ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್ ‍ಪ್ರಕರಣ: ಎನ್‌ಟಿಎ ಪ್ರಶ್ನೆ ಪತ್ರಿಕೆ ಪರಿಶೀಲನೆ

ಆರೋಪಿಗಳ ಮಂಪರು ಪರೀಕ್ಷೆ ಸಾಧ್ಯತೆ * ಜಾರಿ ನಿರ್ದೇಶನಾಲಯದಿಂದ ತನಿಖೆ ನಿರೀಕ್ಷೆ
Published 22 ಜೂನ್ 2024, 15:23 IST
Last Updated 22 ಜೂನ್ 2024, 15:23 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ‘ನೀಟ್‌–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸ್‌ ಆರ್ಥಿಕ ಅಪರಾಧಗಳ ಘಟಕವು (ಇಒಯು) ಪಟ್ನಾದ ಫ್ಲ್ಯಾಟ್‌ವೊಂದರಿಂದ ವಶಪಡಿಸಿಕೊಂಡಿರುವ ಕೆಲ ದಾಖಲೆಗಳನ್ನು, ಎನ್‌ಟಿಎಯಿಂದ ಸ್ವೀಕರಿಸಿರುವ ಪ್ರಶ್ನೆ ಪತ್ರಿಕೆಯ ಜತೆಗೆ ತಾಳೆ ನೋಡಲು ಯೋಜಿಸಿದೆ.

ಕಳೆದ ತಿಂಗಳು ಕಾರ್ಯಾಚರಣೆ ನಡೆಸಿದ್ದ ಇಒಯು ಫ್ಲಾಟ್‌ವೊಂದರಿಂದ ಭಾಗಶಃ ಸುಟ್ಟಿದ್ದ ಪ್ರಶ್ನೆ ಪತ್ರಿಕೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ಈ ಪ್ರಕರಣದಲ್ಲಿ ಇಲ್ಲಿಯವರೆಗೆ 13 ಜನರನ್ನೂ ಬಂಧಿಸಿದೆ.

‘ತನಿಖೆಯ ಭಾಗವಾಗಿ ನೀಟ್‌–ಯುಜಿ ಪರೀಕ್ಷೆಯ ಉಲ್ಲೇಖಿತ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವಂತೆ ಎನ್‌ಟಿಎ ಅನ್ನು ವಿನಂತಿಸಲಾಗಿತ್ತು. ಏಜೆನ್ಸಿಯು ಪ್ರಶ್ನೆ ಪತ್ರಿಕೆಗಳನ್ನು ಇದೀಗ ಒದಗಿಸಿದ್ದು, ಅದನ್ನು ನಾವು ವಶಪಡಿಸಿಕೊಂಡಿರುವ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡುತ್ತೇವೆ’ ಎಂದು ಇಒಯು ಮೂಲಗಳು ತಿಳಿಸಿವೆ.

ಮಂಪರು ಪರೀಕ್ಷೆ ಸಾಧ್ಯತೆ: ಈ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲ ಆರೋಪಿಗಳನ್ನು ಮಂಪರು ಪರೀಕ್ಷೆ ಮತ್ತು ಬ್ರೈನ್‌ ಮ್ಯಾಪಿಂಗ್‌ಗೆ ಒಳಪಡಿಸುವ ಸಾಧ್ಯತೆಯ ಕುರಿತು ಇಒಯು ಪೊಲೀಸರು ಪರಿಶೀಲಿಸುತ್ತಿದ್ದಾರೆ.

‘ಕೆಲ ಆರೋಪಿಗಳು ಸ್ಪಂದಿಸುತ್ತಿಲ್ಲ. ಅವರ ಹೇಳಿಕೆಗಳಿಂದ ತನಿಖಾಧಿಕಾರಿ ತೃಪ್ತರಾಗಿಲ್ಲ. ಆದ್ದರಿಂದ ಆರೋಪಿಗಳ ಮಂಪರು ಪರೀಕ್ಷೆ ಮತ್ತು ಬ್ರೈನ್‌ ಮ್ಯಾಪಿಂಗ್‌ ನಡೆಸುವ ಸಾಧ್ಯತೆಯೂ ಇದೆ. ಈ ವೇಳೆ ತನಿಖೆಗೆ ಹೊಸ ಮಾರ್ಗಗಳು ದೊರೆಯಬಹುದು ಎಂಬ ನಿರೀಕ್ಷೆಯನ್ನು ತನಿಖಾಧಿಕಾರಿಗಳು ಹೊಂದಿದ್ದಾರೆ’ ಎಂದು ಮೂಲಗಳು ಹೇಳಿವೆ.  

ಇ.ಡಿ ತನಿಖೆ ಸಾಧ್ಯತೆ: ನೀಟ್‌– ಯುಜಿ ಪರೀಕ್ಷಾ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುವ ಸಾಧ್ಯತೆ ಇದೆ. ಇಒಯು ಎಫ್‌ಐಆರ್‌ ಆಧರಿಸಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ತನಿಖೆ ನಡೆಸಬಹುದು. ಅಪರಾಧದ ಆದಾಯವನ್ನು ಗುರುತಿಸಲು ಮತ್ತು ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನೂ ಅದು ಆರಂಭಿಸಬಹುದು ಎಂಬ ನಿರೀಕ್ಷೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇಒಯು ಉನ್ನತ ಅಧಿಕಾರಿಗಳು ತನಿಖೆಯ ಭಾಗವಾಗಿ ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಇತರ ಸಂಬಂಧಿತ ವಿಭಾಗಗಳ ಅಧಿಕಾರಿಗಳ ಜತೆಯೂ ಸಮಾಲೋಚನೆ ನಡೆಸಲಿದ್ದಾರೆ ಎಂದು ಗೊತ್ತಗಾಗಿದೆ. 

6 ಜನರ ಬಂಧಿಸಿದ ಪೊಲೀಸರು

ದೇವಘರ್‌: ನೀಟ್‌ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರು ಜಾರ್ಖಂಡ್‌ನ ದೇವಘರ್‌ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಆರು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇಲ್ಲಿನ ದೇವಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಏಮ್ಸ್‌–ದೇವಘರ್‌ ಬಳಿಯ ಮನೆಯೊಂದರಿಂದ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಯಿತು. ಎಲ್ಲರನ್ನೂ ಬಿಹಾರಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.

ಬಂಧಿತರು ಬಿಹಾರದ ನಳಂದ ಜಿಲ್ಲೆಯ ನಿವಾಸಿಗಳಾಗಿದ್ದು, ಪರಮ್‌ಜಿತ್‌ ಸಿಂಗ್‌ ಅಲಿಯಾಸ್‌ ಬಿಟ್ಟು, ಚಿಂಟು ಅಲಿಯಾಸ್‌ ಬಲದೇವ್‌ ಕುಮಾರ್‌, ಕಾಜು ಅಲಿಯಾಸ್‌ ಪ್ರಶಾಂತ್‌ ಕುಮಾರ್‌, ಅಜಿತ್‌ ಕುಮಾರ್‌, ರಾಜೀವ್‌ ಕುಮಾರ್‌ ಮತ್ತು ಪಂಕು ಕುಮಾರ್‌ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಇಲ್ಲಿನ ಜುನು ಸಿಂಗ್‌ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ದೇವಘರ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಶನಿವಾರ ರಾಂಚಿಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಆರ್‌ಜೆಡಿಯ ಜಾರ್ಖಂಡ್‌ ಘಟಕ, ಪ್ರತಿಭಟನೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT