆ ವಿಧಾನಸಭಾ ಚುನಾವಣೆ * ಹರಿಯಾಣಕ್ಕೂ ವೇಳಾಪಟ್ಟಿ ಪ್ರಕಟಿಸಿದ ಆಯೋಗ
Published : 16 ಆಗಸ್ಟ್ 2024, 16:10 IST
Last Updated : 16 ಆಗಸ್ಟ್ 2024, 16:10 IST
ಫಾಲೋ ಮಾಡಿ
Comments

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಿದೆ. ಭಯೋತ್ಪಾದಕರ ಹಿಂಸೆಯಿಂದ ನಲುಗಿರುವ ಈ ಕಣಿವೆ ನಾಡಿನಲ್ಲಿ ದಶಕದ ಬಳಿಕ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.

370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡ ಬಳಿಕ ಸರ್ಕಾರ ರಚನೆಗೆ ಇಲ್ಲಿ ಮತದಾರರು ಮೊತ್ತಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೂರು ಹಂತದಲ್ಲಿ ಮತದಾನ ನಡೆಯಲಿದೆ. 2.1 ಕೋಟಿ ಮತದಾರರು ಇರುವ ಹರಿಯಾಣದಲ್ಲಿ ಅಕ್ಟೋಬರ್ 1ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಜಮ್ಮು ಮತ್ತು ಕಾಶ್ಮೀರದ 90 ಕ್ಷೇತ್ರಗಳಿಗೆ ಸೆಪ್ಟೆಂಬರ್‌ 18, 25 ಹಾಗೂ ಅಕ್ಟೋಬರ್‌ 1ರಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳ ಮತ ಎಣಿಕೆ ಅಕ್ಟೋಬರ್ 4ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಜಮ್ಮು ಮತ್ತು ಕಾಶ್ಮೀರದಲ್ಲಿ 87.9 ಲಕ್ಷ ಮತದಾರರು ಇದ್ದು, ಮೊದಲ ಹಂತದಲ್ಲಿ 24, ಎರಡನೇ ಹಂತದಲ್ಲಿ 26 ಹಾಗೂ ಮೂರನೇ ಹಂತದಲ್ಲಿ 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 

‘ನಾವು ಈ ಹಿಂದೆ ತಿಳಿಸಿದಂತೆ ಚುನಾವಣಾ ಅವಧಿಯನ್ನು ಕಡಿಮೆ ಮಾಡುತ್ತಿದ್ದೇವೆ’ ಎಂದು ಕುಮಾರ್ ತಿಳಿಸಿದರು. 

ಜಮ್ಮು ಮತ್ತು ಕಾಶ್ಮೀರ, ಹರಿಯಾಣದ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಉಳಿದ ರಾಜ್ಯಗಳ (ಮಹಾರಾಷ್ಟ್ರ, ಜಾರ್ಖಂಡ್‌) ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. 

ಈ ಎರಡೂ ರಾಜ್ಯಗಳ ಚುನಾವಣೆ ಆಡಳಿತ ಪಕ್ಷ ಎನ್‌ಡಿಎ ಹಾಗೂ ವಿಪಕ್ಷ ‘ಇಂಡಿಯಾ’ ಮೈತ್ರಿಕೂಟಗಳಿಗೆ ಮಹತ್ವದ್ದು. ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿಯು ಮಿತ್ರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ ಮೂರೇ ತಿಂಗಳಲ್ಲಿ ಮತ್ತೊಂದು ಚುನಾವಣೆ ಎದುರಿಸುತ್ತಿದೆ. ಹರಿಯಾಣದಲ್ಲಿ ಸತತ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ಹ್ಯಾಟ್ರಿಕ್ ಸಾಧನೆಯ ಕನವರಿಕೆಯಲ್ಲಿದೆ. ಆದರೆ, ರಾಜ್ಯದಲ್ಲಿ ಪಕ್ಷ ಪ್ರಬಲ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್‌ ಬೀಗಿತ್ತು. ಅಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿ ‘ಕೈ’ ಪಾಳಯ ಇದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಚುನಾವಣೆಯು 2014ರಲ್ಲಿ ಐದು ಹಂತಗಳಲ್ಲಿ ನಡೆದಿತ್ತು. 2018ರ ನವೆಂಬರ್‌ನಲ್ಲಿ ವಿಧಾನಸಭೆಯನ್ನು ವಿಸರ್ಜಿಸಲಾಗಿತ್ತು. ನಂತರ ಚುನಾವಣಾ ಪ್ರಕ್ರಿಯೆ ನಡೆಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌, ಸೆಪ್ಟೆಂಬರ್‌ 30ರೊಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿತ್ತು. 

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ ಪ್ರಮಾಣ ಶೇ 30ರಷ್ಟು ಹೆಚ್ಚಳ ಆಗಿತ್ತು. ಆದರೂ, ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಭದ್ರತೆ ಒದಗಿಸುವುದು ಪ್ರಮುಖ ಸವಾಲು ಆಗಲಿದೆ. ‘ರಾಜ್ಯದ ಜನರು ಬುಲೆಟ್‌ ಹಾಗೂ ಬಹಿಷ್ಕಾರದ ಬದಲು ಬ್ಯಾಲೆಟ್‌ ಅನ್ನು ಆಯ್ಕೆ ಮಾಡಿದ್ದಾರೆ. ಜನರು ಭಯೋತ್ಪಾದಕರಿಗೆ ಸವಾಲು ಒಡ್ಡಲು ಸಿದ್ಧರಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಾಶ್ಮೀರ ವಲಸಿಗರಿಗೆ ಆರಂಭಿಸಿದ್ದ ಸರಳೀಕೃತ ಮತದಾನದ ವ್ಯವಸ್ಥೆಯು ವಿಧಾನಸಭಾ ಚುನಾವಣೆಯಲ್ಲಿ ಮುಂದುವರಿಯಲಿದೆ’ ಎಂದು ಕುಮಾರ್‌ ತಿಳಿಸಿದರು. 

ಕೇಂದ್ರಾಡಳಿತ ಪ್ರದೇಶದಲ್ಲಿ ಸರಣಿ ವರ್ಗಾವಣೆಗಳು ಹಾಗೂ ನೇಮಕಾತಿ ಪ್ರಕ್ರಿಯೆ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಚುನಾವಣಾ ಆಯುಕ್ತರು, ‘ಮಾದರಿ ನೀತಿಸಂಹಿತೆ ಜಾರಿಗೆ ಬರುವ ಮೊದಲು ಸರ್ಕಾರವು ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು. ಆದರೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಧಕ್ಕೆಯಾಗುವಂತೆ ಈ ಪ್ರಕ್ರಿಯೆ ನಡೆದರೆ ಆಯೋಗ ಮಧ್ಯ ಪ್ರವೇಶಿಸಲಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT