ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಸಮಯ ಬಂದಿದೆ: ಹೇಮಂತ್ ಸೊರೇನ್

Published 29 ಜೂನ್ 2024, 11:14 IST
Last Updated 29 ಜೂನ್ 2024, 11:14 IST
ಅಕ್ಷರ ಗಾತ್ರ

ರಾಂಚಿ: ಮುಂಬರುವ ವಿಧಾನಸಭೆ ಚುನಾವಣೆಯ ಬಳಿಕ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ರಾಜ್ಯದಿಂದ ನಿರ್ನಾಮ ಮಾಡಲಾಗುವುದು ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ನಿವಾಸದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಬಂಧಿಸಲು ಪಿತೂರಿ ನಡೆಸಿದವರ ವಿರುದ್ಧ ದಂಗೆ ನಡೆಸಲಾಗುವುದು. ಜಾರ್ಖಂಡ್‌ನ ಜನರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

‘ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಆದರೆ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ (ಬಿಜೆಪಿ) ಜನರು ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಸಮಯ ಬಂದಿದೆ. ಮುಂಬರುವ ದಿನಗಳಲ್ಲಿ ಜಾರ್ಖಂಡ್‌ನಿಂದ ಬಿಜೆಪಿಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗುವುದು’ ಎಂದು ಗುಡುಗಿದ್ದಾರೆ.

‘ಬಿಜೆಪಿಗರು ವಿಧಾನಸಭೆ ಚುನಾವಣೆಯನ್ನು ಮುಂದೂಡಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಅವರೇ ಬಯಸಿದಂತೆ ಯಾವುದೇ ದಿನ ಚುನಾವಣೆ ನಡೆದರೂ ನಾವು ಸಿದ್ಧರಾಗಿದ್ದೇವೆ. ಜಾರ್ಖಂಡ್‌ನಲ್ಲಿ ಗೆಲುವು ಸಾಧಿಸಬೇಕೆಂಬ ಬಿಜೆಪಿಗರ ಕನಸು ನನಸಾಗುವುದಿಲ್ಲ. ಅವರು (ಬಿಜೆಪಿಗರು) ಆದಿವಾಸಿಗಳನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸುತ್ತಾರೆ. ಆದರೆ, ಅವರು ಕೇವಲ ರಬ್ಬರ್ ಸ್ಟ್ಯಾಂಪ್‌ಗಳಾಗಿರುತ್ತಾರೆ’ ಎಂದು ಸೊರೇನ್ ಕುಟುಕಿದ್ದಾರೆ.

‌ಭೂಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಈ ವರ್ಷದ ಜನವರಿ 31ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್‌ ಸೊರೇನ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT