ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

One Nation One Election: ಒಟ್ಟಿಗೆ ಚುನಾವಣೆಗೆ ಒಪ್ಪಿಗೆ

Published : 18 ಸೆಪ್ಟೆಂಬರ್ 2024, 20:04 IST
Last Updated : 18 ಸೆಪ್ಟೆಂಬರ್ 2024, 20:04 IST
ಫಾಲೋ ಮಾಡಿ
Comments

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ನೀಡಿದ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಈ ಮೂಲಕ ಬಿಜೆಪಿಯ ಮತ್ತೊಂದು ‘ಕಾರ್ಯಸೂಚಿ’ಯನ್ನು ಕಾರ್ಯಗತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರ ಮುಂದಡಿ ಇಟ್ಟಿದೆ. 

‘ಒಂದು ರಾಷ್ಟ್ರ– ಒಂದು ಚುನಾವಣೆ’ ಸಂಬಂಧ ಕೋವಿಂದ್‌ ನೇತೃತ್ವದ ಸಮಿತಿಯು ಮಾರ್ಚ್‌ನಲ್ಲಿ 18,626 ಪುಟಗಳ ವರದಿ ಸಲ್ಲಿಸಿತ್ತು. ಸಂವಿಧಾನಕ್ಕೆ 18 ತಿದ್ದುಪಡಿಗಳನ್ನು ಸಮಿತಿ ಶಿಫಾರಸು ಮಾಡಿತ್ತು. ಎನ್‌ಡಿಎ ಸರ್ಕಾರಕ್ಕೆ ನೂರು ದಿನಗಳು ತುಂಬಿದ ಬೆನ್ನಲ್ಲೇ, ಸಂಪುಟ ಈ ತೀರ್ಮಾನ ಕೈಗೊಂಡಿದೆ. ಜಮ್ಮು ಮತ್ತು ಕಾಶ್ಮೀರ (ಎರಡನೇ ಮತ್ತು ಮೂರನೇ ಹಂತ) ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳಿಗೆ ಕೆಲವೇ ದಿನಗಳು ಉಳಿದಿರುವಾಗ ಕೇಂದ್ರ ಈ ದಾಳ ಉರುಳಿಸಿದೆ. ಈ ವರ್ಷದ ಅಂತ್ಯದೊಳಗೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಮೋದಿ ಅವರು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ನಿರಂತರವಾಗಿ ಚುನಾವಣೆಗಳು ನಡೆಯುವುದರಿಂದ ಅಪಾರ ಹಣ ವ್ಯಯವಾಗಿ, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ಈ ಎಲ್ಲ ತೊಂದರೆ ತಪ್ಪಿಸಬಹುದು ಎಂಬ ಕಾರಣಗಳನ್ನು ಮೋದಿ ನೀಡುತ್ತಿದ್ದಾರೆ. ‘ಉನ್ನತ ಮಟ್ಟದ ಸಮಿತಿ ಶಿಫಾರಸುಗಳನ್ನು ಸಂಪುಟ ಅಂಗೀಕರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲಿದೆ’ ಎಂದು ಮೋದಿ ಹೇಳಿದ್ದಾರೆ. 

ಸಂಪುಟದ ತೀರ್ಮಾನವನ್ನು ಎನ್‌ಡಿಎ ಮಿತ್ರಪಕ್ಷಗಳು ಸ್ವಾಗತಿಸಿವೆ. ‘ಏಕಕಾಲಕ್ಕೆ ಚುನಾವಣೆ ನಡೆಸುವುದು ಪ್ರಾಯೋಗಿಕವಲ್ಲ’ ಎಂದು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ವಾಗ್ದಾಳಿ ನಡೆಸಿವೆ. ‘ಜಮ್ಮು ಮತ್ತು ಕಾಶ್ಮೀರದ ಜತೆಗೆ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯನ್ನು ನಡೆಸಲು ಸಾಧ್ಯವಾಗದವರು ಎಲ್ಲ ಚುನಾವಣೆಗಳನ್ನು ಒಟ್ಟಿಗೆ ಹೇಗೆ ನಡೆಸುತ್ತಾರೆ’ ಎಂದು ಟಿಎಂಸಿ ಹಾಗೂ ಎಎಪಿ ನಾಯಕರು ಪ್ರಶ್ನಿಸಿದ್ದಾರೆ. 

ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌, ‘ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಅನುಷ್ಠಾನ ಗುಂಪು ರಚಿಸಲಾಗುವುದು. ಮುಂದಿನ ಕೆಲವು ತಿಂಗಳುಗಳಲ್ಲಿ ದೇಶದಾದ್ಯಂತ ವಿವಿಧ ವೇದಿಕೆಗಳಲ್ಲಿ ವಿವರವಾದ ಚರ್ಚೆ ನಡೆಸಲಾಗುವುದು’ ಎಂದರು. 

‘ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಒಮ್ಮತಕ್ಕೆ ಬರಲು ಪ್ರಯತ್ನಿಸುತ್ತೇವೆ. ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರುವ ಅಂಶಗಳ ಬಗ್ಗೆ ಒಮ್ಮತ ಮೂಡಿಸುವ ವಿಶ್ವಾಸ ಹೊಂದಿದ್ದೇವೆ. ಇದು ನಮ್ಮ ರಾಷ್ಟ್ರವನ್ನು ಬಲಪಡಿಸುವ ವಿಷಯ’ ಎಂದರು. 

ಶಿಫಾರಸುಗಳು ಯಾವಾಗ ಜಾರಿಗೆ ಬರಲಿವೆ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ತರಲಾಗುತ್ತದೆಯೇ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ವೈಷ್ಣವ್ ನೇರ ಉತ್ತರ ನೀಡಲಿಲ್ಲ. ‘ಸರ್ಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲಿ ಅದನ್ನು ಜಾರಿಗೆ ತರಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದರು. 

ಒಂದು ದೇಶ–ಒಂದು ಚುನಾವಣೆ ಸಂಬಂಧ ಉನ್ನತ ಮಟ್ಟದ ಸಮಿತಿಯು 62 ಪಕ್ಷಗಳ ಅಭಿಪ್ರಾಯಗಳನ್ನು ಕೇಳಿತ್ತು. 47 ಪಕ್ಷಗಳು ಪ್ರತಿಕ್ರಿಯಿಸಿದ್ದವು. 32 ಪಕ್ಷಗಳು ಪರವಾಗಿ ಅಭಿಪ್ರಾಯ ನೀಡಿದ್ದರೆ, 15 ಪಕ್ಷಗಳು ಈ ಪ್ರಸ್ತಾವವನ್ನು ವಿರೋಧಿಸಿದ್ದವು.

ಪರ: ಬಿಜೆಪಿ, ಎಐಎಡಿಎಂಕೆ, ಬಿಜೆಡಿ, ಜೆಡಿ(ಯು), ಎಜೆಎಸ್‌ಯು, ಎನ್‌ಪಿಪಿ, ಎಜಿಪಿ, ಎನ್‌ಡಿಪಿಪಿ, ಅಕಾಲಿದಳ, ಪಿಎಂಕೆ, ಎಚ್‌ಎಎಂ, ಐಪಿಎಫ್‌ಟಿ, ಅಪ್ನಾ ದಳ (ಸೋನಿಲಾಲ್), ಎಂಜಿಪಿ, ನಿಶಾದ್ ಪಾರ್ಟಿ, ಡಿಪಿಎಪಿ ಸೇರಿ 32 ಪಕ್ಷಗಳು

ವಿರುದ್ಧ: ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ, ಡಿಎಂಕೆ, ವಿಸಿಕೆ, ಎಐಎಂಐಎಂ ಸೇರಿ 15 ಪಕ್ಷಗಳು.

ಪಕ್ಷಗಳ ನಿಲುವು

ಬಿಜೆ‍ಪಿ: ಆರ್ಥಿಕ, ಆಡಳಿತಾತ್ಮಕ ಮತ್ತು ಪ್ರಜಾಸತ್ತಾತ್ಮಕ ಕಾರಣಗಳಿಗಾಗಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ.

ಎಜೆಎಸ್‌ಯು: ಚುನಾವಣಾ ವೆಚ್ಚ ಕಡಿಮೆ ಮಾಡಲಿದೆ ಹಾಗೂ ಆಡಳಿತ ಸುಧಾರಣೆ ಆಗಲಿದೆ.

ಬಿಜೆಡಿ: ಹಣಕಾಸಿನ ಒತ್ತಡ ಹಾಗೂ ಆಡಳಿತದಲ್ಲಿನ ವಿಳಂಬದ ತೊಂದರೆಗಳನ್ನು ನಿವಾರಿಸುತ್ತದೆ.

ಬಿಎಸ್‌ಪಿ: ವಿಶಾಲ ಪ್ರಾದೇಶಿಕ ವ್ಯಾಪ್ತಿ ಹಾಗೂ ದೇಶದ ಜನಸಂಖ್ಯೆಯ ಕಾರಣದಿಂದ ಇದರ ಅನುಷ್ಠಾನ ದೊಡ್ಡ ಸವಾಲು.

ಕಾಂಗ್ರೆಸ್‌: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲಿದೆ. ಸದ್ಯದ ಸಂವಿಧಾನದ ಅಡಿ ಈ ನೀತಿ ಜಾರಿ ಸಾಧ್ಯವಿಲ್ಲ. ಅದನ್ನು ಜಾರಿಗೆ ತರಬೇಕೆಂದರೆ ಕನಿಷ್ಠ ಐದು ಸಂವಿಧಾನ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ.

ಎಎಪಿ: ಇದು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸಲಿದೆ. ಪ್ರಾದೇಶಿಕ ಪಕ್ಷಗಳನ್ನು ಅಳಿವಿನಂಚಿಗೆ ನೂಕಲಿದೆ. ಅಧ್ಯಕ್ಷೀಯ ಮಾದರಿಯ ಸರ್ಕಾರ ರಚನೆಗೆ ಕಾರಣವಾಗಬಹುದು.

ಸಿಪಿಎಂ: ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಪಾಯವನ್ನು ಹಾಳುಗೆಡವಲಿದೆ.

ಟಿಎಂಸಿ: ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ದೇಶದ ಚುನಾವಣಾ ತತ್ವಕ್ಕೆ ವಿರುದ್ಧ.

ಸಮಾಜವಾದಿ ಪಕ್ಷ: ಚುನಾವಣಾ ತಂತ್ರ ಮತ್ತು ವೆಚ್ಚದಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಸ್ಪರ್ಧಿಸಲು ರಾಜ್ಯ ಮಟ್ಟದ ಪಕ್ಷಗಳಿಗೆ ಸಾಧ್ಯವಾಗುವುದಿಲ್ಲ.

ಸಿಪಿಐ: ಏಕರೂಪತೆ ಹೇರುವ ಮೂಲಕ ಮತ್ತು ದೇಶವನ್ನು ಒಂದು ಪಕ್ಷದ ಆಡಳಿತದತ್ತ ತಳ್ಳುವ ಮೂಲಕ ಅಭಿಪ್ರಾಯ ವೈವಿಧ್ಯವನ್ನು ಮೊಟಕುಗೊಳಿಸುವ ಪ್ರಯತ್ನ.

ಒಂದು ಚುನಾವಣೆಯು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡು ವುದರ ಜತೆಗೆ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಪಡಿಸುತ್ತದೆ
ಅಸಾದುದ್ದೀನ್‌ ಒವೈಸಿ, ಸಂಸದ
ಇದು ಪ್ರಾಯೋಗಿಕವಾಗಿ ಅಸಾಧ್ಯ. ಕೆಲವು ರಾಜ್ಯಗಳ ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಕೇಂದ್ರ ಸರ್ಕಾರ ಈ ತಂತ್ರ ಹೂಡಿದೆ
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಈ ಪ್ರಸ್ತಾವನೆ ಬಗ್ಗೆ ತಮ್ಮ ಪಕ್ಷವು ಸಕಾರಾತ್ಮಕ ನಿಲುವು ಹೊಂದಿದೆ. ಆದರೆ, ಉದ್ದೇಶವು ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿರಬೇಕು
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಭಾರತೀಯ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಹೆಜ್ಜೆ ಇರಿಸಿದ್ದಾರೆ
ಎಚ್‌.ಡಿ.ಕುಮಾರಸ್ವಾಮಿ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ
ಕೇಂದ್ರ ಸಂ‍ಪುಟದ ತೀರ್ಮಾನವು ದೇಶದಲ್ಲಿ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ದೈತ್ಯ ಹೆಜ್ಜೆ ಆಗಲಿದೆ
ಅಮಿತ್‌ ಶಾಕೇಂದ್ರ ಗೃಹ ಸಚಿವ

ಸಮಿತಿಯ ಶಿಫಾರಸುಗಳು

  • 1951 ಮತ್ತು 1967ರ ನಡುವೆ ಚುನಾವಣೆಗಳು ಏಕಕಾಲದಲ್ಲಿ ನಡೆದವು.

  • ಕಾನೂನು ಆಯೋಗದ 170ನೇ ವರದಿ (1999): ಐದು ವರ್ಷಗಳಲ್ಲಿ ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ.

  • ಸಂಸದೀಯ ಸಮಿತಿಯ 79ನೇ ವರದಿ (2015): ಎರಡು ಹಂತಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಧಾನಗಳ ಕುರಿತ ಸಲಹೆ.

  • ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ರಾಜಕೀಯ ಪಕ್ಷಗಳು ಮತ್ತು ತಜ್ಞರ ಜತೆಗೆ ವಿಸ್ತೃತ ಚರ್ಚೆ ನಡೆಸಿ ವರದಿ ಸಿದ್ಧಪಡಿಸಿದೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ವ್ಯಾಪಕ ಬೆಂಬಲವಿದೆ ಎಂದು ವರದಿಯಲ್ಲಿ ಉಲ್ಲೇಖ.

ಶಿಫಾರಸು ಅನುಷ್ಠಾನದ ದಾರಿ

  • ಎರಡು ಹಂತಗಳಲ್ಲಿ ಕಾರ್ಯಗತಗೊಳಿಸುವುದು

  • ಮೊದಲ ಹಂತದಲ್ಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು

  • ಎರಡನೇ ಹಂತದಲ್ಲಿ:ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳೊಂದಿಗೆ ಪುರಸಭೆಗಳು ಮತ್ತು ಪಂಚಾಯಿತಿಗಳ ಚುನಾವಣೆಗಳನ್ನು ಸಮ್ಮಿಳನಗೊಳಿಸುವುದು

  • ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗದಿದ್ದರೆ, ಸಾರ್ವತ್ರಿಕ ಚುನಾವಣೆಯ 100 ದಿನಗಳೊಳಗೆ ಅದನ್ನು ನಡೆಸುವುದು

  • ಅಗತ್ಯ ಬಿದ್ದರೆ ವಿಧಾನಸಭೆಗಳ ಅವಧಿ ಮೊಟಕು

  • ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ

  • ಈ ವ್ಯವಸ್ಥೆಯ ಅನುಷ್ಠಾನದ ಸಂಬಂಧ ದೇಶದಾದ್ಯಂತ ವ್ಯಾಪಕ ಚರ್ಚೆ ಪ್ರಾರಂಭಿಸುವುದು

  • ಅನುಷ್ಠಾನ ಗುಂಪಿನ ರಚನೆ

  • ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT