ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ ವಿದ್ಯಾರ್ಥಿನಿ ಕೊಲೆ: ಉಸಿರುಗಟ್ಟಿಸಿ ಕೊಲೆ, ನಂತರ ಅತ್ಯಾಚಾರ ಶಂಕೆ

Published : 11 ಆಗಸ್ಟ್ 2024, 15:33 IST
Last Updated : 11 ಆಗಸ್ಟ್ 2024, 15:33 IST
ಫಾಲೋ ಮಾಡಿ
Comments

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸ್‌ ಅಧಿಕಾರಿಯೊಬ್ಬರ ಪ್ರಕಾರ, ಪ್ರತಿರೋಧ ತೋರಿದ್ದ ವಿದ್ಯಾರ್ಥಿನಿಯನ್ನು ಮೊದಲು ಕೊಲೆ ಮಾಡಿ, ಬಳಿಕ ಅತ್ಯಾಚಾರ ಎಸಗಿರುವ ಸಾಧ್ಯತೆಗಳಿವೆ.

ಕೃತ್ಯದ ಸ್ವರೂಪದ ಖಚಿತತೆಗೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಕುರಿತ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಇಲ್ಲಿನ ಸರ್ಕಾರಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ವಿದ್ಯಾರ್ಥಿನಿ ಕೊಲೆ ಆಗಿತ್ತು.

ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢವಾಗಿತ್ತು. ಇತ್ತ, ಕೃತ್ಯದ ಸಂಬಂಧ ಬಂಧಿಸಿರುವ ವ್ಯಕ್ತಿಯನ್ನು ಪೊಲೀಸರು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್‌ ಆ. 23ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. 

ಪ್ರಾಥಮಿಕ ಹಂತದ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ, ‘ಕೊಲೆಯಾದ ವಿದ್ಯಾರ್ಥಿನಿಯ ಎರಡೂ ಕಣ್ಣುಗಳು, ಬಾಯಿಯಲ್ಲಿ ರಕ್ತಸ್ರಾವವಾಗಿದೆ. ಸೊಂಟ, ಎಡಗಾಲು, ಕತ್ತು, ತುಟಿಯ ಮೇಲೂ ಗಾಯದ ಗುರುತುಗಳಿವೆ. ಖಾಸಗಿ ಅಂಗಾಂಗದಲ್ಲೂ ರಕ್ತಸ್ರಾವ ಕಂಡುಬಂದಿದೆ’.

ಸಾಂದರ್ಭಿಕ ಸಾಕ್ಷ್ಯಗಳನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ‘ಮೊದಲು ವಿದ್ಯಾರ್ಥಿನಿಯ ಕತ್ತುಹಿಸುಕಿ ಕೊಲೆ ಮಾಡಿ, ನಂತರ ಅತ್ಯಾಚಾರ ಎಸಗಿರುವ ಸಾಧ್ಯತೆಗಳಿವೆ’ ಎಂದು ಹೇಳಿದರು. 

‘ವೈದ್ಯೆ ಏಕಾಂಗಿಯಾಗಿ ಸೆಮಿನಾರ್ ಸಭಾಂಗಣದಲ್ಲಿ ನಿದ್ರಿಸುತ್ತಿದ್ದರು ಎಂಬುದಕ್ಕೆ ಸಾಕ್ಷ್ಯಗಳಿವೆ. ಆಗ ಆರೋಪಿ ದಾಳಿ ನಡೆಸಿರಬಹುದು. ಪ್ರತಿರೋಧ ತೋರಿದ್ದ ವಿದ್ಯಾರ್ಥಿನಿಯನ್ನು ಕತ್ತುಹಿಸುಕಿ ಕೊಲೆ ಮಾಡಿರುವ ಸಾಧ್ಯತೆಗಳಿವೆ. ನಂತರವೇ ಅತ್ಯಾಚಾರ ಮಾಡಿಬಹುದು’ ಎಂದು ಅವರು ಹೇಳಿದರು.

‘ಕೃತ್ಯದ ವೇಳೆ ಆರೋಪಿ ಧರಿಸಿದ್ದ ಶೂ, ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಇನ್ನೊಬ್ಬರ ಪಾತ್ರ ಕುರಿತು ಸದ್ಯ ಸಾಕ್ಷ್ಯ ಲಭ್ಯವಾಗಿಲ್ಲ. ಬಳಿಕ ಆರೋಪಿ ಮನೆಗೆ ತೆರಳಿ ಬಟ್ಟೆ ತೊಳೆದಿದ್ದಾನೆ. ಆತ ಧರಿಸಿದ್ದ ಶೂಗಳ ಮೇಲೆ ರಕ್ತದ ಕಲೆ ಇದ್ದುದು ತಪಾಸಣೆ ವೇಳೆ ಕಂಡುಬಂದಿತ್ತು. ಬಂಧಿತ ಆರೋಪಿ ಹೊರಗಿನವರು. ಆಗಾಗ್ಗೆ ಆಸ್ಪತ್ರೆಗೆ ಹೋಗುತ್ತಿದ್ದ’ ಎಂದು ಅವರು ತಿಳಿಸಿದರು.

ಈತನ ವಿರುದ್ಧ ಭಾರತ ನ್ಯಾಯ ಸಂಹಿತೆ ಅನ್ವಯ ಕೊಲೆ, ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಭದ್ರತೆ ಭಾಗವಾಗಿ ಭಾನುವಾರ ಆಸ್ಪತ್ರೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. 

‘ಅಧಿಕೃತ ಗುರುತುಪತ್ರ ಇಲ್ಲದೆ ಯಾರನ್ನೂ ಬಿಡುತ್ತಿಲ್ಲ. ಆರೋಗ್ಯ ಸೇವೆಯ ಸಿಬ್ಬಂದಿಗೆ ಅಗತ್ಯ ಭದ್ರತೆ ಒದಗಿಸಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃತ್ಯ ಕುರಿತಂತೆ ಈಗಾಗಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಆರೋಪಿ ವಿರುದ್ಧ ವಿಚಾರಣೆಯು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಯುವಂತೆ ಕ್ರಮವಹಿಸಲಾಗುವುದು. ಗರಿಷ್ಠ ಶಿಕ್ಷೆ ಆಗುವಂತೆಯೂ ಸರ್ಕಾರ ಗಮನಹರಿಸಲಿದೆ’ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಾದ್ಯಂತ ಪ್ರತಿಭಟನೆ ತೀವ್ರ

ನವದೆಹಲಿ: ವಿದ್ಯಾರ್ಥಿನಿ ಕೊಲೆ ಆರೋಪಿಗೆ ಕಠಿಣ ಸಜೆಗೆ ಒತ್ತಾಯಿಸಿ ವೈದ್ಯ ವಿದ್ಯಾರ್ಥಿಗಳು ಭಾನುವಾರವು ಪಶ್ಚಿಮ ಬಂಗಾಲದಾದ್ಯಂತ ಮೂರನೇ ದಿನವಾದ ಭಾನುವಾರವು ದಿನವೂ ಪ್ರತಿಭಟನೆ ನಡೆಸಿದರು. 

ಕೋಲ್ಕತ್ತದ ವೈದ್ಯರ ಪ್ರತಿಭಟನೆಗೆ ಬೆಂಬಲಿಸಿ ನವದೆಹಲಿಯಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಸೋಮವಾರ ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಲು ವೈದ್ಯರು ನಿರ್ಧರಿಸಿದ್ದಾರೆ.

ವಿವಿಧ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಂಘಗಳು ಈ ಕುರಿತು ಹೇಳಿಕೆ ನೀಡಿವೆ. ಹೊರರೋಗಿಗಳ ವಿಭಾಗ ಶಸ್ತ್ರಚಿಕಿತ್ಸೆ ಕೊಠಡಿ ವಾರ್ಡ್‌ ಕರ್ತವ್ಯದಿಂದ ದೂರ ಉಳಿಯಲಾಗುವುದು ಎಂದು ತಿಳಿಸಿವೆ.

ತಿರುವನಂತಪುರ ವರದಿ: ಕೋಲ್ಕತ್ತದ ಕೊಲೆ ಖಂಡಿಸಿ ಕೇರಳದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ 12ರಂದು ಪ್ರತಿಭಟನೆ ನಡೆಯಲಿದೆ ಸರ್ಕಾರಿ ವೈದ್ಯ ಕಾಲೇಜು ಬೋಧಕರ ಸಂಘ ಪ್ರಕಟಿಸಿದೆ.

ರಾತ್ರಿ ಪಾಳಿಯಲ್ಲಿರುವ ವೈದ್ಯೆಯರು ಹಾಗೂ ತುರ್ತುಸೇವಾ ಘಟಕದಲ್ಲಿರುವ ವೈದ್ಯರ ಸುರಕ್ಷತೆಗೆ ಕ್ರಮವಹಿಸಬೇಕು. ಇದು ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಎಂದು ಸಂಘವು ಈ ಕುರಿತ ಹೇಳಿಕೆಯಲ್ಲಿ ಪ್ರತಿಪಾದಿಸಿದೆ. 

ಕಾರ್ಯಸ್ಥಳದಲ್ಲಿ ವೈದ್ಯರಿಗೆ ರಕ್ಷಣೆಗೆ ಒತ್ತಾಯಿಸಿ ವೈದ್ಯಶಿಕ್ಷಣ ಬೋಧಕರು ಸ್ನಾತಕೋತ್ತರ ವೈದ್ಯರು ಹೌಸ್‌ ಸರ್ಜನ್‌ಗಳು ವೈದ್ಯ ವಿದ್ಯಾರ್ಥಿನಿಗಳು ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಅಧ್ಯಕ್ಷ ರೊಸೆನಾರಾ ಬೇಗಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT