ಎಂಎಸ್‌ಪಿ ಬಜೆಟ್‌ಗೆ ಹೊರೆಯಾಗದು: ರಾಹುಲ್
ನವದೆಹಲಿ: ಕಾನೂನುಬದ್ಧವಾಗಿ ಎಂಎಸ್‌ಪಿ ಜಾರಿಗೊಳಿಸಿದರೆ ಬಜೆಟ್‌ಗೆ ಯಾವುದೇ ರೀತಿಯ ಹೊರೆ ಆಗುವುದಿಲ್ಲ. ಬದಲಿಗೆ ಇದರಿಂದ ರೈತರು ಜೆಡಿಪಿ ಬೆಳವಣಿಗೆಗೆ ಕಾರಣೀಕರ್ತರಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರತಿಪಾದಿಸಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ‘ಎಂಎಸ್‌ಪಿ ಗ್ಯಾರಂಟಿ’ ಕಾರ್ಯಸಾಧುವಲ್ಲ ಎಂಬ ಸುಳ್ಳನ್ನು ಹರಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ‘ಕಾಂಗ್ರೆಸ್ ಪಕ್ಷವು ಎಂಎಸ್‌ಪಿಗೆ ಕಾನೂನು ಬದ್ಧ ಗ್ಯಾರಂಟಿ ನೀಡಲು ನಿರ್ಧರಿಸಿದಾಗಿನಿಂದ ಮೋದಿ ಪರ ಪ್ರಚಾರಕ ಯಂತ್ರಗಳು ಮತ್ತು ಅವರ ಪರ ಇರುವ ಮಾಧ್ಯಮಗಳು ಅಪಪ್ರಚಾರದಲ್ಲಿ ತೊಡಗಿವೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಕ್ರಿಸಿಲ್ ಅಂಕಿ ಅಂಶಗಳ ಪ್ರಕಾರ 2022–23ರಲ್ಲಿ ರೈತರಿಗೆ ಎಂಎಸ್‌ಪಿ ನೀಡಿದ್ದರೆ 21000 ಕೋಟಿ ಹೆಚ್ಚುವರಿ ಹೊರೆಯಾಗುತ್ತಿತ್ತು. ಅದು ಸರ್ಕಾರ ಒಟ್ಟು ಬಜೆಟ್‌ನಲ್ಲಿ ಕೇವಲ ಶೇ 0.4ರಷ್ಟು ಆಗುತ್ತಿತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.